Site icon Vistara News

DK Shivakumar : ಹಿಮಾಚಲ ಕಾಂಗ್ರೆಸ್‌ ಸರ್ಕಾರದ ರಕ್ಷಣೆಗೆ ಟ್ರಬಲ್‌ ಶೂಟರ್‌ ಡಿಕೆಶಿ ಎಂಟ್ರಿ

DK Shivakumar Himachal Pradesh

ಬೆಂಗಳೂರು: ಕಾಂಗ್ರೆಸ್‌ನ ಟ್ರಬಲ್‌ ಶೂಟರ್‌ (Trouble Shooter) ಎಂದೇ ಖ್ಯಾತಿ ಪಡೆದಿರುವ ಮತ್ತು ಈ ಹಿಂದೆ ಹಲವು ಸಂದರ್ಭಗಳಲ್ಲಿ ಸರ್ಕಾರಗಳನ್ನು ಉರುಳಿಸಿದ ಹಿನ್ನೆಲೆ ಹೊಂದಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DK Shivakumar) ಇದೀಗ ಹಿಮಾಚಲ ಪ್ರದೇಶದಲ್ಲಿ (Himachal Pradesh) ಪತನ ಭೀತಿಯಲ್ಲಿರುವ ಕಾಂಗ್ರೆಸ್‌ ಸರ್ಕಾರವನ್ನು (Congress Government) ಉಳಿಸುವ ದೊಡ್ಡ ಟಾಸ್ಕ್‌ನೊಂದಿಗೆ ಅಲ್ಲಿಗೆ ತೆರಳಿದ್ದಾರೆ.

ಸಂಕಷ್ಟ ಕಾಲದಲ್ಲಿ ಯಾವತ್ತೂ‌ ಹೈಕಮಾಂಡ್‌ (Congress High Command) ಬೆನ್ನಿಗೆ ನಿಲ್ಲುವ ಡಿ.ಕೆ. ಶಿವಕುಮಾರ್‌ ಅವರನ್ನು ಈಗ ವರಿಷ್ಠರು ನೆನಪಿಸಿಕೊಂಡಿದ್ದಾರೆ. ಸ್ವತಃ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೇ ಡಿ.ಕೆ. ಶಿವಕುಮಾರ್‌ ಅವರಿಗೆ ಕರೆ ಮಾಡಿ ಹಿಮಾಚಲ ಪ್ರದೇಶದಲ್ಲಿ ರಾಜಕೀಯ ಬಿಕ್ಕಟ್ಟು ಶಮನಕ್ಕೆ ಧಾವಿಸುವಂತೆ ಸೂಚನೆ ನೀಡಿದರು. ಅವರ ಸೂಚನೆಯ ಮೇರೆಗೆ ಬೆಳಗ್ಗೆ ಬೆಂಗಳೂರಿನಿಂದ ಹೊರಟ ಡಿ.ಕೆ. ಶಿವಕುಮಾರ್‌ ಅವರು ಸಂಜೆ ಹೊತ್ತಿಗೆ ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾ ತಲುಪಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಬಹುಮತದೊಂದಿಗೆ ಅಧಿಕಾರದಲ್ಲಿರುವ ಕಾಂಗ್ರೆಸ್‌ ರಾಜ್ಯದಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಸೋಲುಕಂಡಿತ್ತು. ಆರು ಶಾಸಕರು ಅಡ್ಡಮತದಾನ ಮಾಡಿದ್ದರಿಂದ ಬಿಜೆಪಿ ಗೆಲುವು ಸಾಧಿಸಿದೆ. ಇದರಿಂದ ಧೈರ್ಯ ಪಡೆದ ಬಿಜೆಪಿ ಅವಿಶ್ವಾಸ ಗೊತ್ತುವಳಿ ಮಂಡಿಸಿದೆ. ಅದಕ್ಕೆ ತುಪ್ಪ ಹೊಯ್ಯುವಂತೆ ಇನ್ನೂ ಕೆಲವರು ರಾಜೀನಾಮೆ ನೀಡಲಿದ್ದಾರೆ ಎಂಬ ವದಂತಿಗಳು ಹರಡುತ್ತಿವೆ. ಹೀಗಾಗಿ ಸರ್ಕಾರ ಅಪಾಯಕ್ಕೆ ಸಿಲುಕಿದೆ. ಇಂಥ ಬಿಕ್ಕಟ್ಟಿನಿಂದ ಪಾರು ಮಾಡಲು ಡಿ.ಕೆ. ಶಿವಕುಮಾರ್‌ ಅವರನ್ನು ಕರೆಸಿಕೊಳ್ಳಲಾಗಿದೆ.

