Site icon Vistara News

Dengue Cases: ಕಲುಷಿತ ನೀರು ಪೂರೈಕೆಯಾದ್ರೆ ಅಧಿಕಾರಿಗಳೇ ಹೊಣೆ; 15 ದಿನಕ್ಕೊಮ್ಮೆ ಕ್ವಾಲಿಟಿ ಟೆಸ್ಟ್ ಮಾಡಿ ಎಂದ ಸಿಎಂ

Mekedatu Project

ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ (Dengue Cases) ಏರಿಕೆ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಲಾರ್ವಾ ಸಮೀಕ್ಷೆ, ಸೊಳ್ಳೆ ನಿಯಂತ್ರಣದ ಜತೆಗೆ ಮನೆಮನೆಗೆ ತೆರಳಿ ಆರೋಗ್ಯ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಈ ನಡುವೆ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿರುವ ಸಿಎಂ ಸಿದ್ದರಾಮಯ್ಯ ಅವರು, ಜನರಿಗೆ ಕಲುಷಿತ ನೀರು ಪೂರೈಕೆಯಾಗದಂತೆ ಎಚ್ಚರಿಕೆ ವಹಿಸಬೇಕು. ಪ್ರತಿ 15 ದಿನಗಳಿಗೊಮ್ಮೆ ನೀರಿನ ಮೂಲಗಳಲ್ಲಿ ಕಡ್ಡಾಯವಾಗಿ ಗುಣಮಟ್ಟ ಪರೀಕ್ಷೆ ನಡೆಸಬೇಕು ಎಂದು ಸೂಚನೆ ನೀಡಿದ್ದಾರೆ.

ಕಲುಷಿತ ನೀರಿನಿಂದ ಯಾವುದೇ ತೊಂದರೆ ಉಂಟಾದರೆ ಸಂಬಂಧಪಟ್ಟ ಅಧಿಕಾರಿಯನ್ನು ನೇರ ಜವಾಬ್ದಾರಿ ಮಾಡಲಾಗುವುದು. ತುಕ್ಕು ಹಿಡಿದ ಹಳೆಯ ಪೈಪ್‌ ಬದಲಾವಣೆ ಮಾಡಬೇಕು. ಪ್ರತಿ 15 ದಿನಗಳಿಗೊಮ್ಮೆ ನೀರಿನ ಮೂಲದಲ್ಲಿ ಹಾಗೂ ವಿತರಣಾ ಬಿಂದುವಿನಲ್ಲಿನ ನೀರಿನ ಗುಣಮಟ್ಟವನ್ನು ಪ್ರಯೋಗಾಲಯದಲ್ಲಿ ಕಡ್ಡಾಯವಾಗಿ ಪರೀಕ್ಷೆ ಮಾಡಬೇಕು. ನೀರಿನ ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದ ಕಡೆಗಳಲ್ಲಿ ಹೊಸ ಮೂಲದಿಂದ ನೀರು ಪೂರೈಕೆ ಮಾಡಬೇಕು ಎಂದು ತಿಳಿಸಿದ್ದಾರೆ.

ಎಲ್ಲಾ ಜಿಲ್ಲೆಗಳಲ್ಲಿ ಆದಷ್ಟು ಬೇಗನೆ ಘನ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಆರಂಭಿಸಬೇಕು. ಇನ್ನೂ 55 ಕಡೆಗಳಲ್ಲಿ ಘನತ್ಯಾಜ್ಯ ಘಟಕಗಳ ನಿರ್ಮಾಣ ಪ್ರಕ್ರಿಯೆ ನಡೆಯುತ್ತಿದ್ದು, ಆದಷ್ಟು ಬೇಗನೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಬೇಕು. ತ್ಯಾಜ್ಯ ನೀರು ಶುದ್ಧೀಕರಣ ಘಟಕ ಕಾರ್ಯಾರಂಭಿಸುವ ಮೂಲಕ ಕೊಳಚೆ ನೀರು ನೇರವಾಗಿ ಕೆರೆಗಳಿಗೆ ಸೇರುವುದನ್ನು ತಪ್ಪಿಸಬೇಕು. ಮೈಸೂರಿನ ದಳವಾಯಿ ಕೆರೆಗೆ ಕೊಳಚೆ ನೀರು ಸೇರುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ | OPS News: ರಾಜ್ಯ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌; ಅರ್ಹರಿಗೆ ಒಪಿಎಸ್‌, ಪ್ರಸ್ತಾವನೆ ಸಲ್ಲಿಕೆಗೆ ಆದೇಶ

