ಬೆಂಗಳೂರು: ಚನ್ನಪಟ್ಟಣ ನನಗೆ ರಾಜಕೀಯ ಜನ್ಮ ಕೊಟ್ಟ ಕ್ಷೇತ್ರ. ಇಲ್ಲಿನ ಜನರ ನಾಡಿಮಿಡಿತ ಅರಿತು ಮುಂದಿನ ಹೆಜ್ಜೆ ತೆಗೆದುಕೊಳ್ಳುತ್ತೇನೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಹೇಳಿದ್ದು, ಆ ಮೂಲಕ ಉಪಚುನಾವಣೆಯಲ್ಲಿ (Chnnapatna By Election) ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಎಚ್‌ಡಿ ಕುಮಾರಸ್ವಾಮಿ (HD Kumaraswamy) ಅವರ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ ಉಪಚುನಾವಣೆ ಸದ್ಯದಲ್ಲೇ ನಡೆಯಲಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ವತಃ ಡಿಕೆಶಿ ಕಣಕ್ಕಿಳಿಯಲಿದ್ದಾರೆ ಎಂಬ ಊಹಾಪೋಹಗಳು ದಟ್ಟವಾಗುತ್ತಿರುವಂತೆಯೇ, ಇಂದು ಡಿಕೆಶಿಯವರು ಕ್ಷೇತ್ರದಾದ್ಯಂತ ಟೆಂಪಲ್ ರನ್ ನಡೆಸಿದರು. ಚನ್ನಪಟ್ಟಣದಿಂದ ಸ್ಪರ್ಧಿಸುವ ಒಲವನ್ನೂ ಮಾಧ್ಯಮಗಳ ಮುಂದೆ ವ್ಯಕ್ತಪಡಿಸಿದರು.
“ಚನ್ನಪಟ್ಟಣ ನನಗೆ ರಾಜಕೀಯ ಜನ್ಮ ಕೊಟ್ಟ ಕ್ಷೇತ್ರ. ಇವತ್ತು ಚನ್ನಪಟ್ಟಣದ ದೇವಸ್ಥಾನಗಳಿಗೆ ಭೇಟಿ ಕೊಡ್ತಿದ್ದೇನೆ. ಜನರ ನಾಡಿಮಿಡಿತ ಅರಿಯೋಕೆ ಹೊರಟಿದ್ದೇನೆ. ಜನರು ಏನು ಹೇಳ್ತಾರೆ ಅದರಂತೆ ನಡೆಯುತ್ತೇನೆ. ಪಕ್ಷ ಏನು ಹೇಳುತ್ತದೆ ಅದರಂತೆ ಮಾಡಬೇಕು” ಎಂದು ಡಿಕೆಶಿ ಹೇಳಿದ್ದಾರೆ.
“ಚನ್ನಪಟ್ಟಣ ನನ್ನ ಹೃದಯವಿದ್ದಂತೆ. ನಾನು ಚನ್ನಪಟ್ಟಣವನ್ನು ಪ್ರೀತಿಸ್ತೇನೆ. ಇದು ನನಗೆ ರಾಜಕೀಯ ಜೀವನ ಕೊಟ್ಟ ಕ್ಷೇತ್ರ. ನಾಲ್ಕು ಬಾರಿ ಜನ ನನಗೆ ಆಶೀರ್ವಾದ ಮಾಡಿದ್ದಾರೆ. ಕಷ್ಟಕಾಲದಲ್ಲಿ ಅಲ್ಲಿನ ಜನ ಕೈಹಿಡಿದಿದ್ದಾರೆ. ಕನಕಪುರದಂತೆ ಚೆನ್ನಪಟ್ಟಣವನ್ನೂ ಅಭಿವೃದ್ಧಿ ಮಾಡುತ್ತೇನೆ. ಇಲ್ಲಿ ಮತ್ತಷ್ಟು ಅಭಿವೃದ್ಧಿ ಮಾಡುವ ಆಸೆಯಿದೆ. ಇವತ್ತು ಎಲ್ಲ ದೇವಸ್ಥಾನಗಳಿಗೆ ಭೇಟಿ ಕೊಡ್ತೇನೆ. ಜನರ ಅಭಿಮತ ಹೇಗಿದೆ ನೋಡ್ತೇನೆ. ವಿಧಿಯೇ ಇಲ್ಲ, ಜನ ಏನು ಹೇಳ್ತಾರೆ ಮಾಡ್ತೇನೆ” ಎಂದಿದ್ದಾರೆ ಡಿಕೆಶಿ.
ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಡಿಕೆ ಸುರೇಶ್ (DK Suresh) ಕಣಕ್ಕಿಳಿಯಬಹುದು ಎನ್ನಲಾಗಿತ್ತು. ಆದರೆ ತಾವು ಸ್ಪರ್ಧಿಸುವುದಿಲ್ಲ ಎಂದು ಡಿಕೆ ಸುರೇಶ್ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ ಸೋಲು ಅನುಭವಿಸಿರುವ ಡಿಕೆ ಸುರೇಶ್, ಇನ್ನೊಮ್ಮೆ ಅಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗುತ್ತಿಲ್ಲ. ಆದರೆ ಕನಕಪುರದಲ್ಲಿ ಸಹೋದರರ ಹಿಡಿತ ಗಟ್ಟಿಯಾಗಿದ್ದು, ಇಲ್ಲಿ ಸೋಲುವ ಭಯವಿಲ್ಲ. ಹೀಗಾಗಿ ಕನಕಪುರದ ಮೇಲೆ ತಮ್ಮನಿಗೆ ದೃಷ್ಟಿಯಿದೆ.
