ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ವಿರುದ್ಧ ಅಕ್ರಮ ಸಂಪಾದನೆಗೆ (Disproportionate assets) ಸಂಬಂಧಪಟ್ಟಂತೆ ಸಿಬಿಐ ತನಿಖೆಗೆ (CBI probe) ವಹಿಸಿದ್ದ ಕೇಸ್ ಅನ್ನು ವಾಪಸ್ ಪಡೆದ ಬೆನ್ನಲ್ಲೇ, ಆ ಪ್ರಕರಣವನ್ನು ರಾಜ್ಯ ತನಿಖಾ ಸಂಸ್ಥೆಗೆ ನೀಡಲು ಸಿದ್ಧತೆಯನ್ನು ನಡೆಸಲಾಗಿದೆ. ಈ ಬಗ್ಗೆ ಇಂದು (ಸೋಮವಾರ – ನ. 27) ರಾಜ್ಯ ಸರ್ಕಾರ ಮಹತ್ವದ ನಿರ್ಣಯವನ್ನು ಕೈಗೊಳ್ಳಲಿದೆ. ಸಚಿವ ಸಂಪುಟದ (Cabinet Meeting) ಆದೇಶವನ್ನು ಸಿಬಿಐ ಪ್ರಶ್ನೆ ಮಾಡುವ ಮೊದಲೇ ರಾಜ್ಯ ಸರ್ಕಾರ ಈ ನಿರ್ಧಾರವನ್ನು ಕೈಗೊಳ್ಳಲು ಮುಂದಾಗಿದೆ.
ಡಿ.ಕೆ. ಶಿವಕುಮಾರ್ ವಿರುದ್ಧ ಕೇಳಿ ಬಂದಿದ್ದ ಅಕ್ರಮ ಸಂಪಾದನೆ ಪ್ರಕರಣವನ್ನು 2019ರಲ್ಲಿ ಅಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ (BS Yediyurappa) ಅವರು ಸಿಬಿಐಗೆ ವಹಿಸಿದ್ದರು. ಆದರೆ, ಈ ಕೇಸ್ (CBI Case) ಅನ್ನು ಕಾನೂನುಬಾಹಿರವಾಗಿ ಸಿಬಿಐಗೆ ನೀಡಲಾಗಿದೆ. ಯಾವುದೇ ನಿಯಮವನ್ನು ಪಾಲನೆ ಮಾಡಲಾಗಿಲ್ಲ ಎಂಬ ಕಾರಣ ನೀಡಿ ರಾಜ್ಯ ಸರ್ಕಾರ ಗುರುವಾರ (ನ.23) ಪ್ರಕರಣವನ್ನು ವಾಪಸ್ ಪಡೆಯುವ ನಿರ್ಧಾರವನ್ನು ತೆಗೆದುಕೊಂಡಿತ್ತು. ಈಗ ಈ ಕ್ಯಾಬಿನೆಟ್ ಆದೇಶವನ್ನು ಸಿಬಿಐ ಪ್ರಶ್ನೆ ಮಾಡುವ ಮೊದಲೇ ರಾಜ್ಯ ತನಿಖಾ ಸಂಸ್ಥೆಗೆ ತನಿಖೆಯ ಹೊಣೆಯನ್ನು ನೀಡಲು ನಿರ್ಧಾರ ಮಾಡಿದೆ.
