ಬೆಂಗಳೂರು: ಪಿಎಸ್‌ಐ ಆಯ್ಕೆ ಪರೀಕ್ಷೆ ಹಗರಣದ ಕುರಿತು ಸತ್ಯಾಂಶಗಳು ಹೊರಬರಲಿದ್ದು, ಭ್ರಷ್ಟಾಚಾರ, ಕೆಮ್ಮು, ಇನ್ನೂ ಕೆಲವು ಸಂಗತಿಗಳನ್ನು ಮುಚ್ಚಿಡಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಹಗರಣದಲ್ಲಿ ಮಂಡ್ಯದ ಒಂದೇ ತಾಲೂಕಿನ ಮೂವರು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇವರಿಗೆ ಮಂತ್ರಿಯೊಬ್ಬರ ಸಂಬಂಧಿಕನ ಸಹಾಯವಿದೆ ಎಂಬ ಸುದ್ದಿಗಳ ಕುರಿತು ಐಟಿಬಿಟಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಬಗ್ಗೆ ಡಿಕೆಶಿ ಮಾತನಾಡಿದರು.
ನಮ್ಮ ಜಿಲ್ಲಾ ಸಚಿವರು, ನೀವ್ಯಾರೂ ಗಂಡಸರಿರಲಿಲ್ಲವೇ ಎನ್ನುತ್ತಿದ್ದರು. ಅವರೊಬ್ಬರೇ ಗಂಡಸರು, ನಾವ್ಯಾರೂ ಗಂಡಸರಲ್ಲ. ಮಂತ್ರಿಗಳ ಸಂಬಂಧಿಕರು ಒಬ್ಬರು ಆರೋಪಿಗಳ ಬೆಂಬಲಕ್ಕಿದ್ದಾರೆ ಎಂದು ನನಗೆ ಮಾಹಿತಿ ಲಭಿಸಿದೆ. ಆದರೆ ಅದು ಸರಿಯೋ ತಪ್ಪೋ ಗೊತ್ತಿಲ್ಲ. ಒಂದೇ ತಾಲೂಕಿನಲ್ಲಿ ಮೂರು ಜನರು ಆಯ್ಕೆ ಆಗಿದ್ದಾರಂತೆ ಆಸ್ತಿ ಮಾರಿಕೊಂಡು ಹಣ ಕೊಟ್ಟಿದ್ದಾರಂತೆ. ಇದು ಎಲ್ಲರಿಗೂ ಗೊತ್ತಾಗಿದೆ. ಇದರಲ್ಲಿ ಹೊಸ ವಿಚಾರ ಏನೂ ಇಲ್ಲ, ನಾನು ನೋಟಿಸ್ ತೆಗೆದುಕೊಂಡು ಉತ್ತರವನ್ನೂ ನೀಡಬೇಕಿಲ್ಲ. ಅನೇಕರು ನನಗೆ ದೂರವಾಣಿ ಕರೆ ಮಾಡಿ, ಅವರು ಇನ್ನೇಣು ಮುಖ್ಯಮಂತ್ರಿ ಆಗುತ್ತಿದ್ದಾರೆ, ನೀವು ಅವರ ಬಗ್ಗೆ ಮಾತಾಡಬೇಡಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಭ್ರಷ್ಟಾಚಾರ, ಕೆಮ್ಮು, ಇನ್ನೂ ಮುಂತಾದ ವಿಷಯಗಳನ್ನು ಮುಚ್ಚಿಡಲು ಆಗುವುದಿಲ್ಲ. ಆದಷ್ಟು ಬೇಗ ಸತ್ಯ ಹೊರಬರಲಿ ಎಂದು ಆಶಿಸುತ್ತೇನೆ ಎಂದರು.
ಈ ಬಗ್ಗೆ ಪೊಲೀಸರು ಎಷ್ಟು ಪ್ರಾಮಾಣಿಕತೆಯಿಂದ ತನಿಖೆ ನಡೆಸುತ್ತಾರೆ ಎನ್ನುವುದು ಮುಖ್ಯ. ತನಿಖೆ ಮುಗಿಸಿ ನಂತರ ಮಾತನಾಡಿ ಎಂದು ಸರ್ಕಾರಕ್ಕೆ ಹೇಳಿದ್ದೆ. ಆದರೆ ತನಿಖೆ ನಡೆಸುವುದಕ್ಕಿಂತಲೂ ಮುಂಚಿತವಾಗಿಯೇ ಪರೀಕ್ಷೆಯನ್ನು ರದ್ದುಪಡಿಸಿದ್ದಾರೆ. ಸರ್ಕಾರ ಈ ಮೂಲಕ ಕಾನೂನು ವ್ಯಾಜ್ಯಕ್ಕೆ ಮುಂದಾಗಿದೆ. ಸಹಜವಾಗಿ ಅಭ್ಯರ್ಥಿಗಳು ನ್ಯಾಯಾಲಯಕ್ಕೆ ಹೋಗುತ್ತಾರೆ. ಇದು ಆಡಳಿತವೇ? ಎಂದು ಶಿವಕುಮಾರ್ ಪ್ರಶ್ನಿಸಿದರು.
ಇದನ್ನೂ ಓದಿ | PSI Scam | ಹೋರಾಟ ಮಾಡೋಣ ಬನ್ನಿ ಎಂದವನೇ A1; ಇಪ್ಪತ್ತೆರಡು ಅಭ್ಯರ್ಥಿಗಳ ವಿರುದ್ಧ FIR