Site icon Vistara News

DK Shivakumar : ಕಾಂಗ್ರೆಸ್‌ ಶಾಸಕರು, ಕಾರ್ಯಕರ್ತರ ಭೇಟಿಗೆ ಡಿಕೆಶಿ ಟೈಮ್‌ ಫಿಕ್ಸ್‌

DCM DK Shivakumar

ಬೆಂಗಳೂರು: ಅನುದಾನ ಮತ್ತಿತರ ವಿಚಾರದಲ್ಲಿ ಆಕ್ರೋಶಿತರಾಗಿರುವ ಕಾಂಗ್ರೆಸ್‌ ಶಾಸಕರನ್ನು (Congress MLAs) ಸಮಾಧಾನಪಡಿಸುವ ಉದ್ದೇಶದಿಂದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DK Shivakumar) ಹೊಸ ಯೋಜನೆಯೊಂದನ್ನು ಮಾಡಿದ್ದಾರೆ. ಅದರ ಪ್ರಕಾರ ಇನ್ನು ಮುಂದೆ ಪ್ರತಿದಿನವೂ ಅವರು ಕಾಂಗ್ರೆಸ್‌ ಶಾಸಕರು ಮತ್ತು ಕಾರ್ಯಕರ್ತರ ಭೇಟಿಗೆ ಸಮಯ ನಿಗದಿ (Visit time fix) ಮಾಡಿದ್ದಾರೆ.

“ಪ್ರತಿನಿತ್ಯ ಬೆಳಗ್ಗೆ 10ರಿಂದ 10.30ರವರೆಗೆ ಪಕ್ಷದ ಶಾಸಕರು ಹಾಗೂ ಕಾರ್ಯಕರ್ತರ ಭೇಟಿಗೆ ಸಮಯ ನೀಡುತ್ತೇನೆ. ತಮ್ಮ ಕ್ಷೇತ್ರದಲ್ಲಿನ ಕೆಲಸ ಹಾಗೂ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವರಿಗೆ ಅವಕಾಶ ನೀಡಲಾಗುವುದುʼʼ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.. ಹೊರಗಡೆ ಹೋಗುವ ದಿನ ಹೊರತಾಗಿ ಬೆಂಗಳೂರಿನಲ್ಲಿರುವ ಎಲ್ಲಾ ದಿನ ಸಮಯಾವಕಾಶ ನೀಡಲಾಗುವುದು” ಎಂದು ಹೇಳಿದರು. ಸದಾಶಿವನಗರ ನಿವಾಸದ ಬಳಿ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು.

ಕಾಂಗ್ರೆಸ್‌ ಶಾಸಕರು ಅನುದಾನ ಸಿಗದೆ ಭಾರಿ ತೊಂದರೆಯಲ್ಲಿದ್ದಾರೆ. ಹೀಗಾಗಿ ಹಲವಾರು ಕಡೆಗಳಲ್ಲಿ ಹತಾಶೆಗಳು ವ್ಯಕ್ತವಾಗಿವೆ. ಅದರ ಜತೆಗೆ ನಾಯಕತ್ವ ವಿಚಾರದಲ್ಲೂ ಒಬ್ಬೊಬ್ಬರು ಒಂದೊಂದು ಮಾತನಾಡುತ್ತಿದ್ದಾರೆ. ಪಕ್ಷದ ಹಿರಿಯ ಮುಖಂಡರು ತಮ್ಮ ಅಳಲು ಕೇಳುತ್ತಿಲ್ಲ ಎನ್ನುವ ದೂರುಗಳು ಇವೆ. ಹೀಗಾಗಿಯೇ ಡಿ.ಕೆ. ಶಿವಕುಮಾರ್‌ ಅವರು ಶಾಸಕರ ಭೇಟಿಗೆ ಸಮಯ ಫಿಕ್ಸ್‌ ಮಾಡಿದ್ದಾರೆ ಎಂದು ಹೇಳಲಾಗಿದೆ.

ಕೆಲವೊಂದು ಆಂತರಿಕ ವಿಚಾರಗಳನ್ನು ಮಾತನಾಡಲು ಕೂಡಾ ಈ ಸಮಯ ನಿಗದಿ ಅನುಕೂಲ ಮಾಡಿಕೊಡುತ್ತದೆ ಎನ್ನಲಾಗಿದೆ. ಇದರಿಂದ ಶಾಸಕರು ಹೊರಗೆ ಮಾತನಾಡುವುದು ಕಡಿಮೆಯಾಗುತ್ತದೆ. ಈ ಹಿಂದಿನ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಪತನಗೊಳ್ಳಲು ಶಾಸಕರ ಅಹವಾಲು ಕೇಳದೆ ಇರುವುದೇ ಕಾರಣ ಎಂದು ಹೇಳಲಾಗುತ್ತಿತ್ತು. ಸಿಎಂ ಆಗಿದ್ದ ಎಚ್.ಡಿ. ಕುಮಾರಸ್ವಾಮಿ ಅವರ ಬಳಿ ಕಾಂಗ್ರೆಸ್‌ ಶಾಸಕರು ತಮ್ಮ ಸಂಕಷ್ಟ ಹೇಳಿಕೊಳ್ಳಲು ಅವಕಾಶವಿರಲಿಲ್ಲ. ಸಿದ್ದರಾಮಯ್ಯ ಅವರು ಕೂಡಾ ತಮ್ಮ ಅಸಹಾಯಕತೆಯನ್ನೇ ಪ್ರದರ್ಶಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಬಂಡಾಯ ಸೃಷ್ಟಿಯಾಗಿತ್ತು.

