ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಮತ್ತು ಸಹೋದರ ಡಿ.ಕೆ. ಸುರೇಶ್ ಹಾಗೂ ಕುಟುಂಬಕ್ಕೆ ನಿತ್ಯ ಚಿತ್ರಹಿಂಸೆ ನೀಡಲಾಗುತ್ತಿದೆ. ಹೀಗೆ ಮಾನಸಿಕ ಕಿರುಕುಳ (Mental Harassment) ಕೊಡುವ ಬದಲು ಶೂಟ್ ಮಾಡಿಸಿ ಕೊಂದು ಬಿಡಲಿ (Kill him by Shooting): ಹೀಗೆಂದು ಹೇಳಿದವರು ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ (Congress Spokesperson Lakshman). ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ, ಜೆಡಿಎಸ್ ವಿರುದ್ಧ ಗಂಭೀರ ಆರೋಪ ಮಾಡಿದರು.
ʻʻಕುಮಾರಸ್ವಾಮಿ ಎರಡು ಬಾರಿ ರಾಜ್ಯದ ಸಿಎಂ ಆಗಿದ್ದವರು. ನಮ್ಮ ನಾಯಕರ ವಿರುದ್ಧ ನಿತ್ಯ ಬಾಲಿಶ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸರಿಯಾದ ರೀತಿಯಲ್ಲಿ ಸರ್ಕಾರ ನಡೆಸಲು ಬಿಡುತ್ತಿಲ್ಲ. ಸಿಎಂ, ಡಿಸಿಎಂಗೆ ಚಿತ್ರ ಹಿಂಸೆ ಕೊಡುತ್ತಿದ್ದಾರೆʼʼ ಎಂದು ಆರೋಪಿಸಿದ ಅವರು, ಡಿ.ಕೆ ಶಿವಕುಮಾರ್ ಒಕ್ಕಲಿಗ ನಾಯಕ. ಹೀಗಾಗಿ ಅವರನ್ನು ಬೆಳೆಯಲು ಕುಮಾರಸ್ವಾಮಿ ಬಿಡುತ್ತಿಲ್ಲ. ಡಿ.ಕೆ. ಶಿವಕುಮಾರ್ ಅವರನ್ನು ಮತ್ತೆ ಜೈಲಿಗೆ ಕಳುಹಿಸಲು ಅಮಿತ್ ಶಾ ಜತೆ ಸೇರಿ ಕುಮಾರಸ್ವಾಮಿ ಪ್ಲ್ಯಾನ್ ಮಾಡಿದ್ದಾರೆʼʼ ಎಂದು ಆರೋಪ ಮಾಡಿದರು.
ಅಮಿತ್ ಶಾ ಮತ್ತು ಕುಮಾರಸ್ವಾಮಿ ಏನೆಲ್ಲ ಮಾತನಾಡಿದ್ದಾರೆ ಎಂದು ಕಾಲ ಬಂದಾಗ ಬಹಿರಂಗಪಡಿಸುತ್ತೇನೆ ಎಂದು ಹೇಳಿದ ಲಕ್ಷ್ಮಣ್ ಅವರು, ಇವರೆಲ್ಲ ಹೀಗೆ ಅನಗತ್ಯವಾಗಿ ಡಿ.ಕೆ ಶಿವಕುಮಾರ್‌ಗೆ ಮಾನಸಿಕ ಕಿರುಕುಳ ಕೊಡುವ ಬದಲು ಮುಂಬೈನಿಂದ ಸುಪಾರಿ ಕೊಟ್ಟು ಶೂಟ್ ಮಾಡಿಸಿಬಿಡಲಿ ಎಂದಿದ್ದಾರೆ ಲಕ್ಷ್ಮಣ್.
ಬಿಜೆಪಿ ಮತ್ತು ಜೆಡಿಎಸ್‌ನವರು ಸೇರಿಕೊಂಡು ಡಿಸಿಎಂ ಡಿ.ಕೆ. ಶಿವಕುಮಾರ್ ಕುಟುಂಬವನ್ನು ಮುಗಿಸಲು ಹೊರಟಿದ್ದಾರೆ. ಅವರಿಗೆ ಏನಾದರೂ ಸಮಸ್ಯೆ ಆದರೆ ಅದಕ್ಕೆ ಅಶ್ವಥ್ ನಾರಾಯಣ್, ಸಿ.ಟಿ ರವಿ, ಅಶೋಕ್ ಕಾರಣರಾಗುತ್ತಾರೆ ಎಂದು ಎಚ್ಚರಿಸಿದರು.
