Site icon Vistara News

ʼಗುಜರಾತ್‌ ಮಾದರಿʼ ಜಪದಲ್ಲಿ ಕರ್ನಾಟಕ ಬಿಜೆಪಿ: ಕಾರ್ಯಕರ್ತರಲ್ಲಿ, ಹಿರಿಯರಲ್ಲಿ ಆತಂಕ

BJP

ಬೆಂಗಳೂರು: ಸಾಮಾನ್ಯವಾಗಿ ಅಭಿವೃದ್ಧಿ ವಿಚಾರದಲ್ಲಿ ಕರ್ನಾಟಕದಲ್ಲಿ ಕೇಳಿಬರುವ ʼಗುಜರಾತ್‌ ಮಾದರಿʼ ಇದೀಗ ಕರ್ನಾಟಕ ಬಿಜೆಪಿ ವಲಯದಲ್ಲಿ ರಿಂಗಣಿಸುತ್ತಿದೆ. ಹೊಸದಾಗಿ ಚುನಾವಣೆ ಎದುರಿಸಬೇಕಾದವರು ಇದೇ ಮಾದರಿ ತಮಗೂ ಬೇಕು ಎಂದು ಹುಚ್ಚೆದ್ದು ಕುಣಿಯುತ್ತಿದ್ದರೆ ಹಿರಿಯರು ಮಾತ್ರ ʼಇದೆಲ್ಲ ಕರ್ನಾಟಕದಲ್ಲಿ ವರ್ಕೌಟ್‌ ಆಗಲ್ಲʼ ಎಂದು ಆತಂಕದಿಂದಲೇ ಆಲೋಚಿಸುತ್ತಿದ್ದಾರೆ.

ಗುಜರಾತ್‌ನಲ್ಲಿ ಈ ಬಾರಿ ಚುನಾವಣೆಯಲ್ಲಿ 38 ಹಾಲಿ ಶಾಸಕರಿಗೆ ಟಿಕೆಟ್‌ ನಿರಾಕರಿಸಲಾಗಿತ್ತು. ಇವರಲ್ಲಿ ಐವರು ಸಚಿವರೂ ಸೇರಿದ್ದರು. ಒಟ್ಟು 41 ಅಭ್ಯರ್ಥಿಗಳು ಮೊದಲ ಬಾರಿಗೆ ಶಾಸಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದವರಾಗಿದ್ದರು.

ಅವರಲ್ಲಿ ಅನೇಕರು 90ರ ದಶಕದಿಂದಲೂ ಪಕ್ಷದ ಬೂತ್‌ ಮಟ್ಟದ ಕಾರ್ಯಕರ್ತರಾಗಿ ಕೆಲಸ ಮಾಡಿದವರು. ಆದರೆ ಕುಟುಂಬ ರಾಜಕಾರಣ, ಪ್ರಬಲ ನಾಯಕತ್ವ ಲಾಬಿಯಿಂದಾಗಿ ಕಾರ್ಯಕರ್ತರಾಗಿಯೇ ಉಳಿದಿದ್ದರು. ಅಂತಹ ಅನೇಕರ ವರ್ಚಸ್ಸು ಕೈಕೊಟ್ಟಿತ್ತು. ಇದೆಲ್ಲದರಿಂದಾಗಿ ಒಟ್ಟಾರೆ ಗುಜರಾತ್‌ ಬಿಜೆಪಿ ಬಗೆಗೇ ಜನರಲ್ಲಿ ನಕಾರಾತ್ಮಕ ಭಾವನೆ ಮೂಡಿತ್ತು. ಅಂಥವರನ್ನು ಬದಲಿಸುವ ಗಟ್ಟಿ ನಿರ್ಧಾರವನ್ನು ಬಿಜೆಪಿ ಮಾಡಿತು. ಉದಾಹರಣೆಗೆ ಅಹಮದಾಬಾದ್‌ ಜಿಲ್ಲೆಯ 14 ವಿಧಾನಸಭೆ ಕ್ಷೇತ್ರಗಳಲ್ಲಿ 12 ಬಿಜೆಪಿ ಶಾಸಕರಿದ್ದರು. ಸಿಎಂ ಭೂಪೇಂದ್ರ ಪಟೇಲ್‌ ಹಾಗೂ ಜಗದೀಶ್‌ ವಿಶ್ವಕರ್ಮ ಹೊರತುಪಡಿಸಿ 10 ಹಾಲಿ ಶಾಸಕರನ್ನು ಮನೆಗೆ ಕಳಿಸಿ ಹೊಸಬರಿಗೆ ಟಿಕೆಟ್‌ ನೀಡಲಾಯಿತು. ಮಾಜಿ ಸಿಎಂ ವಿಜಯ್‌ ರೂಪಾನಿ, ಉಪಮುಖ್ಯಮಂತ್ರಿ ನಿತಿನ್‌ ಪಟೇಲ್‌ ಸೇರಿ ಅನೇಕರಿಗೆ ಟಿಕೆಟ್‌ ತಪ್ಪಿಸಿದರೆ ನಕಾರಾತ್ಮಕ ಭಾವನೆ ಮೂಡಬಹುದು ಎಂಬ ಕಾರಣಕ್ಕೆ, ʼನಾವು ಚುನಾವಣಾ ಕಣದಿಂದ ಹೊರಗೆ ಉಳಿದು ಹೊಸಬರಿಗೆ ಅವಕಾಶ ನೀಡುತ್ತೇವೆʼ ಎಂದು ಅವರ ಬಾಯಿಂದಲೇ ಹೇಳಿಸುವ ಚಾಣಾಕ್ಷ ನಡೆ ಅನುಸರಿಸಲಾಯಿತು.

