Site icon Vistara News

Cauvery Water Dispute : ಕಾವೇರಿ ನೀರು ಹರಿಸುವ ಹೊಸ ಸೂತ್ರಕ್ಕೆ ಆಗ್ರಹ: ಡಿಸಿಎಂ ಡಿ.ಕೆ.ಶಿವಕುಮಾರ್

DK Shivakumar on Nalin and HD Kumaraswamy

ಬೆಂಗಳೂರು: ಕಾವೇರಿ ಜಲ ವಿವಾದದ (Cauvery Water Dispute) ಹಿನ್ನೆಲೆಯಲ್ಲಿ ಮಳೆ ಇಲ್ಲದ ಸಂಕಷ್ಟದ ಕಾಲದಲ್ಲಿ ನೀರು ಹರಿಸುವ ಹೊಸ ಸೂತ್ರ ರೂಪಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿಗೆ ಆಗ್ರಹ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಹೇಳಿದರು.

ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದ ಅವರು “ಇಂದು ನಡೆಯುವ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ ಸಭೆಯ ನಂತರ ಸಂಕಷ್ಟ ಸೂತ್ರದ ರೂಪುರೇಷೆ ಹೇಗಿರಬೇಕು ಎಂದು ತೀರ್ಮಾನ ಮಾಡಲಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: Weather report : ಕರಾವಳಿಯಲ್ಲಿ ಭಾರಿ ಮಳೆ; ಮೀನುಗಾರರು ಸಮುದ್ರಕ್ಕೆ ಇಳಿಯುವಂತಿಲ್ಲ

ಸಂಕಷ್ಟ ಸೂತ್ರ ಆಗ್ರಹ ಮಾಡುವ ಮೊದಲು ನಮಗೆ ಅದರ ಬಗ್ಗೆ ಸ್ಪಷ್ಟತೆ ಇರಬೇಕು. ಅದಕ್ಕೆ ನಾವು ಮೊದಲು ಒಂದು ಸೂತ್ರದ ಬಗ್ಗೆ ಚರ್ಚೆ ಮಾಡುತ್ತೇವೆ. ಅದಕ್ಕಾಗಿ ಶುಕ್ರವಾರ ಸಂಜೆ ಸಭೆ ಕರೆಯಲಾಗಿದೆ. ರಾಜ್ಯದ ಹಿತವನ್ನು ಸುಪ್ರೀಂ ಕೋರ್ಟಿನಲ್ಲಿ ಕಾಪಾಡಿದಂತಹ ಹಿರಿಯ ನ್ಯಾಯವಾದಿಗಳು, ಅಡ್ವೋಕೇಟ್ ಜನರಲ್ ಹಾಗೂ ಹಿರಿಯ ನೀರಾವರಿ ತಜ್ಞರ ಜೊತೆ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಚರ್ಚೆ ನಡೆಸುತ್ತೇವೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಖುದ್ದು ಹಾಜರಿಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ

ಇಂದು ನಡೆಯುವ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಗೆ ಆನ್‌ಲೈನ್ ಮೂಲಕ ಭಾಗವಹಿಸದೆ ಖುದ್ದಾಗಿ ಭಾಗವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.

ನೀರಿನ ಬಿಡುಗಡೆ ಬಗ್ಗೆ ವಿರೋಧ ಪಕ್ಷದವರು, ಬೇರೆಯವರು ಏನೇನೋ ಹೇಳುತ್ತಾರೆ. ನನಗೆ ಅವರಿಗಿಂತ, ಬೇರೆಯವರಿಗಿಂತ ಹೆಚ್ಚು ಜವಾಬ್ದಾರಿ ಇದೆ. ಬಾಯಿಗೆ ಬಂದಂತೆ ಮಾತನಾಡುವ ಜಾಯಮಾನ ನನ್ನದಲ್ಲ, ನಾನು ಸಹ ರೈತ ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ: Karnataka Bandh : ಚಿತ್ರರಂಗವನ್ನು ದೂರಬೇಡಿ, ನಾವಿಲ್ಲಿ ನಿಂತರೆ ಸಮಸ್ಯೆ ಬಗೆಹರಿಯುತ್ತಾ? ಶಿವರಾಜಕುಮಾರ್

ಕರ್ನಾಟಕ ಬಂದ್‌ ಅವಶ್ಯಕತೆ ಇರಲಿಲ್ಲ

ಸಾರ್ವಜನಿಕರಿಗೆ ತೊಂದರೆಯಾಗದ ರೀತಿ ಬಂದ್ ನಿರ್ವಹಣೆ ಮಾಡಿದ್ದೇವೆ. ಕರ್ನಾಟಕ ಬಂದ್ ಮಾಡುವುದು ಅವಶ್ಯಕತೆ ಇರಲಿಲ್ಲ. ಪ್ರತಿಭಟನೆ ಮಾಡಲು ಯಾರಿಗೂ ನಾವು ಅಡ್ಡಿ ಮಾಡುವುದಿಲ್ಲ ಎಂದು ಹೇಳಿದ್ದೆವು, ಅದರಂತೆ ಬಂದ್ ವೇಳೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ರಕ್ಷಣೆ ಕೊಟ್ಟಿದ್ದೇವೆ. ಸಾರಿಗೆ, ದಿನನಿತ್ಯ ಬಳಕೆಯ ವಸ್ತುಗಳ ಲಭ್ಯತೆಗೆ ತೊಂದರೆ ಆಗದಂತೆ ನೋಡಿಕೊಂಡಿದ್ದೇವೆ ಎಂದು ತಿಳಿಸಿದರು.

Exit mobile version