ಹೀಗಾಗಿ, ಸಹೋದರನಿಗಾಗಿ ಕ್ಷೇತ್ರ ತ್ಯಾಗ ಮಾಡಲು ಡಿಕೆಶಿ ಸಿದ್ಧವಾಗಿದ್ದಾರೆ ಎಂದು ಊಹಿಸಲಾಗಿದೆ. ಡಿಕೆ ಸುರೇಶ್ ಕಣಕ್ಕಿಳಿಸುವಂತೆ ಚನ್ನಪಟ್ಟಣ ಸ್ಥಳೀಯ ಕಾಂಗ್ರೆಸ್ ಮುಖಂಡರು ಒತ್ತಾಯಿಸಿದ್ದಾರೆ. ಆದರೆ ನನ್ನನ್ನು ಲೋಕಸಭೆಯಲ್ಲಿ ಸೋಲಿಸಿದ್ದಾರೆ, ನಾನು ಅಲ್ಲಿ ಸ್ಪರ್ಧೆ ಮಾಡಲ್ಲ ಎಂದು ಡಿಕೆಶಿ ಮುಂದೆ ಡಿಕೆಸು ಹೇಳಿದ್ದರು. ಹೀಗಾಗಿ ರಿಸ್ಕ್ ತೆಗೆದುಕೊಳ್ಳಲು ಮುಂದಾಗಿರುವ ಡಿಕೆಶಿ, ತಾವೇ ಚನ್ನಪಟ್ಟಣದಿಂದ ಕಣಕ್ಕಿಳಿದು ಕನಕಪುರ ಕ್ಷೇತ್ರವನ್ನು ತಮ್ಮನಿಗೆ ಬಿಟ್ಟುಕೊಡಲು ಚಿಂತನೆ ನಡೆಸಿದ್ದಾರೆ.
ಅದರ ಭಾಗವಾಗಿಯೇ ಇಂದು ಡಿಸಿಎಂ ಡಿಕೆ ಶಿವಕುಮಾರ್ ಚನ್ನಪಟ್ಟಣ ರೌಂಡ್ಸ್ ಹಾಕಿದ್ದಾರೆ. ಚನ್ನಪಟ್ಟಣ ಕ್ಷೇತ್ರ ವ್ಯಾಪ್ತಿಯ 14 ದೇವಸ್ಥಾನಗಳಿಗೆ ಡಿಕೆ ಶಿವಕುಮಾರ್ ಭೇಟಿ ನೀಡುತ್ತಿದ್ದಾರೆ. ಟೆಂಪಲ್ ರನ್ ಮೂಲಕ ಗ್ರೌಂಡ್ ರಿಯಾಲಿಟಿ ತಿಳಿಯಲು, ಜನರನ್ನು ಮಾತನಾಡಿಸಲು ಮುಂದಾಗಿದ್ದಾರೆ. ಬಹುತೇಕ ಇಂದೇ ಉಪ ಚುನಾವಣೆ ಸ್ಪರ್ಧೆ ಬಗ್ಗೆ ಘೋಷಣೆ ಮಾಡಬಹುದು ಎನ್ನಲಾಗಿದೆ. ಇಲ್ಲದಿದ್ದರೆ ಜೂನ್ 21ರಂದು ಮತ್ತೊಮ್ಮೆ ಚನ್ನಪಟ್ಟಣ ಕ್ಷೇತ್ರಕ್ಕೆ ಅವರು ಭೇಟಿ ನೀಡಲಿದ್ದು, ಅಂದು ಕೂಡ ಘೋಷಣೆ ಮಾಡುವ ಸಾಧ್ಯತೆ ಇದೆ.
ಚನ್ನಪಟ್ಟಣದ ಶಾಸಕರಾಗಿದ್ದ ಎಚ್‌ಡಿ ಕುಮಾರಸ್ವಾಮಿ ಅವರು ಮಂಡ್ಯ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ ಗೆದ್ದಿದ್ದು, ಚನ್ನಪಟ್ಟಣದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಇದೀಗ ಚನ್ನಪಟ್ಟಣದಲ್ಲಿ ಉಪಚುನಾವಣೆ ನಡೆಯಬೇಕಿದೆ.
ಇದನ್ನೂ ಓದಿ: HD Kumaraswamy: ಕೊಬ್ಬರಿಗೆ 16-18 ಸಾವಿರ ಬೆಂಬಲ ಬೆಲೆ ಕೊಡಿಸುವೆ: ರೈತರಿಗೆ ಎಚ್‌ಡಿಕೆ ಭರವಸೆ