Site icon Vistara News

Lakshmi Hebbalkar: ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿತ್ತೇ? ವಿವಾದ ಸುಳಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್; ಬೆನ್ನಿಗೆ ನಿಂತ ಸಚಿವರು!

LKG UKG In Govt Schools

ಬೆಂಗಳೂರು/ಬೆಳಗಾವಿ:‌ ಕಾರದಗಾ ಗ್ರಾಮದಲ್ಲಿ ನಡೆದಿದ್ದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ “ಬೆಳಗಾವಿ” ವಿಚಾರಕ್ಕೆ ಆಡಿದ ಮಾತು ಈಗ ವಿವಾದದ ಸ್ವರೂಪವನ್ನು ಪಡೆದುಕೊಂಡಿದೆ. ಮಾತಿನ ಭರದಲ್ಲಿ “ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿತ್ತು” ಎಂದು ಅವರು ಹೇಳಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ. ತಮ್ಮ ಹೇಳಿಕೆ ವಿವಾದವಾಗುತ್ತಿದ್ದಂತೆ ಎಚ್ಚೆತ್ತ ಲಕ್ಷ್ಮಿ ಹೆಬ್ಬಾಳ್ಕರ್‌ ಸ್ಪಷ್ಟೀಕರಣ ನೀಡಿದ್ದು, ತಾವು ಆ ಅರ್ಥದಲ್ಲಿ ಹೇಳಿದ್ದಲ್ಲ ಎಂದಿದ್ದಾರೆ. ಇನ್ನು ಕೆಲವು ಸಚಿವರು ಲಕ್ಷ್ಮಿ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

ಲಕ್ಷ್ಮಿ ಹೆಬ್ಬಾಳ್ಕರ್‌ ಹೇಳಿದ್ದೇನು?

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್‌, ಕನ್ನಡ ಭಾಷೆಗೆ ಬಹಳಷ್ಟು ವರ್ಷಗಳ ಇತಿಹಾಸವಿದೆ ಎಂಬುದನ್ನು ಸಾಹಿತಿಗಳು ತೋರಿಸಿಕೊಟ್ಟಿದ್ದಾರೆ. ನಮ್ಮ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಲಭಿಸಿವೆ. ನಮ್ಮ ಭಾಷೆ, ಕಲೆ, ಸಂಸ್ಕೃತಿಯಲ್ಲಿ ಶ್ರೀಮಂತವಾಗಿದೆ. ನಾವು ಈ ನಾಡಿನಲ್ಲಿ ಜನ್ಮ ಪಡೆಯಲು ಪುಣ್ಯ ಮಾಡಿರಬೇಕು. ಆದರೆ, ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿತ್ತು ಎಂದು ಹೇಳಿದ್ದರು. ಅಂದರೆ, ಏಕೀಕರಣ ಸಂದರ್ಭದಲ್ಲಿ ಬೆಳಗಾವಿ ಕರ್ನಾಟಕಕ್ಕೆ ಸೇರಿತು ಎಂಬ ಅರ್ಥದಲ್ಲಿ ಹೇಳಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದರು.

