Site icon Vistara News

DK Shivakumar : ಗೌಡ್ರ ಅಳಿಯ ಬಿಜೆಪಿಯಿಂದ ಸ್ಪರ್ಧಿಸಿದ್ದು ಜೆಡಿಎಸ್‌ನ ಮೊದಲ ಆತ್ಮಹತ್ಯೆ ಯತ್ನ: ಡಿಕೆಶಿ

DK Shivakumar CN Manujanth Kumaraswamy

ಬೆಂಗಳೂರು: “ದೇವೇಗೌಡರ ಅಳಿಯ ಡಾ. ಸಿ.ಎನ್‌. ಮಂಜುನಾಥ್‌ (Dr CN Manjunath) ಅವರನ್ನು ಜೆಡಿಎಸ್‌ ಬಿಟ್ಟು ಬಿಜೆಪಿ ಚಿಹ್ನೆಯಿಂದ ಸ್ಪರ್ಧೆ ಮಾಡಲು (Contesting from BJP Symbol) ಅವಕಾಶ ನೀಡಿದ್ದು ಜೆಡಿಎಸ್‌ನ ಮೊದಲ ಆತ್ಮಹತ್ಯೆ ಪ್ರಯತ್ನ (JDS Suicidal Attempt)” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಬಣ್ಣಿಸಿದ್ದಾರೆ. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯಿಸಿದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಡಾ. ಸಿ.ಎನ್‌. ಮಂಜುನಾಥ್‌ ಅವರು ದೇವೇಗೌಡರ ಅಳಿಯ. ಅವರೇ ಜೆಡಿಎಸ್‌ನಿಂದ ಸ್ಪರ್ಧೆ ಮಾಡದೆ ಬಿಜೆಪಿ ಚಿಹ್ನೆಯಡಿ ಸ್ಪರ್ಧಿಸುತ್ತಾರೆ ಎಂದರೆ ಪರಿಸ್ಥಿತಿಯನ್ನು ಯಾರು ಬೇಕಾದರೂ ಊಹಿಸಬಹುದು ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ಎರಡು ಲೋಕಸಭಾ ಸ್ಥಾನಕ್ಕಾಗಿ ಮೈತ್ರಿ ಮಾಡಿಕೊಳ್ಳಬೇಕಿತ್ತೇ ಎಂಬ ಎಚ್‌.ಡಿ ಕುಮಾರಸ್ವಾಮಿ ಮತ್ತು ಜೆಡಿಎಸ್‌ನ ಕೋರ್‌ ಕಮಿಟಿ ಪದಾಧಿಕಾರಿಗಳ ಹೇಳಿಕೆಗೆ ಅವರು, “ಇದನ್ನು ನಾನು ನಿರೀಕ್ಷೆ ಮಾಡಿದ್ದೆ. ಬಿಜೆಪಿ ಮೈತ್ರಿಯಿಂದ ಜೆಡಿಎಸ್ ಪಕ್ಷಕ್ಕೆ ಬಹಳ ಮುಜುಗರವಾಗಿದೆ. ಅವರ ಆಂತರಿಕ ವಿಚಾರವಾಗಿ ನಾನು ಮಾತನಾಡುವುದಿಲ್ಲ. ಜೆಡಿಎಸ್ ಗೆ ಕೆಲವು ಕ್ಷೇತ್ರಗಳಲ್ಲಿ ಸ್ವಂತ ಶಾಸಕರು, ಸಂಸದರು ಇದ್ದಾರೆ. ಅವರ ಶಕ್ತಿ ಪಕ್ಷಕ್ಕೆ ಬೇಕಾಗಿದೆ. ಆದರೆ ಕರ್ನಾಟಕ ಮಾತ್ರವಲ್ಲ ಬೇರೆ ರಾಜ್ಯಗಳಲ್ಲೂ ಬಿಜೆಪಿ ಇದೇ ರೀತಿ ಮಾಡಿಕೊಂಡು ಬಂದಿದೆ. ಇದು ಅವರ ಪಕ್ಷಗಳ ಆಂತರಿಕ ವಿಚಾರ. ಆ ಬಗ್ಗೆ ಅವರೇ ತೀರ್ಮಾನ ಮಾಡಿಕೊಳ್ಳಲಿ. ನನಗೂ ಅದಕ್ಕೂ ಸಂಬಂಧವಿಲ್ಲ” ಎಂದು ಹೇಳಿದರು.