ಇದೆಲ್ಲದರಿಂದಾಗಿ ಗುಜರಾತ್‌ನಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಕಳೆದ ಬಾರಿ 99 ರಿಂದ 156 ಶಾಸಕರವರೆಗೆ ಬೃಹತ್‌ ನೆಗೆತದಲ್ಲಿ ಇಂತಹ ಅನೇಕ ತಂತ್ರಗಳನ್ನು ಬಿಜೆಪಿ ಅನುಸರಿಸಿದೆ. ಅವುಗಳಲ್ಲಿ, ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿ ನಿಲ್ಲಲು ಹಾಲಿ ಶಾಸಕರಿಗೆ ಟಿಕೆಟ್‌ ನಿರಾಕರಿಸಿ ಹೊಸಬರಿಗೆ ನೀಡುವುದು.

ಕರ್ನಾಟಕದಲ್ಲಿ ಗರಿಗೆದರಿದ ಚರ್ಚೆ

ಅತ್ತ ಗುಜರಾತ್‌ನಲ್ಲಿ ಜಯಭೇರಿ ಬಾರಿಸುತ್ತಿದ್ದಂತೆಯೇ ರಾಜ್ಯ ಬಿಜೆಪಿ ವಲಯದಲ್ಲಿ ಚರ್ಚೆ ಚುರುಕು ಪಡೆದಿದೆ. ರಾಜ್ಯದಲ್ಲೂ ಸರ್ಕಾರದ ವಿರುದ್ಧ ತಕ್ಕ ಮಟ್ಟಿಗೆ ಆಡಳಿತ ವಿರೋಧಿ ಅಲೆ ಇದೆ. ಅದರಲ್ಲೂ ಕಾಂಗ್ರೆಸ್‌ ಪ್ರಬಲ ಅಭಿಯಾನದ ಮೂಲಕ 40% ಸರ್ಕಾರ, ಪೇ ಸಿಎಂ ಸೇರಿ ಅನೇಕ ವಿಚಾರಗಳನ್ನು ಜನರ ಮನಸ್ಸಿನಲ್ಲಿ ಬಿಂಬಿಸಿದ್ದಾರೆ.

ರಾಜ್ಯದಲ್ಲಿ ಈ ವಿಚಾರಗಳಿಂದಾಗಿ ಹಾಲಿ ಬಿಜೆಪಿ ಶಾಸಕರ ಜನಪ್ರಿಯತೆ ನಿಧಾನವಾಗಿ ಕುಸಿಯುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. 40% ಲಂಚ ವಿಚಾರವು ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಉಂಟುಮಾಡಲಿದೆ ಎಂದು ಇತ್ತೀಚೆಗಷ್ಟೆ ಕರ್ನಾಟಕ ರಾಜಕೀಯ ಕುರಿತ ಲಂಡನ್‌ ವಿವಿ ಪ್ರಾಧ್ಯಾಪಕ ಜೇಮ್ಸ್‌ ಮೇನರ್‌ ಹೇಳಿದ್ದರು. ಹಾಗಾಗಿ ಹಾಲಿ ಅನೇಕ ಶಾಸಕರಿಗೆ ಕರ್ನಾಟಕದಲ್ಲೂ ಟಿಕೆಟ್‌ ಕೈತಪ್ಪುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ಕುರಿತು ಬಿಜೆಪಿ ಕಚೇರಿಯೆದುರು ಪ್ರತಿಕ್ರಿಯೆ ನೀಡಿರುವ ಇಂಧನ ಸಚಿವ ವಿ. ಸುನಿಲ್‌ ಕುಮಾರ್‌, ಹಿಂದುತ್ವ, ಅಭಿವೃದ್ಧಿ, ಬೂತ್ ಕಾರ್ಯ ಇಡೀ ದೇಶದ ಬಿಜೆಪಿಯ ಮಾಡೆಲ್. ರಾಜ್ಯದಲ್ಲಿ ಕೂಡ ಅದೇ ಮಾಡೆಲ್ ಮಾಡುತ್ತೇವೆ. ಕರ್ನಾಟಕ ಗೆಲುವಿಗೆ ಏನೇನು ಮಾಡಬೇಕೊ ಅವೆಲ್ಲವನ್ನೂ ಕೂಡ ಮಾಡುತ್ತೇವೆ. ಹೊಸಬರಿಗೆ ಅವಕಾಶ, ಹಿರಿಯರಿಗೆ ಮನ್ನಣೆ ನೀಡುವ ಕೆಲಸ ಮಾಡುತ್ತೇವೆ ಎಂದಿದ್ದಾರೆ.

