ಬೆಂಗಳೂರು: ರಾಜ್ಯದಲ್ಲಿ ಹಿಂದೆಂದೂ ಕಂಡು ಕೇಳರಿಯದ ಭೀಕರ ಬರಕ್ಕೆ ರಾಜ್ಯ (Drought in Karnataka) ತುತ್ತಾಗಿದೆ. ಮಳೆ ಇಲ್ಲದೆ ಜನ ಕಂಗೆಟ್ಟಿದ್ದಾರೆ. ಈಗಾಗಲೇ 216 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಈಗ ಮತ್ತೂ 7 ತಾಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರ್ಕಾರ (Karnataka Government) ಘೋಷಣೆ ಮಾಡಿದೆ. ಈ ಮೂಲಕ ರಾಜ್ಯದಲ್ಲಿ ಬರಕ್ಕೆ ತುತ್ತಾದ ತಾಲೂಕುಗಳ ಸಂಖ್ಯೆ ಬರೋಬ್ಬರಿ 223!
ರಾಜ್ಯದಲ್ಲಿ ಒಟ್ಟು 236 ತಾಲೂಕುಗಳು ಇದ್ದು, ಇವುಗಳಲ್ಲಿ 223 ತಾಲೂಕುಗಳು ಬರಪೀಡಿತವಾಗಿದ್ದರಿಂದ ಇನ್ನು ಬಾಕಿ ಉಳಿದಿರುವುದು ಕೇವಲ 13 ತಾಲೂಕುಗಳು ಮಾತ್ರ! ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಈ ತಾಲೂಕುಗಳೂ ಬರಕ್ಕೆ ತುತ್ತಾಗಿ ಶ್ರೀಗಂಧದ ಬೀಡು ಕರ್ನಾಟಕ “ಬರದ ನಾಡು” ಎಂಬ ಹಣೆಪಟ್ಟಿಯನ್ನು ಹೊತ್ತುಕೊಳ್ಳಲಿದೆ.
ರಾಜ್ಯದಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಮತ್ತೆ 7 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ಅದರಂತೆ ಔರಾದ್, ಬೀದರ್, ಚಿಟಗುಪ್ಪ, ಹುಮುನಾಬಾದ್, ಕಮಲನಗರ, ಸಿಂಧನೂರು ಮತ್ತು ತಿಕೋಟಾ ತಾಲೂಕುಗಳನ್ನು ಬರಪೀಡಿತ ಎಂದು ಉಲ್ಲೇಖಿಸಿ ಆದೇಶಿಸಲಾಗಿದೆ. ಹೀಗಾಗಿ ರಾಜ್ಯದಲ್ಲಿ ಒಟ್ಟು ರಾಜ್ಯಲ್ಲಿ 223 ಬರ ಪೀಡಿತ ತಾಲೂಕುಗಳು ಆದಂತಾಗಿವೆ.
ಬರಕ್ಕೆ 39.74 ಲಕ್ಷ ಹೆಕ್ಟೇರ್ ಬೆಳೆ ನಷ್ಟ
ರಾಜ್ಯದಲ್ಲಿ ಭೀಕರ ಬರಗಾಲ ಭಾರಿ ಸಂಕಷ್ಟವನ್ನು ತಂದೊಡ್ಡಿದೆ. ರಾಜ್ಯದಲ್ಲಿ ಆಹಾರ ಕೊರತೆ (Food Scarcity) ಎದುರಾಗಲಿದೆಯೇ ಎಂಬ ಆತಂಕವನ್ನು ತಂದೊಡ್ಡಿದೆ. ಮಳೆ ಪ್ರಮಾಣ ತೀವ್ರ ತರನಾಗಿ ಕುಸಿದ ಬೆನ್ನಲ್ಲೇ ಇಳುವರಿ ಸಹ ಕುಸಿತ ಕಂಡಿದೆ. ಪ್ರಮುಖ ಬೆಳೆಗಳು (Crop loss) ನೆಲ ಕಚ್ಚಿವೆ. ಲಕ್ಷಾಂತರ ಹೆಕ್ಟೇರ್ ಬೆಳೆ (Lakhs of hectares of crops destroyed) ನಾಶಕ್ಕೊಳಪಟ್ಟಿವೆ. ಪ್ರಮುಖವಾಗಿ ಭತ್ತ, ತೊಗರಿ, ಜೋಳ, ಶೇಂಗಾ, ಸೂರ್ಯಕಾಂತಿ, ಸೋಯಾಬೀನ್, ಕಬ್ಬು, ಹೆಸರು ಬೇಳೆ ಹಾಗೂ ರಾಗಿ ಬೆಳೆಗಳು (Paddy, tur, jowar, groundnut, sunflower, soyabean, sugarcane, moong dal and ragi crops) ಭಾರಿ ಪ್ರಮಾಣದಲ್ಲಿ ನಾಶವಾಗಿವೆ.
