ಬೆಂಗಳೂರು: ರಾಜ್ಯದಲ್ಲಿ ಕಳ್ಳತನ ಪ್ರಕರಣಗಳು (Theft Cases) ಹೆಚ್ಚಾಗುತ್ತಲಿವೆ ಎಂದರೆ ಗಸ್ತು ವ್ಯವಸ್ಥೆ, ಹೊಯ್ಸಳ ಸಿಬ್ಬಂದಿ ಮತ್ತು ಠಾಣಾಧಿಕಾರಿಗಳು ವೈಫಲ್ಯರಾಗಿದ್ದಾರೆ ಎಂದೇ ಅರ್ಥ. ಇದೇ ಸ್ಥಿತಿ ಮುಂದುವರಿರು ಕರ್ತವ್ಯ ಲೋಪವಾದರೆ ಡಿಸಿಪಿಗಳನ್ನು ಹೊಣೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಳ್ಳತನಗಳಂತಹ ಪ್ರಕರಣಗಳನ್ನು ನಡೆಯಲು ಬಿಡಬಾರದು. ಈ ನಿಟ್ಟಿನಲ್ಲಿ ಪೊಲೀಸರು ಸಮರ್ಪಕವಾಗಿ ಕಾರ್ಯನಿರ್ವಹಣೆ ಮಾಡಬೇಕು ಎಂದು ಕಿವಿ ಮಾತು ಹೇಳಿದರು.
ವರ್ಗಾವಣೆಗಾಗಿ ಹಾತೊರೆಯಬೇಡಿ
ವರ್ಗಾವಣೆಗಳಿಗೆ ಪೊಲೀಸ್ ಅಧಿಕಾರಿಗಳು ಹಾತೊರೆಯುವುದು, ಜಾತಿ ಬಳಸುವುದು ಅತ್ಯಂತ ಕೆಟ್ಟದ್ದು. ಹಾಗೆ ಮಾಡಬೇಡಿ ಎಂದು ಸಿಎಂ ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರಿಗಳಿಗೆ ತಿಳಿ ಹೇಳಿದರು.
ತಂತ್ರಜ್ಞಾನದ ಬಳಕೆಯಿಂದ ಅಪರಾಧ ತಡೆ ಸಾಧ್ಯ
ನಮ್ಮದು ಜಾತ್ಯತೀತ ರಾಷ್ಟ್ರ. ನಾವುಗಳೇ ನಮ್ಮ ಸಂವಿಧಾನದ ಆಶಯಗಳನ್ನು ಬಲಪಡಿಸಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಮನಸ್ಸು ಮಾಡಬೇಕು ಎಂದು ಹೇಳಿದ ಸಿಎಂ ಸಿದ್ದರಾಮಯ್ಯ, ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಅಪರಾಧ ಪ್ರಕರಣಗಳಿಗೆ ಕಡಿವಾಣ ಸಾಧ್ಯವಿದೆ ಎಂದು ತಿಳಿಸಿದರು.
ಸುವರ್ಣ ಪೊಲೀಸ್ ಭವನ ಕಟ್ಟಡ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಹಣ
ರಾಜ್ಯಕ್ಕೆ “ಕರ್ನಾಟಕ” ಎಂದು ನಾಮಕರಣಗೊಂಡು, ಏಕೀಕರಣದ 50 ವರ್ಷದ ನೆನಪಿಗಾಗಿ ಸುವರ್ಣ ಪೊಲೀಸ್ ಭವನ ಕಟ್ಟಡ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಹಣ ನೀಡಲಾಗುವುದು. ಖಾಲಿ ಇರುವ ಪೊಲೀಸ್ ಹುದ್ದೆಗಳನ್ನೂ ಭರ್ತಿ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಆರ್ಥಿಕ ಇಂಟೆಲಿಜೆನ್ಸ್ ತಂತ್ರಾಂಶ ಬಿಡುಗಡೆ ಮಾಡಿದ ಸಿಎಂ
ಆರ್ಥಿಕ ಇಂಟೆಲಿಜೆನ್ಸ್ ತಂತ್ರಾಂಶ (Financial Intelligence Software) ಸೇರಿದಂತೆ ವಿವಿಧ ತಂತ್ರಾಂಶಗಳನ್ನು ಸಿಎಂ ಸಿದ್ದರಾಮಯ್ಯ (CM Siddramaiah) ಅವರು ಲೋಕಾರ್ಪಣೆಗೊಳಿಸಿದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಭಾಗವಹಿಸಿದ ಸಿಎಂ ಸಿದ್ದರಾಮಯ್ಯ, ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ ಮೊಬೈಲ್ ಲ್ಯಾಬ್, ವಿಧಿ ವಿಜ್ಞಾನ ಮೊಬೈಲ್ ಲ್ಯಾಬ್ ವಾಹನ, ಮೊಬೈಲ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ವಾಹನದ ಉನ್ನತೀಕರಣದ ಕಾರ್ಯಕ್ಷಮತೆಯನ್ನು ಪರಿಶೀಲಿಸಿದರು.
ಬಳಿಕ ಸಿಎಂ ಸಿದ್ದರಾಮಯ್ಯ ಅವರು, ಪೊಲೀಸ್ ಐಟಿ-V2, ITPA ಸರಳ ಆ್ಯಪ್, ಪೊಲೀಸ್ ಮಿತ್ರ ಚಾಟ್ ಬಾಟ್, CG ನೋಂದಣಿ ಪೋರ್ಟಲ್, ರಾಜ್ಯ ಪೊಲೀಸ್ ಕೃತಕ ಬುದ್ಧಿಮತ್ತೆ ತಂತ್ರಾಂಶ ಹಾಗೂ ಆರ್ಥಿಕ ಇಂಟೆಲಿಜೆನ್ಸ್ ತಂತ್ರಾಂಶಗಳನ್ನು ಬಿಡುಗಡೆ ಮಾಡಿದರು. ಇದೇ ವೇಳೆ ಸಂಕ್ಷಿಪ್ತ ಸೈಬರ್ ಅಪರಾಧ ಕೈಪಿಡಿಯನ್ನು ಲೋಕಾರ್ಪಣೆಗೊಳಿಸಿದರು.
ಇದನ್ನೂ ಓದಿ: PM Modi: ಜನವರಿ 19ಕ್ಕೆ ಬೆಂಗಳೂರಿಗೆ ಪ್ರಧಾನಿ ಮೋದಿ; ಸ್ವಾಗತಕ್ಕೆ ಬಿಜೆಪಿ ಕಾರ್ಯಕರ್ತರಿಗೆ ಅವಕಾಶ?
ಗೃಹ ಸಚಿವ ಡಾ. ಜಿ.ಪರಮೇಶ್ವರ್, ಗೃಹ ಕಾರ್ಯದರ್ಶಿ ಉಮಾಶಂಕರ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ತ್ರಿಲೋಕ್ ಚಂದ್ರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು ಮತ್ತು ನಸೀರ್ ಅಹಮದ್ ಅವರು ಉಪಸ್ಥಿತರಿದ್ದರು.