ಬೆಂಗಳೂರಿನ 70 ಕಡೆ ಹೊಸ ಇಂದಿರಾ ಕ್ಯಾಂಟೀನ್‌

ಈಗಾಗಲೇ ಅನುಮತಿ ನೀಡಲಾಗಿರುವ ಹೊಸ ಇಂದಿರಾ ಕ್ಯಾಂಟೀನ್‌ಗಳ ನಿರ್ಮಾಣಕ್ಕೆ ಆದಷ್ಟು ಬೇಗನೆ ಜಾಗ ಗುರುತಿಸಬೇಕು. ಬೆಂಗಳೂರು ನಗರ ವ್ಯಾಪ್ತಿಯಲ್ಲಿ 70 ಸ್ಥಳಗಳಲ್ಲಿ ಹೊಸ ಇಂದಿರಾ ಕ್ಯಾಂಟೀನ್‌ ನಿರ್ಮಿಸಲು ಅನುಮೋದನೆ ನೀಡಲಾಗಿದ್ದು, ಆದಷ್ಟು ಬೇಗನೆ ಸ್ಥಳ ಗುರುತಿಸಬೇಕು. ಹೊಸ ಮೆನು ಟೆಂಡರ್‌ ಪ್ರಕ್ರಿಯೆಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸಬೇಕು ಎಂದು ಸಿಎಂ ಹೇಳಿದರು.

15ನೇ ಹಣಕಾಸು ಆಯೋಗ

15ನೇ ಹಣಕಾಸು ಆಯೋಗದ ಅನುದಾನದಲ್ಲಿ 33,803 ಕಾಮಗಾರಿಗಳು ಮಂಜೂರಾಗಿದ್ದು, 23,714 ಕಾಮಗಾರಿಗಳು ಪೂರ್ಣಗೊಂಡಿವೆ. ಯೋಜನೆಯಡಿ ಇದುವರೆಗೆ 2799 ಕೋಟಿ ರೂ. ಬಿಡುಗಡೆಯಾಗಿದ್ದು, 1883 ಕೋಟಿ ರೂ. ವೆಚ್ಚವಾಗಿದೆ. ಮುಂದಿನ ಎರಡು ವಾರಗಳ ಒಳಗಾಗಿ ಟೆಂಡರ್‌ ಕರೆದು, ನಿಗದಿತ ಅವಧಿಯ ಒಳಗಾಗಿ ಅನುದಾನವನ್ನು ಪೂರ್ಣವಾಗಿ ಬಳಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದರು.

ಆಸ್ತಿ ತೆರಿಗೆ ಬಾಕಿ ವಸೂಲಿ ಮಾಡಿ

ಕಳೆದ ವರ್ಷದ 224 ಕೋಟಿ ರೂ. ಆಸ್ತಿ ತೆರಿಗೆ ವಸೂಲಾತಿಗೆ ಬಾಕಿಯಿದೆ. ಹಳೆ ಬಾಕಿಯನ್ನು ಸಂಪೂರ್ಣವಾಗಿ ವಸೂಲು ಮಾಡಬೇಕು. ಪ್ರಸ್ತುತ ವರ್ಷದ ಜೂನ್‌ ಅಂತ್ಯದವರೆಗೆ 806 ಕೋಟಿ ರೂ. ಆಸ್ತಿ ತೆರಿಗೆ ವಸೂಲು ಮಾಡಲಾಗಿದ್ದು, 1053 ಕೋಟಿ ರೂ. ವಸೂಲಾತಿಗೆ ಬಾಕಿಯಿದೆ. ಜಿಲ್ಲಾಧಿಕಾರಿಗಳು ಅಭಿಯಾನದ ರೀತಿಯಲ್ಲಿ ಆಸ್ತಿ ತೆರಿಗೆ ವಸೂಲಾತಿಯನ್ನು ಕೈಗೊಳ್ಳಬೇಕು ಎಂದರು.

