ಬೆಂಗಳೂರು: ʻʻಕಬ್ಬಿಣದಿಂದ ಸೂಜಿ ಮತ್ತು ಕತ್ತರಿ ತಯಾರಿಸಬಹುದು. ಬಿಜೆಪಿಯವರು ಕತ್ತರಿಯಿಂದ ಕತ್ತರಿಸುವ ಕೆಲಸ ಮಾಡುತ್ತಿದ್ದಾರೆ, ಕಾಂಗ್ರೆಸ್ ಸೂಜಿಯಿಂದ ಹೊಲಿಯುವ ಕೆಲಸ ಮಾಡುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದರು. ಸದಾಶಿವ ನಗರದ ನಿವಾಸದ ಬಳಿ ಶುಕ್ರವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಶಿವಮೊಗ್ಗ ಗಲಭೆಯೂ ಸೇರಿದಂತೆ ಹಲವು ವಿಷಯಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ಶಿವಮೊಗ್ಗದಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿ ಭಯದ ವಾತಾವರಣ ಉಂಟು ಮಾಡಲಾಗಿದೆ ಎನ್ನುವ ಬಿಜೆಪಿ ಆರೋಪಕ್ಕೆ ಉತ್ತರಿಸಿದ ಅವರು ಅವರು ಕತ್ತರಿಸುತ್ತಾರೆ, ನಾವು ಜೋಡಿಸುತ್ತೇವೆ ಎಂದರು.
ಕುವೆಂಪು ಹಾಡೇ ಕಾಂಗ್ರೆಸ್ ಸಂದೇಶ
“ಎಸ್.ಎಂ. ಕೃಷ್ಣ ಅವರ ಕಾಲದಲ್ಲಿ ಕುವೆಂಪು ಅವರ ಜಯ ಭಾರತ ಜನನಿಯ ತನುಜಾತೆ ಹಾಡನ್ನು ನಾಡಗೀತೆಯಾಗಿ ಘೋಷಣೆ ಮಾಡಿದೆವು. ಈ ಹಾಡೇ ಕಾಂಗ್ರೆಸ್ ಪಕ್ಷ ಕರ್ನಾಟಕಕ್ಕೆ ನೀಡಿರುವ ಸಂದೇಶ.” ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
“ಕುವೆಂಪು ಅವರ ಸರ್ವಜನಾಂಗದ ಶಾಂತಿಯ ತೋಟ ನಿರ್ಮಾಣ ಮಾಡುವುದೇ ನಮ್ಮ ಗುರಿ ಹಾಗೂ ಉದ್ದೇಶ. ಬಿಜೆಪಿಯವರು ಸತ್ಯಶೋಧನ ಸಮಿತಿಯ ಮೂಲಕ ಅವರಿಗೆ ಏನು ಬೇಕೋ ಅದನ್ನು ಹೇಳುತ್ತಿದ್ದಾರೆ. ನಾವು ಸಮಾಜ ಜೋಡಿಸುತ್ತಿದ್ದರೆ, ಅವರು ಒಡೆಯುತ್ತಿದ್ದಾರೆ. ಇದೇ ಕಾಂಗ್ರೆಸ್ ಹಾಗೂ ಬಿಜೆಪಿಗೆ ಇರುವ ವ್ಯತ್ಯಾಸʼʼ ಎಂದರು ಡಿ.ಕೆ. ಶಿವಕುಮಾರ್.
ಶಿವಮೊಗ್ಗದಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ
“ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಹಿಂದೂ ಮತ್ತು ಮುಸ್ಲಿಂ ಇಬ್ಬರನ್ನೂ ಭೇಟಿ ಮಾಡಿ ಮಾತನಾಡಿದ್ದಾರೆ. ಅವರ ಸಮಸ್ಯೆ ಆಲಿಸಿದ್ದಾರೆ. ಯಾರೇ ತಪ್ಪು ಕೆಲಸ ಮಾಡಿದ್ದಾರೋ, ಅದನ್ನು ಖಂಡಿಸಿದ್ದಾರೆ, ಇಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಮೇಯ ಬರುವುದೇ ಇಲ್ಲ. ಯಾರು ಕಾನೂನು ಮೀರಿ ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ನೀಡುವ ಕೆಲಸ ಮಾಡುತ್ತೇವೆ. ಆದರೆ ಬಿಜೆಪಿಯವರು ಪಟ್ಟಿ ಇಟ್ಟುಕೊಂಡು ಕೆಲವರ ಮನೆಗೆ ಹೋಗಿದ್ದಾರೆʼʼ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ನಾವೇ ನಿಜವಾದ ಹಿಂದುಗಳು ಎಂದ ಡಿ.ಕೆ. ಶಿವಕುಮಾರ್
ನಾವು ನಿಜವಾದ ಹಿಂದುಗಳು, ಬಿಜೆಪಿಯವರು ನಕಲಿ ಹಿಂದುಗಳು ಎನ್ನುವ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರ ಮಾತಿಗೆ ಇದೇ ವೇಳೆ ಸಹಮತ ವ್ಯಕ್ತಪಡಿಸಿದರು.
ಇದನ್ನೂ ಓದಿ: Cauvery Dispute : ಮೇಕೆದಾಟು ಯೋಜನೆ ಜಾರಿಗೆ ಸರ್ಕಾರ ಸರ್ವ ಸಿದ್ಧತೆ; ಡಿ.ಕೆ. ಶಿವಕುಮಾರ್
2000 ರೂ. ಬಂದಿಲ್ಲ ಎಂದ ಮಹಿಳೆ, ಪಕ್ಕದಲ್ಲಿದ್ದವ ಗರಂ
ಡಿ.ಕೆ. ಶಿವಕುಮಾರ್ ಅವರ ನಿವಾಸದ ಬಳಿ ಬಂದಿದ್ದ ಮಹಿಳೆಯೊಬ್ಬರು ತನಗೆ ಗೃಹಲಕ್ಷ್ಮಿ ಯೋಜನೆಯಡಿ 2000 ರೂ. ಬಂದಿಲ್ಲ ಎಂದು ಆಕ್ಷೇಪದ ಧ್ವನಿಯಲ್ಲಿ ಹೇಳಿದರು. ಆಕೆ ಬಿಬಿಎಂಪಿ ಮಹಿಳಾ ಕಾರ್ಮಿಕರು. ಅವರು ಹೀಗೆ ಪ್ರಶ್ನೆ ಕೇಳುತ್ತಿದ್ದಂತೆಯೇ ಆಕೆಯ ಜತೆಗೆ ಇದ್ದ ಇನ್ನೊಬ್ಬ ವ್ಯಕ್ತಿ ಆಕೆಯನ್ನು ತಡೆದು ಹಾಗೆಲ್ಲ ಪ್ರಶ್ನೆ ಕೇಳಬಾರದು ಎಂದು ಎಚ್ಚರಿಸಿದ್ದು ಕಂಡುಬಂತು. ರಾಜ್ಯದಲ್ಲಿ ಸುಮಾರು 8 ಲಕ್ಷ ಮಹಿಳೆಯರಿಗೆ ಇನ್ನೂ ಗೃಹ ಲಕ್ಷ್ಮಿ ಹಣ ಬಂದಿಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದೆ.