Site icon Vistara News

Next CM: 2.5 ವರ್ಷ ಬಳಿಕ ಡಿ.ಕೆ. ಶಿವಕುಮಾರ್‌ ಸಿಎಂ: ಡಿ.ಕೆ. ಸುರೇಶ್‌ ಭವಿಷ್ಯ

DK Shivakumar to become Next CM says DK Suresh

ಬೆಂಗಳೂರು: ಕಾಂಗ್ರೆಸ್‌ ಅಧಿಕಾರಕ್ಕೆ ಬಂದು 8 ತಿಂಗಳು ಕಳೆದಿದೆ. ಈ ಮಧ್ಯೆ ಎರಡು ಬಜೆಟ್‌ ಅನ್ನು ಸಿಎಂ ಸಿದ್ದರಾಮಯ್ಯ (CM Siddaramaiah) ಮಂಡಿಸಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಐದು ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿವೆ. ಆದರೆ, ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ (Next CM) ಬಗ್ಗೆ ಇರುವ ಚರ್ಚೆಗಳು ಮಾತ್ರ ನಿಂತಿಲ್ಲ. ಈಗ ಈ ಬಗ್ಗೆ ಸ್ವತಃ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ಅವರ ಸಹೋದರ, ಸಂಸದ ಡಿ.ಕೆ. ಸುರೇಶ್‌ ಪ್ರತಿಕ್ರಿಯೆ ನೀಡಿದ್ದು, ಡಿಕೆಶಿ 2.5 ವರ್ಷದ ಬಳಿಕ ಸಿಎಂ (DK Shivakumar Next CM) ಆಗುತ್ತಾರೆ. ಆದರೆ, ಕಾಲ ಬರುವವರೆಗೂ ಕಾಯಬೇಕು ಎಂದು ಹೇಳಿದ್ದಾರೆ.

ಈ ಬಗ್ಗೆ ವಿಸ್ತಾರ ನ್ಯೂಸ್‌ ಬಳಿ ಮಾತನಾಡಿದ ಡಿ.ಕೆ. ಸುರೇಶ್‌, ಕನಸು ಕಾಣುವುದು ಸ್ವಾಭಾವಿಕ. ಡಿ.ಕೆ. ಶಿವಕುಮಾರ್ ಸಿಎಂ ಆಗುವ ಕನಸು ನನಸಾಗುವ ಕಾಲ ಬರುತ್ತದೆ. ಆ ಕಾಲಕ್ಕಾಗಿ ಕಾಯಬೇಕು. ಕನಸು ಯಶಸ್ಸು ಆಗಲು ಕಾಯಬೇಕು. ಕಾಲ ಕೂಡಿ ಬರುವವರೆಗೂ ಕಾಯೋಣ. ಡಿಕೆಶಿ 2.5 ವರ್ಷದ ಬಳಿಕ ಸಿಎಂ ಆಗುತ್ತಾರೆ. ಕಾಲ ಬರುವವರೆಗೂ ಕಾಯಬೇಕು ಎಂದು ಹೇಳಿದರು.

ಡಿಕೆಶಿಗೆ ಸ್ವಪಕ್ಷದಲ್ಲೇ ಕಾಟ

ಡಿ.ಕೆ. ಶಿವಕುಮಾರ್‌ ಅವರಿಗೆ ಸ್ವಪಕ್ಷದಲ್ಲೇ ವಿರೋಧಿಗಳಿದ್ದಾರೆ. 2.5 ವರ್ಷಕ್ಕೆ ಸಿಎಂ ಹುದ್ದೆ ಹಸ್ತಾಂತರ ವಿಷಯ ಬಂದಾಗಲೆಲ್ಲ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಸಿಎಂ ಆಪ್ತ ಬಳಗದ ಕೆವಲು ಸಚಿವರು ಧ್ವನಿ ಎತ್ತುತ್ತಾ ಬಂದಿದ್ದರು. ಇದು ಡಿಕೆಶಿಗೆ ತೀವ್ರ ಅಸಮಾಧಾನವನ್ನೂ ತಂದಿತ್ತು. ಈ ಕಾರಣದಿಂದ ಡಿ.ಕೆ. ಶಿವಕುಮಾರ್‌ ಸಹ ಮಾಸ್ಟರ್‌ ಪ್ಲ್ಯಾನ್‌ ಮಾಡಿದ್ದು, ಲೋಕಸಭಾ ಚುನಾವಣೆಯಲ್ಲಿ ಈ ಸಚಿವರು ಸ್ಪರ್ಧೆ ಮಾಡುವಂತೆ ಹೈಕಮಾಂಡ್‌ ಮೂಲಕ ಹೇಳಿಸಿದ್ದಾರೆ.