ಟಿಕೆಟ್‌ ವಿಚಾರದಲ್ಲಿ ರಾಜ್ಯದಲ್ಲೂ ಗುಜರಾತ್‌ ಮಾಡೆಲ್‌ ಅನ್ವಯವಾಗುತ್ತದೆಯೇ ಎಂಬ ಕುರಿತು ಪ್ರತಿಕ್ರಿಯೆ ನೀಡಲು ಸಿಎಂ ಬಸವರಾಜ ಬೊಮ್ಮಾಯಿ ನಿರಾಕರಿಸಿದ್ದಾರೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ ನೀಡಿ, ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ಕೊಡಬೇಕು ಎಂದು ಪಕ್ಷ ನಿರ್ಧಾರ ಮಾಡಲಿದೆ. ರಾಜ್ಯದಲ್ಲಿ ಗೆಲ್ಲುವ ವಾತವಾರಣವಿದೆ ಎಂದಷ್ಟೇ ಹೇಳಿದ್ದಾರೆ.

ಗುಜರಾತ್‌ನಲ್ಲಿ ಕಳೆದ ಚುನಾವಣೆಯಲ್ಲಿ ಜಯಿಸಿದ್ದ ಶಾಸಕರಲ್ಲಿ 38 ಶಾಸಕರಿಗೆ ಟಿಕೆಟ್‌ ನಿರಾಕರಿಸಲಾಗಿದೆ ಎನ್ನುವುದನ್ನು ಪರಿಗಣಿಸಿದರೆ ಕರ್ನಾಟಕದಲ್ಲಿ ಅಂದಾಜು 45 ಶಾಸಕರು ಟಿಕೆಟ್‌ ಕಳೆದುಕೊಳ್ಳಬೇಕಾಗುತ್ತದೆ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದಿಂದ ಹೊರಬಂದು ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ 16 ಶಾಸಕರಿಗೆ ಟಿಕೆಟ್‌ ಸಿಗುವುದು ಖಾತ್ರಿ. ಇದನ್ನು ಖಾತ್ರಿಪಡಿಸಲೆಂದೇ ರಾಷ್ಟ್ರೀಯ ಸಂಸದೀಯ ಮಂಡಳಿ ಹಾಗೂ ರಾಷ್ಟ್ರೀಯ ಚುನಾವಣಾ ಸಮಿತಿ ಸದಸ್ಯರಾಗಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ನೇಮಕ ಮಾಡಲಾಗಿದೆ. ಟಿಕೆಟ್‌ ಅಂತಿಮಗೊಳಿಸುವಾಗಿ, ವಲಸಿಗರಿಗೆ ಯಾವುದೇ ತೊಂದರೆ ಆಗದಂತೆ ಯಡಿಯೂರಪ್ಪ ನೋಡಿಕೊಳ್ಳುತ್ತಾರೆ ಎನ್ನುವುದು ಪಕ್ಷದಲ್ಲಿ ಕೇಳಿಬರುತ್ತಿರುವ ಮಾತು.

