Site icon Vistara News

14 ಬಜೆಟ್‌ ಮಂಡಿಸಿರುವ ಸಿದ್ದರಾಮಯ್ಯಗೆ ಆರ್ಥಿಕ ಸಲಹೆಗಾರ ಬೇಕಾ? ಇದೇನು ಗಂಜಿ ಕೇಂದ್ರವೇ?: ಎಚ್‌ಡಿಕೆ ವಾಗ್ದಾಳಿ

HD Kumaraswamy pressmeet

ಬೆಂಗಳೂರು: ರೈತರ ಆತ್ಮಹತ್ಯೆಗಳು ಪ್ರಾರಂಭವಾಗಿವೆ. ಒಂದು ಕಡೆ ವಸೂಲಿ ಮಾಡಬೇಡಿ ಎಂದು ಹೇಳುತ್ತಾರೆ. ಮತ್ತೊಂದು ಕಡೆ ವಸೂಲಿ ಮಾಡುತ್ತಿದ್ದಾರೆ. ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ. ಸರ್ಕಾರಕ್ಕೆ ರೈತರ ಬಗ್ಗೆ ಚಿಂತೆ ಇದೆಯೇ? ಮಾತೆತ್ತಿದ್ದರೆ ಮೂವರು ಡೆಪ್ಯುಟಿ ಸಿಎಂ ಬಗ್ಗೆ ಮಾತನಾಡುತ್ತಾರೆ. ನಿನ್ನೆ ಒಂದು ಅದ್ಭುತವಾದ ಆರ್ಡರ್ ನೋಡಿದೆ. ಹಿರಿಯ ಶಾಸಕರಿಗೆ ಹುದ್ದೆಗಳನ್ನು ಕೊಟ್ಟಿದ್ದಾರೆ. 14 ಬಜೆಟ್ ಮಂಡನೆ ಮಾಡಿದವರು ಸಿದ್ದರಾಮಯ್ಯ. (CM Siddaramaiah) ಅವರಿಗೆ ಆರ್ಥಿಕ ಸಲಹೆಗಾರರನ್ನು (Economic Advisor) ನೇಮಿಸಿದ್ದಾರೆ. ಅನುಭವ ಇರುವ ತಜ್ಞರನ್ನು ನೇಮಿಸಿಕೊಂಡಿಲ್ಲ. ಇವೇನು ಗಂಜಿ ಕೇಂದ್ರಗಳೇ? ಎಂದು ಎಚ್.ಡಿ. ಕುಮಾರಸ್ವಾಮಿ (HD Kumaraswamy ವ್ಯಂಗ್ಯವಾಡಿದರು.

