Site icon Vistara News

DV Sadananda Gowda: ನಿವೃತ್ತಿ ಘೋಷಣೆ ಬೆನ್ನಲ್ಲೇ ವರಿಷ್ಠರ ವಿರುದ್ಧ ಡಿವಿಎಸ್‌ ಗರಂ; ರೆಬೆಲ್‌ ಆಗ್ತಾರಾ?

DV Sadananda gowda

ಬೆಂಗಳೂರು: ಚುನಾವಣಾ ರಾಜಕೀಯಕ್ಕೆ ನಿವೃತ್ತಿ (Political retirement) ಘೋಷಣೆ ಮಾಡಿರುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದ (Bangalore North MP) ಡಿ.ವಿ. ಸದಾನಂದ ಗೌಡ (DV Sadananada Gowda) ಅವರು ಅದರ ಬೆನ್ನಿಗೇ ವರಿಷ್ಠರ ಮೇಲೆ ಫುಲ್‌ ಗರಂ ಆಗಿದ್ದಾರೆ. ಆದರೆ, ಅವರು ಗರಂ ಆಗಿರುವುದು ತಮಗೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ಸಿಗುತ್ತಿಲ್ಲ ಎನ್ನುವುದಕ್ಕಲ್ಲ. ಬದಲಾಗಿ ರಾಜ್ಯದ ಬಿಜೆಪಿಯನ್ನು ಕಡೆಗಣಿಸುತ್ತಿರುವುದಕ್ಕಾಗಿ.

ವಿಸ್ತಾರ ನ್ಯೂಸ್‌ ಜತೆಗೆ ಮಾತನಾಡಿದ ಅವರು ತಮ್ಮ ನಿವೃತ್ತಿ ಘೋಷಣೆಯ ಕುರಿತು ಸಮಗ್ರ ಮಾಹಿತಿಯನ್ನು ಹಂಚಿಕೊಂಡರು. ಅದೇ ವೇಳೆ ವರಿಷ್ಠರು ರಾಜ್ಯ ನಾಯಕತ್ವವನ್ನು ಕಡೆಗಣನೆ ಮಾಡುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದೆ ಎಂಬ ಕಾರಣಕ್ಕೆ ಪಕ್ಷದ ರಾಜ್ಯ ಘಟಕವನ್ನು ಕಡೆಗಣಿಸುವುದು ಸರಿಯಲ್ಲ. ಪಕ್ಷದ ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕನ ನೇಮಕ ಮಾಡಲು ತಡ ಮಾಡುತ್ತಿರುವುದು ಸರಿಯಲ್ಲ ಎಂದು ಅವರು ಹೇಳಿಸಿದರು.

ಈ ವಿಚಾರದಲ್ಲಿ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ ಸದಾನಂದ ಗೌಡರು, ಲೋಕಸಭಾ ಚುನಾವಣೆ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆ ಅಲ್ಲ. ವರಿಷ್ಠರು ಮೊದಲು ರಾಜ್ಯ ನಾಯಕತ್ವದ ಮೇಲೆ ವಿಶ್ವಾಸವಿಡಬೇಕು. ವಿಧಾನ ಸಭಾ ಚುನಾವಣೆಯಲ್ಲಿ ನಾವು ಸೋತಿರಬಹುದು. ಲೋಕಸಭಾ ಚುನಾವಣೆಯಲ್ಲಿ ನಿಮಗೆ ಡಬಲ್ ಕೊಡ್ತೀವಿ ಎಂದು ಸದಾನಂದ ಗೌಡರು ಹೇಳಿದ್ದಾರೆ. ಈ ಮೂಲಕ ವರಿಷ್ಠರಿಗೆ ಗುದ್ದು ನೀಡಿದ್ದಾರೆ.

ನಿವೃತ್ತಿಗಾಗಿ ನನ್ನ ಮೇಲೆ ಯಾರೂ ಒತ್ತಡ ಹೇರಿಲ್ಲ, ಇದು ಸ್ವಂತ ನಿರ್ಧಾರ

ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಣೆ ಮಾಡಿದ್ದು ನನ್ನ ಸ್ವಂತ ನಿರ್ಧಾರ. ನನಗೆ ಮುಂದಿನ ಚುನಾವಣೆ ಟಿಕೆಟ್‌ ಕೊಡುವುದಿಲ್ಲ, ಹಾಗಾಗಿ ಹಿಂದೆ ಸರಿದಿದ್ದೇನೆ. ಹೈಕಮಾಂಡ್‌ ನಾಯಕರ ಸೂಚನೆಯ ಮೇರೆಗೆ ನಿವೃತ್ತಿ ಘೋಷಿಸಿದ್ದೇನೆ ಎನ್ನುವುದೆಲ್ಲವೂ ಸುಳ್ಳು. ನನಗೆ ಯಾವ ನಾಯಕರೂ ಈ ಬಗ್ಗೆ ಹೇಳಿಲ್ಲ. ಇದುವರೆಗೆ ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿತನದ ಬಗ್ಗೆ ಸಣ್ಣ ಚರ್ಚೆಯೂ ನಡೆದಿಲ್ಲ. ಈ ಹಂತದಲ್ಲಿ ನಾನು ತೆಗೆದುಕೊಂಡಿರುವುದು ನನ್ನದೇ ನಿರ್ಧಾರ ಎಂದು ಡಿ.ವಿ. ಸದಾನಂದ ಗೌಡರು ಸ್ಪಷ್ಟವಾಗಿ ಹೇಳಿದರು.

