Site icon Vistara News

DK Shivakumar: ಬಿಜೆಪಿ ಸರ್ಕಾರ ಸಾವಿರಾರು ಕೇಸು ಕೈಬಿಟ್ಟಿದೆ, 7361 ರೌಡಿ ಶೀಟರ್ಸ್‌ ಬೀದಿಗೆ ಬಿಟ್ಟಿದೆ ಎಂದ DKS

DK Shivakumar DCM reply to opposition

ಬೆಂಗಳೂರು: “ಹಿಂದಿನ ಬಿಜೆಪಿ ಸರಕಾರ (BJP Governments) ಕೋಮು ಘಟನೆಗಳಿಗೆ (Communal Incidents) ಸಂಬಧಪಟ್ಟ ಸಾವಿರಾರು ಪ್ರಕರಣಗಳನ್ನು ಕೈಬಿಟ್ಟಿದೆ. ಜತೆಗೆ ಸಾವಿರಾರು ರೌಡಿ ಶೀಟರ್‌ಗಳನ್ನು (Rowdy Sheeters) ಬೀದಿಗೆ ಬಿಟ್ಟಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ (DK Shivakumar) ಅವರು ತಿರುಗೇಟು ನೀಡಿದ್ದಾರೆ. ಸದಾಶಿವನ ನಗರದ ನಿವಾಸದ ಬಳಿ ಮಾಧ್ಯಮಗಳೊಂದೊಂದಿಗೆ ಮಾತನಾಡುವ ವೇಳೆ ಗಲಭೆ ಪ್ರಕರಣ ಹಿಂಪಡೆಯುವಂತೆ ನೀವು ಪತ್ರ ಬರೆದಿರುವುದನ್ನು ಬಿಜೆಪಿ ಅಸ್ತ್ರವಾಗಿಸಿಕೊಂಡಿದೆಯಲ್ಲಾ ಎಂಬ ಪ್ರಶ್ನೆಗೆ ಶಿವಕುಮಾರ್ ಅವರು ಉತ್ತರಿಸಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಿಂಪಡೆಯಲಾದ ಕೋಮು ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದರು.

“ಬಿಜೆಪಿಯವರಿಗೆ ತಮ್ಮ ಮನೆ ಹುಳುಕು, ದೋಸೆ ತೂತು ಕಾಣುತ್ತಿಲ್ಲ. ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡದವರು ನಮಗೆ ಪ್ರಶ್ನೆ ಮಾಡುತ್ತಿದ್ದಾರೆ” ಎಂದು ವ್ಯಂಗ್ಯವಾಡಿದರು.

“ಬಿಜೆಪಿಯವರು ಅವರ ಅಧಿಕಾರವಧಿಯಲ್ಲಿ ಏನೇನು ಮಾಡಿದರು ಎಂಬುದು ಜನರಿಗೆ ಗೊತ್ತಿಲ್ಲ ಎಂದು ತಿಳಿದುಕೊಂಡಿದ್ದಾರೆ. ಜನ ಅವರನ್ನು ಎಲ್ಲಿ ಕೂರಿಸಬೇಕೊ ಅಲ್ಲಿ ಕೂರಿಸಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಯಾವ, ಯಾವ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಮನವಿ ಮಾಡಿದವರ ಪಟ್ಟಿ ನಮ್ಮ ಬಳಿ ಇದೆ. ಬಸವರಾಜ ಬೊಮ್ಮಾಯಿ, ಅರಗ ಜ್ಞಾನೇಂದ್ರ, ಮಾಧುಸ್ವಾಮಿ ಅವರು ಸೇರಿದಂತೆ ಅನೇಕರು ಮನವಿ ಮಾಡಿದ್ದರು. 2023ರ ಜನವರಿ ಹಾಗೂ ಫೆಬ್ರವರಿ ತಿಂಗಳಿನಲ್ಲಿ 7,361 ರೌಡಿಶೀಟರ್‌ಗಳನ್ನು ಪಟ್ಟಿಯಿಂದ ಕೈಬಿಟ್ಟಿದ್ದೇ ಬಿಜೆಪಿ ಸರ್ಕಾರ. ಅವರು ಈಗ ನಮಗೆ ಬುದ್ಧಿ ಹೇಳಲು ಬರುತ್ತಿದ್ದಾರೆ” ಎಂದು ತಿಳಿಸಿದರು.

“ಬಿಜೆಪಿಯವರು ಅವರ ಕಾರ್ಯಕರ್ತರ ಪರವಾಗಿ ರಾಜಕಾರಣ ಮಾಡಿದ್ದಾರೆ. ನಾವು ಕಾನೂನು ಪ್ರಕಾರ ನಡೆದುಕೊಳ್ಳುತ್ತಿದ್ದೇವೆ. ಅಮಾಯಕರ ಮೇಲೆ ಇರುವ ಪ್ರಕರಣಗಳನ್ನು ಮಾತ್ರ ಪರಿಶೀಲನೆ ಮಾಡುತ್ತಿದ್ದೇವೆ. ಕಾನೂನಿನ ಚೌಕಟ್ಟಿನಲ್ಲಿ ಮಾಡಲು ಅವಕಾಶವಿದ್ದರೆ ಮಾಡಬಹುದು ಎಂದು ಅಧಿಕಾರಿಗಳು ಶಿಫಾರಸು ಮಾಡುತ್ತಾರೆ. ಇದಕ್ಕೆಂದೇ ಸಮಿತಿ ಇದೆ. ಅವರು ವರದಿ ನೀಡಿದ ಮೇಲೆ ತೀರ್ಮಾನ ಮಾಡಲಾಗುತ್ತದೆ” ಎಂದು ಹೇಳಿದರು.

ಪ್ರಕರಣಗಳನ್ನು ಹಿಂಪಡೆಯಲು ಸರ್ಕಾರ ಆತುರಲ್ಲಿ ಇದೆಯೇ ಎನ್ನುವ ಪ್ರಶ್ನೆಗೆ, “ನನ್ನ ಮೇಲೂ ಸಾಕಷ್ಟು ಪ್ರಕರಣಗಳು ಇವೆ, ಈಗಲೂ ಅನೇಕ ಚಾಲ್ತಿಯಲ್ಲಿವೆ. ಅನೇಕ ಪ್ರಕರಣಗಳನ್ನು ರಾಜಕೀಯ ಉದ್ದೇಶಕ್ಕೆ ಹಾಕಲಾಗಿದೆ. ಪ್ರಕರಣ ಹಿಂಪಡೆಯಲು ನಮಗೆ ಏನೂ ಅವಸರ ಇಲ್ಲ, ಬಿಜೆಪಿಯವರೇ ತರಾತುರಿಯಲ್ಲಿ ಇದ್ದಾರೆ. ನೀವು (ಮಾಧ್ಯಮದವರು) ಅವರನ್ನು ಪ್ರತಿದಿನ ತೋರಿಸುತ್ತಾ ಇದ್ದೀರಿ. ಅದಕ್ಕೆ ಅವರು ಆ ರೀತಿ ಹೇಳುತ್ತಿದ್ದಾರೆ” ಎಂದರು.

“ಯಾರ್ಯಾರು ಪ್ರಕರಣ ಹಿಂಪಡೆಯಲು ಪತ್ರ ಬರೆದಿದ್ದರು, ಸಹಿ ಹಾಕಿದ್ದರು ಆ ಪತ್ರಗಳನ್ನೆಲ್ಲಾ ಮುಂದಿಡಲೇ? ನಾನು ಹೆಸರಿಸಿದವರು ಗಲಭೆ ಪ್ರಕರಣಗಳನ್ನು ಹಿಂಪಡೆಯಲು ಶಿಫಾರಸ್ಸು ಮಾಡಿಲ್ಲ ಎಂದು ಹೇಳಲಿ. ಅವರೇ ಬರೆದಿರುವ ಪತ್ರಗಳನ್ನು ಬಿಡುಗಡೆ ಮಾಡುತ್ತೇನೆ” ಎಂದು ಸವಾಲು ಹಾಕಿದರು.

ಇದನ್ನೂ ಓದಿ: DK Shivakumar : ಪೂಜನೀಯ ದೇವೇಗೌಡರೇ ನಿಮ್ಮ ಮಗನ್‌ ಕಥೆ ಏನು? ; ಮಿಸ್ಟರ್‌ ಡಿಕೆ‌ ಶಿವಕುಮಾರ್ ಹೇಳಿಕೆಗೆ ಕೌಂಟರ್!

ಜಾತಿಗಣತಿ ವರದಿ ಬಗ್ಗೆ ಶೀಘ್ರ ನಿಲುವು

ಬಿಹಾರ ಮಾದರಿಯಲ್ಲಿ ಜಾತಿ ಜನಗಣತಿ ವರದಿ ಬಿಡುಗಡೆ ಮಾಡಬೇಕು ಎಂಬ ಒತ್ತಾಯದ ಬಗ್ಗೆ ಕೇಳಿದಾಗ, “ನಮ್ಮ ಸರ್ಕಾರವೇ ಕಾಂತರಾಜು ಸಮಿತಿ ವರದಿಯನ್ನು ಮಾಡಿಸಿದ್ದು. ನಮ್ಮ ಪಕ್ಷದಲ್ಲೂ ಇದರ ಬಗ್ಗೆ ನಿಲುವು ವ್ಯಕ್ತವಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಪಕ್ಷ ಒಂದು ನಿಲುವು ತೆಗೆದುಕೊಳುತ್ತದೆ. ಅದರಂತೆ ನಾವು ನಡೆಯುತ್ತೇವೆ. ಒಂದಷ್ಟು ಜನ ಅಪೇಕ್ಷೆ, ಆಕ್ಷೇಪ ಎಲ್ಲ ವ್ಯಕ್ತಪಡಿಸುತ್ತಿದ್ದಾರೆ. ಆದಷ್ಟು ಬೇಗ ಒಂದು ನಿಲುವಿಗೆ ನಾವು ಬರುತ್ತೇವೆ” ಎಂದರು.

ಸರ್ಕಾರದ ಮನಸ್ಥಿತಿ ಹೇಗಿದೆಯೋ ಅದೇ ರೀತಿ ಉಳಿದವರು ಇರುತ್ತಾರೆ. ಅದಕ್ಕೆ ಶಿವಮೊಗ್ಗ ಗಲಭೆ ನಡೆದಿದೆ ಎಂಬ ಸಂಸದ ಪ್ರತಾಪ್‌ ಸಿಂಹ ಅವರ ಮಾತಿಗೆ ಪ್ರತಿಕ್ರಿಯಿಸಿ, “ಹಿಂದೆ ಮೈಸೂರಿನಲ್ಲಿ ಹೊಡೆದಾಟ, ಬಡಿದಾಟ ಮಾಡಿದ್ರಲ್ಲ? ಆಗ ಯಾವ ಮನಸ್ಥಿತಿ ಕೆಲಸ ಮಾಡಿತ್ತು” ಎಂದು ಮರುಪ್ರಶ್ನಿಸಿದರು

Exit mobile version