ನವದೆಹಲಿ: ಲೋಕಸಭೆ ಚುನಾವಣೆ(Lok sabha Election 2024)ಯ ದೇಶಾದ್ಯಂತ ಎರಡನೇ ಹಂತದ ಮತದಾನ ಮುಗಿದರೂ ದೆಹಲಿ ಕಾಂಗ್ರೆಸ್(Delhi Congress)ನ ಬಿಕ್ಕಟ್ಟು ಮಾತ್ರ ಶಮನ ಆಗುತ್ತಲೇ ಇಲ್ಲ. ಆಮ್ ಆದ್ಮಿ ಪಕ್ಷ(AAP)ದ ಜೊತೆ ಕಾಂಗ್ರೆಸ್ ಮೈತ್ರಿಗೆ ಸ್ವಪಕ್ಷದಲ್ಲೇ ತೀವ್ರ ವಿರೋಧ ಕೇಳಿ ಬಂದಿದ್ದು, ದಿನೇ ದಿನೇ ಬಿಕ್ಕಟ್ಟು ಹೆಚ್ಚಾಗುತ್ತಿದೆ. ಕಳೆದ ವಾರವಷ್ಟೇ ದೆಹಲಿ ಕಾಂಗ್ರೆಸ್ ಅಧ್ಯಕ್ಷ ಅರವಿಂದ್ ಸಿಂಗ್ ಲವ್ಲಿ(Aravind Singh Lovely) ರಾಜೀನಾಮೆ ನೀಡಿರುವ ಬೆನ್ನಲ್ಲೇ ಇದೀಗ ಕಾಂಗ್ರೆಸ್‌ನ ಇಬ್ಬರು ಮಾಜಿ ಶಾಸಕರು ಪಕ್ಷ ತೊರೆದಿದ್ದಾರೆ. ಪಕ್ಷದ ನಿರ್ಧಾರದಿಂದ ಮನನೊಂದಿರುವ ಮಾಜಿ ಶಾಸಕರಾದ ನೀರಜ್ ಬಸೋಯಾ ಮತ್ತು ನಸೀಬ್ ಸಿಂಗ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಬಗ್ಗೆ ಪತ್ರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಪತ್ರ ಬರೆದಿರುವ ಮಾಜಿ ಶಾಸಕರು, ದೆಹಲಿಯಲ್ಲಿ ಆಪ್ ಜೊತೆಗಿನ ಮೈತ್ರಿ ತೀರ ಬೇಸರವನ್ನುಂಟು ಮಾಡಿದೆ. ಅಲ್ಲದೇ ಕಳೆದ ಏಳು ವರ್ಷಗಳಿಂದ ಅನೇಕ ಭ್ರಷ್ಟಾಚಾರ, ಹಗರಣಗಳಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಆಪ್ ಜೊತೆ ಕೈಜೋಡಿಸಿರುವುದು ಕಾರ್ಯಕರ್ತರಿಗೆ ಅವಮಾನವನ್ನುಂಟು ಮಾಡಿದೆ. ಆಪ್‌ನ ಪ್ರಮುಖ ಮೂರು ನಾಯಕರಾದ ಅರವಿಂದ ಕೇಜ್ರಿವಾಲ್, ಸತ್ಯೇಂದ್ರ ಜೈನ್ ಮತ್ತು ಮನೀಶ್ ಸಿಸೋಡಿಯಾ ಈಗಾಗಲೇ ಜೈಲಿನಲ್ಲಿದ್ದಾರೆ. ಇಂಥಹ ಸಂದರ್ಭದಲ್ಲಿ ಈ ಮೈತ್ರಿ ಸರಿಯಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ನಾವು ಆತ್ಮಗೌರವ ಇರುವ ಪಕ್ಷದ ನಾಯಕರು. ಆಪ್ ಜೊತೆಗಿನ ಮೈತ್ರಿ ನಂತರ ನಾನು ಪಕ್ಷದಲ್ಲಿ ಇರಲು ಸಾಧ್ಯವೇ ಇಲ್ಲ. ನೀವು ದೇವೇಂದ್ರ ಯಾದವ್ ಅವರನ್ನು ಪಂಜಾಬ್ ಕಾಂಗ್ರೆಸ್ ಮೇಲ್ವಿಚಾರಕರಾಗಿ ನೇಮಿಸಿದ್ದೀರಿ. ಅಲ್ಲಿ ಅವರು ಅರವಿಂದ್ ಕೇಜ್ರಿವಾಲ್ ಭ್ರಷ್ಟಾಚಾರದ ಬಗ್ಗೆ ತಮ್ಮ ಪ್ರಚಾರ ಭಾಷಣದಲ್ಲಿ ಉಲ್ಲೇಖಿಸುತ್ತಿದ್ದಾರೆ. ದೆಹಲಿಯಲ್ಲಿ ನಾವು ಆಪ್ ಸಾಧನೆಯನ್ನು ಹೊಗಳುತ್ತಿದ್ದೇವೆ. ಇಂತಹ ದ್ವಂಧ್ವದಿಂದ ನಾವು ಬೇಸತ್ತಿದ್ದೇವೆ. ಇತ್ತೀಚೆಗೆ ನಡೆಯತ್ತಿರುವ ರಾಜಕೀಯ ಬೆಳವಣಿಗೆಗಳಿಂದ ಪಕ್ಷ ಹಾಗೂ ಪಕ್ಷದ ಕಾರ್ತಕರ್ತರು ಮುಜುಗರಕ್ಕೀಡಾಗುತ್ತಿದ್ದಾರೆ. ಹೀಗಾಗಿ ತಾವು ರಾಜೀನಾಮೆ ನೀಡುತ್ತಿರುವುದಾಗಿ ಪತ್ರದಲ್ಲಿ ವಿವರಿಸಿದ್ದಾರೆ.
ಇದನ್ನೂ ಓದಿ:Viral News: ಚಂದದ ಪ್ರೊಫೈಲ್ ಫೋಟೋಗೆ ಫಿದಾ ಆಗಿದ್ದವನಿಗೆ ಕಾದಿತ್ತು ಶಾಕ್; ಮುಂದೆ ನಡೆದಿದ್ದೇ ಬೇರೆ!
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಶತಾಯ-ಗತಾಯ ಸೋಲಿಸಬೇಕು ಎಂಬ ದೃಷ್ಟಿಯಿಂದ ಪಕ್ಷದದಲ್ಲಿ ವಿರೋಧ ವ್ಯಕ್ತವಾಗಿದ್ದರೂ ಅದನ್ನು ಮೀರಿ ಕಾಂಗ್ರೆಸ್ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿತ್ತು. ಇದರ ಬೆನ್ನಲ್ಲೇ ಈ ಮೈತ್ರಿಯಿಂದ ಬೇಸರಗೊಂಡಿದ್ದ ದಿಲ್ಲಿ ಕಾಂಗ್ರೆಸ್ ಅಧ್ಯಕ್ಷ ಅರವಿಂದ್ ಸಿಂಗ್ ಲವ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈ ಕುರಿತು ಸವಿಸ್ತಾರವಾದ ಪತ್ರ ಬರೆದಿದ್ದ ಅರವಿಂದ್ ಸಿಂಗ್ ಲವ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಸುಳ್ಳು, ಕಪೋಲಕಲ್ಪಿತ ಮತ್ತು ದುರುದ್ದೇಶಪೂರಿತ ಭ್ರಷ್ಟಾಚಾರ ಆರೋಪಗಳನ್ನು ಹೊರಿಸುವ ಏಕೈಕ ಆಧಾರದ ಮೇಲೆ ರಚಿಸಲಾದ ಆಪ್ ಜೊತೆಗೆ ಮೈತ್ರಿಗೆ ದೆಹಲಿ ಕಾಂಗ್ರೆಸ್ ಘಟಕದಿಂದ ವಿರುದ್ಧವಾಗಿತ್ತು. ಅದರ ಹೊರತಾಗಿಯೂ, ದೆಹಲಿಯಲ್ಲಿ ಎಎಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಪಕ್ಷವು ನಿರ್ಧರಿಸಿತು. ಇದರಿಂದ ತೀವ್ರ ಬೇಸರವಾಗಿದೆ ಎಂದು ಹೇಳಿದ್ದರು.