ʻʻಕುಮಾರಸ್ವಾಮಿಗೆ ಏನಾದರೂ ಮಾನ ಮರ್ಯಾದೆ ಇದೆಯಾ? ಈಗಾಗಲೇ ಜನರು ಇವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಕರ್ನಾಟಕದ ಜನರು ಮುಟ್ಟಾಳರೇನಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲೂ ಪಾಠ ಕಲಿಸುತ್ತಾರೆʼʼ ಎಂದು ಹೇಳಿದ ಲಕ್ಷ್ಮಣ್, ʻʻಐಟಿ ದಾಳಿಯಲ್ಲಿ ಸಿಕ್ಕಿದ್ದು ಕಾಂಗ್ರೆಸ್ ಹಣ ಎಂದು ಹೇಳುತ್ತಿದ್ದಾರಲ್ಲಾ.. ಐಟಿ ಅಧಿಕಾರಿಗಳು ಪತ್ರ ಬಿಡುಗಡೆ ಮಾಡಿದ್ದಾರೆ. ಆ ಪತ್ರದಲ್ಲಿ ಎಲ್ಲಿಯಾದರೂ ಕಾಂಗ್ರೆಸ್ ನಾಯಕರ ಹೆಸರಿದೆಯಾʼʼ ಎಂದು ಕೇಳಿದರು.
ಸಿಎಂ, ಮಗನನ್ನು ಸಿಲುಕಿಸಲು ಕುಮಾರಸ್ವಾಮಿ ಯತ್ನ
ʻʻಕೆಲವು ವಾಸ್ತುಶಿಲ್ಪಿಗಳು, ಗುತ್ತಿಗೆದಾರರು ತೆರಿಗೆ ವಂಚನೆ ನಡೆಸಿದ್ದಾರೆ ಎಂದು ಐಟಿ ಅಧಿಕಾರಿಗಳು ಹೇಳಿದ್ದಾರೆʼʼ ಎಂದು ನೆನಪಿಸಿದರು. ಸಿಎಂ ಅವರ ಬೆಂಗಳೂರು ಹಾಗೂ ಮೈಸೂರಿನ ಮನೆ ಬಗ್ಗೆ ಕುಮಾರಸ್ವಾಮಿ ಮಾತನ್ನಾಡಿದ್ದಾರೆ. ಬೆಂಗಳೂರಿನಲ್ಲಿ ಸಿಎಂ ಉಳಿದುಕೊಂಡಿರುವ ಮನೆ ಅವ್ರದ್ದಲ್ಲ. ಅದು ಲೋಕೋಪಯೋಗಿ ಇಲಾಖೆಯ ಸ್ವತ್ತು. ಮೈಸೂರಿನಲ್ಲಿ ಮನೆ ಕಟ್ಟಲು ಆರಂಭಿಸಿ ಐದು ವರ್ಷವೇ ಆಯಿತು. ಅದು ಇನ್ನೂ ಪೂರ್ಣವಾಗಿಲ್ಲ. ಮೈಸೂರಿಗೆ ಸಿಎಂ ಬಂದಾಗ ಉಳಿದುಕೊಳ್ಳುವ ಮನೆ ಅವರದ್ದಲ್ಲ. ಅದು ಬಾಡಿಗೆ ಮನೆ. ಪುಟ್ಟಸ್ವಾಮಯ್ಯ ಅವರಿಗೆ ಸೇರಿದ ಮನೆಗೆ ಸಿಎಂ ಬಾಡಿಗೆ ಕಟ್ಟುತ್ತಿದ್ದಾರೆ. ಸಿಎಂ ಆಸ್ತಿಪಾಸ್ತಿ ಎಲ್ಲಾ ಸೇರಿ ಕೇವಲ 26 ಲಕ್ಷ ರೂ. ಮಾತ್ರ. ಇದನ್ನ ಹಿಂದೆಯೇ ಅಫಿಡವಿಟ್ ನಲ್ಲಿ ತೋರಿಸಿದ್ದೇವೆʼʼ ಎಂದು ವಿವರಿಸಿದರು ಲಕ್ಷ್ಮಣ್.
ʻʻಸಿಎಂ ಸಿದ್ದರಾಮಯ್ಯ ಅವರ ಮಗ ಯತೀಂದ್ರ ಅವರನ್ನು ಸಿಲುಕಿಸಲು ನಿರಂತರ ಪ್ರಯತ್ನ ನಡೆಸಲಾಗುತ್ತಿದೆ. ಬಿಜೆಪಿ, ಜೆಡಿಎಸ್ ಇಬ್ಬರೂ ಕೆಟ್ಟ ಹೆಸರು ತರಲು ಏನೇನೋ ಮಾಡ್ತಿದ್ದಾರೆ. ರಾಜ್ಯದ ಜನರು ಇದನ್ನ ಗಮನಿಸುತ್ತಿದ್ದಾರೆʼʼ ಎಂದು ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಹೇಳಿದರು.
ಬಿಜೆಪಿ ಮತ್ತು ಜೆಡಿಎಸ್ ಮೇಲೆ ಜನರಿಗೆ ಸಿಕ್ಕಾಪಟ್ಟೆ ಕೋಪ ಇದೆ. ಇದರ ಪರಿಣಾಮವಾಗಿ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಕ್ಷೇತ್ರಗಳನ್ನು ಗೆದ್ದರೂ ಅಚ್ಚರಿ ಇಲ್ಲ ಎಂದರು ಕಾಂಗ್ರೆಸ್ ವಕ್ತಾರ.