ಬೆಳಗಾವಿ: ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು ವರದಿ (Caste Census Report) ಸ್ವೀಕಾರದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaiah) ಎಷ್ಟು ಉತ್ಸಾಹ ತೋರಿದ್ದಾರೋ, ಅಷ್ಟೇ ಪ್ರತಿರೋಧವನ್ನು ಕಾಂಗ್ರೆಸ್ ಪಕ್ಷದ ಲಿಂಗಾಯತ ಶಾಸಕರು ತೋರಿದ್ದಾರೆ. ಈಗ ವಿಧಾನ ಸಭೆಯಲ್ಲಿ “ವರದಿಯನ್ನು ಸ್ವೀಕಾರ ಮಾಡುವುದು ಬೇಡ” ಎಂಬ ಮನವಿ ಪತ್ರಕ್ಕೆ ಸಿಎಂ ಸಿದ್ದರಾಮಯ್ಯ ಎದುರಿನಲ್ಲಿಯೇ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ (Shamanur Shivashankarappa) ಹಾಗೂ ವಿನಯ್ ಕುಲಕರ್ಣಿ (Vinay Kulkarni) ಸಹಿ ಸಂಗ್ರಹ ಮಾಡುವ ಮೂಲಕ ತೊಡೆ ತಟ್ಟಿದ್ದಾರೆ.
ಈ ಮೂಲಕ ಜಾತಿ ಗಣತಿ ವರದಿ ಬಿಡುಗಡೆ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. ಈ ಸಂಬಂಧ ಈಗಾಗಲೇ ಡಿಸಿಎಂ ಡಿ.ಕೆ. ಶಿವಕುಮಾರ್ (Deputy CM DK Shivakumar) ಸ್ಪಷ್ಟೀಕರಣ ನೀಡಿದ್ದರು. “ನಾನು ಜಾತಿ ಗಣತಿಗೆ (Caste Census) ಎಲ್ಲಿಯೂ ವಿರೋಧ ವ್ಯಕ್ತಪಡಿಸಿಲ್ಲ. ಜಾತಿ ಗಣತಿಯ ಸಮೀಕ್ಷೆ ವೈಜ್ಞಾನಿಕವಾಗಿ (Scientific Survey) ಹಾಗೂ ವ್ಯವಸ್ಥಿತವಾಗಿ ನಡೆಯಬೇಕು ಎಂಬುದಷ್ಟೇ ನಮ್ಮ ಅಭಿಮತ ಎಂದು ಸ್ಪಷ್ಟನೆ ನೀಡಿದ್ದರು. ಆ ಮೂಲಕ ವರದಿಯು ವೈಜ್ಞಾನಿಕವಾಗಿಲ್ಲ ಎಂಬದನ್ನು ಪರೋಕ್ಷವಾಗಿ ಡಿಕೆಶಿ ಒಪ್ಪಿಕೊಂಡಿದ್ದರು. ಜತೆಗೆ ತಾವು ಇದಕ್ಕೆ ವಿರೋಧ ಮಾಡುತ್ತೇವೆ ಎಂಬುದನ್ನೂ ಪರೋಕ್ಷವಾಗಿ ಹೇಳಿದ್ದರು. ಅಲ್ಲದೆ, ಅವರಿಗೆ ಒಕ್ಕಲಿಗ ಸಮುದಾಯದ ಸ್ವಾಮೀಜಿಗಳು ಹಾಗೂ ಮುಖಂಡರ ಒತ್ತಡವೂ ಹೆಚ್ಚಿದೆ. ಈ ನಡುವೆ ಲಿಂಗಾಯತ ಶಾಸಕರೂ ಪದೇ ಪದೆ ಧ್ವನಿ ಎತ್ತುತ್ತಾ ಬಂದಿದ್ದಾರೆ. ಈಗ ಸಿಎಂ ಎದುರಿನಲ್ಲಿಯೇ ಈ ಬಗ್ಗೆ ಸಹಿ ಸಂಗ್ರಹ ಮಾಡುವ ಮೂಲಕ ಮುಜುಗರವನ್ನುಂಟು ಮಾಡಿದ್ದಾರೆ.
