ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ವಿರುದ್ಧದ ಅಕ್ರಮ ಆಸ್ತಿ ಪ್ರಕರಣವನ್ನು ರಾಜಕೀಯ ಪ್ರೇರಿತವಾಗಿ ಸಿಬಿಐಗೆ ವಹಿಸಲಾಗಿತ್ತು. ನಾವು ಈಗ ಕಾನೂನಿನ ಚೌಕಟ್ಟಿನಲ್ಲಿ ಪ್ರಕರಣವನ್ನು ವಾಪಸ್ ಪಡೆದಿದ್ದೇವೆ. ಆಗಿನ ಸಿಎಂ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರು ಮೌಖಿಕವಾಗಿ ಕೇಸ್ ಅನ್ನು ಸಿಬಿಐಗೆ ಕೊಟ್ಟರಲ್ಲ ಅದು ರಾಜಕೀಯ ಪ್ರೇರಿತವಾಗಿರಲಿಲ್ಲವೇ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ (Home Minister Dr G Parameshwara) ಪ್ರಶ್ನೆ ಮಾಡಿದರು.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಡಿ.ಕೆ. ಶಿವಕುಮಾರ್ ವಿರುದ್ಧ ಅಕ್ರಮ ಸಂಪಾದನೆಗೆ ಸಂಬಂಧಪಟ್ಟಂತೆ 2019ರಲ್ಲಿ ಅಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಸಿಬಿಐಗೆ ವಹಿಸಿದ್ದ ಕೇಸ್ (CBI Case) ಅನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿರುವ ನಿರ್ಧಾರವನ್ನು ಸಮರ್ಥಿಸಿಕೊಂಡರು.
ಇದನ್ನೂ ಓದಿ: DK Shivakumar : ಸಿಬಿಐ ಪ್ರಕರಣ ವಾಪಸ್; ನಾವ್ ಮಾಡಿದ್ದೇ ಸರಿ: ಬಿಜೆಪಿ ಕ್ರಮ ಇಲ್ಲೀಗಲ್ ಎಂದ ಸಿಎಂ!
ಈ ಪ್ರಕರಣವನ್ನು ಸಿಬಿಐಗೆ ಕೊಡಬೇಕೇ? ಬೇಡವೇ ಎಂಬ ವಿಷಯಕ್ಕೆ ನಾವು ಹೋಗೇ ಇಲ್ಲ. ಡಿ.ಕೆ. ಶಿವಕುಮಾರ್ ಅವರು ಅಕ್ರಮ ಆಸ್ತಿ ಗಳಿಸಿದ್ದಾರೆ ಎಂಬುದು ಸಹ ನಮಗೆ ಸಂಬಂಧ ಇಲ್ಲ. ಆದರೆ, ಇಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸುವಾಗ ಕಾನೂನು ಪ್ರಕ್ರಿಯೆ ಸರಿಯಾಗಿದೆಯೇ ಎಂಬುದಷ್ಟೇ ಮುಖ್ಯವಾಗುತ್ತದೆ. ಇದು ಸರ್ಕಾರದ ಜವಾಬ್ದಾರಿಯೂ ಹೌದು. ಆದರೆ, ಇಲ್ಲಿ ಕಾನೂನು ಪಾಲನೆಯಾಗದಿರುವುದರಿಂದ ನಾವು ಪ್ರಕರಣವನ್ನು ವಾಪಸ್ ಪಡೆದಿದ್ದೇವೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ನಮ್ಮ ಇತಿಮಿತಿಯಲ್ಲಿ ತೀರ್ಮಾನ ತೆಗೆದುಕೊಂಡಿದ್ದೇವೆ
ಬಿ.ಎಸ್. ಯಡಿಯೂರಪ್ಪ ಅವರು ಸಿಬಿಐಗೆ ಕೇಸ್ ವಹಿಸಿ ಎಂದು ಮೌಖಿಕ ಆದೇಶವನ್ನು ನೀಡಿದ್ದರು. ಆದರೆ, ನಾವೀಗ ಕಾನೂನಿನ ಚೌಕಟ್ಟಿನಲ್ಲಿ ಕ್ರಮವನ್ನು ತೆಗೆದುಕೊಂಡಿದ್ದೇವೆ. ಈ ಕೇಸ್ ಅನ್ನು ಸಿಬಿಐಗೆ ವಹಿಸಲು ಬರುವುದಿಲ್ಲ. ಅದಕ್ಕೆ ಕಾನೂನಿನ ಪ್ರಕ್ರಿಯೆ ಬೇಕು ಎಂದು ಅಂದಿನ ಬಿಜೆಪಿ ಸರ್ಕಾರದಲ್ಲಿದ್ದ ಅಡ್ವೋಕೇಟ್ ಜನರಲ್ ಅವರೇ ಹೇಳಿದ್ದರು. ಈಗ ಅದನ್ನೇ ನಮ್ಮ ಅಡ್ವೋಕೇಟ್ ಜನರಲ್ ಹೇಳಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ, ನಮ್ಮ ಇತಿಮಿತಿಯಲ್ಲಿ ತೀರ್ಮಾನವನ್ನು ತೆಗೆದುಕೊಂಡಿದ್ದೇವೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ನಾವು ಈ ಪ್ರಕರಣವನ್ನು ಈಗ ವಾಪಸ್ ಪಡೆದಿದ್ದೇವೆ. ಮುಂದೆ ಏನಾಗುತ್ತದೆ ಎಂಬುದು ಗೊತ್ತಿಲ್ಲ. ನಾವಿದನ್ನು ಕೋರ್ಟ್‌ಗೆ ಸಬ್‌ಮಿಟ್ ಮಾಡುತ್ತೇವೆ. ಕ್ಯಾಬಿನೆಟ್‌ನಲ್ಲಿ ಏನು ನಿರ್ಧಾರ ಆಗಿದೆ ಎಂಬುದನ್ನು ಕೋರ್ಟ್‌ಗೆ ತಿಳಿಸುತ್ತೇವೆ. ಮುಂದೆ ಸಿಬಿಐ ಏನು ಮಾಡುತ್ತದೆ? ಕೋರ್ಟ್ ಏನ್ ಮಾಡುತ್ತದೆ ಎಂಬುದು ವ್ಯವಸ್ಥೆಗೆ ಬಿಟ್ಟ ವಿಚಾರವಾಗಿದೆ ಎಂದು ಡಾ. ಜಿ. ಪರಮೇಶ್ವರ್ ತಿಳಿಸಿದರು.
ಒಬ್ಬ ಶಾಸಕರಾದವರ ಮೇಲೆ ಯಾವುದೇ ಒಂದು ಪ್ರಕರಣವನ್ನು ದಾಖಲು ಮಾಡಬೇಕಾದರೆ ಮೊದಲು ಸ್ಪೀಕರ್ ಅನುಮತಿಯನ್ನು ಪಡೆದುಕೊಳ್ಳಬೇಕು. ಆದರೆ, ಈ ಹಿಂದೆ ಆ ಕೆಲಸವನ್ನು ಮಾಡಿಲ್ಲ. ಅದನ್ನು ಮಾಡಿದ್ದರೆ ಈ ಪ್ರಕ್ರಿಯೆಯಲ್ಲಿ ಲೋಪವಾಗುತ್ತಿರಲಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಾಹಿತಿ ನೀಡಿದರು.
ಇದನ್ನೂ ಓದಿ: DK Shivakumar : ಡಿಕೆಶಿ ಸಿಬಿಐ ಪ್ರಕರಣ ವಾಪಸ್; ಬಿಜೆಪಿ ತಪ್ಪನ್ನು ಸರಿ ಮಾಡಿದ್ದೇವೆ ಎಂದ ಪ್ರಿಯಾಂಕ್ ಖರ್ಗೆ
ಸಿಎಂ ಜತೆ ಚರ್ಚೆ ನಡೆಸಿದ ಪರಮೇಶ್ವರ್
ಸಿಎಂ ಸಿದ್ದರಾಮಯ್ಯ ಅವರ ಕಾವೇರಿ ನಿವಾಸದಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ ಸಿಎಂ ಗೃಹ ಸಚಿವ ಡಾ. ಪರಮೇಶ್ವರ್, ಸಂಪುಟದಲ್ಲಿ ಡಿಕೆಶಿ ಕೇಸ್ ವಾಪಸ್ ಪಡೆದ ಬಗ್ಗೆ ಮಾತುಕತೆ ನಡೆಸಿದ್ದಾರೆ. ಸುಮಾರು 20 ನಿಮಿಷ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಸಂಪುಟ ತೀರ್ಮಾನಕ್ಕೆ ಕೋರ್ಟ್‌ನಲ್ಲಿ ಹಿನ್ನಡೆಯಾದರೆ ಸರ್ಕಾರಕ್ಕೆ ಮುಖಭಂಗವಾಗುತ್ತದೆ. ಈ ಹಿನ್ನೆಲೆಯಲ್ಲಿ ಕೋರ್ಟ್‌ನಲ್ಲಿ ಹಿನ್ನಡೆಯಾಗದಂತೆ ಸಾಧಕ – ಬಾಧಕಗಳ ಬಗ್ಗೆ ಮಾತನಾಡಿದ್ದಾರೆನ್ನಲಾಗಿದೆ.