Site icon Vistara News

IT Raid : ಐಟಿ ದಾಳಿಯಲ್ಲಿ ಸಿಕ್ಕಿದೆ ಡೈರಿ; ಯಾರ ಹೆಸರಿದೆ? ಕೈ ನಾಯಕರಿಗೆ ನಡುಕ

IT raid Diary: DK Shivakumar and Govindaraju

ಬೆಂಗಳೂರು: ರಾಜ್ಯದಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿರುವ ಐಟಿ ದಾಳಿಯಲ್ಲಿ (IT raid in Bangalore) ಈಗಾಗಲೇ 92 ಕೋಟಿ ರೂ. ನಗದು ಪತ್ತೆಯಾಗಿರುವುದು ಒಂದು ಸುದ್ದಿಯಾದರೆ, ಇನ್ನೊಂದು ಕಡೆ ದಾಳಿ ವೇಳೆ ಡೈರಿಯೊಂದು ಪತ್ತೆಯಾಗಿರುವುದು (Diary found during IT Raid) ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ಗುತ್ತಿಗೆದಾರರು (Contractors), ಜುವೆಲ್ಲರಿ, ಉದ್ಯಮಿಗಳು ಸೇರಿ ಹಲವರ ಮೇಲೆ ಐಟಿ ದಾಳಿ ನಡೆದಿದೆ. ಈ ವೇಳೆ ಗುತ್ತಿಗೆದಾರರ ಮನೆಯಲ್ಲಿ ಒಂದು ಡೈರಿ ಈಗ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಡೈರಿಯಲ್ಲಿ ಹಲವು ರಾಜಕಾರಣಿಗಳ ಹೆಸರಿದೆ ಎಂಬ ಮಾಹಿತಿ ಕಾಂಗ್ರೆಸ್‌ ಪಾಳಯದಲ್ಲಿ (Congress Leaders) ನಡುಕ ಸೃಷ್ಟಿಸಿದೆ.

ಡೈರಿಯಲ್ಲಿ ಹಲವು ರಾಜಕಾರಣಿಗಳ ಹೆಸರು ಇದೆ. ಕೇವಲ ಕಾಂಗ್ರೆಸ್ ಅಷ್ಟೇ ಅಲ್ಲ ಇತರೆ ಪಕ್ಷಗಳ ನಾಯಕರ ಹೆಸರು ಇದೆ ಎಂಬ ಮಾಹಿತಿ ಇದೆ. ಹೀಗಾಗಿ ತಲೆ ಕೆಡಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್‌ ಅವರು ಐಟಿ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದ್ದಾರೆ ಎನ್ನಲಾಗಿದೆ.

ಹಿಂದಿನ ಸರ್ಕಾರದ ಅವಧಿಯಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಪರಿಷತ್ ಸದಸ್ಯ ಗೋವಿಂದ ರಾಜು ಮನೆಯಲ್ಲಿ ಡೈರಿ ಸಿಕ್ಕಿತ್ತು. ಅದರಲ್ಲಿ ಹೈಕಮಾಂಡ್‌ಗೆ ಹಣ ಕೊಟ್ಟ ಬಗ್ಗೆ ಉಲ್ಲೇಖ ಆಗಿತ್ತು. 2018ರ ಚುನಾವಣೆಯಲ್ಲಿ ಬಿಜೆಪಿ ಇದೊಂದು ಪ್ರಮುಖ ಅಸ್ತ್ರವಾಗಿತ್ತು. ಈಗ ಗುತ್ತಿಗೆದಾರರ ಮನೆಯಲ್ಲಿ ಸಿಕ್ಕಿರುವ ಡೈರಿಯಲ್ಲಿ ಯಾವ ಮಾಹಿತಿ ಇದೆ ಎನ್ನುವುದು ಸ್ಪಷ್ಟವಾಗಿಲ್ಲ. ಒಂದೊಮ್ಮೆ ಇದು ಗುತ್ತಿಗೆದಾರರಿಂದ ಪಡೆದ ಕಮಿಷನ್‌ ಮೊತ್ತವೇ ಆಗಿದ್ದರೆ ಯಾವ ಗುತ್ತಿಗೆದಾರರಿಂದ ಎಷ್ಟು ಹಣ ಬಂದಿದೆ ಎಂಬ ಉಲ್ಲೇಖ ಇರಬಹುದಾದ ಸಾಧ್ಯತೆ ಇದೆ. ಅದರ ಜತೆಗೆ ರಾಜಕಾರಣಿಗಳ ಹೆಸರು ಇರುವುದೇ ಹೌದಾದರೆ ಯಾವ ರಾಜಕಾರಣಿಗೆ ಎಷ್ಟು ಮೊತ್ತ ನೀಡಲಾಗಿದೆ, ಎಷ್ಟು ನೀಡಬೇಕಾಗಿದೆ ಎಂಬ ವಿವರ ಇರುವ ಸಾಧ್ಯತೆ ಇದೆ.

ಈ ನಡುವೆ, ವಿಧಾನ ಸೌಧಕ್ಕೆ ಆಗಮಿಸಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಗೋವಿಂದ ರಾಜು ಅವರ ಜತೆ ಗುಪ್ತ ಗುಪ್ತ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ. ಗೋವಿಂದ ರಾಜು ಅವರು ಈ ಹಿಂದೆ ಡೈರಿ ಸಿಕ್ಕಿದ ಅನುಭವ ಹೊಂದಿದವರಾದ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್‌ ಅವರ ಜತೆ ಮಾತುಕತೆ ನಡೆಸಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಬ್ಯಾಂಕ್ವೆಟ್‌ ಹಾಲ್‌ ಮುಂದೆ ನಿಂತು ಡಿ.ಕೆ. ಶಿವಕುಮಾರ್‌ ಮತ್ತು ಗೋವಿಂದ ರಾಜು ಅವರಿಬ್ಬರೇ ಮಾತುಕತೆ ನಡೆಸಿದ್ದಾರೆ. ಈ ವೇಳೆ ಡಿ.ಕೆ. ಶಿವಕುಮಾರ್‌ ಅವರು ಒಂದು ಚೀಟಿಯನ್ನು ಗೋವಿಂದ ರಾಜು ಅವರಿಗೆ ನೀಡಿದ್ದಾರೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಗುತ್ತಿಗೆದಾರರಿಂದ ಡಿ.ಕೆ. ಶಿವಕುಮಾರ್‌ ಭೇಟಿ ಯತ್ನ

ಇದೆಲ್ಲದರ ನಡುವೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ನೇತೃತ್ವದಲ್ಲಿ ತಂಡವೊಂದು ಡಿ.ಕೆ. ಶಿವಕುಮಾರ್‌ ಅವರ ಭೇಟಿಗೆ ಮುಂದಾಗಿದೆ. ಡಿ.ಕೆ. ಶಿವಕುಮಾರ್‌ ಅವರು 12.30ಕ್ಕೆ ಕೆ.ಕೆ. ಗೆಸ್ಟ್‌ ಹೌಸ್‌ನಲ್ಲಿ ಸಿಗುವುದಾಗಿ ಹೇಳಿದ್ದರು. ಆದರೆ, ಬ್ಯಾಂಕ್ವೆಟ್‌ ಹಾಲ್‌ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭೇಟಿಯನ್ನು ಮುಂದೂಡಲಾಗಿದೆ. ಗುತ್ತಿಗೆದಾರರ ಮನೆಯಲ್ಲಿ ಸಿಕ್ಕಿದ ಹಣದ ಬಗ್ಗೆ ಚರ್ಚೆ ನಡೆಸಲು ಈ ಭೇಟಿ ನಡೆಯಲಿದೆ ಎನ್ನಲಾಗಿದೆ.

ಇದನ್ನೂ ಓದಿ: BY Vijayendra : ರಾಜ್ಯದಲ್ಲಿ SBI ಸ್ಥಾಪಿಸಿದ ಕಾಂಗ್ರೆಸ್‌; ಶಿವಕುಮಾರ್‌ ಬ್ಯಾಂಕ್‌ ಆಫ್‌ ಇಂಡಿಯಾ!

IT raid Diary: DK Shivakumar

ಡೈರಿ ಸಿಕ್ಕಿದ್ದು ನಿಜ, ಅದರಲ್ಲಿ ಬಿಜೆಪಿಯವರ ಹೆಸರೇ ಇದೆ ಎಂದ ಡಿಕೆಶಿ!

ಈ ನಡುವೆ, ಐಟಿ ದಾಳಿಯ ವೇಳೆ ಡೈರಿ ಮತ್ತು ಇತರ ದಾಖಲೆಗಳು ಸಿಕ್ಕಿರುವುದನ್ನು ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಒಪ್ಪಿಕೊಂಡಿದ್ದಾರೆ. ಆದರೆ, ಅದರಲ್ಲಿರುವುದು ಬಿಜೆಪಿ ನಾಯಕರ ಹೆಸರು ಮತ್ತು ಬಯಲಾಗದಿರುವುದು ಬಿಜೆಪಿ ನಾಯಕರ ಭ್ರಷ್ಟಾಚಾರ ಎಂದು ಹೇಳಿದ್ದಾರೆ.

Exit mobile version