ಇದನ್ನೂ ಓದಿ: Pension Eligibility : ಎರಡನೇ ಪತ್ನಿಗೆ ಪಿಂಚಣಿ ಅಧಿಕಾರವಿಲ್ಲ; ಹೈಕೋರ್ಟ್ ಮಹತ್ವದ ತೀರ್ಪು
ಲೋಕಾಯುಕ್ತ ಇಲ್ಲವೇ ಎಸ್ಐಟಿಗೆ ನೀಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಆದಷ್ಟು ಬೇಗ ತನಿಖಾ ಸಂಸ್ಥೆಗೆ ಕೊಡುವಂತೆ ಸಲಹೆಗಳು ಬಂದಿವೆ ಎನ್ನಲಾಗಿದೆ. ಹೈಕೋರ್ಟ್‌ನಲ್ಲಿ ಸಿಬಿಐ ಇದರ ಬಗ್ಗೆ ಪ್ರಶ್ನೆ ಮಾಡುವ ಮೊದಲು ತನಿಖಾ ಸಂಸ್ಥೆಗೆ ಕೊಡುವ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬಂದಿದೆ. ಹೀಗಾಗಿ ಈ ಪ್ರಕರಣದ ತನಿಖೆ ಹೊಣೆಯನ್ನು ಲೋಕಾಯುಕ್ತಕ್ಕೆ ನೀಡಲಾಗುತ್ತದೆಯೋ ಅಥವಾ ಎಸ್ಐಟಿಗೋ ಎಂಬ ಬಗ್ಗೆ ಇನ್ನಷ್ಟೇ ನಿರ್ಧಾರವಾಗಬೇಕಿದೆ.
ಏನಿದು ಪ್ರಕರಣ?
2013ರಿಂದ 2018ರ ಅವಧಿಯಲ್ಲಿ ಆದಾಯಕ್ಕಿಂತಲೂ ಅಧಿಕ ಆಸ್ತಿ ಗಳಿಸಿದ ಆರೋಪ ಡಿ.ಕೆ. ಶಿವಕುಮಾರ್ ಮೇಲೆ ಇತ್ತು. ಈ ಪ್ರಕರಣವನ್ನು ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ನೇತೃತ್ವದ ಸರ್ಕಾರ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿ 2019ರಲ್ಲಿ ಸಿಬಿಐಗೆ ನೀಡಿತ್ತು. ಸಿಬಿಐಗೆ ಪ್ರಕರಣವನ್ನು ವಹಿಸಿದ್ದನ್ನು ಪ್ರಶ್ನೆ ಮಾಡಿದ್ದ ಡಿ.ಕೆ. ಶಿವಕುಮಾರ್ ಕೋರ್ಟ್ ಮೊರೆ ಹೋಗಿದ್ದರು. ಎಫ್ಐಆರ್ ಹಾಕದೇ ಕೇಂದ್ರೀಯ ತನಿಖಾ ತಂಡಕ್ಕೆ ನೀಡಿದ್ದು ಸರಿಯಲ್ಲ ಎಂದು ಕೋರ್ಟ್‌ನಲ್ಲಿ ಡಿಕೆಶಿ ಪ್ರಶ್ನೆ ಮಾಡಿದ್ದರು.
ಅಲ್ಲದೆ ಇದೇ ಪ್ರಕರಣದಲ್ಲಿ ಸುಮಾರು ಐದು ತಿಂಗಳುಗಳ ಕಾಲ ಡಿ.ಕೆ. ಶಿವಕುಮಾರ್ ಜೈಲು ಪಾಲಾಗಿದ್ದರು. ಬಳಿಕ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿತ್ತು. ಕೊನೆಗೆ ಕೋರ್ಟ್‌ನಿಂದ ಷರತ್ತುಬದ್ಧ ಜಾಮೀನು ಪಡೆಯಲಾಗಿತ್ತು. ಈ ನಡುವೆ ಹೈಕೋರ್ಟ್‌ನಲ್ಲಿ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳಿ ಎಂದು ಸುಪ್ರೀಂ ಕೋರ್ಟ್ ಆದೇಶವನ್ನು ಹೊರಡಿಸಿತ್ತು. ಇಲ್ಲಿ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್‌ನ ಏಕ ಸದಸ್ಯ ಪೀಠ ಸಿಬಿಐ ವಿಚಾರಣೆಯನ್ನು ಎತ್ತಿ ಹಿಡಿದಿತ್ತು. ಹೀಗಾಗಿ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನೆ ಮಾಡಿದ ಡಿ.ಕೆ. ಶಿವಕುಮಾರ್ ದ್ವಿಸದಸ್ಯ ಪೀಠಕ್ಕೆ ಅಪೀಲು ಹೋಗಿದ್ದಾರೆ. ಈ ಅರ್ಜಿಯ ವಿಚಾರಣೆ ಇನ್ನೂ ನಡೆಯುತ್ತಿದೆ.