ಇದನ್ನೂ ಓದಿ : Himachal Politics: ರಾಜ್ಯಸಭೆ ಸೋಲಿನ ಬಳಿಕ ಹಿಮಾಚಲ ಸರ್ಕಾರ ಪತನದತ್ತ; ಅವಿಶ್ವಾಸ ನಿರ್ಣಯಕ್ಕೆ ಮುಂದಾದ ಬಿಜೆಪಿ, ಧಾವಿಸಿದ ಡಿಕೆಶಿ

ಹಾಗಿದ್ದರೆ ಹಿಮಾಚಲದಲ್ಲಿ ಆಗಿದ್ದೇನು? ಈಗ ಪರಿಸ್ಥಿತಿ ಹೇಗಿದೆ?

ಹಿಮಾಚಲ ಪ್ರದೇಶದಲ್ಲಿ ಒಂದು ಕಾಲು ವರ್ಷದ ಹಿಂದೆ ಅಧಿಕಾರಕ್ಕೆ ಬಂದ ಸಿಎಂ ಸುಖ್ವಿಂದರ್ ಸಿಂಗ್ ಸುಖು ಅವರ ಸರ್ಕಾರ ಪತನದ ಭೀತಿ ಎದುರಿಸುತ್ತಿದೆ. ಮಂಗಳವಾರ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಅಭಿಷೇಕ್ ಮನು ಸಿಂಘ್ವಿ ಅವರನ್ನು ಗೆಲ್ಲಿಸಲಾಗದೆ ಮುಖಭಂಗಕ್ಕೆ ಒಳಗಾಗಿರುವ ರಾಜ್ಯ ಸರ್ಕಾರ, ಅಡ್ಡ ಮತದಾನದ ಏಟಿನಿಂದ ಚೇತರಿಸಿಕೊಂಡಿಲ್ಲ. ಅದರ ನಡುವೆ ಮಾಜಿ ಸಿಎಂ ವೀರಭದ್ರ ಸಿಂಗ್ ಅವರ ಮಗ ವಿಕ್ರಮಾದಿತ್ಯ ಸಿಂಗ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇನ್ನಷ್ಟು ಮಂದಿ ಪಕ್ಷ ಬಿಡಬಹುದು ಎಂಬ ಭೀತಿ ಇದೆ. ಇದು ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

68 ಸದಸ್ಯರ ವಿಧಾನಸಭೆಯಲ್ಲಿ 40 ಸ್ಥಾನಗಳೊಂದಿಗೆ ಕಾಂಗ್ರೆಸ್‌ ಬಹುಮತವನ್ನೇ ಹೊಂದಿತ್ತು. ಅದರ ನಡುವೆ ಬಂದ ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದೊಳಗಿನ ಭಿನ್ನಮತವನ್ನು ಬಯಲಿಗೆ ತಂದಿದೆ. ವಿಧಾನಸಭೆ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 40, ಬಿಜೆಪಿ 25 ಹಾಗೂ ಮೂವರು ಪಕ್ಷೇತರ ಶಾಸಕರಿದ್ದಾರೆ. ಕಾಂಗ್ರೆಸ್ ತನ್ನ ಹಿರಿಯ ಅಭ್ಯರ್ಥಿ ಅಭಿಷೇಕ್ ಮನು ಸಿಂಘ್ವಿ ಅವರನ್ನು ರಾಜ್ಯಸಭೆ ಚುನಾವಣೆಯಲ್ಲಿ ಅಖಾಡಕ್ಕೆ ಇಳಿಸಿತ್ತು. ಬಿಜೆಪಿ ಹಿರಿಯ ರಾಜಕಾರಣಿ ಹರ್ಷ ಮಹಾಜನ್ ಅವರನ್ನು ಕಣಕ್ಕಿಳಿಸಿತ್ತು. ಬಿಜೆಪಿ ಬಳಿ ಇದ್ದದ್ದು 25 ಶಾಕರು ಮಾತ್ರ. ಆದರೆ, ಅಂತಿಮವಾಗಿ ಕಾಂಗ್ರೆಸ್‌ನ ಆರು ಶಾಸಕರು ಅಡ್ಡ ಮತದಾನ ಮಾಡಿದ್ದರಿಂದ ಕಾಂಗ್ರೆಸ್‌ ಮತ್ತು ಬಿಜೆಪಿ ತಲಾ 34 ಮತಗಳನ್ನು ಪಡೆಯಿತು. ಬಳಿಕ ನಿಯಮದಂತೆ ಟಾಸ್‌ ಹಾಕಿದರೂ ಅದೃಷ್ಟ ಬಿಜೆಪಿ ಪಾಲಾಯಿತು.