8 ಸಚಿವರಿಗೆ ಡಿಕೆಶಿ ಮಾಸ್ಟರ್‌ ಸ್ಟ್ರೋಕ್

ಲೋಕಸಭೆಯಲ್ಲಿ ಕಾಂಗ್ರೆಸ್‌ ಕನಿಷ್ಠ 20 ಸೀಟುಗಳನ್ನು ಗೆಲ್ಲಬೇಕಾದರೆ ಹೆಚ್ಚುವರಿಯಾಗಿ ಮೂರು ಡಿಸಿಎಂ ಹುದ್ದೆ ಸೃಷ್ಟಿಯಾಗಬೇಕು ಎಂದು ಸಿಎಂ ಆಪ್ತ ಸಚಿವರು ಈ ಹಿಂದೆ ಕಾಂಗ್ರೆಸ್‌ ಹೈಕಮಾಂಡ್‌ಗೆ ಬೇಡಿಕೆಯನ್ನು ಇಟ್ಟಿದ್ದರು. ಈ ಸಂಬಂಧ ಬಹಿರಂಗ ಹೇಳಿಕೆಗಳು ಹೆಚ್ಚಾಗಿದ್ದರಿಂದ ಕಾಂಗ್ರೆಸ್‌ ಹೈಕಮಾಂಡ್‌ ಮಧ್ಯ ಪ್ರವೇಶ ಮಾಡಿತ್ತು. ಇದೇ ವೇಳೆ ಕೆಲವು ಸಚಿವರಿಗೆ ಲೋಕಸಭೆ ಸ್ಪರ್ಧೆ ಮಾಡುವಂತೆ ಸೂಚನೆಯನ್ನೂ ಕೊಟ್ಟಿತ್ತು. ಆಗ ಹಲವು ಸಚಿವರು ಹಿಂದೇಟು ಹಾಕಿದ್ದರು. ತಾವು ಸ್ಪರ್ಧೆ ಮಾಡುವುದಿಲ್ಲ. ಬೇಕಿದ್ದರೆ ತಮ್ಮ ಕುಟುಂಬದವರಲ್ಲಿ ಒಬ್ಬರನ್ನು, ಇಲ್ಲವೇ ಬೇರೊಬ್ಬರನ್ನು ನಿಲ್ಲಿಸಿ ಗೆಲ್ಲಿಸಿಕೊಂಡು ಬರುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. ಇಷ್ಟಾದರೂ ಡಿ.ಕೆ. ಶಿವಕುಮಾರ್‌ ಮಾತ್ರ ಪಟ್ಟು ಬಿಡುತ್ತಿಲ್ಲ ಎನ್ನಲಾಗಿದೆ.

ಹೀಗೆಲ್ಲ ಮಾತನಾಡುವ 8 ಸಚಿವರ ಪಟ್ಟಿಯನ್ನು ಡಿ.ಕೆ. ಶಿವಕುಮಾರ್‌ ಹೈಕಮಾಂಡ್‌ಗೆ ನೀಡಿದ್ದಾರೆ ಎನ್ನಲಾಗಿದೆ. ಈ ಸಚಿವರನ್ನು ಬರುವ ಲೋಕಸಭೆಯಲ್ಲಿ ಸ್ಪರ್ಧೆಗೆ ಇಳಿಸಲು ಸಲಹೆ ಕೊಟ್ಟಿದ್ದಾರೆ. ಅವರು ಅಲ್ಲಿ ಗೆದ್ದು ತೋರಿಸಲಿ, ಆ ಮೂಲಕ ಅಭ್ಯರ್ಥಿಯ ಕೊರತೆಯೂ ನೀಗಿದಂತೆ ಆಗುತ್ತದೆ ಎಂದು ಹೇಳಿದ್ದಾರೆನ್ನಲಾಗಿದೆ.

ಡಿಕೆಶಿ ಪಟ್ಟಿಯಲ್ಲಿ ಯಾರು ಯಾರಿದ್ದಾರೆ?

ಈ ಎಂಟು ಸಚಿವರನ್ನು ಕಣಕ್ಕೆ ಇಳಿಸುವ ಬಗ್ಗೆ ಡಿ.ಕೆ. ಶಿವಕುಮಾರ್ ಸಲಹೆ‌ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Karnataka Budget Session 2024: ಕಾಂಗ್ರೆಸ್‌ ಸೇರುವಂತೆ ಜೆಡಿಎಸ್‌ನ ಬೋಜೇಗೌಡರಿಗೆ ಸದನದಲ್ಲೇ ಆಹ್ವಾನ ಕೊಟ್ಟ ಸಿದ್ದರಾಮಯ್ಯ!

ಸ್ಪರ್ಧೆಗೆ ಆಸಕ್ತಿ ತೋರದ ಸಚಿವರು

ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಗಾಗಿ ಇಷ್ಟೆಲ್ಲ ಹೋರಾಟ ಮಾಡುತ್ತಿರುವ ಸಚಿವರ ಗುಂಪು, ರಾಷ್ಟ್ರ ರಾಜಕಾರಣದ ಬಗ್ಗೆ ಮಾತ್ರ ತಮಗೆ ಆಸಕ್ತಿ ಇಲ್ಲ ಎಂದು ಹೇಳುತ್ತಿದ್ದಾರೆ. ನಮಗೆ ಬೇಡ ನಾವು ಸೂಚಿಸಿದವರಿಗೆ ಕೊಡಿ ಎಂದು ಹೇಳ್ಳುತ್ತಿದ್ದಾರೆ. ಆದರೆ, ಈಗ ಹೀಗೆಲ್ಲ ಮಾತನಾಡುವ ಇವರನ್ನು ಕಣಕ್ಕೆ ಇಳಿಸಬೇಕು ಎಂದು ಡಿ.ಕೆ. ಶಿವಕುಮಾರ್‌ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಇದು ಈಗ ಸಚಿವರ ಆತಂಕಕ್ಕೆ ಕಾರಣವಾಗಿದೆ.

ಈಗ ಸ್ವತಃ ಡಿ.ಕೆ. ಸುರೇಶ್‌ ಸಿಎಂ ಹುದ್ದೆ ಬಗ್ಗೆ ಮಾತನಾಡಿದ್ದು, ಕಾಲ ಕೂಡಿಬರಲಿದೆ. 2.5 ವರ್ಷ ಬಳಿಕ ಡಿ.ಕೆ. ಶಿವಕುಮಾರ್‌ ಸಿಎಂ ಆಗಲಿದ್ದಾರೆ ಎಂದು ಹೇಳಿದ್ದಾರೆ.

Exit mobile version