ಬೆಂಗಳೂರು: ರಾಜ್ಯ ರಾಜಕೀಯದಲ್ಲಿ (Karnataka Politics) ಕೆಲವೊಂದು ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಬಿಬಿಎಂಪಿ ಕಾಮಗಾರಿಗಳ ಬಾಕಿ ಬಿಲ್ ಪಾವತಿಗೆ ಸಂಬಂಧಪಟ್ಟಂತೆ ಬೆಂಕಿ ಹೊತ್ತಿಕೊಂಡಿದೆ. ಈ ನಡುವೆ ಕಾಂಗ್ರೆಸ್ ಸರ್ಕಾರದ (Congress Government) ವಿರುದ್ಧ ಭ್ರಷ್ಟತೆ, ವರ್ಗಾವಣೆ ದಂಧೆ ಬಗ್ಗೆ ಬಿಜೆಪಿ ಆರೋಪ ಮಾಡಿದರೆ, ಈ ಹಿಂದಿನ ಸರ್ಕಾರದ ಎಲ್ಲ ಕಾಮಗಾರಿಗಳ ತನಿಖೆ ನಡೆಸಿ ದಾಖಲೆ ಬಿಡುಗಡೆ ಮಾಡುವ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಹೇಳಿದ್ದಾರೆ. ಅವರು ಈಗ ಕಮಿಷನ್ ಬಾಂಬ್ ಹಾಕಿದ್ದು, ಯಾರ ಮೇಲೆ ಸಿಡಿಯಲಿದೆ ಎಂಬುದು ರಹಸ್ಯವಾಗಿದೆ. ಏತನ್ಮಧ್ಯೆ ತಮ್ಮನ್ನು ತಮ್ಮನ್ನು ಬಿಜೆಪಿ ಶಾಸಕರು ಸಂಪರ್ಕ ಮಾಡುತ್ತಿರುವ ಬಗ್ಗೆಯೂ ಡಿಕೆಶಿ ಹೇಳಿದ್ದು, ಆಪರೇಷನ್ ಹಸ್ತದ (Operation Hasta) ಸುಳಿವನ್ನು ನೀಡಿದರೇ ಎಂಬ ಚರ್ಚೆಯೂ ಹುಟ್ಟಿಕೊಂಡಿದೆ.
ಕಾಂಗ್ರೆಸ್ ಪಕ್ಷದ ಸರ್ವ ಸದಸ್ಯರ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಮಾತನಾಡುತ್ತಾ, ಹೆಣದಲ್ಲೂ ಹಣ ಹೊಡೆದರಲ್ಲ ಅದನ್ನೆಲ್ಲ ಕಂಡುಹಿಡಿಯಬೇಕೋ ಬೇಡವೋ? ಎಲ್ಲ ದಾಖಲೆ ರೆಡಿ ಮಾಡಿ ಇಟ್ಟಿದ್ದೇನೆ. ಪಾಪ ಸಚಿವ ಚೆಲುವರಾಯಸ್ವಾಮಿ ಮೇಲೆ ಅರ್ಜಿ ಬರೆದುಕೊಟ್ಟಿದ್ದಾರಂತೆ. ಮೊದಲು ಅವರ ಮೇಲೆ, ಆಮೇಲೆ ನನ್ನ ಮೇಲೆ ಆರೋಪ ಮಾಡಿದರು. ಸಿ.ಟಿ. ರವಿಯಂತೆ, ಅಶ್ವಥ್ ನಾರಾಯಣನಂತೆ ಎಲ್ಲರೂ ಮಾತನಾಡುವವರೇ ಆಗಿದ್ದಾರೆ. ಸಿಎಂ ಎಲ್ಲ ಬಹಿರಂಗ ಮಾಡು ಅಂತ ಹೇಳಿದ್ದಾರೆ. ಪ್ರೆಸ್ಮೀಟ್ ಕರೆದು ದಾಖಲೆ ಬಿಡುತ್ತೇನೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಈ ಮೂಲಕ ತಮ್ಮ ಬಳಿ ದಾಖಲೆ ಇದೆ ಅದನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡುತ್ತೇನೆ ಎಂಬ ಎಚ್ಚರಿಕೆಯ ಸಂದೇಶವನ್ನು ರವಾನೆ ಮಾಡಿದ್ದಾರೆ.