ಎಸ್.ಎಫ್.ಸಿ. ಮುಕ್ತನಿಧಿ ಯೋಜನೆಯಡಿ ಕಲ್ಯಾಣ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಪರಿಶಿಷ್ಟ ಜಾತಿ, ಪಂಗಡದ ಜನರಿಗೆ ಶೇ.24.01 ಅನುದಾನ ಕಡ್ಡಾಯವಾಗಿ ವೆಚ್ಚ ಮಾಡುವುದನ್ನು ಖಾತ್ರಿಪಡಿಸಬೇಕು ಎಂದು ಸಿಎಂ ಸೂಚನೆ ನೀಡಿದರು.

ಲೋಕೋಪಯೋಗಿ ಇಲಾಖೆ

ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಎದುರಾಗುವ ತಾಂತ್ರಿಕ ತೊಂದರೆಗಳನ್ನು ಎರಡು ತಿಂಗಳ ಒಳಗಾಗಿ ಬಗೆಹರಿಸಬೇಕು. ಭೂಸ್ವಾಧೀನ ಪ್ರಕ್ರಿಯೆ ತ್ವರಿತಗೊಳಿಸಬೇಕು. ಇನ್ನಿತರ ತೊಡಕುಗಳನ್ನು ಆದಷ್ಟು ಬೇಗನೆ ನಿವಾರಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಜಮೀನು ಹಸ್ತಾಂತರಿಸಬೇಕು. ಭೂಸ್ವಾಧೀನ ಪ್ರಕ್ರಿಯೆ ಕಾರಣದಿಂದ ಯೋಜನೆ ಅನುಷ್ಠಾನ ವಿಳಂಬವಾಗಬಾರದು. ಆದ್ಯತೆ ಮೇರೆಗೆ ಈ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕು ಎಂದು ಸಿಎಂ ಹೇಳಿದರು.

ಇದನ್ನೂ ಓದಿ | NEET UG 2024: ನೀಟ್‌ ಅಕ್ರಮ ಮೇಲ್ನೋಟಕ್ಕೆ ಸಾಬೀತು ಎಂದ ಸುಪ್ರೀಂ; ಎನ್‌ಟಿಎ, ಸಿಬಿಐಗೆ ಖಡಕ್ ಸೂಚನೆ!

ಸಣ್ಣ ನೀರಾವರಿ ಇಲಾಖೆ

ರಾಜ್ಯದಲ್ಲಿ ಒಟ್ಟು 40,998 ಕೆರೆಗಳಿದ್ದು, ಇವುಗಳ ಪೈಕಿ 28751 ಕೆರೆಗಳ ಅಳತೆ ಕಾರ್ಯ ಪೂರ್ಣಗೊಳಿಸಲಾಗಿದೆ. 10931 ಕೆರೆಗಳಲ್ಲಿ ಒತ್ತುವರಿಯನ್ನು ಗುರುತಿಸಲಾಗಿದ್ದು, 6065 ಕೆರೆಗಳ ಒತ್ತುವರಿ ತೆರವು ಪೂರ್ಣಗೊಳಿಸಲಾಗಿದೆ. ಇನ್ನೂ 4787 ಕೆರೆಗಳ ಒತ್ತುವರಿ ತೆರವಿಗೆ ಬಾಕಿಯಿದ್ದು, ಆದಷ್ಟು ಬೇಗನೆ ಅಳತೆ ಕಾರ್ಯ ಪೂರ್ಣಗೊಳಿಸಿ ತೆರವು ಕಾರ್ಯ ಪೂರ್ಣಗೊಳಿಸಬೇಕು. ಪದೇ ಪದೇ ಕೆರೆಗಳ ಒತ್ತುವರಿ ಮಾಡುವವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ಸೂಚನೆ ನೀಡಿದರು. ಬೆಂಗಳೂರಿನಲ್ಲಿ ಈಗಾಗಲೇ ಹಲವು ಕೆರೆಗಳು ಕಣ್ಮರೆಯಾಗಿದ್ದು, ಉಳಿದಿರುವ ಕೆರೆಗಳನ್ನು ಉಳಿಸದೇ ಇದ್ದರೆ, ಅಂತರ್ಜಲ ಮಟ್ಟವನ್ನು ಕಾಪಾಡಲು ಸಾಧ್ಯವಿಲ್ಲ ಎಂದರು.

Exit mobile version