ನವದೆಹಲಿ: ಯಾರ‍್ಯಾರೋ ಏನೇನೋ ಆಸೆಪಡ್ತಾರೆ, ಡಾ. ಎಚ್.ಸಿ. ಮಹದೇವಪ್ಪ (Dr HC Mahadevappa) ಅವರು ಮುಖ್ಯಮಂತ್ರಿ ಆಗಬೇಕು (Demand for CM Post) ಎಂದು ಆಸೆಪಟ್ಟರೆ ತಪ್ಪೇನಿಲ್ಲ ಎಂದು ಹೇಳಿದ್ದಾರೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar). ರಾಜ್ಯದಲ್ಲಿ ದಲಿತ ಸಿಎಂ (Dalit CM) ಚರ್ಚೆಯನ್ನು ಮರಳಿ ಪ್ರಸ್ತಾಪ ಮಾಡುವ ಮೂಲಕ ಎಚ್.ಸಿ. ಮಹದೇವಪ್ಪ ಮತ್ತು ತಂಡ ಡಿ.ಕೆ. ಶಿವಕುಮಾರ್ ಅವರ ಸಿಎಂ ಹುದ್ದೆ ಆಸೆಗೆ ಕಲ್ಲು ಹಾಕಲು ಯತ್ನಿಸುತ್ತಿದೆ ಎಂಬ ವಿಶ್ಲೇಷಣೆಗಳ ನಡುವೆಯೇ ಡಿ.ಕೆ. ಶಿವಕುಮಾರ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದಿಲ್ಲಿಯಲ್ಲಿ ಮಾಧ್ಯಮಗಳ ಜತೆ ಮಾತನಾಡುತ್ತಾ ಪ್ರಶ್ನೆಗಳಿಗೆ ಉತ್ತರ ನೀಡಿದ ಅವರು, “ಒಳ್ಳೆಯದಾಗಲಿ, ಆಸೆ ಪಡುವುದರಲ್ಲಿ ತಪ್ಪಿಲ್ಲ. ಯಾರ್ಯಾರೋ ಏನೇನೋ ಆಸೆ ಪಡುತ್ತಾರೆ. ಮಹದೇವಪ್ಪ ಅವರು ಆಸೆಪಡುವುದರಲ್ಲಿ ತಪ್ಪಿಲ್ಲ” ಎಂದರು.
ಮಹದೇವಪ್ಪ ಅವರು ಬೆಂಗಳೂರಿನಲ್ಲಿ ನಡೆದ ಎಸ್‌ಸಿ, ಎಸ್‌ಟಿ ಸಮಾವೇಶದಲ್ಲಿ ಮಾತನಾಡುತ್ತಾ, ದಲಿತರು ಕೇವಲ ಮತ ಹಾಕುವುದಕ್ಕೇ ಸೀಮಿತವಾಗಿದ್ದಾರೆ. ಅವರು ಮತ ಹಾಕುತ್ತಾರೆ, ಬೇರೆಯವರು ನಾಯಕರಾಗುತ್ತಾರೆ ಎಂದು ಹೇಳಿದ್ದರು. ಈಗ ಮುಂಚೂಣಿಯಲ್ಲಿರುವ ಯಾವ ದಲಿತ ನಾಯಕರಿಗೂ ನೀತಿ ನಿರೂಪಣೆಯ ಅಧಿಕಾರವಿಲ್ಲ. ದಲಿತರು ಆ ಹಂತಕ್ಕೆ ಏರಬೇಕು ಎಂದು ಮಹದೇವಪ್ಪ ಹೇಳಿದ್ದರು. ಇದನ್ನು ಸಚಿವರಾದ ಕೆ.ಎನ್. ರಾಜಣ್ಣ, ಸತೀಶ್ ಜಾರಕಿಹೊಳಿ ಸಮರ್ಥಿಸಿದ್ದರು.
