ಬಾಗಲಕೋಟೆ: ಜಾತಿ ಜನಗಣತಿ ವರದಿ (Caste Census) ಸಲ್ಲಿಸುವ ಮುನ್ನವೇ ಚರ್ಚೆ ಶುರುವಾಗಿದೆ. ವರದಿಯಲ್ಲೇ ಏನಿದೆ ಎಂದು ಅದನ್ನು ಬೇಡ ಎನ್ನುವವರಿಗೂ ಗೊತ್ತಿಲ್ಲ. ಇನ್ನು ನಮ್ಮ ಮೇಲೆ ಸಮಾಜ ಒಡೆಯುವ ಆರೋಪವನ್ನು ಮಾಡಲಾಗುತ್ತಿದೆ. ನಾವು ಏಕೆ ಸಮಾಜವನ್ನು ಒಡೆಯುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಪ್ರಶ್ನೆ ಮಾಡಿದರು.
ಗುರುವಾರ (ನ.23) ಬಾಗಲಕೋಟೆಯ ನವನಗರದ ಹೆಲಿಪ್ಯಾಡ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ವರದಿ ಸಲ್ಲಿಕೆಯಾದ ನಂತರ ನೋಡೋಣ. ಸುಮ್ಮನೆ ಊಹೆಗಳ ಮೇಲೆ ಮಾತನಾಡುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.
ಇದನ್ನೂ ಓದಿ: Caste Census : ಜಾತಿ ಗಣತಿ ವರದಿ ಅವೈಜ್ಞಾನಿಕ ಅನ್ನೋದು ತಪ್ಪೆಂದ ಕಾಂತರಾಜು! ಬಿಜೆಪಿ ಮೇಲೆ ಕೆಂಡ
ಕರೆದು ಮಾತನಾಡುವೆ
ಮೂಲ ವರದಿ ಕಳೆದಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ನೀಡಿರುವ ಹೇಳಿಕೆ ಬಗ್ಗೆ ಅವರನ್ನು ಕರೆದು ಮಾತನಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಹೇಳಿಕೆ ನೀಡುವಾಗ ಸತ್ಯಾಂಶ ಆಧರಿಸಿರಬೇಕು
ಜಾತಿ ಜನಗಣತಿ ಸಮಾಜವನ್ನು ಒಡೆಯುತ್ತದೆ ಎಂದಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಅವರಿಗೆ ವರದಿಯಲ್ಲಿ ಏನಿದೆ ಎಂದು ಗೊತ್ತಿದೆಯೇ? ಯಾರೇ ಆಗಲಿ ಗೊತ್ತಿಲ್ಲದೆ ಮಾತನಾಡಬಾರದು. ಸಮಾಜವನ್ನು ಏಕೆ ಒಡೆಯುತ್ತೇವೆ? ನಿತೀಶ್ ಕುಮಾರ್ ಬಿಹಾರದಲ್ಲಿ ಜಾತಿಗಣತಿ ಸ್ವೀಕರಿಸಿದ್ದಾರೆ. ಅವರೇನು ಸಮಾಜವನ್ನು ಒಡೆದುಬಿಟ್ಟರೇ ಎಂದು ಪ್ರಶ್ನೆ ಮಾಡಿದರು. ಅಲ್ಲದೆ, ಯಾವುದೇ ಹೇಳಿಕೆ ನೀಡುವಾಗ ಅದು ಸತ್ಯಾಂಶದ ಮೇಲೆ ಅವಲಂಬಿತವಾಗಿರಬೇಕು ಎಂದರು.
ಬಿಜೆಪಿಯಲ್ಲಿ ಬೆಂಕಿ ಹತ್ತಿಕೊಂಡಿದೆ
ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ವಿರೋಧ ಪಕ್ಷದ ನಾಯಕನ ಆಯ್ಕೆ ಹಾಗೂ ಪಕ್ಷದ ರಾಜ್ಯಾಧ್ಯಕ್ಷರ ಆಯ್ಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿ. ಸೋಮಣ್ಣ ಡಿ. 6ರ ನಂತರ ತಮ್ಮ ಅನಿಸಿಕೆ ತಿಳಿಸುವ ಬಗ್ಗೆ ಹೇಳಿದ್ದಾರೆ. ಬಿಜೆಪಿ ಪಕ್ಷದಲ್ಲಿ ಬಿ.ವೈ. ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ಹಾಗೂ ಆರ್.ಅಶೋಕ್ ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ನೇಮಿಸಿದ ಮೇಲೆ ಬೆಂಕಿ ಹೊತ್ತಿಕೊಂಡಿದೆ. ಬಹಳಷ್ಟು ಜನರಿಗೆ ಅಸಮಾಧಾನವಾಗಿದೆ. ಇದು ಏನಾಗುತ್ತದೆ ಎಂದು ಗೊತ್ತಿಲ್ಲ. ಅದು ಜ್ವಾಲೆಯಾಗುತ್ತದೆಯೋ ಅವರ ಬುಡಕ್ಕೆ ಬೆಂಕಿ ಹೊತ್ತಿಕೊಳ್ಳುತ್ತದೆಯೋ ಗೊತ್ತಿಲ್ಲ. ಬೆಂಕಿ ಅಂತೂ ಹತ್ತಿಕೊಂಡಿದೆ ಎಂದು ಹೇಳಿದರು.
ಇದನ್ನೂ ಓದಿ: Caste Census : ಜಾತಿ ಗಣತಿ ವರದಿ ಅವೈಜ್ಞಾನಿಕ ಅನ್ನೋದು ತಪ್ಪೆಂದ ಕಾಂತರಾಜು! ಬಿಜೆಪಿ ಮೇಲೆ ಕೆಂಡ
ಪಕ್ಷಕ್ಕೆ ಸೇರ್ಪಡೆಯಾಗುವವರು ನಮ್ಮ ಸಿದ್ಧಾಂತಕ್ಕೆ ಬದ್ಧರಾಗಿರಬೇಕು
ನಾವು ಯಾರನ್ನೂ ಕಾಂಗ್ರೆಸ್ಸಿಗೆ ಕರೆಯುವುದಿಲ್ಲ. ಅವರಾಗಿಯೇ ಬಂದರೆ ಸೇರಿಸಿಕೊಳ್ಳುತ್ತೇವೆ. ನಾನು ಯಾರನ್ನೂ ಸಂಪರ್ಕಿಸಿಲ್ಲ . ಯಾರು ನಮ್ಮ ನಾಯಕತ್ವವನ್ನು ಒಪ್ಪಿಕೊಂಡು ಅವರಾಗಿಯೇ ಬರುತ್ತಾರೋ ಅವರನ್ನು ಸೇರಿಸಿಕೊಂಡಿದ್ದೇವೆ. ನನ್ನ ರಾಜಕೀಯ ಜೀವನದಲ್ಲಿ ಯಾರನ್ನೂ ಬನ್ನಿ ಎಂದು ಕರೆಯಲು ಹೋಗಿಲ್ಲ. ನಮ್ಮ ಸಿದ್ಧಾಂತಕ್ಕೆ ಬದ್ಧರಾಗಿರಬೇಕಲ್ಲ. ಬಿಜೆಪಿಯಲ್ಲಿ ಬಹಳ ವರ್ಷ ಇದ್ದವರು ಆ ಸಿದ್ಧಾಂತವನ್ನು ಒಪ್ಪಿರುತ್ತಾರೆ. ಅದನ್ನು ಬಿಟ್ಟು ಕಾಂಗ್ರೆಸ್ ಸಿದ್ಧಾಂತವನ್ನು ಒಪ್ಪಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.