ಜೆಡಿಎಸ್‌ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಆರ್.ವಿ. ದೇಶಪಾಂಡೆ ಅವರು 25 ವರ್ಷ ಮಂತ್ರಿಗಳಾಗಿದ್ದವರು. ಅವರನ್ನು ಆಡಳಿತ ಸುಧಾರಣೆ ಆಯೋಗಕ್ಕೆ ನೇಮಿಸಿದ್ದಾರೆ. ಹಿಂದೆ ಹಾರನಹಳ್ಳಿ ರಾಮಸ್ವಾಮಿ ಅವರನ್ನು ನೇಮಿಸಿದ್ದರು. ವಿಜಯಭಾಸ್ಕರ್ ಆಯೋಗ ಮಾಡಿ ವರದಿ ಪಡೆದಿದ್ದರು. ಈ ವರದಿ ಪಡೆದು ಏನು ಸುಧಾರಣೆ ತಂದಿದ್ದೀರಿ? ಈಗ ದೇಶಪಾಂಡೆಯವರನ್ನು ಮಾಡಿದ್ದೀರಿ. ವಿಧಾನಸೌಧದಲ್ಲಿ ಮಾಡಬಾರದ ಕೆಲಸವನ್ನು ಮಾಡುತ್ತಿದ್ದೀರಿ. ಈಗ ದೇಶಪಾಂಡೆ ಕೈಯಲ್ಲಿ ಏನು ಸುಧಾರಣೆ ಮಾಡಿಸುತ್ತೀರಿ? ಬಿ.ಆರ್. ಪಾಟೀಲ್ ಅವರನ್ನು ಕಾರ್ಯದರ್ಶಿಯನ್ನಾಗಿ ಮಾಡಿಕೊಂಡಿದ್ದಾರೆ. ಸಿದ್ದರಾಮಯ್ಯಗಿಂತ ದೊಡ್ಡವರು ಬೇಕಾ? ಅವರಿಗೆ ಆರ್ಥಿಕ ಕಾರ್ಯದರ್ಶಿ ನೇಮಕ ಬೇಕಾ? ಬಿ.ಆರ್. ಪಾಟೀಲರಿಗೆ ಯಾವ ಅನುಭವ ಇದೆ? ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: Karnataka Weather: ಮಲೆನಾಡಲ್ಲಿ ಮೈ ಕೊರೆವ ಚಳಿ; ಉತ್ತರ ಒಳನಾಡಲ್ಲಿ ಥಂಡ ಹೊಡೆಸುವ ಥಂಡಿ!

ಮಲ್ಲಿಕಾರ್ಜುನ ಖರ್ಗೆ ಅವರನ್ನು ಕರ್ನಾಟಕದಿಂದ ಖಾಲಿ ಮಾಡಿಸಿದ್ದು ಯಾರು? ಆವಾಗ ನಿಮಗೆ ಬಿ.ಆರ್.ಪಾಟೀಲ್ ಸಲಹೆ ಕೊಟ್ಟಿದ್ದರಾ? ಯಾವ ಕಾರಣಕ್ಕೆ ಸಲಹೆಗಾರರನ್ನಾಗಿ ಮಾಡಿಕೊಂಡಿರಿ? ನಾನು ಎರಡು ಬಾರಿ ಸಿಎಂ ಆಗಿದ್ದೆ. ಅದೂ 10-15 ತಿಂಗಳು ಆಗಿದ್ದೆ ಬಿಡಿ. ಆದರೆ ಸಿದ್ದರಾಮಯ್ಯ ಅವರಂತೆ ಸುದೀರ್ಘ ಅವಧಿಗೆ ಆಗಿದ್ದೆನಾ? ಸಿದ್ದರಾಮಯ್ಯ ಅವರೇ ನಿಮಗೆ ಬಿ.ಆರ್.ಪಾಟೀಲರ ಸಲಹೆ ಬೇಕಾ? ಈ ಸರ್ಕಾರ ಗ್ಯಾರಂಟಿ ಬಗ್ಗೆ ಚರ್ಚೆ ಬಿಟ್ಟರೆ ಬೇರೆ ಏನಾದರೂ ಮಾಡಿದೆಯಾ? ಬರಗಾಲದ ಹೇಳಿಕೆಗಳಿಗೆ ಸರ್ಕಾರ ಸೀಮಿತವಾಗಿದೆಯೇ ಹೊರತು ಅದಕ್ಕೆ ಸಂಬಂಧಪಟ್ಟ ಯೋಜನೆಗಳ ಬಗ್ಗೆ ಮಾತನಾಡುತ್ತಿಲ್ಲ.

ಗ್ಯಾರಂಟಿ ಭಜನೆ ಬಿಟ್ಟರೆ ಬೇರೆ ಏನು ಮಾಡಿದ್ದಾರೆ?