ಈ ಕುರಿತು ಮಾತನಾಡಿದ ಪಕ್ಷದ ಪ್ರಮುಖರೊಬ್ಬರು, ವಿವಿಧ ಪಕ್ಷದಿಂದ ಇನ್ನುಮುಂದೆ ಆಗಮಿಸುವವರೂ ಯಾವುದಾದರೂ ಕ್ಷೇತ್ರದ ಟಿಕೆಟ್‌ ಖಾತ್ರಿಪಡಿಸಿಕೊಂಡೇ ಇರುತ್ತಾರೆ. ಉನ್ನತ ನಾಯಕರಿಂದ ಟಿಕೆಟ್‌ ಖಾತ್ರಿ ಆದ ನಂತರವಷ್ಟೇ ಒಳಗೆ ಕಾಲಿಟ್ಟಿರುತ್ತಾರೆ. ತೀರಾ ಅಪವಾದದ ಒಂದೆರಡು ಹೊರತುಪಡಿಸಿ ಬಹುತೇಕ ವಲಸಿಗರು ಟಿಕೆಟ್‌ ಗಿಟ್ಟಿಸಿಯೇ ತೀರುತ್ತಾರೆ. ಇನ್ನು ಟಿಕೆಟ್‌ ನಿರಾಕರಿಸಬಹುದಾದವರು ಎಂದರೆ ಪಕ್ಷದ ಪ್ರಾಮಾಣಿಕ ಕಾರ್ಯಕರ್ತರು ಹಾಗೂ ಅನೇಕ ಬಾರಿ ಶಾಸಕರಾದವರು. ಇಂಥವರಿಗೆ ಟಿಕೆಟ್‌ ತಪ್ಪಿಸಿದರೆ ಹೆಚ್ಚೇನೂ ತೊಂದರೆ ಆಗುವುದಿಲ್ಲ. ಅವರು ಪ್ರಾರಂಭದಿಂದಲೂ ಪಕ್ಷದೊಂದಿಗೇ ಗುರುತಿಸಿಕೊಂಡಿರುವ ಕಾರಣ ಕೆಲವರನ್ನು ಹೊರತುಪಡಿಸಿ ಬಹುತೇಕರು ಹೊರಹೋಗುವ, ಇನ್ನೊಂದು ಪಕ್ಷ ಸೇರುವ ಸಾಧ್ಯತೆಯೂ ಕಡಿಮೆ. ಆದರೆ ಅವರು ಬೇಸರಗೊಂಡು ಮನೆಯಲ್ಲಿ ಕೂರದಂತೆ ಸಮಾಧಾನಪಡಿಸಲು ಬೇರೆ ಹುದ್ದೆ, ಪರಿಷತ್‌ ಸ್ಥಾನ ಸೇರಿ ಅನೇಕ ಆಶ್ವಾಸನೆಗಳನ್ನು ನೀಡಬೇಕಾಗುತ್ತದೆ. ಇನ್ನೂ ಈ ಬಗ್ಗೆ ಪಕ್ಷದಲ್ಲಿ ಚರ್ಚೆ ಆಗಿಲ್ಲ. ಆದ ನಂತರ ಒಂದೊಂದೇ ತಂತ್ರಗಳು ಬಹಿರಂಗವಾಗುತ್ತವೆ ಎಂದಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ರಾಜ್ಯ ಯುವ ಮೋರ್ಚಾ ಮಾಜಿ ಪದಾಧಿಕಾರಿಯೊಬ್ಬರು, ಎಲ್ಲದಕ್ಕೂ ಕಾರ್ಯಕರ್ತರನ್ನು ಬಲಿ ಕೊಡಲಾಗದು. ಗೆಲ್ಲುವ ಸಾಧ್ಯತೆ ಇಲ್ಲ ಎಂದು ತಿಳಿದಿದ್ದರೂ ಅನೇಕ ಕ್ಷೇತ್ರಗಳಲ್ಲಿ ಕೊನೆ ಸಮಯದಲ್ಲಿ ಟಿಕೆಟ್‌ ನೀಡಿದ್ದರಿಂದ ಅನೇಕ ಕಾರ್ಯಕರ್ತರು ಸೋತಿದ್ದಾರೆ. ಎಲ್ಲೆಲ್ಲಿ ಗೆಲ್ಲುವ ಸಾಮರ್ಥ್ಯ ಇರುವ ಕಾರ್ಯಕರ್ತರಿದ್ದಾರೆ ಎನ್ನುವುದನ್ನು ಗುರುತಿಸಿ ಮತ್ತೆ ಅವಕಾಶ ನೀಡಬೇಕು. ಗುಜರಾತ್‌ ಮಾದರಿಯನ್ನು ಸಾರಾಸಗಟಾಗಿ ಅನುಸರಿಸಿದರೆ ಅಂತಿಮವಾಗಿ ಕಾರ್ಯಕರ್ತರೇ ಟಾರ್ಗೆಟ್‌ ಆಗುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ | Himachal Election Result | ಮೋದಿ, ಠಾಕೂರ್ ಇದ್ದೂ ಹಿಮಾಚಲದಲ್ಲಿ ಬಿಜೆಪಿ ಸೋತಿದ್ದೇಕೆ?

Exit mobile version