ಶೀಘ್ರವೇ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
“ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಹೈಕಮಾಂಡ್ ನಾಯಕರು ಶೀಘ್ರವೇ ಬಿಡುಗಡೆ ಮಾಡಲಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. “ಲೋಕಸಭೆ ಚುನಾವಣೆ ಸಂಬಂಧ ನಿನ್ನೆ ನಮ್ಮ ಪಕ್ಷದ ಅಧ್ಯಕ್ಷರು ಹಾಗೂ ಇತರ ನಾಯಕರ ಸಮ್ಮುಖದಲ್ಲಿ ಚರ್ಚೆ ನಡೆಸಲಾಗಿದೆ. ಎಷ್ಟು ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿದೆ, ಯಾರ ಹೆಸರು ಅಂತಿಮವಾಗಿದೆ ಎಂದು ನಾನು ಬಹಿರಂಗಪಡಿಸಲು ತಯಾರಿಲ್ಲ. ಎಐಸಿಸಿ ನಾಯಕರು ಮೊದಲ ಪಟ್ಟಿ ಅಂತಿಮಗೊಳಿಸಿ ಶೀಘ್ರವೇ ಬಿಡುಗಡೆ ಮಾಡುತ್ತಾರೆ. ನಾವು ಸಭೆಯಲ್ಲಿ ಶೇ.50ರಷ್ಟು ಕ್ಷೇತ್ರಗಳ ಬಗ್ಗೆ ಮಾತ್ರ ಚರ್ಚೆ ಮಾಡಿದ್ದೇವೆ” ಎಂದು ತಿಳಿಸಿದರು.
ರಾಜ್ಯದ ಸಚಿವರನ್ನು ಲೋಕಸಭಾ ಚುನಾವಣೆ ಕಣಕ್ಕೆ ಇಳಿಸುವ ಬಗ್ಗೆ ಚರ್ಚೆ ಆಗಿದೆಯೇ, ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಮೈಸೂರು ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗಳಿಗೆ ಅವರು, ಈ ಬಗ್ಗೆ ಚರ್ಚೆ ಆಗಿಲ್ಲ ಎಂದರು.
ಇದನ್ನೂ ಓದಿ : Dalit CM : ದಲಿತ ಸಿಎಂ ಕೂಗಿಗೆ ಸಿದ್ದರಾಮಯ್ಯ ನಿಷ್ಠ ಸಚಿವರ ಬೆಂಬಲ, ಪ್ಲ್ಯಾನ್ ಸ್ಪಷ್ಟ?
ಖರ್ಗೆ ಸ್ಪರ್ಧೆಗೆ ಬೇಡಿಕೆ ಇದೆ, ಆದರೆ, ಅವರಿಗೆ ಜವಾಬ್ದಾರಿಯೂ ಇದೆ
ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಬಗ್ಗೆ ಕೇಳಿದಾಗ, ಅವರು ನಮ್ಮ AICC ಅಧ್ಯಕ್ಷರು, ತುಂಬಾ ಜನ ಅವರ ಹೆಸರು ಹೇಳಿದ್ದಾರೆ. ಅವರು ಸ್ಪರ್ಧೆ ಮಾಡಬೇಕು ಎಂಬ ಬೇಡಿಕೆ ದೊಡ್ಡದಾಗಿಯೇ ಇದೆ. ಕಲಬುರಗಿ ಕ್ಷೇತ್ರದಿಂದ ಅವರ ಹೆಸರು ಒಂದೇ ಬಂದಿರುವುದು, ಹಾಗಾಗಿ ತೀರ್ಮಾನ ಅವರಿಗೆ ಬಿಟ್ಟಿದ್ದು ಎಂದರು. ಅವರು ಇಡೀ ದೇಶದೆಲ್ಲೆಡೆ ಓಡಾಡಬೇಕಾಗುತ್ತದೆ. ಅವರಿಗೆ ಜವಾಬ್ದಾರಿ ಜಾಸ್ತಿ ಇದೆ. ಹೀಗಾಗಿ ಸ್ಪರ್ಧೆಯ ತೀರ್ಮಾನನ್ನು ಅವರೇ ಮಾಡುತ್ತಾರೆ ಎಂದರು ಹೇಳಿದರು.
ಶಿವರಾತ್ರಿ ಹಬ್ಬದ ಶುಭಾಶಯ ಹೇಳಿದ ಡಿ.ಕೆ ಶಿವಕುಮಾರ್
ರಾಜ್ಯದ ಜನತೆಗೆ ಶಿವರಾತ್ರಿ ಹಬ್ಬದ ಶುಭಾಶಯಗಳು. ಶಿವನ ಆಶೀರ್ವಾದದಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗಲಿ. ಬರಗಾಲದಿಂದ ರಾಜ್ಯ ಮುಕ್ತವಾಗಲಿ ಎಂದು ರಾಜ್ಯದ ಜನರ ಪರವಾಗಿ ಶಿವನಲ್ಲಿ ಪ್ರಾರ್ಥಿಸುತ್ತೇನೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.