ರಾಜ್ಯದಲ್ಲಿ ಈ ವರ್ಷ ಚುನಾವಣೆ ನಡೆದವು. ಹೊಸ ಸರ್ಕಾರ ರಚನೆ ಆಯ್ತು. ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದರು. ಅದರ ಬಗ್ಗೆ ನಮಗೆ ಯಾವುದೇ ಅಸೂಯೆ ಇಲ್ಲ. ಗ್ಯಾರಂಟಿ ಯೋಜನೆಗಳನ್ನು ನೆನಪಿಸಲು ಜಾಹೀರಾತುಗಳನ್ನು ಕೊಡುತ್ತಿದ್ದೀರಿ. ಆದರೆ, ನುಡಿದಂತೆ ನಡೆದೆವು ಎಂದು ಸಾಕಷ್ಟು ಭಾರಿ ಜಾಹೀರಾತು ಕೊಡುವ ಅವಶ್ಯಕತೆ ಇರಲಿಲ್ಲ. ಇದನ್ನು ನೋಡಿದರೆ ಅಯ್ಯೋ ಎಂದಿನಿಸುತ್ತದೆ. 8 ತಿಂಗಳ ಅವದಿಯಲ್ಲಿ ಗ್ಯಾರಂಟಿ ಭಜನೆ ಬಿಟ್ಟರೆ ಬೇರೆ ಏನು ಮಾಡಿದ್ದಾರೆ? ಅಭಿವೃದ್ಧಿ ಕೆಲಸಗಳು ಆಗುತ್ತಿವೆಯೇ? ಎಂದು ಮಾಜಿ ಸಿಎಂ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

ಬೆಳಗಾವಿ ಅಧಿವೇಶನದಲ್ಲಿ ನನ್ನ ಬಗ್ಗೆ ಮಾಧ್ಯಮಗಳು ಒಂದಷ್ಟು ನಿರೀಕ್ಷೆಗಳನ್ನು ಇಟ್ಕೊಂಡಿದ್ದರು. ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಚರ್ಚೆ ಆಗಬೇಕು ಅಂತ ನಾನು ಸುಮ್ಮನೆ ಇದ್ದೆ. ಮುಂದಿನ ಅಧಿವೇಶನದಲ್ಲಿ ನಾನು ಮಾತನಾಡುತ್ತೇನೆ. ಗೌರ್ನರ್ ಅಡ್ರಸ್‌ ವೇಳೆ ನಾನು ಮಾತನಾಡುತ್ತೇನೆ ಎಂದು ರಾಜ್ಯ ಸರ್ಕಾರಕ್ಕೆ ಎಚ್.ಡಿ. ಕುಮಾರಸ್ವಾಮಿ ಎಚ್ಚರಿಕೆಯನ್ನು ನೀಡಿದರು.

ಪದೇ ಪದೆ ಕೇ‌ಂದ್ರ ಸರ್ಕಾರದ ಮೇಲೆ ಇವರು ಹೇಳುತ್ತಾರೆ ಅಷ್ಟೇ. ಸಿಎಂ ಸಿದ್ದರಾಮಯ್ಯ ಅವರು ಎಚ್.ಡಿ. ಕುಮಾರಸ್ವಾಮಿಗೆ ಬರದ ಬಗ್ಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಇವರು ಏನು ಮಾಡಿದ್ದಾರೆ? ಮೇವು ಖರೀದಿಗೆ ಹಣ ನೀಡಿದ್ದು ಬಿಟ್ಟರೆ ಬೇರೆನೂ ಮಾಡಿಲ್ಲ. ಬೆಂಗಳೂರಿನಲ್ಲಿ ಪುಟ್‌ಪಾತ್‌ನಲ್ಲಿ ಟ್ಯಾಂಕರ್ ಇಟ್ಟು ನೀರು ಹಂಚುತ್ತಿದ್ದಾರೆ. ಇದಾ ನಿಮ್ಮ ಬ್ರಾಂಡ್‌ ಬೆಂಗಳೂರು? ಟನಲ್ ರೋಡ್ ಮಾಡಲು‌ ಎರಡು ಮಂತ್ರಿಗಳ ನಡುವೆ ಕಿತ್ತಾಟ ಶುರುವಾಗಿದೆ. ನಾನು ಸಿಎಂ ಆಗಿದ್ದಾಗ ಮೀನ್ಸ್ಕ್ ಸ್ಕ್ರೇರ್, ಹೆಬ್ಬಾಳವರಗೆ ಟನಲ್ ರಸ್ತೆ ಮಾಡಲು ಹೊರಟಿದ್ದೆ. ಆದರೆ, ಅದು ಸಾಧ್ಯವಾಗಿರಲಿಲ್ಲ. ಇದಕ್ಕೆ ಈಗ ಸರ್ಕಾರಕ್ಕೆ ಸಮಯ ಇದೆಯಾ ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