ಸ್ಪಷ್ಟೀಕರಣ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್

‌ಈ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಸ್ಪಷ್ಟೀಕರಣ ನೀಡಿದ್ದಾರೆ. “ನಾನು ಕಾರದಗಾದ ಕನ್ನಡ ಸಮಾವೇಶದಲ್ಲಿ ಆಡಿದ ಮಾತುಗಳಿಗೆ ಸ್ಪಷ್ಟನೆ ನೀಡಬಯಸುತ್ತೇನೆ. ನಾನು ಹೆಮ್ಮೆಯ ಕನ್ನಡತಿಯಾಗಿ, ಕನ್ನಡದ ಮೇಲೆ ವಿಶೇಷವಾದ ಅಭಿಮಾನ ಇಟ್ಟುಕೊಂಡಿದ್ದೇನೆ. ಗಡಿ ಭಾಗದಲ್ಲಿ ಇಷ್ಟೊಂದು ಉತ್ಸಾಹದಿಂದ ಅಲ್ಲಿನ ಕನ್ನಡಿಗರು – ಮರಾಠಿ ಭಾಷಿಕರೆಲ್ಲ ಸೇರಿ ಕನ್ನಡ ಸಮಾವೇಶ ನಡೆಸುತ್ತಿರುವುದನ್ನು ತಿಳಿದು, ಅವರ ಸಂಭ್ರಮದಲ್ಲಿ ಪಾಲ್ಗೊಳ್ಳುವ ಮತ್ತು ಅವರಲ್ಲಿ ಉತ್ಸಾಹ ತುಂಬುವ ಉದ್ದೇಶದಿಂದ ಅಲ್ಲಿನ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ್ದೇನೆ. ಕನ್ನಡಿಗರಿಗೆ ಸ್ಫೂರ್ತಿ ತುಂಬುವ ಭರದಲ್ಲಿ ಅಲ್ಲಿ ನಾನು ಆಡಿದ ಮಾತುಗಳ ಸಕಾರಾತ್ಮಕತೆಯನ್ನು ಅರ್ಥೈಸಿಕೊಳ್ಳಬೇಕೆಂದು ಮಾಧ್ಯಮದ ಸ್ನೇಹಿತರಲ್ಲಿ ವಿನಂತಿಸುತ್ತೇನೆ. ಇದರ ಬದಲಾಗಿ ಬೇರೆ ರೀತಿಯಲ್ಲಿ ಅರ್ಥೈಸುವುದರಿಂದ ಅದು ಗಡಿಭಾಗದ ಕನ್ನಡಿಗರ ಉತ್ಸಾಹಕ್ಕೆ ಹಿನ್ನಡೆಯನ್ನುಂಟು ಮಾಡಬಹುದು.

ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿ ಸಹ ಮುಂಬೈ ಪ್ರಾಂತ್ಯದಲ್ಲಿತ್ತು, ಹಿಂದಿನಿಂದಲೂ ಕನ್ನಡಿಗರು – ಮರಾಠಿ ಭಾಷಿಕರು ಅನ್ಯೋನ್ಯತೆಯಿಂದ ಬಾಳುತ್ತಿದ್ದೇವೆ. ಈ ಅನ್ಯೋನ್ಯತೆ ಮುಂದುವರಿಯಬೇಕು ಎನ್ನುವ ಆಶಯವನ್ನು ನಾನು ವ್ಯಕ್ತಪಡಿಸಿದ್ದೇನೆ. ಸ್ವಾತಂತ್ರ್ಯ ಪೂರ್ವದಲ್ಲಿ ಮಹಾರಾಷ್ಟ್ರ ರಾಜ್ಯವೇ ಅಸ್ತಿತ್ವದಲ್ಲೇ ಇಲ್ಲದ್ದರಿಂದ ಅಂತಹ ಅರ್ಥ ಕಲ್ಪಿಸುವ ಪ್ರಶ್ನೆಯೇ ಬರುವುದಿಲ್ಲ. ಕಾರದಗಾ ಕನ್ನಡ ಸಮಾವೇಶಕ್ಕೆ ಮುಂದಿನ ವರ್ಷದಿಂದ ರಾಜ್ಯ ಸರ್ಕಾರದ ಆರ್ಥಿಕ ಸಹಾಯ ಒದಗಿಸುವ ಮತ್ತು ಅಲ್ಲಿನ ಸಂಘಟನೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೊಡಿಸಲು ಪ್ರಯತ್ನಿಸುವ ಭರವಸೆಯನ್ನು ಈ ಸಂದರ್ಭದಲ್ಲಿ ನೀಡುವ ಮೂಲಕ ಅವರ ಉತ್ಸಾಹವನ್ನು ಹೆಚ್ಚಿಸಿದ್ದೇನೆ. ಅವರ ಉತ್ಸಾಹವನ್ನು ನಾವು, ನೀವೆಲ್ಲ ಸೇರಿ ಇನ್ನಷ್ಟು ಹೆಚ್ಚಿಸೋಣ, ಬರುವ ವರ್ಷಗಳಲ್ಲಿ ಈ ಸಮಾವೇಶ ಇನ್ನಷ್ಟು ಅದ್ಧೂರಿಯಾಗಿ ನಡೆಯುವಂತೆ ಮಾಡೋಣ ಎಂದು ವಿನಂತಿಸುತ್ತೇನೆ” ಎಂದು ಸ್ಪಷ್ಟನೆ ನೀಡಿದ್ದಾರೆ.

