Site icon Vistara News

DK Shivakumar : ನಮ್ಮದು ಆಪರೇಷನ್‌ ಅಲ್ಲ, ಕೋ-ಆಪರೇಷನ್‌; ಬೇರೆ ಪಕ್ಷದವರನ್ನು ಸೆಳೆಯೋ ತಂತ್ರಕ್ಕೆ ಡಿಕೆಶಿ ಹೊಸ ಹೆಸರು!

DK Shivakumar with Sukumar Shetty

ಬೆಂಗಳೂರು: “ನಾನು ಆಪರೇಷನ್ ಹಸ್ತ (Operation Hasta), ಆಪರೇಷನ್ ಕಮಲ (Operation Kamala) ಎರಡರದ್ದೂ ವಿರೋಧಿ. ಯಾವುದೇ ಕಾರಣಕ್ಕೂ ಈ ಕೆಲಸಕ್ಕೆ ಮುಂದಾಗುವುದಿಲ್ಲ‌. ನಮ್ಮದೇನಿದ್ದರು ಕೋ-ಆಪರೇಷನ್ (Co-operation)” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದ್ದಾರೆ. ಬೈಂದೂರಿನ ಮಾಜಿ ಬಿಜೆಪಿ ಶಾಸಕ ಸುಕುಮಾರ್‌ ಶೆಟ್ಟಿ ಅವರು ತಾನು ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರುತ್ತಿರುವುದಾಗಿ ಪ್ರಕಟಿಸಿದ ಬೆನ್ನಿಗೇ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಡಿ.ಕೆ. ಶಿವಕುಮಾರ್‌ ಹೊಸ ವ್ಯಾಖ್ಯಾನ ನೀಡಿದರು.

ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, “ನಾವು ಸ್ನೇಹದ ಹಸ್ತ ಚಾಚುತ್ತೇವೆ. ನಮ್ಮ ಪಕ್ಷದ ತತ್ವ ಸಿದ್ದಾಂತ, ಭಾರತ್ ಜೋಡೊ ಬಗ್ಗೆ ಯಾರಿಗೆ ಒಲವಿದೆ ಅವರನ್ನು ತಬ್ಬಿಕೊಳ್ಳುತ್ತೇವೆ. ಅವರ ಹೆಗಲ ಮೇಲೆ ಕೈಹಾಕಿಕೊಂಡು ಹೆಜ್ಜೆ ಹಾಕುತ್ತೇವೆ” ಎಂದರು.

ಹಾಲಿ- ಮಾಜಿಗಳನ್ನು ಯಾವಾಗ ತಬ್ಬಿಕೊಳ್ಳುವಿರಿ ಎಂಬ ಮರುಪ್ರಶ್ನೆಗೆ ಉತ್ತರಿಸಿದ ಅವರು, “ಎಷ್ಟು ಜನ ಸೇರಲಿದ್ದಾರೆ ಎನ್ನುವ ಪಟ್ಟಿ ಹೇಳಲು ಆಗಲ್ಲ. ಅವರವರೇ ಹೇಳಿರುವಂತೆ ಒಳ್ಳೆ ಮುಹೂರ್ತ, ಲಗ್ನ ಕೂಡಿಬಂದಾಗ ನಡೆಯಲಿದೆ” ಎಂದು ತಿಳಿಸಿದರು.

ರಾಜಕೀಯ ಎನ್ನುವುದು ಸಾಧ್ಯತೆಗಳ ಕಲೆ!

“ರಾಜಕೀಯದಲ್ಲಿ ಯಾರೂ ಮಿತ್ರರಲ್ಲ, ಶತ್ರುಗಳಲ್ಲ. ರಾಜಕೀಯ ಎನ್ನುವುದು ಸಾಧ್ಯತೆಗಳ ಕಲೆ. ನಾವು ಯಾರನ್ನು ಕರೆಯುವುದಿಲ್ಲ. ರಾಜಕೀಯದಲ್ಲಿ ಯಾರೂ ದಡ್ಡರಲ್ಲ. ಎಲ್ಲರೂ ಅವರವರ ಭವಿಷ್ಯ ನೋಡಿಕೊಳ್ಳಬೇಕು. ಮಹಾರಾಷ್ಟ್ರದಲ್ಲಿ ಎಲ್ಲಾ ವಾಷಿಂಗ್ ಮೆಷಿನ್ ಸೇರಿಕೊಂಡು ಬಿಡಲಿಲ್ಲವೇ” ಎಂದು ತಿಳಿಸಿದರು.

