ಮೈಸೂರು: ನಾನು ಬಿಜೆಪಿ ಸರಕಾರದ, ಸಚಿವರ ಭ್ರಷ್ಟಾಚಾರದ ಬಗ್ಗೆ ಮಾತನಾಡಿದಾಗಲೆಲ್ಲ ನನಗೆ ಉಡುಗೊರೆಯಾಗಿ ಬಂದಿದ್ದ ವಾಚನ್ನು ಪ್ರಸ್ತಾಪಿಸಿ ದಾರಿ ತಪ್ಪಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ನನ್ನ ವಾಚ್ ಬಗ್ಗೆ ಎಸಿಬಿ ತನಿಖೆಯಾಗಿ ಇತ್ಯರ್ಥವಾಗಿದೆ, ಸರಕಾರಕ್ಕೆ ವಾಪಸ್ ಕೊಟ್ಟೂ ಆಗಿದೆ. ನಾನು ಕಟ್ಟಿಕೊಂಡಿದ್ದ ವಾಚ್‌ಗೆ ೩೫-೪೦ ಲಕ್ಷ ರೂ. ಇರಬಹುದು. ಆದಕ್ಕೂ ಇವರು ಮಾಡಿರುವ ೩೦೦ ಕೋಟಿ ರೂ. ಪಿಎಸ್‌ಐ ನೇಮಕಾತಿ ಹಗರಣಕ್ಕೂ ಸಂಬಂಧ ಕಲ್ಪಿಸಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.
“ಹುಬ್ಲೋಟ್ ವಾಚನ್ನು ನನಗೆ ಡಾಕ್ಟರ್ ವರ್ಮಾ ಅನ್ನೋರು ಕೊಟ್ಟಿದ್ದರು. ಇದನ್ನು ಕುಮಾರಸ್ವಾಮಿ ಕಳ್ಳತನದ ವಾಚ್ ಅಂದರು. ನಾನೇ ಎಸಿಬಿ ತನಿಖೆಗೆ ವಹಿಸಿದೆ. ವರ್ಮಾ ಅವರೇ ಬಂದು ರಸೀದಿ ಕೊಟ್ಟು ಎಲ್ಲವೂ ಮುಗಿದಿದೆ. ಈಗಲೂ ಬಿಜೆಪಿ ನಾಯಕರು ತಮ್ಮ ಮೇಲಿನ ಆರೋಪದಿಂದ ತಪ್ಪಿಸಿಕೊಳ್ಳಲು ಸಿದ್ದರಾಮಯ್ಯ ವಾಚ್ ಅಂತ ಮಾತನಾಡುತ್ತಿದ್ದಾರೆʼʼ ಎಂದು ಹೇಳಿದರು.
ʻʻನಾನು ಕಟ್ಟಿಕೊಂಡಿದ್ದ ವಾಚ್‌ಗೆ 35ರಿಂದ 40 ಲಕ್ಷ ರೂ. ಇರಬಹುದು. ಕಟ್ಟಿಕೊಂಡಿದ್ದರೆ ಏನು? ಅದೇನು ನಿಮ್ಮಂತೆ 300 ಕೋಟಿ ರೂ. ವ್ಯವಹಾರನಾ? ನಾನು ಅದನ್ನು ಸಮರ್ಥಿಸುತ್ತಿಲ್ಲ. ವಾಚ್ ವಿವಾದವನ್ನು ಕುಮಾರಸ್ವಾಮಿ ಮತ್ತೆ ಕೆದಕಿದ್ದಾರೆ, ಕುಮಾರಸ್ವಾಮಿ ಬಿಜೆಪಿ ಸಂಬಂಧ ಏನು ಅಂತ ನನಗೆ ಗೊತ್ತಿಲ್ಲ,ʼʼ ಎಂದು ಸಿದ್ದರಾಮಯ್ಯ ಹೇಳಿದರು.
ಏನೇ ವಿವಾದ ಎದುರಾದರೂ ನಿಮ್ಮ ಕಾಲದಲ್ಲಿ ಆಗಿಲ್ವಾ, ಎಂದು ಪ್ರಶ್ನಿಸುವುದು ಪಲಾಯನವಾದವಾಗುತ್ತದೆ, ಜನರ ಹಣ ಲೂಟಿ ಮಾಡುತ್ತಿರುವುದಕ್ಕೆ ಉತ್ತರ ಕೊಡಿ ಎಂದ ಸಿದ್ದರಾಮಯ್ಯ, ಇಂತಹ ಕೆಟ್ಟ ಸರ್ಕಾರ ನಾನು ಯಾವಾಗಲೂ ನೋಡಿಲ್ಲ ಎಂದು ಆಕ್ಷೇಪಿಸಿದರು.
ಇದನ್ನೂ ಓದಿ: ಬಿಜೆಪಿಯಿಂದ ದೂರ ನಡೆಯುತ್ತಾರ ನಿತೀಶ್?: ಬಿಹಾರದಲ್ಲಿ ಇಫ್ತಾರ್ʼ ರಾಜಕೀಯ
ಸಿದ್ದರಾಮಯ್ಯ ಸುಳ್ಳು ಹೇಳಿಕೊಂಡು ತಿರುಗುತ್ತಾರೆ ಎಂಬ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ʻʻಕಳ್ಳರು ಇನ್ನೇನು ಹೇಳುತ್ತಾರೆ ? ಕಳ್ಳ ಸತ್ಯ ಒಪ್ಪಿಕೊಳ್ಳುತ್ತಾನಾ ? ಹಗರಣದ ವಿಚಾರದಲ್ಲಿ ಶಾಸಕರು, ಎಂಎಲ್ಸಿಗಳು ಪತ್ರ ಬರೆದಾಗ ಏಕೆ ತನಿಖೆ ಮಾಡಲಿಲ್ಲ ಎಂದು ಪ್ರಶ್ನಿಸಿದರು. ಹಗರಣವೇ ನಡೆದಿಲ್ಲ ಎಂದರೆ ಮರು ಪರೀಕ್ಷೆಗೆ ಯಾಕೆ ಆದೇಶ ಹೊರಡಿಸಿದಿರಿ? ಅಧಿಕಾರಿಗಳ ವರ್ಗಾವಣೆ ಏಕೆ ಮಾಡಿದ್ರಿ ಎಂದು ಪ್ರಶ್ನಿಸಿದರು.
ಬೊಮ್ಮಾಯಿ ಸೆಲೆಕ್ಟೆಡ್ ಸಿಎಂ
ಬಸವರಾಜ ಬೊಮ್ಮಾಯಿ ಎಲೆಕ್ಟೆಡ್ ಸಿಎಂ ಅಲ್ಲ. ಅವರು ಸೆಲೆಕ್ಟೆಡ್ ಸಿಎಂ. ಯಡಿಯೂರಪ್ಪ ಸಹ ನೇಮಕವಾದ ಸಿಎಂ ಎಂದು ಗೇಲಿ ಮಾಡಿದ ಸಿದ್ದರಾಮಯ್ಯ, ಇವರಿಗೆ ಜನ ಬಹುಮತ ಕೊಟ್ಟಿರಲಿಲ್ಲ. ಇವರು ಯಾವ ರೀತಿ ಬಂದರು ಅಂತ ಎಲ್ಲರಿಗೂ ಗೊತ್ತಿದೆ ಎಂದರು.