ಯಾವುದೇ ಕಾರಣಕ್ಕೂ ಈ ವರದಿ ಒಪ್ಪಲು ಸಾಧ್ಯವಿಲ್ಲ. ಇದು ಅವೈಜ್ಞಾನಿಕ ವರದಿಯಾಗಿದೆ. ಹೀಗಾಗಿ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು ವರದಿಯನ್ನು ಸ್ವೀಕಾರ ಮಾಡಬಾರದು ಎಂದು ಮನವಿ ಪತ್ರವೊಂದನ್ನು ಸಿದ್ಧಪಡಿಸಿದ್ದಾರೆ. ಈ ವರದಿಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸುವ ಮುಂಚೆ ಲಿಂಗಾಯತ ಶಾಸಕರ ಸಹಿಯನ್ನು ಹಾಕಿಸಲಾಗುತ್ತಿದೆ. ಇದರ ನೇತೃತ್ವವನ್ನು ಶಾಮನೂರು ಶಿವಶಂಕರಪ್ಪ ಹಾಗೂ ವಿನಯ್ ಕುಲಕರ್ಣಿ ವಹಿಸಿಕೊಂಡಿದ್ದಾರೆ.
ಒಮ್ಮೆ ಶಾಸಕರಿಂದ ಸಹಿಯಾಗುತ್ತಿದ್ದಂತೆ, ಜಾತಿ ಗಣತಿ ಸ್ವೀಕಾರಕ್ಕೆ ತಮ್ಮ ಸಮುದಾಯದ ಶಾಸಕರ ವಿರೋಧ ಇದೆ ಎಂಬ ಮನವಿ ಪತ್ರವನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಿದ್ದಾರೆ. ಈ ಸಂಬಂಧ ಈಗ ಅಗತ್ಯ ತಯಾರಿಗಳು ನಡೆದಿವೆ.
ಇದನ್ನೂ ಓದಿ: Belagavi Winter Session: ಸುವರ್ಣಸೌಧದಲ್ಲಿ ಜಾರಿ ಬಿದ್ದ ಪ್ರಕಾಶ್ ಕೋಳಿವಾಡ; ಸದನಕ್ಕೆ ಲೇಟ್ ಎಂಟ್ರಿ!
ಡಿ.ಕೆ. ಶಿವಕುಮಾರ್ ಈಚೆಗೆ ಹೇಳಿದ್ದೇನು?
ಜಾತಿ ಗಣತಿ ಸಮೀಕ್ಷೆ ಸರಿಯಾಗಿ ನಡೆದಿಲ್ಲ ಎಂದು ನಮ್ಮ ಅನೇಕ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮನೆ, ಮನೆಗೆ ತೆರಳಿ ಸಮೀಕ್ಷೆ ನಡೆಸಿಲ್ಲ ಎಂದು ದೂರುಗಳು ಬಂದಿವೆ. ಎಲ್ಲ ಸಮುದಾಯಗಳು ಅವರ ಜನಸಂಖ್ಯೆಗೆ ಅನುಗುಣವಾಗಿ ತಮ್ಮ ಹಕ್ಕನ್ನು ಪಡೆಯಬೇಕು. ಅಲ್ಪಸಂಖ್ಯಾತರು, ಪರಿಶಿಷ್ಟರು ಸೇರಿದಂತೆ ಎಲ್ಲರೂ ತಮ್ಮ ಜನಸಂಖ್ಯೆ ಅನುಗುಣವಾಗಿ ಹಕ್ಕು ಹಾಗೂ ಅನುದಾನ ಕೇಳುತ್ತಾರೆ. ಈ ಜಾತಿ ಗಣತಿಯನ್ನು ವೈಜ್ಞಾನಿಕವಾಗಿ ಮಾಡಲಾಗಿದೆಯೇ ಎಂಬ ವಿಚಾರವಾಗಿ ನಾವು ಸ್ಪಷ್ಟೀಕರಣ ಕೇಳಿದ್ದೇವೆ. ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಮೇಲೆ ನಾವು ನಂಬಿಕೆ ಇಟ್ಟಿದ್ದೇವೆ. ಸಮಾಜದ ಎಲ್ಲ ವರ್ಗಗಳಿಗೆ ಸಾಮಾಜಿಕ ನ್ಯಾಯ ಒದಗಿಸಿಕೊಡುವ ಕಾಂಗ್ರೆಸ್ ಪಕ್ಷದ ಬದ್ಧತೆಗೆ ನಾನು ಬೆಂಬಲವಾಗಿ ನಿಲ್ಲುತ್ತೇನೆ. ಕೇಂದ್ರ ಸರ್ಕಾರದ ವರ್ಗೀಕರಣದ ಅನ್ವಯ ನಾನು ಕೂಡ ಇತರೆ ಹಿಂದುಳಿದ ವರ್ಗದ ಸಮುದಾಯದ ನಾಯಕ. ಪಕ್ಷದ ಅಧ್ಯಕ್ಷನಾಗಿ ನಾನು ಎಲ್ಲ ವರ್ಗದ ಜನರನ್ನು ಸಮಾನವಾಗಿ ನೋಡಬೇಕು ಎಂದು ತಿಳಿಸಿದ್ದರು.