ಈ ವಿದ್ಯಮಾನದಿಂದ ಖುಷಿಯಿಂದ ಕುಣಿದಾಡಿದ ಬಿಜೆಪಿ ಇದೀಗ ಅವಿಶ್ವಾಸಸೂಚಕ ಗೊತ್ತುವಳಿ ಮಂಡನೆಗೆ ಮುಂದಾಗಿದೆ. ಅಡ್ಡ ಮತದಾನ ಮಾಡಿದ ಆರು ಶಾಸಕರು ಅವಿಶ್ವಾಸ ಮಂಡನೆ ವೇಳೆಯೂ ಕೈಕೊಟ್ಟರೆ ಕಾಂಗ್ರೆಸ್‌ ಸರ್ಕಾರ ಪತನ ನಿಶ್ಚಿತ. ಯಾಕೆಂದರೆ ಒಬ್ಬ ಸ್ಪೀಕರನ್ನು ಬಿಟ್ಟರೆ ಕಾಂಗ್ರೆಸ್‌ ಬಲ 33ಕ್ಕೆ ಇಳಿದು ಸೋಲು ಕಾಣುತ್ತದೆ. ಹೀಗಾಗಿ ಸರ್ಕಾರ ಬಿಜೆಪಿ ಜತೆ ಕೈಜೋಡಿಸಿದವರಲ್ಲಿ ಕನಿಷ್ಠ ಒಬ್ಬರನ್ನಾದರೂ ಸೆಳೆದುಕೊಳ್ಳಬೇಕು ಮತ್ತು ಈಗ ಕಾಂಗ್ರೆಸ್‌ನಲ್ಲಿ ಇರುವವರನ್ನು ಉಳಿಸಿಕೊಳ್ಳಬೇಕು.

ಮುಖ್ಯಮಂತ್ರಿ ಸುಖು ಮೇಲೆ ಅಸಮಾಧಾನ, ಪ್ರತಿಭಾ ಸಿಂಗ್‌ಗೆ ಸಿಎಂ ಆಸೆ

ಈ ಎಲ್ಲ ಅಡ್ಡಮತದಾನ, ಬಿಕ್ಕಟ್ಟಿನ ಹಿಂದೆ ಇರುವುದು ವಿಕ್ರಮಾದಿತ್ಯ ಸಿಂಗ್‌. ಅವರು ಹಿಮಾಚಲದ ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್‌ ಅವರ ಪುತ್ರ. ಕಳೆದ ಚುನಾವಣೆಯನ್ನು ವಿರೋಧ ಪಕ್ಷದ ನಾಯಕ ಮುಕೇಶ್ ಅಗ್ನಿಹೋತ್ರಿ, ರಾಜ್ಯ ಕಾಂಗ್ರೆಸ್ ಅಧ್ಯಕ್ಷೆ ಪ್ರತಿಭಾ ಸಿಂಗ್ ಮತ್ತು ಪ್ರಚಾರ ಸಮಿತಿ ಮುಖ್ಯಸ್ಥರಾಗಿದ್ದ ಸುಖ್ವಿಂದರ್ ಸಿಂಗ್ ಸುಖು ಅವರ ಸಾಮೂಹಿಕ ನಾಯಕತ್ವದಲ್ಲಿ ಗೆಲ್ಲಲಾಗಿತ್ತು. ಗೆಲುವಿನ ಬಳಿಕ ವೀರಭದ್ರ ಸಿಂಗ್‌ ಅವರ ಪತ್ನಿ ಪ್ರತಿಭಾ ಸಿಂಗ್‌ ಅವರನ್ನೇ ಸಿಎಂ ಮಾಡಬೇಕು ಎಂಬ ‌ ಒತ್ತಡವಿತ್ತು. ಆದರೆ, ಹೈಕಮಾಂಡ್‌ ಸುಖು ಅವರನ್ನು ನೇಮಕ ಮಾಡಿತ್ತು.

ಅಂದಿನಿಂದಲೇ ಒಳಗೊಳಗೆ ಭಿನ್ನಮತ ಹೊಗೆಯಾಡುತ್ತಿತ್ತು. ಅದು ರಾಜ್ಯಸಭಾ ಚುನಾವಣೆ ವೇಳೆ ಭುಗಿಲೆದ್ದಿದೆ. ಈಗ ಪ್ರತಿಭಾ ಸಿಂಗ್‌ ಅವರ ನೇತೃತ್ವದಲ್ಲಿ ಒಂದು ಗುಂಪು ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಹೋಗಲಿದೆ. ಅಲ್ಲಿ ಅವರಿಗೆ ಸಿಎಂ ಸ್ಥಾನ ಸಿಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಅವರನ್ನು ಮನವೊಲಿಸಿ ತಡೆಯುವುದು, ಅವರಿಗೆ ಸೂಕ್ತ ಸ್ಥಾನಮಾನ ನೀಡುವುದು ದೊಡ್ಡ ಸವಾಲಾಗಲಿದೆ. ಇದನ್ನೆಲ್ಲ ಡಿ.ಕೆ. ಶಿವಕುಮಾರ್‌ ಮತ್ತು ಇನ್ನೊಬ್ಬ ಟ್ರಬಲ್‌ ಶೂಟರ್‌ ಭೂಪಿಂದರ್‌ ಸಿಂಗ್‌ ಹೂಡಾ ಹೇಗೆ ನಿಭಾಯಿಸುತ್ತಾರೆ ಎಂದು ಕಾದು ನೋಡಬೇಕು.

Exit mobile version