ಬೆಂಗಳೂರು/ನವದೆಹಲಿ: ಡಿ.ಕೆ. ಶಿವಕುಮಾರ್ (DK Shivakumar) ಅವರ ವಿರುದ್ಧ ಸಿಬಿಐ ದಾಖಲಿಸಿಕೊಂಡಿರುವ (CBI Case against DK Shivakumar) ಗೊತ್ತಾದ ಆದಾಯ ಮೂಲಕ್ಕಿಂತ ಅಧಿಕ ಆಸ್ತಿ ಗಳಿಕೆ ಪ್ರಕರಣವನ್ನು ರಾಜ್ಯ ಸರ್ಕಾರ ಹಿಂಪಡೆದಿರುವುದಕ್ಕೆ ಸಂಬಂಧಿಸಿ ಪಕ್ಷದಲ್ಲೇ ವಿರೋಧ ವ್ಯಕ್ತವಾಗಿದೆಯಾ? ಡಿ.ಕೆ. ಶಿವಕುಮಾರ್ ಅವರ ರಕ್ಷಣೆಗೆ ರಾಜ್ಯ ಸಚಿವ ಸಂಪುಟ (State Cabinet) ತಪ್ಪು ಹಾದಿ ತುಳಿಯುತ್ತಿದೆ ಎಂದು ಕೆಲವರು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಡಿಕೆಶಿ ಅವರನ್ನು ಎದುರು ಹಾಕಿಕೊಳ್ಳುವುದು ಬೇಡ ಎಂಬ ಕಾರಣಕ್ಕಾಗಿ ಅಂತಿಮವಾಗಿ ಒಪ್ಪಿಗೆ ಸೂಚಿಸಲಾಯಿತು ಎಂಬ ಅಭಿಪ್ರಾಯವಿದೆ. ಈ ರೀತಿಯಾದ ನಿಲುವುಗಳು ಸ್ವತಃ ಡಿ.ಕೆ. ಶಿವಕುಮಾರ್ ಅವರಿಗೇ ತಲುಪಿದ್ದು ಅವರು ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಇಂಥ ವಿರೋಧದ ಮಾತುಗಳಿಗೆ ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್ ಅವರು, ಯಾರ್ಯಾರ ಮನಸ್ಸು ಮತ್ತು ನಾಲಿಗೆಯಲ್ಲಿ ಏನೇನಿದೆ ಎಂಬುದು ಈಗ ತಿಳಿಯುತ್ತಿದೆ ಎಂದಿದ್ದಾರೆ.
ಖಾಸಗಿ ಕಾರ್ಯಕ್ರಮ ನಿಮಿತ್ತ ದಿಲ್ಲಿಗೆ ಬಂದಿರುವ ಅವರು, ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, “ನನ್ನ ವಿರುದ್ಧದ ಪ್ರಕರಣದಲ್ಲಿ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದ ನಂತರ ಅನೇಕರು ಮಾತನಾಡುತ್ತಿದ್ದಾರೆ. ಯಾರ್ಯಾರ ಮನಸ್ಸು ಮತ್ತು ನಾಲಿಗೆ ಮೇಲೆ ಏನೇನಿದೆ ಎಂಬುದು ಈಗ ತಿಳಿಯುತ್ತಿದೆ” ಎಂದರು.
“ತನಿಖೆಗೆ ಅನುಮತಿ ವಾಪಸ್ ಪಡೆದಿರುವ ಬೆಳವಣಿಗೆಯಿಂದ ಎಲ್ಲರ ಮನಸ್ಥಿತಿಯೂ ಅರ್ಥವಾಗುತ್ತಿದೆ. ಯಾರ್ಯಾರು ಗೆಳೆಯರು, ಅವರ ಭಾವನೆ ಏನಿದೆ ಎಂಬುದು ಈಗ ತಿಳಿಯುತ್ತಿದೆ. ಸಿಬಿಐ ತನಿಖೆಗೆ ಅನುಮತಿ ಹಿಂಪಡೆದಿರುವ ಬಗ್ಗೆ ಈಗ ಮಾತನಾಡಲು ಹೋಗುವುದಿಲ್ಲ. ಮುಂದೆ ಅದರ ಬಗ್ಗೆ ಖಂಡಿತವಾಗಿಯೂ ಮಾತನಾಡುತ್ತೇನೆ. ಎಲ್ಲದಕ್ಕೂ ಉತ್ತರ ಕೊಡುತ್ತೇನೆ” ಎಂದರು.
ತೆಲಂಗಾಣದಲ್ಲಿ ಕಾಂಗ್ರೆಸ್ ಪರ ಅಲೆ
“ಕರ್ನಾಟಕ ಮಾದರಿಯಂತೆ ತೆಲಂಗಾಣದಲ್ಲಿ ಆರು ಗ್ಯಾರಂಟಿಗಳನ್ನು ನೀಡಲಾಗಿದೆ. ದಲಿತ ಸಿಎಂ ಸೇರಿದಂತೆ ಕೆಸಿಆರ್ ಅವರ ನೇತೃತ್ವದ ಸರ್ಕಾರ 10 ವರ್ಷಗಳಲ್ಲಿ ತಾನು ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ. ತೆಲಂಗಾಣ ರಾಜ್ಯ ರಚನೆಗೆ ಸೋನಿಯಾ ಗಾಂಧಿ ಅವರೇ ಕಾರಣ. ತೆಲಂಗಾಣದ ಜನರಿಗೆ ಸೋನಿಯಾಗಾಂಧಿ ಅವರ ಋಣ ತೀರಿಸಬೇಕು ಎನ್ನುವ ಭಾವನೆ ಬಂದಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಜನರಿಗೆ ತೋಟದ ಮನೆಯಲ್ಲಿ ಕುಳಿತು ಕೆಲಸ ಮಾಡುವವರು ಬೇಕಿಲ್ಲ. ಜನರ ಮಧ್ಯೆ ಕೆಲಸ ಮಾಡುವ ಸರ್ಕಾರ ಬೇಕು ಎನ್ನುವುದು ಅರ್ಥವಾಗಿದೆ. ಜನ ಬದಲಾವಣೆ ಬಯಸಿದ್ದಾರೆ” ಎಂದು ಹೇಳಿದರು.
