Site icon Vistara News

ಮಾಜಿ ಸಚಿವ ರಾಯರಡ್ಡಿ ಆರೋಪ ದುಸ್ಸಾಹಸ ಮಾಡುವುದು ಬೇಡ ಎಂದ ಸಚಿವ ಅಶ್ವತ್ಥನಾರಾಯಣ

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್  ಸಮ್ಮಿಶ್ರ ಸರಕಾರದ ಅವಧಿಯಲ್ಲಿ  ಲ್ಯಾಪ್‌ಟಾಪ್ ಖರೀದಿಯ ನಡೆದಿರಬಹುದಾದ ಅಕ್ರಮಗಳನ್ನು ಬಿಜೆಪಿ ಸರಕಾರದ ತಲೆಗೆ ಕಟ್ಟಲು ಕಾಂಗ್ರೆಸ್ ಪಕ್ಷದ ನಾಯಕ ಬಸವರಾಜ ರಾಯರಡ್ಡಿ ಪ್ರಯತ್ನಿಸಿರುವುದು ದುಸ್ಸಾಹಸ. ಇಂದು ಆ ಪಕ್ಷ ಇಂಗು ತಿಂದ ಮಂಗನ ಸ್ಥಿತಿಯಲ್ಲಿ ಇರುವುದನ್ನು ಸೂಚಿಸುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಕುಟುಕಿದ್ದಾರೆ.

ರಾಯರಡ್ಡಿ ಅವರ ಆರೋಪಗಳಿಗೆ ಬುಧವಾರ ಪ್ರತಿಕ್ರಿಯಿಸಿರುವ ಅವರು, ‘ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಈ ವ್ಯಕ್ತಿ ಉನ್ನತ ಶಿಕ್ಷಣ ಸಚಿವರಾಗಿದ್ದರು. ನಂತರ ಕಾಂಗ್ರೆಸ್ ಪಕ್ಷವು ಜೆಡಿಎಸ್ ಜತೆಗೂಡಿ ಸರಕಾರ ರಚಿಸಿತು. ಆಗ ಒಂದು ಲ್ಯಾಪ್‌ಟಾಪ್‌ಗೆ ₹28,320 ನಿಗದಿ ಪಡಿಸಿ ಖರೀದಿಸಲು ಟೆಂಡರ್ ಮತ್ತು ಖರೀದಿ ಆದೇಶವನ್ನೆಲ್ಲ ಹೊರಡಿಸಲಾಯಿತು. ನಂತರ ಬಂದ ಬಿಜೆಪಿ ಸರಕಾರ ಆ ಲ್ಯಾಪ್‌ಟಾಪ್‌ಗಳನ್ನು ಸ್ವೀಕರಿಸುವ ಕೆಲಸವನ್ನು ಮಾತ್ರ ಮಾಡಿದೆ. ಇದು ಅವರಿಗೂ ಗೊತ್ತಿದೆ. ಆದರೂ ಅವರು, ಕೋತಿ ತಾನು ಮೊಸರು ತಿಂದು ಮೇಕೆಯ ಗಡ್ಡಕ್ಕೆ ಒರೆಸಿದಂತಹ ಕೆಲಸಕ್ಕೆ ಇಳಿದಿದ್ದಾರೆ ಎಂದು ಖಂಡಿಸಿದ್ದಾರೆ.

ಬಿಜೆಪಿ ಮೇಲೆ ಕೆಸರೆರಚುವ ಭರದಲ್ಲಿ ರಾಯರಡ್ಡಿ ತಮ್ಮ ಪಕ್ಷ ಎಸಗಿರಬಹುದಾದ ಅಕ್ರಮಗಳನ್ನೇ ಬಯಲು ಮಾಡಿದ್ದಾರೆ. ಬಿಜೆಪಿ ಸರಕಾರ ಬಂದ ಬಳಿಕ, ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಿಂತ ಟ್ಯಾಬ್ ಬಳಕೆ ಸೂಕ್ತವೆಂದು ಪರಿಗಣಿಸಿ, ಸ್ಯಾಮ್‌ಸಂಗ್‌ ಬ್ರ್ಯಾಂಡ್‌ನ ಟ್ಯಾಬ್ಲೆಟ್‌ಗಳನ್ನೇ ಕೊಡುತ್ತಿದೆ. ಇದರಲ್ಲಿ ಗುಣಮಟ್ಟ ಇಲ್ಲ ಎಂದು ಅವರು ಆರೋಪಿಸಿರುವುದು ಉಡಾಫೆಯ ಪರಮಾವಧಿ ಎಂದು ಅಶ್ವತ್ಥನಾರಾಯಣ ಟೀಕಿಸಿದರು.

ರಾಯರಡ್ಡಿ ಅವರಿಗೆ ನೈತಿಕ ಪ್ರಜ್ಞೆ ಇಲ್ಲ. ಯಾಕೆಂದರೆ, ಅವರಿರುವ ಕಾಂಗ್ರೆಸ್ಸಿನ ನರನಾಡಿಗಳಲ್ಲೆಲ್ಲ ಭ್ರಷ್ಟಾಚಾರ ಹರಿಯುತ್ತಿದೆ. ಬಿಜೆಪಿ ಸರಕಾರ ಬಂದಮೇಲೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಪಾರದರ್ಶಕತೆ, ಉತ್ತರದಾಯಿತ್ವ, ಸ್ವಾಯತ್ತತೆ ಎಲ್ಲವನ್ನೂ ತರಲಾಗಿದೆ. ರಾಯರಡ್ಡಿ ಆತ್ಮಾವಲೋಕನ ಮಾಡಿಕೊಳ್ಳದೆ, ಬಿಜೆಪಿ ಸರಕಾರದ ಮೇಲೆ ಕೆಸರು ಎರಚಲು ಮುಂದಾಗಿರುವುದು ನಿರ್ಲಜ್ಜತೆಯ ಪರಮಾವಧಿ ಎಂದು ಅಶ್ವತ್ಥ ನಾರಾಯಣ ಟೀಕಿಸಿದ್ದಾರೆ.

ಇದನ್ನು ಓದಿ | ಅಶ್ವತ್ಥನಾರಾಯಣಗೆ ತಾಕತ್ ಇದ್ದರೆ ನನ್ನ ವಿರುದ್ಧ ದಾಖಲೆ ಬಿಡುಗಡೆ ಮಾಡಲಿ: H.D. ಕುಮಾರಸ್ವಾಮಿ ಸವಾಲು

Exit mobile version