Site icon Vistara News

Dr CN Manjunath : ಡಾ. ಸಿ.ಎನ್‌ ಮಂಜುನಾಥ್‌ ರಾಜಕೀಯ ಪ್ರವೇಶ ಇಲ್ಲ; ವದಂತಿಗೆ ತೆರೆ ಎಳೆದ ದೇವೇಗೌಡ್ರು

Dr CN Manjunath HD Devegowda

ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಜಯದೇವ ಹೃದ್ರೋಗ ಚಿಕಿತ್ಸಾ ಸಂಸ್ಥೆಯನ್ನು (Jayadeva Hospital) ಖಾಸಗಿ ಆಸ್ಪತ್ರೆಗಿಂತಲೂ ಅದ್ಭುತವಾಗಿ ಕಟ್ಟಿ ಬೆಳೆಸಿದ, ಅದರ ನಿರ್ದೇಶಕರಾಗಿ ನಿವೃತ್ತರಾದ ಡಾ. ಸಿ.ಎನ್‌. ಮಂಜುನಾಥ್‌ (Dr CN Manjunath) ಅವರು ರಾಜಕೀಯ ಪ್ರವೇಶ ಮಾಡುವುದಿಲ್ಲ, ಅವರು ಲೋಕಸಭಾ ಚುನಾವಣೆಯಲ್ಲಿ (Parliament Election 2024) ಸ್ಪರ್ಧೆ ಮಾಡುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರು (HD Devegowda).

ಸೋಮವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು ಮಂಜುನಾಥ್‌ ಅವರು ಬಿಜೆಪಿ -ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ವದಂತಿಗೆ ತೆರೆ ಎಳೆದರು.

ಜಯದೇವ ಸಂಸ್ಥೆಯಿಂದ ನಿವೃತ್ತರಾದ ಬಳಿಕ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಅವರ ಸೇವೆಯನ್ನು ರಾಷ್ಟ್ರ ಮಟ್ಟದಲ್ಲಿ ಬಳಸಿಕೊಳ್ಳುವುದಕ್ಕಾಗಿ ಬಿಜೆಪಿ ಕೂಡಾ ಅವರ ಸ್ಪರ್ಧೆಗೆ ಒತ್ತು ನೀಡಲಿದೆ. ಸ್ವತಃ ಅಮಿತ್‌ ಶಾ ಮತ್ತು ಮೋದಿ ಅವರೇ ಈ ವಿಚಾರದಲ್ಲಿ ಉತ್ಸುಕರಾಗಿದ್ದಾರೆ. ಅವರು ಮುಂದೆ ದೇಶದ ಆರೋಗ್ಯ ಸಚಿವರಾಗಲೂಬಹುದು ಎಂಬವರೆಗೆ ಮಾತುಗಳು ಹರಿದಾಡಿದ್ದವು.

ಅವರು ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಬಹುದು, ಇದು ಸುಮಲತಾ ಅವರನ್ನು ಸಮಾಧಾನ ಮಾಡಲು ಒಂದು ಸಕಾರಣವೂ ಆದೀತು. ಆವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿದರೆ ಕಾಂಗ್ರೆಸ್‌ನ ಹಾಲಿ ಸಂಸದ ಡಿ.ಕೆ. ಸುರೇಶ್‌ ಅವರಿಗೆ ಪ್ರಬಲ ಪ್ರತಿಸ್ಪರ್ಧಿ ಆದಾರು ಎಂಬ ಚರ್ಚೆಯೂ ನಡೆದಿತ್ತು.

ಇದೆಲ್ಲದರ ಬಗ್ಗೆ ಪ್ರತಿಕ್ರಿಯಿಸಿದ ಅವರು ಎಲ್ಲ ಕಡೆಯಿಂದ ಚರ್ಚೆ ನಡೆಯುತ್ತಿದೆ. ಆದರೆ, ನಾನು ಈ ಬಗ್ಗೆ ತೀರ್ಮಾನ ಮಾಡಿಲ್ಲ ಎಂದಿದ್ದರು. ಇದೀಗ ಮಾಜಿ ಪ್ರಧಾನಿ ದೇವೇಗೌಡರು ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಹಾಗಿದ್ದರೆ ದೇವೇಗೌಡರು ಹೇಳಿದ್ದೇನು?