ಅಶ್ವತ್ಥನಾರಾಯಣ ಬಗ್ಗೆ ಡಿಕೆಶಿ ಕಿಡಿ
ಅಶ್ವತ್ಥನಾರಾಯಣ ಅಲ್ಲ, ನವರಂಗಿ ನಾರಾಯಣ
ಡಿ.ಕೆ. ಶಿವಕುಮಾರ್ ಅವರು 15 ಪರ್ಸೆಂಟ್ ಕಮಿಷನ್ ಕೇಳಿದ್ದಾರೆ ಎಂದು ಆರೋಪ ಮಾಡಿದ್ದ ಬಿಬಿಎಂಪಿ ಗುತ್ತಿಗೆದಾರರು ಯುಟರ್ನ್ ಮಾಡಿದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ನಾನು ಗುತ್ತಿಗೆದಾರರ ಬಗ್ಗೆ ಮಾತನಾಡಲ್ಲ. ಅವರನ್ನು ಬಿಡಿ, ಅವರು ಕಷ್ಟದಲ್ಲಿ ಇದ್ದಾರೆ. ಆದರೆ, ಅವರನ್ನು ಬಳಸಿಕೊಂಡರಲ್ಲ ಅವರ ಬಗ್ಗೆ ನಾನು ಮಾತನಾಡುತ್ತೇನೆ. ಅವರನ್ನು ಬಳಸಿಕೊಂಡರಲ್ಲ, ಅವರು ಅಶ್ವತ್ಥನಾರಾಯಣ ಅಲ್ಲ, ನವರಂಗಿ ನಾರಾಯಣ ಅವರ ಬಗ್ಗೆ ಮಾತನಾಡುತ್ತೇನೆ. ಮತ್ತೆ ಅದ್ಯಾವುದೋ ರವಿ, ಮಹಾಲಕ್ಷ್ಮಿ ಲೇಔಟ್ ಗೋಪಾಲಸ್ವಾಮಿ ಇದ್ದಾರಲ್ಲಾ. ಅವರ ಬಗ್ಗೆಯೂ ನಾನು ಮಾತನಾಡಬೇಕಿದೆ, ಮಾತನಾಡುತ್ತೇನೆ ಎಂದು ಗುಡುಗಿದರು.
ಆಪರೇಷನ್ ಹಸ್ತ ಸುಳಿವು?
ಬಿಜೆಪಿಯವರು ಅತ್ತ ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ, ನನ್ನ ಹತ್ತಿರ ಶಾಸಕರು ಒಬ್ಬೊಬ್ಬರಾಗಿ ಬರುತ್ತಾ ಇದ್ದಾರೆ. ಮುನಿರತ್ನ ಬಂದು ನನ್ನನ್ನು ಭೇಟಿ ಮಾಡಿ ಏನೇನೊ ಹೇಳಿಕೊಂಡರು. ಚಿಕ್ಕಪೇಟೆ ಶಾಸಕ ಉದಯ ಗರುಡಾಚಾರ್ ಬಂದು ಅವರದ್ದು ಏನೇನೂ ಮಾತನಾಡಿದ್ದಾರೆ ಎಂದು ಡಿ.ಕೆ. ಹೇಳಿದ್ದರು. ಇದರ ಬೆನ್ನಲ್ಲೇ ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ. ಸೋಮಶೇಖರ್ ಸಹ ಸೋಮವಾರ ಸಂಜೆ ಡಿಕೆಶಿಯನ್ನು ಭೇಟಿ ಮಾಡಿದ್ದಾರೆ. ಅಲ್ಲದೆ, ಮುಂದಿನ ಬಿಬಿಎಂಪಿ, ಸ್ಥಳೀಯ ಸಂಸ್ಥೆಗಳು, ಲೋಕಸಭಾ ಚುನಾವಣೆಗೂ ಇವರ ಭೇಟಿಗೂ ಏನಾದರೂ ಸಂಬಂಧ ಇದೆಯೇ ಎಂಬ ಚರ್ಚೆಗಳೂ ಈಗ ಹುಟ್ಟಿಕೊಂಡಿದೆ. ಹಾಗಾದರೆ, ಆಪರೇಷನ್ ಹಸ್ತ ಮಾಡಲು ಡಿ.ಕೆ. ಶಿವಕುಮಾರ್ ಮುಂದಾದರೇ ಎಂಬ ಚರ್ಚೆಯೂ ಈಗ ಹುಟ್ಟಿಕೊಂಡಿದೆ.