ಯಾವ ಅರ್ಥದಲ್ಲಿ ಹೇಳಿದ್ದಾರೆಂಬುದನ್ನು ಅರ್ಥ ಮಾಡಿಕೊಳ್ಳಿ: ಎಂ.ಬಿ. ಪಾಟೀಲ್‌

ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ದು ಎಂಬ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಎಂ.ಬಿ. ಪಾಟೀಲ್‌, ಲಕ್ಷ್ಮಿ ಹೆಬ್ಬಾಳ್ಕರ್ ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂದು ಅರ್ಥ ಮಾಡಿಕೊಳ್ಳಿ. ಹೈದರಾಬಾದ್‌ಗೆ ಹಿಂದೆ ನಿಜಾಮರ ಕಾಲದಲ್ಲಿ ಬಳ್ಳಾರಿ ಸೇರಿ ಕೆಲ ಜಿಲ್ಲೆಗಳು ಇದ್ದವು. ವಿಜಯಪುರ, ಬೆಳಗಾವಿ, ಕಾರವಾರ, ಮುಂಬೈ ರಾಜ್ಯದಲ್ಲಿತ್ತು. ಈ ಅರ್ಥದಲ್ಲಿ ಅವರು ಹೇಳಿದ್ದಾರೆ. ಇದು ಸತ್ಯ ಕೂಡಾ. ರಾಜ್ಯಗಳ ಪುನರ್ ವಿಂಗಡಣೆ ಬಳಿಕ ಎಲ್ಲವೂ ಸರಿಹೋಗಿದೆ. ರಾಜ್ಯಗಳ ಗಡಿ ವಿಚಾರದಲ್ಲಿ ನಮಗೆ ಮಹಾಜನ್ ವರದಿ ಅಂತಿಮ. ಈ ಹಿಂದೆ ಇತಿಹಾಸದಲ್ಲಿ ಇರೋದನ್ನು ಹೇಳಿದ್ದಾರೆ. ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ ಯಾವ ಯಾವ ಜಿಲ್ಲೆಗಳು ಇದ್ದವು ಅನ್ನೋದು ಗೊತ್ತಿದೆ. ಆ ಕಾರಣದಿಂದ ಅವರು ಹೇಳಿರಬಹುದು. ರಾಜ್ಯ ಪುನರ್ ವಿಂಗಡಣೆ ಆದ ಮೇಲೆ ಎಲ್ಲವೂ ಬದಲಾಗಿದೆ. ಎಲ್ಲ ಗಡಿ ವಿವಾದಕ್ಕೆ ಮಹಾಜನ್ ವರದಿ ಅಂತಿಮ. ಈ ವಿಚಾರದಲ್ಲಿ ನಮ್ಮ ರಾಜ್ಯದ ನಿಲುವು ಕೂಡ ಬಹಳ ಸ್ಪಷ್ಟವಾಗಿದೆ ಎಂದು ಹೇಳಿದರು.

