ಬೆಂಗಳೂರು: ಯತೀಂದ್ರ ಸಿದ್ದರಾಮಯ್ಯ (yathindra siddaramaiah) ಪರವಾಗಿ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DCM DK Shivakumar) ಬ್ಯಾಟ್ ಬೀಸಿದ್ದಾರೆ. ಅಲ್ಲದೆ, ಅವರ ಮೇಲೆ ವರ್ಗಾವಣೆ ದಂಧೆ ಆರೋಪ ಮಾಡಿರುವ ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಂದೆ ಸಿದ್ದರಾಮಯ್ಯ ಅವರಿಗಾಗಿ ಯತೀಂದ್ರ ಕ್ಷೇತ್ರವನ್ನೇ ತ್ಯಾಗ ಮಾಡಿದವರು. ಸ್ವತಃ ಪರಿಷತ್ ಸದಸ್ಯ ಸ್ಥಾನ ನೀಡುವುದಾಗಿ ಹೇಳಿದರೂ ನಿರಾಕರಿಸಿದವರು. ಅಂಥವರ ಮೇಲೆ ವೃಥಾ ಆರೋಪ ಮಾಡೋದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಎಚ್.ಡಿ. ಕುಮಾರಸ್ವಾಮಿ ಅವರು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿದ್ದವರು. ಅವರು ಏನಾದರೂ ಮಾತನಾಡಿದರೆ ತೂಕ ಇರಬೇಕು. ಆಡಳಿತ ಪಕ್ಷದವರು ಗಢಗಢ ಅಂತಾ ನಡುಗುತ್ತಿರಬೇಕು. ಏನಾದರೂ ಮಾತನಾಡಿದರೆ ಹಾಗಿರಬೇಕು. ಆದರೆ, ಕುಮಾರಸ್ವಾಮಿ ಬೆಳಗ್ಗೆ ಎದ್ದರೆ ಏನೇನೋ ಮಾತನಾಡುತ್ತಾರೆ ಎಂದು ಕಿಡಿಕಾರಿದರು.
ಈ ವಿಚಾರವನ್ನು ದೊಡ್ಡದು ಮಾಡೋದು ಸರಿಯಲ್ಲ
ಪಾಪ ಯತೀಂದ್ರ ಸಿದ್ದರಾಮಯ್ಯ ಅವರು ತಂದೆ ಪರವಾಗಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರದ ಕೆಲಸದ ವಿಚಾರವಾಗಿ ಮಾತನಾಡಿದರೆ ಅದನ್ನೇ ದೊಡ್ಡದು ಮಾಡೋದು ಸರಿಯಲ್ಲ. ಅಧಿವೇಶನದಲ್ಲಿ ಕುಮಾರಸ್ವಾಮಿ ಏನು ಬಿಚ್ಚಿಡುತ್ತಾರೋ ಬಿಚ್ಚಿಡಲಿ ಎಂದು ಡಿ.ಕೆ. ಶಿವಕುಮಾರ್ ಸವಾಲು ಹಾಕಿದರು.
ಆರ್. ಅಶೋಕ್ ಅಣ್ಣ ಆಯ್ಕೆಯಿಂದ ಸಂತೋಷ ಆಗಿದೆ
ವಿರೋಧ ಪಕ್ಷ ನಾಯಕನ ಆಯ್ಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ನೋಡಿ ಅಶೋಕ್ ಅಣ್ಣ ಅವರು ಹಿರಿಯರಿದ್ದಾರೆ. ಏಳು ಬಾರಿ ಎಂಎಲ್ಎ ಆಗಿದ್ದಾರೆ. ಅವರಿಗೆ ದೊಡ್ಡ ಸ್ಥಾನ ಸಿಕ್ಕಿದೆ. ವಿರೋಧ ಪಕ್ಷದ ಸ್ಥಾನ ಅಂದರೆ ಸಂವಿಧಾನದಲ್ಲಿರೋ ಒಂದು ಉನ್ನತ ಸ್ಥಾನ ಸಿಕ್ಕಿದೆ. ಅದಕ್ಕೆ ಬಹಳ ಸಂತೋಷ ಆಗಿದೆ. ಅವರು ಹಿರಿಯರಿದ್ದಾರೆ. ಪಕ್ಷದಲ್ಲಿ ನಿಷ್ಠೆಯಿಂದ ನಡೆದುಕೊಂಡು ಬಂದಿದ್ದಾರೆ. ಅವರಿಗೆ ಶುಭವಾಗಲಿ, ಉತ್ತಮವಾಗಿ ಜವಾಬ್ದಾರಿ ನಿಭಾಯಿಸಲಿ. ಅವರ ಅನುಭವದ ಜ್ಞಾನಭಂಡಾರ, ಅನೇಕ ವಿಚಾರಗಳಿಂದ ಸರ್ಕಾರವನ್ನು ತಿದ್ದುವಂತಹ ಕೆಲಸ ಆಗಲಿ. ಅವರ ಆಯ್ಕೆಯಿಂದ ನನಗೆ ಬಹಳ ಸಂತೋಷ ಆಗಿದೆ. ಹಿರಿಯರನ್ನು ಬಿಜೆಪಿ ಕೊನೆಗೆ ಆಯ್ಕೆ ಮಾಡಿದರಲ್ಲ ಎಂಬುದೇ ಸಂತೋಷ ಎಂದು ಹೇಳಿದರು.
ಇದನ್ನೂ ಓದಿ: Opposition Leader : ವಿಶ್ವಾಸ ಸೂತ್ರ ಹಿಡಿದ ಸಾಮ್ರಾಟ್; ಬೊಮ್ಮಾಯಿ, ಅಶ್ವತ್ಥ್ ಭೇಟಿ
ಬಿಜೆಪಿ ಅಸಮಾಧಾನದ ಬಗ್ಗೆ ನಾನು ಮಾತನಾಡಲ್ಲ
ಬಿಜೆಪಿ ಪಕ್ಷದಲ್ಲಿ ಅಸಮಾಧಾನ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ಅದು ಅವರ ಪಾರ್ಟಿಯ ಆಂತರಿಕ ವಿಚಾರ. ಅದು ಮೊದಲಿನಿಂದಲೂ ಬಂದಿದೆ. ಹೊಸದೇನಲ್ಲ. ಅವರ ಪಾರ್ಟಿ ವಿಚಾರವನ್ನು ನಾನು ಯಾಕೆ ಮಾತನಾಡಲಿ? ಪಾರ್ಟಿ ಆ ರೀತಿ ನಡೆದುಕೊಂಡು ಬಂದಿದೆ ಅದಕ್ಕೆ ನಾನು ಮಾತನಾಡಲು ಹೋಗುವುದಿಲ್ಲ ಎಂದು ಹೇಳಿದರು.