“ತೆಲಂಗಾಣ ಚುನಾವಣೆಗೆ ಕರ್ನಾಟಕದ ಸುಮಾರು 40 ಕ್ಕೂ ಹೆಚ್ಚು ನಾಯಕರು ಭಾಗವಹಿಸಿದ್ದರು. ನಾನು ಸಹ 5 ದಿನಗಳ ಕಾಲ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದೆ. ನಿನ್ನೆ ಸಿಎಂ ಸಿದ್ದರಾಮಯ್ಯ ಅವರೂ ಭಾಗವಹಿಸಿದ್ದರು” ಎಂದು ಹೇಳಿದರು.
“ರೈತಬಂಧು ಕಾರ್ಯಕ್ರಮದ ಅಡಿ ರೈತರಿಗೆ ಧನಸಹಾಯ ನೀಡುವ ಬಿಜೆಪಿ ಸರ್ಕಾರದ ಕಾರ್ಯಕ್ರಮಕ್ಕೆ ಚುನಾವಣಾ ಆಯೋಗ ಅನುಮತಿ ನೀಡಿತ್ತು. ಆದರೆ ಮತ್ತೆ ರದ್ದು ಮಾಡಿದ್ದಾರೆ. ಒಂದರ್ಥದಲ್ಲಿ ಚೆಸ್ ಆಟವಾಡುತ್ತಿದ್ದಾರೆ” ಎಂದು ವ್ಯಂಗ್ಯವಾಡಿದರು.
ಅಶೋಕ್ ಅವರು ಮೊದಲು ತಮ್ಮ ಪಕ್ಷ ಸರಿಮಾಡಿಕೊಳ್ಳಲಿ
ನಿಮ್ಮನ್ನು ಅಧಿಕಾರದಿಂದ ಕೆಳಗಿಳಿಸಲು ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಅವರು ಪ್ಲಾನ್ ಮಾಡುತ್ತಿದ್ದಾರೆ ಎಂಬ ಆರ್. ಅಶೋಕ್ ಅವರ ಆರೋಪದ ಬಗ್ಗೆ ಕೇಳಿದಾಗ, “ಅವರು ಕಾಂಗ್ರೆಸ್ ಪಕ್ಷದ ವಕ್ತಾರರಾಗಿ ಮಾತನಾಡಲು ಆಗುವುದಿಲ್ಲ. ಅವರು ಅವರದೇ ಪಕ್ಷದ ವಕ್ತಾರರಾಗಿ ಅವರ ಪಕ್ಷವನ್ನು ಸರಿಪಡಿಸಿಕೊಳ್ಳಲಿ” ಎಂದು ತಿರುಗೇಟು ನೀಡಿದರು.
ಬೋಗಸ್ ಜನತಾ ದರ್ಶನ, ಸರ್ಕಾರ ಈಗ ಎಚ್ಚರವಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಆಶೋಕ್ ಅವರ ಆರೋಪದ ಬಗ್ಗೆ ಕೇಳಿದಾಗ “ಹೊಸದಾಗಿ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಹೊಸದರಲ್ಲಿ ಜೋರಾಗಿ ಬಟ್ಟೆ ಒಗೆಯಲಿ. ನಾವು ಎಲ್ಲರ ಮನಸ್ಥಿತಿ ಅರಿಯುತ್ತಿದ್ದೇವೆ” ಎಂದು ಛೇಡಿಸಿದರು.
ತೆಲಂಗಾಣದಲ್ಲಿ ಎಷ್ಟು ಸ್ಥಾನಗಳನ್ನು ಗೆಲ್ಲಬಹುದು ಎಂದು ಕೇಳಿದಾಗ “ಕರ್ನಾಟಕದಂತೆ ನಿಖರವಾಗಿ ಇಲ್ಲಿ ಹೇಳಲು ಬರುವುದಿಲ್ಲ. ನಾನು ಕರ್ನಾಟಕದ ಪ್ರತಿಯೊಂದು ಕ್ಷೇತ್ರದ ಚಿತ್ರಣವನ್ನು ಅವಲೋಕಿಸಿದ್ದೆ. ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚನೆ ಮಾಡುವುದು ನಿಶ್ಚಿತ. ತೆಲಂಗಾಣದಲ್ಲಿ ಕಾಂಗ್ರೆಸ್ ಸರಕಾರ ರಚನೆ ಆಗಲಿದ್ದು, ಸಚಿವ ಸಂಪುಟದ ಮೊದಲ ಸಭೆಯಲ್ಲಿ ಡಿ.9 ರಂದು ಎಲ್ಲಾ 6 ಗ್ಯಾರಂಟಿಗಳನ್ನು ಜಾರಿಗೆ ತರಲು ಅನುಮೋದನೆ ನೀಡುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.