ಈ ಬಾರಿ ರಾಜ್ಯದಲ್ಲಿ ಅನುದಾನದ ಕೊರತೆ ಇರುವ ಹಿನ್ನೆಲೆಯಲ್ಲಿ ಶಾಸಕರು ಬಂಡಾಯವೇಳುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂಬ ದೃಷ್ಟಿಯಿಂದ ಡಿ.ಕೆ. ಶಿವಕುಮಾರ್‌ ಶಾಸಕರ ಭೇಟಿಗೆ ಟೈಮ್‌ ಕೊಟ್ಟಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರಿಂದ ಪ್ರತಿ ಶನಿವಾರ ಭೇಟಿ

ಸಿಎಂ ಸಿದ್ದರಾಮಯ್ಯ ಅವರು ಈ ಮೊದಲೇ ವಾರಕ್ಕೊಮ್ಮೆ ಶಾಸಕರು ಮತ್ತು ಸಂಸದರ ಭೇಟಿಗೆ ಸಮಯ ನಿಗದಿಪಡಿಸಿದ್ದರು. ರಾಜ್ಯದ ಯಾವುದೇ ಸಂಸದರು, ಶಾಸಕರು (Every saturday meet with MLAs and MPs) ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರನ್ನು ಅವರ ಗೃಹ ಕಚೇರಿ ಕೃಷ್ಣಾದಲ್ಲಿ (Home office Krishna) ಭೇಟಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ಶನಿವಾರ ಬೆಳಗ್ಗೆ 11ರಿಂದ ಮಧ್ಯಾಹ್ನ 2 ಗಂಟೆಯ ತನಕ ಸಂಸದರು, ರಾಜ್ಯದ ಎಲ್ಲ ವಿಧಾನಸಭೆ ಸದಸ್ಯರು ಮತ್ತು ವಿಧಾನಪರಿಷತ್‌ ಸದಸ್ಯರ ಭೇಟಿಗೆ ಅವರು ಲಭ್ಯವಿದ್ದಾರೆ. ಆದರೆ, ಮೊದಲೇ ಅಪಾಯಿಂಟ್‌ಮೆಂಟ್‌ ಪಡೆಯಬೇಕಾಗುತ್ತದೆ.

ಡಿ.ಕೆ ಶಿವಕುಮಾರ್‌ ದಿಲ್ಲಿ ಭೇಟಿಯ ವಿಶೇಷತೆ ಏನು?

ದೆಹಲಿ ಭೇಟಿ ವಿಚಾರವಾಗಿ ಕೇಳಿದಾಗ, “ಕಾವೇರಿ ನೀರು ಬಳಕೆ ವಿಚಾರವಾಗಿ ಸುಪ್ರೀಂ ಕೋರ್ಟ 2018ರಲ್ಲಿ ಕೊಟ್ಟ ತೀರ್ಮಾನ ಅನುಸಾರ ಬೆಂಗಳೂರಿಗೆ 24 ಟಿಎಂಸಿ ನೀರು ಬಳಸಿಕೊಳ್ಳಲು ವ್ಯವಸ್ಥೆ ಮಾಡಲು ಆದೇಶ ನೀಡಲಾಗಿದೆʼʼ ಎಂದು ಹೇಳಿದರು.

ಪಕ್ಷದ ಪದಾಧಿಕಾರಿಗಳ ಬದಲಾವಣೆ ಚರ್ಚೆ

ಇನ್ನು ಪಕ್ಷದಲ್ಲಿ ಯಾರೇಲ್ಲಾ 3ಕ್ಕಿಂತ ಹೆಚ್ಚು ವರ್ಷಗಳಿಂದ ಪದಾಧಿಕಾರಿಗಳಾಗಿದ್ದಾರೆ ಅವರ ಸ್ಥಾನಕ್ಕೆ ಬೇರೆಯವರಿಗೆ ಅವಕಾಶ ನೀಡಬೇಕು ಎಂಬ ಚರ್ಚೆ ಆಗಿದೆ. ಇನ್ನು ಲೋಕಸಭೆ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಶೇ.75ರಷ್ಟು ಮಂತ್ರಿಗಳು ತಮ್ಮ ಜಿಲ್ಲೆಗಳಿಗೆ ಹೋಗಿ ಸಭೆ ಮಾಡಿದ್ದಾರೆ, ಉಳಿದವರು ಸಭೆ ಮಾಡಿ ಆದಷ್ಟು ಬೇಗ ತಮ್ಮ ವರದಿ ನೀಡಲಿದ್ದಾರೆ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಇದನ್ನೂ ಓದಿ : BJP Politics : ಸೋಮಶೇಖರ್‌ ಪಕ್ಷ ಬಿಡದಂತೆ ನೋಡ್ಕೊಳ್ತೀನಿ ಎಂದ ಬಿಎಸ್ ಯಡಿಯೂರಪ್ಪ

ಬಿಎಸ್‌ವೈ ರಾಜರಾಜೇಶ್ವರಿ ನಗರ ಕ್ಷೇತ್ರ ಭೇಟಿಗೆ ಡಿ.ಕೆ ಶಿ ಹೇಳಿದ್ದೇನು?

ಇನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಸ್ಥಗಿತಗೊಂಡಿರುವ ಕಾಮಗಾರಿಗಳ ಪರಿಶೀಲನೆ ಬಗ್ಗೆ ಕೇಳಿದಾಗ, “ಬಹಳ ಸಂತೋಷ. ಅವರು ಅಲ್ಲಿಗೆ ಹೋಗಲಿ. ಅವರಿಗೆ ಬೇಕಾದರೆ ಬಸವರಾಜ ಬೊಮ್ಮಾಯಿ ಹಾಗೂ ಲೋಕಾಯುಕ್ತ ವರದಿಗಳನ್ನು ಕಳುಹಿಸಿಕೊಡುತ್ತೇನೆ” ಎಂದು ತಿಳಿಸಿದರು.

Exit mobile version