Site icon Vistara News

CV Ananda Bose: ಉಪಚುನಾವಣೆ ವೇಳೆ ವೋಟಿಂಗ್‌ ಹಕ್ಕು ಕಸಿದ ಟಿಎಂಸಿ ಕಾರ್ಯಕರ್ತರು; ಬಂಗಾಳ ರಾಜ್ಯಪಾಲರನ್ನು ಭೇಟಿಯಾದ ಮತದಾರರು

CV Ananda Bose

CV Ananda Bose

ಕೋಲ್ಕತ್ತಾ: ಜುಲೈ 10ರಂದು 7 ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯ ವೇಳೆ ಪಶ್ಚಿಮ ಬಂಗಾಳದಲ್ಲಿ ಸುಮಾರು 2 ಲಕ್ಷ ಹಿಂದುಗಳ ಮತದಾನದ ಹಕ್ಕನ್ನು ಕಸಿಯಲಾಗಿತ್ತು ಎಂದು ಬಿಜೆಪಿ ಮುಖಂಡ ಸುವೇಂದು ಅಧಿಕಾರಿ (Suvendu Adhikari) ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸದ್ಯ ಈ ವಿಚಾರ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ ತೃಣಮೂಲ ಕಾಂಗ್ರೆಸ್ (Trinamool Congress) ಕಾರ್ಯಕರ್ತರು ಮತ ಚಲಾಯಿಸಲು ಅವಕಾಶ ನೀಡಲಿಲ್ಲ ಎಂದು ಆರೋಪಿಸಿ ಸುಮಾರು 100 ಮತದಾರರು ರಾಜ್ಯಪಾಲ ಸಿ.ವಿ.ಆನಂದ ಬೋಸ್ (CV Ananda Bose) ಅವರನ್ನು ಭೇಟಿಯಾಗಿ ಈ ವಿಷಯದಲ್ಲಿ ಮಧ್ಯ ಪ್ರವೇಶಿಸುವಂತೆ ಮನವಿ ಮಾಡಿದ್ದಾರೆ.

ರಾಜ್ಯ ವಿಧಾನಸಭೆಯ ಪ್ರತಿಪಕ್ಷದ ನಾಯಕರೂ ಆದ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಮನವಿ ಸಲ್ಲಿಸಿದ 100 ಮಂದಿ, ಉಪಚುನಾವಣೆ ಮತ್ತು ಲೋಕಸಭಾ ಚುನಾವಣೆಯ ವೇಳೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ತಮಗೆ ಮತದಾನದ ಹಕ್ಕನ್ನು ಚಲಾಯಿಸಲು ಅವಕಾಶ ನೀಡಲಿಲ್ಲ ಎಂದು ಆರೋಪಿಸಿದ್ದಾರೆ. ಈ ವಿಚಾರವಾಗಿ ಅವಕಾಶ ವಂಚಿತರೊಂದಿಗೆ ಮಾತುಕತೆ ನಡೆಸಿದ ಸಿ.ವಿ.ಆನಂದ ಬೋಸ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ.

ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುವೇಂದು ಅಧಿಕಾರಿ, ʼʼಈ ವಿಷಯದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಲು ಸಮಯ ಕೋರುತ್ತೇನೆ ಮತ್ತು ಈ ಮತದಾರರನ್ನು ಅವರ ಬಳಿಗೆ ಕರೆದೊಯ್ಯುತ್ತೇನೆ. ಈ ದೌರ್ಜನ್ಯವನ್ನು ಸುಮ್ಮನೆ ಬಿಡುವುದಿಲ್ಲʼʼ ಎಂದು ತಿಳಿಸಿದ್ದಾರೆ.

“ರಾಷ್ಟ್ರಪತಿ ಅವರಿಗೆ ಪಶ್ಚಿಮ ಬಂಗಾಳದಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಮನವರಿಕೆ ಮಾಡುತ್ತೇವೆ. ಈ ರೀತಿಯ ಅನ್ಯಾಯ ಮುಂದುವರಿಯಲು ಬಿಡಬಾರದು. ಅವಕಾಶ ವಂಚಿತರ ಪೈಕಿ ಪ್ರತಿನಿಧಿಗಳಾಗಿ ಐವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಳಿಗೆ ಕರೆದೊಯ್ಯುತ್ತೇನೆ” ಎಂದು ಹೇಳಿದ್ದಾರೆ.

ಏನಿದು ವಿವಾದ?

ಕೆಲವು ದಿನಗಳ ಹಿಂದೆ ಮಾಧ್ಯಮಗಳ ಜತೆಗೆ ಮಾತನಾಡಿದ ಸುವೇಂದು ಅಧಿಕಾರಿ ʼʼಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವ ಸಂಪೂರ್ಣ ನಾಶವಾಗಿದೆ. ಇದರ ವಿರುದ್ಧ ನಾವು ಹೋರಾಟ ನಡೆಸಲಿದ್ದೇವೆ. ಲೋಕಸಭಾ ಚುನಾವಣೆಯ ವೇಳೆ ಟಿಎಂಸಿ ಸುಮಾರು 50 ಲಕ್ಷ ಹಿಂದುಗಳಿಗೆ ತಮ್ಮ ಹಕ್ಕನ್ನು ಚಲಾಯಿಸಲು ಅವಕಾಶ ನೀಡಲಿಲ್ಲ. ಇನ್ನು ಇತ್ತೀಚೆಗೆ ನಡೆದ 4 ಕ್ಷೇತ್ರಗಳ ಉಪ ಚುನಾವಣೆಯಲ್ಲಿ 2 ಲಕ್ಷಕ್ಕಿಂತ ಅಧಿಕ ಹಿಂದುಗಳ ಹಕ್ಕನ್ನು ಹತ್ತಿಕ್ಕಲಾಯಿತುʼʼ ಎಂದು ಅವರು ಆರೋಪಿಸಿದ್ದರು.

ಇದನ್ನೂ ಓದಿ: Suvendu Adhikari: ಉಪಚುನಾವಣೆಯಲ್ಲಿ ಭಾರಿ ವಂಚನೆ? 2 ಲಕ್ಷ ಹಿಂದುಗಳ ವೋಟಿಂಗ್‌ ಹಕ್ಕು ಕಸಿಯಲಾಗಿತ್ತು ಎಂದ ಬಿಜೆಪಿ ನಾಯಕ

ಉಪಚುನಾವಣೆಯ ಫಲಿತಾಂಶ

ಜುಲೈ 13ರಂದು 7 ರಾಜ್ಯಗಳ 13 ಸ್ಥಾನಗಳ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿತ್ತು. ಈ ಪೈಕಿ ಪ್ರತಿಪಕ್ಷಗಳ ಇಂಡಿ ಒಕ್ಕೂಟ 10 ಕಡೆ ಗೆದ್ದಿದ್ದರೆ ಬಿಜೆಪಿ ಕೇವಲ 2 ಕ್ಷೇತ್ರಗಳಲ್ಲಿ ಜಯ ಗಳಿಸಿತ್ತು. ಇನ್ನು ಪಶ್ಚಿಮ ಬಂಗಾಳದ ರಾಯ್‌ಗಂಜ್‌, ರಣಘತ್ ದಕ್ಷಿಣ, ಬಾಗ್ಡಾ, ಮತ್ತು ಮಾನಿಕ್ತಾಲಾ ಕ್ಷೇತ್ರಗಳಲ್ಲಿ ಟಿಎಂಸಿ ಗೆಲುವಿನ ನಗೆ ಬೀರಿತ್ತು.

Exit mobile version