ಡಿಕೆಶಿ ಹೊಗಳಿದ ಶಾಸಕ ಎಸ್.ಟಿ. ಸೋಮಶೇಖರ್! ಇಲ್ಲಿದೆ ವಿಡಿಯೊ
ಒಂದೊಂದಾಗಿ ದಾಖಲೆ ಬಿಡುಗಡೆಯ ಎಚ್ಚರಿಕೆ
ತಮ್ಮ ಮೇಲೆ ಕಮಿಷನ್ ವಿಚಾರವಾಗಿ ಮುಗಿ ಬೀಳುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿ.ಕೆ. ಶಿವಕುಮಾರ್, ನಮ್ಮ ಅಜ್ಜಯ್ಯನ ಸಹವಾಸ ಇವರಿಗೆಲ್ಲ ಗೊತ್ತಿಲ್ಲ. ದಾಖಲೆಗಳ ಬಿಡುಗಡೆ ವಿಷಯ ಈಗ ಬೇಡ. ನವರಂಗಿದೂ ಗೊತ್ತಿದೆ. ಸಾಮ್ರಾಟನದ್ದೂ ಗೊತ್ತಿದೆ. ಒಂದೇ ದಿನ ಎಲ್ಲ ದಾಖಲೆ ಬಿಡುಗಡೆ ಬೇಡ. ಅವರೆಲ್ಲರೂ ಒಂದೇ ದಿನಕ್ಕೆ ಎಕ್ಸಾಸ್ಟ್ ಆಗಿದ್ದಾರೆ. ಇನ್ನಷ್ಟು ಎಕ್ಸಾಸ್ಟ್ ಆಗಲಿ ಎಂದು ಮಾರ್ಮಿಕವಾಗಿ ಹೇಳಿದರು. ಹೀಗಾಗಿ ತಮ್ಮ ಬಳಿ ಎಲ್ಲರ ದಾಖಲೆ ಇದೆ. ಅದನ್ನು ಬಿಡುಗಡೆ ಮಾಡುತ್ತೇನೆ ಎಂಬ ಪರೋಕ್ಷ ಎಚ್ಚರಿಕೆಯನ್ನು ನೀಡಿದರು.
ಡಿಕೆಶಿಯಿಂದ ನಾನು ಬೆಳೆದೆ ಎಂದ ಎಸ್.ಟಿ. ಸೋಮಶೇಖರ್; ಇಲ್ಲಿದೆ ಸಂಪೂರ್ಣ ವಿಡಿಯೊ
ಡಿಕೆಶಿ ಬೆಂಗಳೂರು ನಿರ್ನಾಮ ಮಂತ್ರಿ ಎಂದಿದ್ದ ಅಶ್ವತ್ಥನಾರಾಯಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಡಿ.ಕೆ. ಶಿವಕುಮಾರ್, ಅವನು ಅಶ್ವತ್ಥನಾರಾಯಣ ಅಲ್ಲ, ನವರಂಗಿ ನಾರಾಯಣ. ರಾಮನಗರಕ್ಕೆ ಬಂದು ಕ್ಲೀನ್ ಮಾಡುತ್ತೇನೆ ಎಂದು ಹೇಳಿ ಅವರ ಪಾರ್ಟಿ ಕ್ಲೀನ್ ಮಾಡಿ ಹೋದ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.
