Site icon Vistara News

DV Sadananda Gowda : ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಡಿ.ವಿ. ಸದಾನಂದ ಗೌಡ

DV Sadananada Gowda

ಬೆಂಗಳೂರು: ಅತ್ಯಂತ ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಡಿ.ವಿ ಸದಾನಂದ ಗೌಡ (DV Sadananda Gowda) ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ (Parliament Election 2023) ಅವರಿಗೆ ಟಿಕೆಟ್‌ ನೀಡುವ ಬಗ್ಗೆ ಸಂಶಯಗಳಿದ್ದವು. ಈ ಹಿನ್ನೆಲೆಯಲ್ಲಿ ಕೇಂದ್ರ ನಾಯಕರ ಸೂಚನೆಯ ಮೇರೆಗೆ ಅವರು ಗೌರವಪೂರ್ವಕ ರಾಜಕೀಯ ನಿವೃತ್ತಿಯನ್ನು ಘೋಷಿಸಿದ್ದಾರೆ (Political Retirement) ಎಂದು ವಿಶ್ಲೇಷಿಸಲಾಗಿದೆ. ಅವರಿಗೆ ಈಗ 70 ವರ್ಷ ವಯಸ್ಸು.

ಬರ ಅಧ್ಯಯನ ತಂಡದ ಭಾಗವಾಗಿ ಹಾಸನ ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಅವರು ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ತಮ್ಮ ತೀರ್ಮಾನವನ್ನು ಪ್ರಕಟಿಸಿದರು.

ʻʻಚುನಾವಣಾ ರಾಜಕೀಯದಲ್ಲಿ ಮುಂದುವರಿಯದಿರಲು ನಿರ್ಧರಿಸಿದ್ದೇನೆ. ನನ್ನ 30 ವರ್ಷಗಳ ರಾಜಕೀಯ ಜೀವನದಲ್ಲಿ ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ನಾನು 10 ವರ್ಷ ಶಾಸಕನಾಗಿ, 20 ವರ್ಷ ಸಂಸದನಾಗಿ, ಒಂದು ವರ್ಷ ಮುಖ್ಯಮಂತ್ರಿಯಾಗಿ, 4 ವರ್ಷ ರಾಜ್ಯ ಪಕ್ಷದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ. ‘ನರೇಂದ್ರ ಮೋದಿ ಸರ್ಕಾರದಲ್ಲಿ ಏಳು ವರ್ಷ ಸಂಪುಟ ಸಚಿವನಾಗಿ ಸೇವೆ ಸಲ್ಲಿಸಿದ್ದೇನೆ. ನಾನು ಹೆಚ್ಚು ಆಸೆಪಟ್ಟರೆ, ನನ್ನನ್ನು ಸ್ವಾರ್ಥಿ ಎಂದು ಕರೆಯುತ್ತಾರೆʼʼ ಎಂದು ಸದಾನಂದ ಗೌಡ ಅವರು ಎಂದಿನ ತಮ್ಮ ಮುಗುಳು ನಗುವಿನೊಂದಿಗೇ ನಿರ್ಧಾರವನ್ನು ಹಂಚಿಕೊಂಡರು.

ದಿಲ್ಲಿಗೆ ಕರೆಸಿಕೊಂಡು ಸಂದೇಶ ನೀಡಿದ ನಾಯಕರು

ಡಿ.ವಿ ಸದಾನಂದ ಗೌಡ ಅವರು ಕಳೆದ ಕೆಲವು ತಿಂಗಳುಗಳಿಂದ ರಾಜಕೀಯವಾಗಿ ತುಂಬ ಸಕ್ರಿಯವಾಗಿದ್ದರು. ರಾಜಕೀಯ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಲ್ಲಿದ್ದರು. ಬಿಜೆಪಿ ಕಚೇರಿಯಲ್ಲೂ ಪತ್ರಿಕಾಗೋಷ್ಠಿಗಳನ್ನು ನಡೆಸಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿಗಳನ್ನು ನಡೆಸಿದ್ದರು. ಈ ಹಂತದಲ್ಲಿ ಅವರು ಮತ್ತೆ ಸ್ಪರ್ಧೆಗೆ ಮುಂದಾಗುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು. ಇತ್ತೀಚೆಗೆ ಅವರನ್ನು ಕೇಂದ್ರ ನಾಯಕರು ದಿಲ್ಲಿಗೆ ಕರೆಸಿಕೊಂಡಿದ್ದರು.