ಇದು ಅಡ್ವೋಕೇಟ್ ಜನರಲ್ ಸಲಹೆ!
ಈ ನಡುವೆ ಕ್ಯಾಬಿನೆಟ್‌ನಲ್ಲಿ ಈ ಪ್ರಕರಣವನ್ನು ವಾಪಸ್ ಪಡೆದುಕೊಳ್ಳಬಹುದು ಎಂದು ಅಡ್ವೋಕೇಟ್ ಜನರಲ್ ನೀಡಿರುವ ಸಲಹೆ ಮೇರೆಗೆ ಈ ವಿಚಾರವನ್ನು ಕ್ಯಾಬಿನೆಟ್‌ನಲ್ಲಿ ಚರ್ಚೆಗೆ ತೆಗೆದುಕೊಳ್ಳಲಾಗಿತ್ತು. ಅದರ ಅನುಸಾರ ಪ್ರಕರಣವನ್ನು ಸಿಬಿಐನಿಂದ ವಾಪಸ್ ಪಡೆಯುವ ನಿರ್ಧಾರಕ್ಕೆ ಬರಲಾಗಿತ್ತು.
ಈ ಚಿಂತನೆ ಬಂದಿದ್ದು ಹೀಗೆ!
ಸಚಿವ ಸಂಪುಟ ಸಭೆ ಮುಂದೆ ಸಿಬಿಐಗೆ ನೀಡಿರುವ ಅನುಮತಿ ವಾಪಸ್ ಪಡೆಯುವ ಪ್ರಸ್ತಾವನೆ ವಿಚಾರವಾಗಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಡ್ವೋಕೇಟ್ ಜನರಲ್ ಆಗಿದ್ದ ಅಶೋಕ್ ಹಾರನಹಳ್ಳಿ ವರದಿ ಆಧರಿಸಿ ಹಾಲಿ ಎಜಿಯಿಂದ ಈ ಅಭಿಪ್ರಾಯ ವ್ಯಕ್ತವಾಗಿದೆ ಎನ್ನಲಾಗಿದೆ. ಸಿಬಿಐ ತನಿಖೆಗೆ ನೀಡುವಂತಹ ಪ್ರಕರಣ ಇದಲ್ಲ ಎಂದು ಅಂದಿನ ಎಜಿ ವಿರೋಧ ಮಾಡಿದ್ದರು. ಅಂದಿನ ಎಜಿ ವರದಿಯನ್ನೂ ಕಡೆಗಣಿಸಿ ಅಂದಿನ ಸರ್ಕಾರದಿಂದ ಸಿಬಿಐ ತನಿಖೆಗೆ ಅನುಮೋದನೆ ನೀಡಿತ್ತು. ಹಿಂದಿನ ಅಡ್ವೋಕೇಟ್ ಜನರಲ್ ಅಭಿಪ್ರಾಯ ಅಸ್ತ್ರವಾಗಿಟ್ಟುಕೊಂಡು ಈಗ ಎಜಿ ಶಶಿಕಿರಣ್ ಶೆಟ್ಟಿ ಅಭಿಪ್ರಾಯ ಸಲ್ಲಿಸಿದ್ದರು. ಕೋರ್ಟ್‌ನಲ್ಲಿ ವಿಚಾರಣೆ ಬಾಕಿ ಇರುವ ಹಿನ್ನೆಲೆಯಲ್ಲಿ ಸಿಬಿಐ ಕುಣಿಕೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನಕ್ಕೆ ಡಿ.ಕೆ. ಶಿವಕುಮಾರ್ ಮುಂದಾಗಿದ್ದಾರೆ ಎನ್ನಲಾಗಿದೆ.
ಪ್ರಕರಣ ಹಿಂಪಡೆಯುವ ಅಧಿಕಾರ ಕ್ಯಾಬಿನೆಟ್‌ಗೆ ಇದೆಯಾ?