  1. ಮಂಜುನಾಥ್‌ ಅವರು ಇಡೀ ದೇಶಾದ್ಯಂತ ತಮ್ಮದೇ ಆದ ಹೆಸರು ಮಾಡಿದವರು. ಇಂತಹ ರಾಜಕೀಯ ಪರಿಸ್ಥಿತಿಯಲ್ಲಿ ಅಂತವರು ಬರೋದು ಸರಿಯಲ್ಲ.
  2. ಅವರಿಗೆ ಒಂದು ಒಳ್ಳೆಯ ಸ್ಥಾನವಿದೆ. ಮುಗಿಲೆತ್ತರದ ಹೆಸರಿದೆ. ಇಂತಹ ಸಮಯದಲ್ಲಿ ರಾಜಕೀಯ ಪ್ರವೇಶ ಮಾಡಿ ಅಂತ ನಾವು ಒತ್ತಾಯಿಸುವುದಿಲ್ಲ.
  3. ಡಾ. ಸಿ.ಎನ್‌ ಮಂಜುನಾಥ್‌ ಅವರ ವ್ಯಕ್ತಿತ್ವಕ್ಕೆ ಕಳಂಕ ತರುವ ತೀರ್ಮಾನ ನಾವು ಮಾಡಲ್ಲ. ಹಾಗಾಗಿ ಸ್ಪರ್ಧೆ ಮಾಡಲ್ಲ.

ಇದನ್ನೂ ಓದಿ : Dr. CN Manjunath : ಲೋಕಸಭೆ ಸ್ಪರ್ಧೆಗೆ ನಿರ್ಧಾರ ಮಾಡಿಲ್ಲ, ಆಲೋಚನೆಯಲ್ಲಿದ್ದೇನೆ ಎಂದ ಡಾ. ಮಂಜುನಾಥ್‌

ಎಚ್‌.ಡಿ ಕುಮಾರಸ್ವಾಮಿ ಸ್ವರ್ಧೆ ಮಾಡ್ತಾರಾ?

ಬಿಜೆಪಿ ಮತ್ತು ಜೆಡಿಎಸ್‌ ನಡುವಿನ ಸೀಟು ಹಂಚಿಕೆ ಮ್ತು ಮಾಜಿ ಪ್ರಧಾನಿ ಎಚ್‌.ಡಿ ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ಕೇಳಿದಾಗ, ಇನ್ನೊಂದು ವಾರದಲ್ಲಿ ಸೀಟು ಹಂಚಿಕೆ ಬಗ್ಗೆ ತೀರ್ಮಾನ ಆಗುತ್ತದೆ. ಯಾವ್ಯಾವ ಕ್ಷೇತ್ರ ಅನ್ನೋದನ್ನು ಬಿಜೆಪಿಯ ಹಿರಿಯ ನಾಯಕರಾದ ಅಮಿತ್ ಶಾ ಮತ್ತು ಜೆ.ಪಿ. ನಡ್ಡಾ ತೀರ್ಮಾನ ಮಾಡ್ತಾರೆ. ಕುಮಾರಸ್ವಾಮಿ ಸ್ಪರ್ದೆ ವಿಚಾರವನ್ನು ನರೇಂದ್ರ ಮೋದಿ ಮತ್ತು ಅಮಿತ್ ಶಾ ಕೂತು ಚರ್ಚೆ ಮಾಡ್ತಾರೆ ಎಂದರು.

ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಸಿಎಂ ಮತ್ತು ಗೃಹ ಸಚಿವರಿಬ್ಬರ ಹೇಳಿಕೆಯನ್ನೂ ಗಮನಿಸಿದ್ದೇನೆ. ಈ ವಿಚಾರದಲ್ಲಿ ಸರ್ಕಾರ ಹಿಂದೆ ಬಿದ್ದಿಲ್ಲ ಎಂದು ಅಭಿಪ್ರಾಯಪಟ್ಟರು. ವಿಧಾನ ಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ವಿಚಾರದ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಡಲ್ಲ ಎಂದರು ದೇವೇಗೌಡರು.

Exit mobile version