ಲಕ್ಷ್ಮಿ ಹಾಗೆ ಹೇಳಲು ಸಾಧ್ಯವೇ ಇಲ್ಲ: ಎಚ್.ಕೆ. ಪಾಟೀಲ್

ಈ ಬಗ್ಗೆ ಸಚಿವ ಎಚ್.ಕೆ. ಪಾಟೀಲ್‌ ಪ್ರತಿಕ್ರಿಯೆ ನೀಡಿ, ಬೆಳಗಾವಿ ಎಂದೂ ಮಹಾರಾಷ್ಟ್ರಕ್ಕೆ ಸೇರಿಲ್ಲ. ಏಕೀಕರಣದ ಸಂದರ್ಭದಲ್ಲಿ ಎಲ್ಲರೂ ಒಂದಾಗಿದ್ದೇವೆ. ಬೆಳಗಾವಿ ಎಂದೆಂದಿಗೂ ಕರ್ನಾಟಕದ್ದೇ ಆಗಿದೆ. ಈ ಹಿಂದೆ ಬಾಂಬೆ ವ್ಯಾಪ್ತಿಯಲ್ಲಿ ಇತ್ತು. ಅದನ್ನು ಯಾರಾದರೂ ತಪ್ಪು ಅರ್ಥ ಮಾಡಿಕೊಂಡಿರಬಹುದು. ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ದು ಅಂತ ಹೇಳಲು ಸಾಧ್ಯವೇ ಇಲ್ಲ. ಯಾರಾದರೂ ಹಾಗೆ ಹೇಳಿದ್ದರೆ ತಪ್ಪು ಮಾಹಿತಿ ಇರಬಹುದು ಎಂದು ಹೇಳಿದರು.

ಇದನ್ನೂ ಓದಿ: Lok Sabha Election 2024: 3ನೇ ಬಾರಿ ಮೋದಿ ಪ್ರಧಾನಿ ನಿಶ್ಚಿತ; ಬಿ.ವೈ. ವಿಜಯೇಂದ್ರ

ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ಖಂಡಿಸುತ್ತೇವೆ: ಅಶ್ವತ್ಥ ನಾರಾಯಣ್

ಮಾಜಿ ಸಚಿವ ಅಶ್ವಥ್ ನಾರಾಯಣ್ ಪ್ರತಿಕ್ರಿಯೆ ನೀಡಿ, ಕರ್ನಾಟಕ ವಿವಿಧ ರಾಜ್ಯದಲ್ಲಿ ಹಂಚಿಹೋಗಿತ್ತು. ಅದಕ್ಕೆ‌ ಕರ್ನಾಟಕ ಏಕೀಕರಣವಾಗಿದೆ. ಇಂತಹ ಸಂದರ್ಭದಲ್ಲಿ ಹಿಂದಕ್ಕೆ‌ ಹೋಗುವ ಅವಶ್ಯಕತೆ ಇರಲಿಲ್ಲ. ಇದು ರಾಜಕೀಯ ಪ್ರೇರಿತ ಹೇಳಿಕೆಯೋ ಗೊತ್ತಿಲ್ಲ. ಈ ಸಂದರ್ಭದಲ್ಲಿ ಇದರ ಅವಶ್ಯಕತೆ ಇರಲಿಲ್ಲ. ಬೆಳಗಾವಿ ಈಗ ಕರ್ನಾಟಕಕ್ಕೆ ಸೇರಿದೆ. ರಾಜಕೀಯ ಪ್ರೇರಿತ ಹುನ್ನಾರ ಆಗಬಾರದು. ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಆಗಬೇಕು. ಕನ್ನಡಿಗರು ವಿವಿಧ ಸಂಸ್ಕೃತಿಯಲ್ಲಿ ಏಕತೆ ಕಾಣಬೇಕು. ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆಯನ್ನು ಖಂಡಿಸುತ್ತೇವೆ. ಇವರ ಹೇಳಿಕೆಯನ್ನು ಮರಾಠಿಗರಾಗಲಿ, ಕನ್ನಡಿಗರಾಗಲಿ ಬೆಂಬಲಿಸಲ್ಲ ಎಂದು ಹೇಳಿದರು.

Exit mobile version