ಈಗ ಸಚಿವ ಸಂಪುಟ ಸಭೆಗೆ ಈ ಪ್ರಕರಣವನ್ನು ವಾಪಸ್ ಪಡೆದುಕೊಳ್ಳುವ ಅಧಿಕಾರ ಇದೆಯಾ? ಎಂಬ ಪ್ರಶ್ನೆ ಕಾಡುತ್ತಿದೆ. ಹೋರಾಟ, ಪ್ರತಿಭಟನೆ ಪ್ರಕರಣಗಳನ್ನು ವಾಪಸ್ ಪಡೆದುಕೊಳ್ಳುವ ಅಧಿಕಾರವನ್ನು ಸಚಿವ ಸಂಪುಟಕ್ಕೆ ನೀಡಲಾಗಿದೆ. ಆದರೆ, ಈಗಾಗಲೇ ಕೋರ್ಟ್‌ನಲ್ಲಿ ಇರುವ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿರುವುದರಿಂದ ಹಾಗೂ ಪ್ರಕರಣದ ವಿಚಾರಣೆ ನಡೆಯುವಾಗ ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಅಂತಹ ನಿರ್ಧಾರ ಕೈಗೊಂಡರೆ ಕೋರ್ಟ್ ಸರ್ಕಾರಕ್ಕೆ ಎಚ್ಚರಿಕೆ ಕೊಡುವ ಸಾಧ್ಯತೆ ಇದೆ. ಸರ್ಕಾರ ತಮ್ಮ ವ್ಯಾಪ್ತಿ ಮೀರಿದೆ ಎಂದು ಸೂಚಿಸುವ ಸಾಧ್ಯತೆ ಇದೆ. ಆದರೆ, ಈ ವಿಚಾರವಾಗಿ ಸಿಬಿಐ ಇನ್ನೂ ಕೋರ್ಟ್ ಮೆಟ್ಟಿಲೇರಿಲ್ಲ.
ಇದನ್ನೂ ಓದಿ: Gruha Lakshmi : ಗೃಹಲಕ್ಷ್ಮಿ ಹಣ ಇನ್ನೂ ಬಂದಿಲ್ಲವೇ? ಹಾಗಾದರೆ ದೂರು ಕೊಡೋಕೆ ರೆಡಿ ಆಗಿ!
ಡಿಕೆಶಿಗೆ ಮತ್ತೇನು ಸಂಕಷ್ಟ?
ಡಿ.ಕೆ. ಶಿವಕುಮಾರ್ ಅವರು ಈಗಾಗಲೇ ಷರತ್ತು ಬದ್ಧ ಜಾಮೀನು ಪಡೆದು ಹೊರಗೆ ಇದ್ದಾರೆ. ಕ್ಯಾಬಿನೆಟ್‌ನ ಈ ನಿರ್ಣಯವನ್ನು ಪ್ರಶ್ನೆ ಮಾಡಿ ಸಿಬಿಐ ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ. ರಾಜಕೀಯ ಪ್ರಭಾವ ಬೀರಿ ಕೇಸ್ ವಾಪಸ್ ಪಡೆದುಕೊಂಡಿದ್ದಾರೆ. ಸರ್ಕಾರದ ನಡೆ ಸರಿಯಲ್ಲ ಎಂದು ಅರ್ಜಿ ಸಲ್ಲಿಸಿ ವಾದ ಮಂಡಿಸುವ ಸಾಧ್ಯತೆ ದಟ್ಟವಾಗಿದೆ. ಅಲ್ಲದೆ, ಷರತ್ತು ಉಲ್ಲಂಘನೆಯ ಕಾರಣ ಹೇಳಿ ಜಾಮೀನು ರದ್ದು ಮಾಡುವಂತೆ ವಾದ ಮಾಡಬಹುದು. ಅಲ್ಲದೇ ಸಿಬಿಐ ತನಿಖೆ ಇನ್ನಷ್ಟು ಕಠಿಣ ಆಗಬಹುದು. ಒಂದು ವೇಳೆ ರಾಜಕೀಯ (ಕೇಂದ್ರ ಸರ್ಕಾರ) ಬಳಕೆಯಾದರೆ ಡಿ.ಕೆ. ಶಿವಕುಮಾರ್ ಮತ್ತೊಮ್ಮೆ ಜೈಲು ಸೇರಬಹುದು.