ರೈತರಿಗೆ ಕೊಡುವ 2 ಸಾವಿರದ ಬಗ್ಗೆ ಸ್ಪಷ್ಟನೆ ಕೊಡಿ

ಬರಗಾಲಕ್ಕೆ ನೀವು ಏನ್ ಕೊಟ್ಟಿರಿ? ಪ್ರತಿ ಹೆಕ್ಟೇರ್‌ಗೆ ಎರಡು ಸಾವಿರ ಕೊಡುತ್ತೀರಾ? ಅಥವಾ ಎಕರೆಗೆ ಎರಡು ಸಾವಿರ ನಾ ಅಂತ ಸರಿಯಾಗಿ ಹೇಳಿ. ಏಕೆಂದರೆ ಎರಡು ಸಾವಿರ ಕೊಡುತ್ತೇವೆ ಎಂದು ಹೇಳಿದರೆ ಸಾಲದು. ಅದನ್ನು ಯಾವ ರೀತಿ ಕೊಡುತ್ತೀರಿ ಎಂಬುದನ್ನೂ ಹೇಳಿ. ಇದರ ಬಗ್ಗೆ ಸಚಿವರು ಯಾವುದೇ ಮಾಹಿತಿಯನ್ನು ಕೊಡುತ್ತಿಲ್ಲ ಎಂದು ಮಾಜಿ ಸಿಎಂ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಸ್ವಲ್ಪ ದಿನಗಳಲ್ಲಿ ಕೇಂದ್ರದ ಎನ್‌ಡಿಆರ್‌ಎಫ್‌ ಅಡಿ ಹಣವನ್ನು ಬಿಡುಗಡೆ ಮಾಡಲಾಗುತ್ತದೆ. 2 ಸಾವಿರ ಕೊಡಲು ಇನ್ನೂ ಕೇಂದ್ರದವರನ್ನೇ ಕಾಯುತ್ತಿದ್ದೀರಾ? ಸರ್ಕಾರ ಎಷ್ಟು ಕೇವಲವಾಗಿ ನಡೆದುಕೊಳ್ಳುತ್ತಿದೆ ಎಂದು ಹೇಳಲು ನೋವಾಗುತ್ತದೆ ಎಂದು ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.

ಇದನ್ನೂ ಓದಿ: Yuva Nidhi Scheme: ಇನ್ನೆರಡೇ ವಾರಕ್ಕೆ ಯುವ ನಿಧಿ ಹಣ ಜಮೆ; ಸುಳ್ಳು ಹೇಳಿದ್ರೆ ಪೈಸಾ ವಸೂಲ್‌, ಕೇಸ್‌!

ನಾಳೆ ಈ ವರ್ಷದ ಕೊನೇ ದಿನ. ಜನವರಿ 1ರಿಂದ ನೂತನ ಕ್ಯಾಲೆಂಡರ್‌ ವರ್ಷ ಆರಂಭವಾಗುತ್ತದೆ. ಈ ವರ್ಷದ ಎಲ್ಲ ಬೆಳವಣಿಗೆ ಬಗ್ಗೆ ಮಾತನಾಡುತ್ತೇನೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

Exit mobile version