ಬೆಂಗಳೂರು: “ರಾಜಕೀಯ ಉದ್ದೇಶಕ್ಕಾಗಿಯೇ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರು ನನ್ನ ಪ್ರಕರಣವನ್ನು ಸಿಬಿಐ ತನಿಖೆಗೆ (CBI Enquiry) ನೀಡಿದ್ದರು. ಬಿಜೆಪಿ ಪಕ್ಷದ ಶಾಸಕರ ವಿರುದ್ಧವೂ ಬೇಕಾದಷ್ಟು ಪ್ರಕರಣಗಳಿವೆ. ಬೇರೆಯವರದ್ದನ್ನು ತನಿಖೆಗೆ ನೀಡದೆ ನನ್ನದನ್ನು ಮಾತ್ರ ನೀಡಿದರು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ತಿರುಗೇಟು ನೀಡಿದರು. ಕುಮಾರಕೃಪಾ ಅತಿಥಿ ಗೃಹದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಈ ರೀತಿ ಉತ್ತರಿಸಿದರು.
“ಅಡ್ವೋಕೇಟ್ ಜನರಲ್ ಅವರೇ ಈ ಪ್ರಕರಣದ ಸಿಬಿಐ ತನಿಖೆಗೆ ಅನುಮತಿ ನೀಡಲು ಬರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಆದರೆ ಈ ವಿಚಾರವನ್ನು ಸ್ಪೀಕರ್ ಬಳಿಯೂ ತೆಗೆದುಕೊಂಡು ಹೋಗದೆ ಯಡಿಯೂರಪ್ಪ ಅವರು ಸೀದಾ ಸಿಬಿಐ ತನಿಖೆಗೆ ಅನುಮತಿ ನೀಡಿದರು. ಸಿಬಿಐ ಅವರು ಶೇ 90 ರಷ್ಟು ತನಿಖೆ ಮುಗಿದಿದೆ ಎಂದು ಹೇಳಿದ್ದಾರೆ. ನನ್ನ ಬಳಿ ಯಾವ ವಿಚಾರಣಾಧಿಕಾರಿಯೂ ಬಂದಿಲ್ಲ. ವಿವರವನ್ನೂ ಪಡೆದಿಲ್ಲ. ನೋಡೋಣ ಏನು ಮಾಡುತ್ತಾರೋ. ನಾನು ನನ್ನ ವಕೀಲರ ಬಳಿ ಚರ್ಚೆ ಮಾಡುತ್ತೇನೆ” ಎಂದರು.
ವಿರೋಧ ಪಕ್ಷಗಳ ಟೀಕೆ ಬಗ್ಗೆ ಕೇಳಿದಾಗ, “ಹಾದಿ- ಬೀದಿಯಲ್ಲಿ ಹೋಗುವವರಿಗೆಲ್ಲಾ ಉತ್ತರ ಕೊಡಲು ಆಗುವುದಿಲ್ಲ. ನ್ಯಾಯಾಲಯ ಏನು ಹೇಳುತ್ತದೆಯೋ ಅದಕ್ಕೆ ಗೌರವ ಕೊಡಬೇಕು. ನೀವು ಅಷ್ಟೇ (ಮಾಧ್ಯಮದವರು) ಮಿಕ್ಕಿದವರ ಮಾತಿಗೆಲ್ಲಾ ಕಿವಿಗೊಡಬಾರದು” ಎಂದು ಹೇಳಿದರು.
ಪೂರ್ಣಿಮಾ ಶ್ರೀನಿವಾಸ್ ಅವರ ಪಕ್ಷ ಸೇರ್ಪಡೆ ಹಾಗೂ ಕಾಡುಗೊಲ್ಲ ಸಮುದಾಯದ ವಿರೋಧ ವಿಚಾರವಾಗಿ ಕೇಳಿದಾಗ, “ಪ್ರಬಲವಾಗಿರುವವರನ್ನು ಪ್ರಬಲವಾಗಿ ವಿರೋಧ ಮಾಡುವುದು ರಾಜಕೀಯದಲ್ಲಿ ಸಹಜ. More Strong More Enemy ಎಂಬಂತೆ ರಾಜಕೀಯದಲ್ಲಿ ಪ್ರಬಲರಿಗೆ ವಿರೋಧಿಗಳು ಹೆಚ್ಚು. ಪೂರ್ಣಿಮಾ ಶ್ರೀನಿವಾಸ್ ಅವರು ಶಾಸಕಿಯಾಗಿದ್ದರು, ಅವರದೇ ಆದ ಶಕ್ತಿ ಇದೆ. ಅವರ ತಂದೆ ನಮ್ಮ ಪಕ್ಷದಲ್ಲಿದ್ದು, ಮಂತ್ರಿಯಾಗಿದ್ದರು. ಇಂದು ಬಿಜೆಪಿ ಜೆಡಿಎಸ್ ಮೈತ್ರಿ ಸರಿಯಿಲ್ಲ ಎಂದು ಭಾವಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದಾರೆ.
2013ರಿಂದ 2018ರ ಅವಧಿಯಲ್ಲಿ ಡಿ.ಕೆ. ಶಿವಕುಮಾರ್ ಅವರು ಗೊತ್ತಾದ ಆದಾಯ ಮೂಲಕ್ಕಿಂತ 200 ಕೋಟಿ ಹೆಚ್ಚು ಅಕ್ರಮ ಸಂಪಾದನೆ ಮಾಡಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿ ಸಿಬಿಐ ಎಫ್‌ಐಆರ್ ಹಾಕಿತ್ತು. ಇದಕ್ಕೆ ರಾಜ್ಯ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ವಿಧಿಸುತ್ತಲೇ ಬಂದಿತ್ತು. ಇದೀಗ ಗುರುವಾರ ನಡೆದ ವಿಚಾರಣೆಯ ವೇಳೆ ಸಿಬಿಐ ತನಿಖೆಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಅದನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲು ಡಿ.ಕೆ. ಶಿವಕುಮಾರ್ ಚಿಂತನೆ ನಡೆಸಿದ್ದಾರೆ.
ಇದನ್ನೂ ಓದಿ: DK Shivakumar : ಐಟಿ ದಾಳಿಯಲ್ಲಿ ಸಿಕ್ಕಿರೋದು ಬಿಜೆಪಿ ಹಣ, ಡೈರಿ; ಡಿ.ಕೆ ಶಿವಕುಮಾರ್ ಹೇಳಿಕೆ