ರಾಜ್ಯದಲ್ಲಿ ಮಳೆಯಾಗದೆ ಬರ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಒಟ್ಟು 208 ತಾಲೂಕಿನಲ್ಲಿ ಬರ ಘೋಷಣೆ ಮಾಡಿದೆ. ಬರದ ಹಿನ್ನೆಲೆಯಲ್ಲಿ ನಡೆಸಿದ ಅಧ್ಯಯನದ ಅನುಸಾರ ಬೆಳೆ ನಷ್ಟದ ಮಾಹಿತಿಯನ್ನು ರಾಜ್ಯ ಸರ್ಕಾರ ನೀಡಿದೆ. ಒಟ್ಟು 39,74,741.34 ಹೆಕ್ಟೇರ್‌ನಷ್ಟು ಫಸಲು ನಷ್ಟವಾಗಿದೆ ಎಂಬ ಆತಂಕಕಾರಿ ಮಾಹಿತಿಯು ಲಭ್ಯವಾಗಿದೆ.
ಭತ್ತ, ರಾಗಿ, ಬೇಳೆಕಾಳು, ಕಡಲೆ ಬೀಜ, ಹತ್ತಿ, ಕಬ್ಬು, ಹೊಗೆಸೊಪ್ಪು ಸೇರಿದಂತೆ ವಿವಿಧ ಬೆಳೆಗಳ ನಷ್ಟದ ಅಂದಾಜು ಪಟ್ಟಿಯನ್ನು ರಾಜ್ಯ ಸರ್ಕಾರವು ಅಧಿಕೃತವಾಗಿ ಬಿಡುಗಡೆ ಮಾಡಿದೆ.
ಇದನ್ನೂ ಓದಿ: Caste Census Report : ಜಾತಿ ಗಣತಿ ಮೂಲ ವರದಿಯೇ ನಾಪತ್ತೆ!?
ಬೆಳೆ ನಷ್ಟಕ್ಕೆ ಮಳೆ ಕೊರತೆಯೇ ಕಾರಣ
ಈ ವರ್ಷ ಮುಂಗಾರು ಕೈಕೊಟ್ಟಿದೆ. ಅಲ್ಲದೆ, ಹಿಂಗಾರು ಮಳೆ ಕೂಡ ವಾಡಿಕೆಗಿಂತ ಕಡಿಮೆ ಆಗಲಿದೆ. ರಾಜ್ಯದಲ್ಲಿ ಶೇಕಡಾ 28ರಷ್ಟು ಮಳೆ ಕೊರತೆಯಾಗಿದೆ. ಆಗಸ್ಟ್ ತಿಂಗಳಲ್ಲಿ ಶೇಕಡಾ 73ರಷ್ಟು ಮಳೆ ಕೊರತೆ ಆಗಿದೆ. ಇದರಿಂದಾಗಿ ಕೃಷಿ ಚಟುವಟಿಕೆಗೆ ತೀವ್ರ ಪೆಟ್ಟು ಬಿದ್ದಿದೆ. ಈಗ ಬೆಳೆ ಇಳುವರಿ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಹಸಿರು ಬರ ನಮಗೆ ಬಂದಿದೆ. ರೈತರು ಮತ್ತು ತಜ್ಞರ ಜತೆ ಮಾತನಾಡಿ ಬರ ಅಧ್ಯಯನ ಮಾಡಲಾಗಿದೆ. ಜೋಳ, ತೊಗರಿ, ಶೇಂಗಾ ಎಲ್ಲ ಬೆಳೆ ಹೊಲದಲ್ಲಿ ಕಾಣುತ್ತದೆ. ಆದರೆ, ಇಳುವರಿ ಮಾತ್ರ ಇಲ್ಲ ಎನ್ನುವಂತೆ ಆಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