ದಿಲ್ಲಿ ಭೇಟಿಯ ವೇಳೆ ಅವರನ್ನೇ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡುತ್ತಾರೆ ಎಂಬ ಸುದ್ದಿಯೂ ಹಬ್ಬಿತ್ತು. ಕೆಲವರು ರಾಜ್ಯದ ಸ್ಥಿತಿಗತಿ ಬಗ್ಗೆ ಅವರಿಂದ ಮಾಹಿತಿ ಪಡೆಯಲು ಕರೆಸಿಕೊಂಡಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಅಂತಿಮವಾಗಿ ಇದು ಮುಂದಿನ ಲೋಕಸಭಾ ಚುನಾವಣೆಯ ಕಣದಿಂದ ಹಿಂದೆ ಸರಿಯುವಂತೆ ಸೂಚನೆ ನೀಡಲು ಆಹ್ವಾನ ನೀಡಿದ್ದು ಎನ್ನುವುದು ಹಾಸನದಲ್ಲಿ ಅವರು ಆಡಿದ ಮಾತಿನಿಂದ ಸ್ಪಷ್ಟವಾಗಿದೆ.

ಇದನ್ನೂ ಓದಿ: BN Bacchegowda : ಮೋದಿ ಟಿಕೆಟ್‌ ಕೊಡಲ್ಲ ಅಂದಿದ್ದಾರೆ; ರಾಜಕೀಯ ನಿವೃತ್ತಿ ಘೋಷಿಸಿದ ಬಿ.ಎನ್‌ ಬಚ್ಚೇಗೌಡ

ಬಿಜೆಪಿ-ಜೆಡಿಎಸ್‌ ಮೈತ್ರಿ ಬಗ್ಗೆ ಸದಾನಂದ ಗೌಡರ ಅಸಮಾಧಾನ

ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸುವ ಹೊತ್ತಿನಲ್ಲಿ ಅವರು ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಮಾಡಿಕೊಳ್ಳುವ ವಿಚಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ನಿಜವೆಂದರೆ ಮೈತ್ರಿಯ ಭಾಗವಾಗಿ ಚಿಕ್ಕಬಳ್ಳಾಪುರ ಕ್ಷೇತ್ರ ಜೆಡಿಎಸ್‌ ಪಾಲಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿಯೂ ಡಿ.ವಿ. ಸದಾನಂದ ಗೌಡರು ಸಿಟ್ಟಿಗೆದ್ದಿರುವ ಮಾಹಿತಿ ಇದೆ.

ಎನ್‌ಡಿಎ ಮೈತ್ರಿಕೂಟದ ವಿಚಾರ ಸಂಬಂಧಿಸಿದಂತೆ ನಮ್ಮ ಕೇಂದ್ರ ನಾಯಕರು ನಿರ್ಧಾರ ಕೈಗೊಳ್ಳುತ್ತಾರೆ. ಆದರೆ, ನಮ್ಮ ಕಾರ್ಯಕರ್ತರು ಇದಕ್ಕೆ ಸಮ್ಮತಿ ಸೂಚಿಸಿಲ್ಲ. ಇಷ್ಟು ವರ್ಷ ವಿರೋಧಿಸಿಕೊಂಡು ಬಂದಿರುವ ಪಕ್ಷದೊಂದಿಗೆ ಏಕಾಏಕಿ ಮೈತ್ರಿ ಮಾಡಿಕೊಳ್ಳುವುದು ಸರಿಯಲ್ಲವೆಂದು ಕಾರ್ಯಕರ್ತರು ಹೇಳುತ್ತಿದ್ದಾರೆʼʼ ಎಂದಿರುವ ಡಿ.ವಿ. ಸದಾನಂದ ಗೌಡರು, ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆಗೆ ಸ್ಪರ್ಧಿಸುವುದು ಕಷ್ಟವಾಗುತ್ತದೆ. ರಾಜ್ಯದಲ್ಲಿ ಇದನ್ನು ಜಾರಿಗೆ ತರಲು ಸೂಕ್ತ ಮಾರ್ಗಸೂಚಿಗಳನ್ನು ನೀಡುವಂತೆ ನಾವು ಕೇಂದ್ರ ನಾಯಕರಿಗೆ ಮನವಿ ಮಾಡಿದ್ದೇವೆ ಎಂದಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ವಿರೋಧ ಪಕ್ಷದ ನಾಯಕರ ನೇಮಕ ವಿಳಂಬವಾಗುತ್ತಿರುವುದರಿಂದ ತಮಗೆ ಮುಜುಗರವಾಗಿದೆ ಎಂದು ಡಿ.ವಿ. ಸದಾನಂದ ಗೌಡರು ಒಪ್ಪಿಕೊಂಡರು.

Exit mobile version