ಕಾವೇರಿಯಿಂದ ಮೊದಲಿನಷ್ಟು ನೀರು ಬಿಡುತ್ತಿಲ್ಲ ಎಂದ ಡಿಸಿಎಂ

ಕಾವೇರಿ ನೀರನ್ನು ನಿಲ್ಲಿಸಲಾಗಿದೆಯೇ ಎನ್ನುವ ಪ್ರಶ್ನೆಗೆ, “ನಮಗೆ ಸಾಕಷ್ಟು ಒಳಹರಿವು ಬರುತ್ತಿಲ್ಲ. ಸುಪ್ರೀಂ ಕೋರ್ಟ್ ಹೇಳಿದ ಪ್ರಮಾಣದಷ್ಟು ನೀರನ್ನು ಬಿಡಲು ಆಗುತ್ತಿಲ್ಲ. ಮಳೆಯ ನಿರೀಕ್ಷೆಯಲ್ಲಿದ್ದೇವೆ. ಜೊತೆಗೆ ನಮ್ಮ ರೈತರ ಹಿತ ಕಾಯುವುದು ಮುಖ್ಯ, ಅದಕ್ಕೆ ನಾವು ಬದ್ಧ. ನೀರು ಬಿಡುಗಡೆ ಮಾಡಬಾರದು ಎಂದು ಪ್ರತಿಭಟನೆಗಳು ನಡೆಯುತ್ತಿವೆ, ಬೆಂಗಳೂರು, ರಾಮನಗರ ಭಾಗಗಳಲ್ಲಿ ಮಳೆ ಬೀಳುತ್ತಿರುವ ಕಾರಣ ಸ್ವಲ್ಪ ಮಟ್ಟಿಗೆ ಪರಿಸ್ಥಿತಿ ನಿಭಾಯಿಸಲಾಗುತ್ತಿದೆ. ರೈತರ ಬೆಳೆ ಹಾಗೂ ಕುಡಿಯುವ ನೀರು ನಮ್ಮ ಆದ್ಯತೆ” ಎಂದು ಹೇಳಿದರು ಡಿ.ಕೆ ಶಿವಕುಮಾರ್‌.

ನಿಗದಿ ಮಾಡಿದಷ್ಟು ನೀರು ಬಿಡುಗಡೆ ಮಾಡಲಾಗಿದೆಯೇ ಎನ್ನುವ ಪ್ರಶ್ನೆಗೆ “ಬಿಡುಗಡೆ ಮಾಡಲು ನೀರೇ ಇಲ್ಲ” ಎಂದು ಪ್ರತಿಕ್ರಿಯೆ ನೀಡಿದರು.

ಮೇಕೆದಾಟು ಮತ್ತು ಮಹದಾಯಿಗೆ ಒಪ್ಪಿಗೆ ಕೊಡಿಸಲಿ

ಯಡಿಯೂರಪ್ಪ ಅವರ ನೇತೃತ್ವದಲ್ಲಿ ಜನವಿರೋಧಿ ಸರ್ಕಾರ ಎಂದು ಪ್ರತಿಭಟನೆ ಮಾಡಲಾಗುತ್ತಿದೆ ಎನ್ನುವ ಪ್ರಶ್ನೆಗೆ “ಮೊದಲು ಮೇಕೆದಾಟು ಮತ್ತು ಮಹದಾಯಿಗೆ ಬಿಜೆಪಿಯವರು ಕೇಂದ್ರದಿಂದ ಒಪ್ಪಿಗೆ ಕೊಡಿಸಲಿ” ಎಂದು ಸವಾಲು ಹಾಕಿದರು.