ಅವರ ಇಲಾಖೆಯಲ್ಲಿ ಹಾಗೂ ಬೆಂಗಳೂರು ನಗರದಲ್ಲಿ ಏನು ಮಾಡಿದ್ದಾರೆ ಎಂದು ನಾವು ಇನ್ನೂ ದಾಖಲೆ ಬಿಚ್ಚಿಲ್ಲ. ಏನೇನು ಆಟ ಆಡಿದ್ದಾರೆ, ಯಾರನ್ನು ಎತ್ತಿ ಕಟ್ಟುತ್ತಿದ್ದಾರೆ. ಎಲ್ಲವೂ ಗೊತ್ತಿದೆ. ಎಲ್ಲಿಗೆ ಬೇಕಾದರೂ ಹೋಗಲಿ, ನಾನು ನೋಡಿಕೊಳ್ಳುತ್ತೇನೆ. ಇಂದು ಪಕ್ಷದ ಸಭೆ ಇದೆ, ನಾಳೆ ಸ್ವಾತಂತ್ರ್ಯ ದಿನಾಚರಣೆ ಇದೆ. ಎಲ್ಲವೂ ಮುಗಿಯಲಿ ಆಮೇಲೆ ಮಾತನಾಡುತ್ತೇನೆ. ಇನ್ನು ಸಿ.ಟಿ.ರವಿಗೂ ಟ್ರೀಟ್ಮೆಂಟ್ ಬೇಕಾಗಿದೆ ಕೊಡೋಣ ಎಂದ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಬಂಡರು ಎಲ್ಲವನ್ನೂ ಸಮರ್ಥನೆ ಮಾಡಿಕೊಳ್ಳುತ್ತಾರೆ: ಡಾ. ಸಿ.ಎನ್. ಅಶ್ವತ್ಥನಾರಾಯಣ
ನವರಂಗಿ ನಾರಾಯಣ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅಶ್ವತ್ಥನಾರಾಯಣ, ರಾಮನಗರದಲ್ಲಿ ರಾಜೀವ್ ಗಾಂಧಿ ಮೆಡಿಕಲ್ ಕಾಲೇಜು ಮಾಡಿದರೆ, ಕಳ್ಳತನದಿಂದ ಬೇರೆ ಕಡೆ ಕೊಂಡೊಯ್ಯುವ ಯತ್ನ ಮಾಡಿದರು. ನೆಟ್ಟಗೆ ಒಂದು ಕೆಲಸ ಮಾಡಿಲ್ಲ. ಕಾಂಗ್ರೆಸ್ ಭ್ರಷ್ಟಾಚಾರ ಹುಟ್ಟಿಹಾಕಿ ಅದನ್ನು ಪಾಲನೆ ಮಾಡಿ ಹೆಮ್ಮರವಾಗಿ ಬೆಳೆಸಿದೆ. ಇದರ ನಿರ್ಮೂಲನೆ ಅಸಾಧ್ಯ ಎಂದು ಇಂದಿರಾ ಗಾಂಧಿ, ರಾಜೀವ್ಗಾಂಧಿ ಅವರೇ ಒಪ್ಪಿಕೊಂಡಿದ್ದರು. ಮಾತು ಬರುತ್ತದೆ ಎಂದು ಮಾತನಾಡಿ ಭಂಡತನ ತೋರುತ್ತಿದ್ದಾರೆ. ಅಂಗಲಾಚಿ, ಭಿಕ್ಷೆ ಕೊಡಿ ಅಂತಾ ಕೇಳಿಕೊಂಡು ಅಧಿಕಾರಕ್ಕೆ ಬಂದರು. ಇಂತಹ ಭಂಡರು ಎಲ್ಲವನ್ನೂ ಸಮರ್ಥನೆ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.