ಟಿಕೆಟ್‌ ಸಿಗದವರು ಬೇರೆ ಪಕ್ಷದಿಂದ ಸ್ಪರ್ಧಿಸುವುದು ಹೊಸತೇನಲ್ಲ

ಸದಾನಂದ ಗೌಡರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲು ಆಪರೇಶನ್ ಮಾಡಲಾಗುತ್ತಿದೆ ಎಂಬ ಚರ್ಚೆ ಬಗ್ಗೆ ಕೇಳಿದಾಗ, “ಒಂದು ಪಕ್ಷದಲ್ಲಿ ಟಿಕೆಟ್ ವಂಚಿತರಾದವರು ಬೇರೆ ಪಕ್ಷಗಳಿಂದ ಸ್ಪರ್ಧೆ ಮಾಡುವುದು ರಾಜಕೀಯದಲ್ಲಿ ಸಹಜ. ಆಯನೂರು ಮಂಜುನಾಥ್ ಅವರಿಗೆ ಬಿಜೆಪಿ ಟಿಕೆಟ್ ಸಿಗದಿದ್ದಾಗ ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದರು. ಮೂಡಿಗೆರೆಯಲ್ಲಿ ಎಂಪಿ ಕುಮಾರಸ್ವಾಮಿಗೆ ಟಿಕೆಟ್ ಸಿಗದಿದ್ದಾಗ ಜೆಡಿಎಸ್ ನಿಂದ ಸ್ಪರ್ಧೆ ಮಾಡಿದ್ದರು. ನಮ್ಮಲ್ಲಿ ಅಖಂಡ ಶ್ರೀನಿವಾಸ ಮೂರ್ತಿ ಅವರಿಗೆ ಟಿಕೆಟ್ ನೀಡದಿದ್ದಾಗ ಜೆಡಿಎಸ್ ನಿಂದ ಸ್ಪರ್ಧೆ ಮಾಡಿದ್ದರು. ಶೆಟ್ಟರ್, ಸವದಿಗೆ ಬಿಜೆಪಿಯಲ್ಲಿ ಅವಕಾಶ ಸಿಗದಿದ್ದಾಗ ನಮ್ಮ ಪಕ್ಷದಿಂದ ಸ್ಪರ್ಧೆ ಮಾಡಿಸಿದ್ದೇವೆ. ಯಾವುದೇ ಪಕ್ಷ ಇದಕ್ಕೆ ಹೊರತಾಗಿಲ್ಲ. ನಮ್ಮ ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಬರುವವರನ್ನು ನಾವು ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ” ಎಂದು ತಿಳಿಸಿದರು.

ಸದಾನಂದ ಗೌಡರ ಸೇರ್ಪಡೆಗೆ ಅವಕಾಶ ಇದೆಯೇ ಎಂದು ಕೇಳಿದಾಗ, “ನಮ್ಮ ತಂತ್ರಗಾರಿಕೆಯನ್ನು ನಾವು ಬಿಟ್ಟು ಕೊಡುವುದಿಲ್ಲ” ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಡಿ.ಕೆ.ಶಿವಕುಮಾರ್‌ ಮತ್ತು ಸಿಎಂ ಸಿದ್ದರಾಮಯ್ಯ ಅವರು ಕೇಂದ್ರೀಯ ಚುನಾವಣಾ ಸಮಿತಿ ಸಭೆಯಲ್ಲಿ ಭಾಗವಹಿಸುವುದಕ್ಕಾಗಿ ದಿಲ್ಲಿಗೆ ತೆರಳಿದ್ದಾರೆ.

ಇದನ್ನೂ ಓದಿ: HD Kumaraswamy : ಮಿಸ್ಟರ್‌ ಶಿವಕುಮಾರ್‌ ಆಸ್ಪತ್ರೆಗೆ ಹೋಗಿ ಬರ್ತೀನಿ, ಆಮೇಲೆ ನೋಡ್ಕೊತೀನಿ!

Exit mobile version