ನಾನು ರಾಜಕೀಯದಲ್ಲಿ ಎಲ್ಲವನ್ನೂ ಪಡೆದಿದ್ದೇನೆ. ಮೂವತ್ತು ವರ್ಷಗಳಿಂದ ಶಾಸಕ, ಸಿಎಂ, ಸಂಸದ ಸೇರಿದಂತೆ ಎಲ್ಲ ಹುದ್ದೆಗಳನ್ನು ಪಡೆದಿದ್ದೇನೆ. ಮುಂದೆ ಹೊಸಬರಿಗೆ ಅವಕಾಶ ನೀಡಬೇಕು ಎಂಬ ಕಾರಣಕ್ಕಾಗಿ ನಾನೇ ಸ್ಪರ್ಧೆಯಿಂದ ಹಿಂದೆ ಸರಿದಿದ್ದೇನೆ. 2019ರ ಚುನಾವಣೆ ಸಂದರ್ಭದಲ್ಲೇ ನಾನು ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೆ. ಆದರೆ, ಸ್ಪರ್ಧೆ ಮಾಡುವಂತೆ ಒತ್ತಡ ಬಂದಿದ್ದರಿಂದ ಒಪ್ಪಿಕೊಂಡಿದ್ದೇನೆ. ಈ ಬಾರಿ ಚುನಾವಣೆಗೆ ಇನ್ನೂ ಆರು ತಿಂಗಳು ಇರುವಾಗಲೇ ಘೋಷಣೆ ಮಾಡಿದ್ದು ಯಾಕೆಂದರೆ, ಮುಂದಿನ ಅಭ್ಯರ್ಥಿಯನ್ನು ಗುರುತಿಸಲು ಸಹಾಯವಾಗಲಿ ಎಂದು ಹೇಳಿದರು ಡಿ.ವಿ. ಸದಾನಂದ ಗೌಡರು.

ಇದನ್ನೂ ಓದಿ: DV Sadananda Gowda : ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಡಿ.ವಿ. ಸದಾನಂದ ಗೌಡ

ಸದಾನಂದ ಗೌಡರೂ ಜಗದೀಶ್‌ ಶೆಟ್ಟರ್‌ ರೀತಿ ರೆಬೆಲ್‌ ಆಗ್ತಾರಾ?

ನೀವು ಕೂಡಾ ಜಗದೀಶ್‌ ಶೆಟ್ಟರ್‌ ಅವರ ರೀತಿಯಲ್ಲಿ ಬಂಡಾಯ ಏಳುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಯಾವತ್ತೂ ಧ್ವನಿ ಎತ್ತಿ ಮಾತಾಡಿಲ್ಲ. ನನ್ನ ಅಭಿಪ್ರಾಯಗಳನ್ನು ಎಷ್ಟು ಬೇಕೋ ಅಷ್ಟು ಮಾತ್ರ ಹೇಳಿದ್ದೇನೆ. ನನ್ನದೇ ನಡೆಯಬೇಕು ಎಂಬ ಅಭಿಪ್ರಾಯ ನನ್ನದಲ್ಲ ಎಂದು ಹೇಳಿದ ಡಿ.ವಿ. ಸದಾನಂದ ಗೌಡ ಅವರು, ಯಾವ ಕಾರಣಕ್ಕೂ ಬಂಡಾಯವೇಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ನಾನು ಇದುವರೆಗೆ ಪಕ್ಷದಿಂದ ಎಲ್ಲವನ್ನೂ ಪಡೆದಿದ್ದೇನೆ. ಇನ್ನು ಪಕ್ಷಕ್ಕೆ ನಾನು ಬೆಂಬಲ ನೀಡುವ ಕಾಲ. ಕಳೆದ ವಿಧಾನಸಭಾ ಚುನಾವಣೆಯಲ್ಲೂ ನಾನು ಈ ಪ್ರಯತ್ನವನ್ನು ದೊಡ್ಡ ಮಟ್ಟದಲ್ಲಿ ಮಾಡಿದ್ದೇನೆ. ರಾಜ್ಯಾದ್ಯಂತ ಬಿಜೆಪಿ ಹಲವು ಸ್ಥಾನಗಳನ್ನು ಕಳೆದುಕೊಂಡಿತ್ತು. ಆದರೆ, ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಒಂದು ಹೆಚ್ಚುವರಿ ಸ್ಥಾನವನ್ನು ಪಡೆದಿದೆ. ದಾಸರಹಳ್ಳಿ ಕ್ಷೇತ್ರದ ಗೆಲುವಿನಲ್ಲಿ ನನ್ನ ಪಾಲು ಇದೆ ಎಂದು ಹೆಮ್ಮೆಯಿಂದ ಹೇಳುತ್ತೇನೆ ಎಂದು ಹೇಳಿದರು ಡಿ.ವಿ. ಸದಾನಂದ ಗೌಡ.

ಇನ್ನು ಜಗದೀಶ್‌ ಶೆಟ್ಟರ್‌ ಅವರ ಜತೆಗೆ ನನ್ನನ್ನು ಹೋಲಿಕೆ ಮಾಡಲು ಹೋಗುವುದಿಲ್ಲ. ಪ್ರತಿಯೊಬ್ಬರೂ ಬೇರೆ ಬೇರೆ ಪರಿಸ್ಥಿತಿಯನ್ನು ಎದುರಿಸಿರುತ್ತಾರೆ. ಅದಕ್ಕೆ ಸರಿಯಾಗಿ ಪ್ರತಿಕ್ರಿಯಿಸುತ್ತಾರೆ. ಅದರಲ್ಲಿ ತಪ್ಪು ಮತ್ತು ಸರಿ ಎಂದು ತೀರ್ಮಾನ ಮಾಡಬಾರದು ಎಂದು ಹೇಳಿದರು.

ಪೂರ್ಣ ಸಂದರ್ಶನದ ವಿಡಿಯೋ ಇಲ್ಲಿದೆ

Exit mobile version