“ಜನವಿರೋಧಿ ಎಂದರೆ ಏನು? ಜನ ಬಿಜೆಪಿಯವರನ್ನು ವಿರೋಧಿಸಿಯೇ ಮನೆಯಲ್ಲಿ ಕೂರಿಸಿದ್ದಾರೆ. ನಂತರ ಅವರಿಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳುವಷ್ಟು ಅರ್ಹತೆ ಇಲ್ಲ. ಹೆಣ್ಣು ಮಕ್ಕಳು ಉಚಿತವಾಗಿ ಬಸ್ ಅಲ್ಲಿ ಓಡಾಡುತ್ತಿರುವುದು, 2 ಸಾವಿರ ಖಾತೆಗೆ ಬರುತ್ತಿರುವುದು ನೋಡಿ ಅವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಗ್ಯಾರಂಟಿ ಯೋಜನೆಗಳು ಅವರ ಹೊಟ್ಟೆಯನ್ನು ಉರಿಸುತ್ತಿದೆ.

ರಾಜಕೀಯ ಉಳಿವಿಗಾಗಿ ಯಡಿಯೂರಪ್ಪ ಹೋರಾಟ

ʻʻಯಡಿಯೂರಪ್ಪ ಅವರು ತಮ್ಮ ರಾಜಕೀಯ ಉಳಿವಿಗಾಗಿ ಮಾಡುತ್ತಿದ್ದಾರೆ ಮಾಡಲಿ. ಪ್ರತಿಭಟನೆಗಳು ಇರಬೇಕು ಆಗ ನಾವು ನಮ್ಮ ಶಾಸಕರು ಎಚ್ಚರಿಕೆಯಿಂದ ಕೆಲಸ ಮಾಡುತ್ತೇವೆ. ನಮಗೂ ಹುಮ್ಮಸ್ಸು ಬರುತ್ತದೆ. 100 ದಿನಗಳಲ್ಲಿ ಇಷ್ಟೊಂದು ಸಾಧನೆ ಮಾಡಿದ ಸರ್ಕಾರ ಭಾರತದಲ್ಲೇ ಇಲ್ಲ. ಯಾರೋ 100 ದಿನಗಳಲ್ಲಿ 15 ಲಕ್ಷ ಹಣ ಕೊಡುತ್ತೇನೆ ಎಂದಿದ್ದರು? ಅವರ ಪ್ರಣಾಳಿಕೆಯ ಬಗ್ಗೆ ಮೊದಲು ಯೋಚಿಸಲಿ” ತಿರುಗೇಟು ನೀಡಿದರು.

ಇದನ್ನೂ ಓದಿ: BJP-JDS Coalition : BJP-JDS ಮೈತ್ರಿ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ ಎಂದ ಸಿದ್ದರಾಮಯ್ಯ; ಜೆಡಿಎಸ್‌ ಶಾಸಕರ ಕಥೆ ಏನೆಂದು ಕೇಳಿದ ಡಿಕೆಶಿ!

ರಾಮನಗರ ಬಂದ್ ರಾಜಕೀಯ ಪ್ರೇರಿತ

“ಮೆಡಿಕಲ್ ಕಾಲೇಜು ವಿಚಾರವಾಗಿ ನಡೆದ ಬಂದ್ ಮತ್ತು ಪ್ರತಿಭಟನೆ ರಾಜಕೀಯ ಪ್ರೇರಿತ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಮೆಡಿಕಲ್ ಕಾಲೇಜು ನೀಡಿದ್ದರು. ಅದರ ಟೆಂಡರ್ ಕೂಡ ರದ್ದಾಗಿಲ್ಲ. ಅಷ್ಟರಲ್ಲಿ ಚಿಕ್ಕಬಳ್ಳಾಪುರಕ್ಕೆ ಬಿಜೆಪಿ ಸರ್ಕಾರ ಮತ್ತೊಂದು ಮೆಡಿಕಲ್ ಕಾಲೇಜು ನೀಡಿತು” ಎಂದರು. “ಈಗ ರಾಮನಗರದಲ್ಲಿ ರಾಜೀವ್ ಗಾಂಧಿ ವಿಶ್ವವಿದ್ಯಾಲಯ, ಹಾಗೂ ಮೆಡಿಕಲ್ ಕಾಲೇಜು ಎರಡೂ ಆಗುತ್ತಿದೆ. ಒಂದೇ ಜಿಲ್ಲೆಯಲ್ಲಿ ಎರಡು ಇರಬಾರದು ಎಂದು ನಿಯಮ ಇಲ್ಲವಲ್ಲ” ಎಂದು ಕೇಳಿದರು ಡಿ.ಕೆ. ಶಿವಕುಮಾರ್‌.

Exit mobile version