Site icon Vistara News

DV Sadananda Gowda : ಡಿವಿಎಸ್‌ ಕಾಂಗ್ರೆಸ್‌ ಸೇರ್ಪಡೆಗೆ ಒಕ್ಕಲಿಗರ ಸಂಘ ಬೆಂಬಲ; ಕೈ ತೀರ್ಮಾನ ಏನು?

DV Sadananda Gowda Congress

ಬೆಂಗಳೂರು: ಲೋಕಸಭಾ ಚುನಾವಣೆಯ (Lok Sabha Election 2024) ಸ್ಪರ್ಧೆಗೆ ಬಿಜೆಪಿಯಿಂದ ಟಿಕೆಟ್‌ ವಂಚಿತರಾಗಿರುವ ಬೆಂಗಳೂರು ಉತ್ತರ ಕ್ಷೇತ್ರದ (Bengaluru North Constituency) ಹಾಲಿ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ (DV Sadananda Gowda) ಅವರು ತೆಗೆದುಕೊಳ್ಳುವ ಯಾವುದೇ ರಾಜಕೀಯ ನಿರ್ಣಯಕ್ಕೆ ತಮ್ಮ ಬೆಂಬಲವಿದೆ ಎಂದು ಒಕ್ಕಲಿಗರ ಸಂಘ (Okkaligara Association) ಪ್ರಕಟಿಸಿದೆ. ಈ ನಡುವೆ, ಡಿ.ವಿ. ಸದಾನಂದ ಗೌಡ ಅವರು ಕಾಂಗ್ರೆಸ್‌ ಸೇರ್ಪಡೆಯೂ ಸೇರಿದಂತೆ ಪ್ರಮುಖ ರಾಜಕೀಯ ತೀರ್ಮಾನವನ್ನು ಬುಧವಾರ ಬೆಳಗ್ಗೆ ಪ್ರಕಟಿಸುವುದಾಗಿ ತಿಳಿಸಿದ್ದಾರೆ.

ಸೋಮವಾರವಷ್ಟೇ 71ನೇ ಜನ್ಮ ದಿನ ಆಚರಿಸಿಕೊಂಡ ದೇವರಗುಂಡ ವೆಂಕಪ್ಪ ಸದಾನಂದ ಗೌಡ ಅವರು ಸಂಜೆ ತಮ್ಮ ಆತ್ಮೀಯರ ಜತೆ ಮುಂದಿನ ರಾಜಕೀಯ ತೀರ್ಮಾನದ ಬಗ್ಗೆ ಚರ್ಚೆ ನಡೆಸಿದ್ದರು. ಅವರು ಮಂಗಳವಾರ ಬೆಳಗ್ಗೆ 10.30ಕ್ಕೆ ಮುಂದಿನ ತೀರ್ಮಾನ ಪ್ರಕಟಿಸುವುದಾಗಿ ಘೋಷಿಸಿ ಪತ್ರಿಕಾಗೋಷ್ಠಿಗೂ ಆಹ್ವಾನ ನೀಡಿದ್ದರು. ಆದರೆ, ಬೆಳಗ್ಗೆ ಪತ್ರಿಕಾಗೋಷ್ಠಿಯನ್ನು ಮುಂದೂಡಿದ್ದರು.

ಒಕ್ಕಲಿಗರ ಸಂಘದ ಜತೆ ಮಾತುಕತೆ ನಡೆಸಬೇಕಾಗಿರುವುದರಿಂದ ಪತ್ರಿಕಾಗೋಷ್ಠಿಯನ್ನು ಬುಧವಾರಕ್ಕೆ ಮುಂದೂಡಿರುವುದಾಗಿ ಪ್ರಕಟಿಸಿದ ಡಿ.ವಿ. ಸದಾನಂದ ಗೌಡರು ಒಕ್ಕಲಿಗರ ಸಂಘದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದರು.

ಒಕ್ಕಲಿಗರ ಸಂಘದ ಪದಾಧಿಕಾರಿಗಳ ಜತೆಗಿನ ಸಭೆಯ ಬಳಿಕ ಮಾತನಾಡಿದ ಡಿ.ವಿ. ಸದಾನಂದ ಗೌಡರು, ಒಕ್ಕಲಿಗರ ಸಂಘದ ಅಧ್ಯಕ್ಷರು, ನಿರ್ದೇಶಕರ ಜತೆ ಸಭೆ ನಡೆಸಿದ್ದೇನೆ ಒಂದಷ್ಟು ವಿಚಾರಗಳನ್ನು ಸಭೆಯಲ್ಲಿ ಪ್ರಸ್ತಾಪ ಮಾಡಲಾಗಿದೆ. ಕಾಂಗ್ರೆಸ್ ನಿಂದ ಅಫರ್ ಇದೆ. ಈಗ ಯಾವುದನ್ನೂ ನಾನು ಹೇಳಲ್ಲ, ನಾಳೆ ಸುದ್ದಿಗೋಷ್ಠಿ ಕರೆಯುತ್ತೇನೆ ಎಂದು ಹೇಳಿದರು.

ಅನ್ಯಾಯವಾಗಿದೆ, ಡಿವಿಎಸ್‌ಗೆ ಪೂರ್ಣ ಬೆಂಬಲ ಎಂದ ಅಧ್ಯಕ್ಷರು

ಈ ನಡುವೆ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತಯ್ಯ ಹೇಳಿಕೆ ನೀಡಿ, ನಮ್ಮ ಒಕ್ಕಲಿಗ ಸಮುದಾಯಕ್ಕೆ ಮೂರೂ ಪಕ್ಷಗಳಲ್ಲಿ ಟಿಕೆಟ್ ಕೊಡುವಲ್ಲಿ ಅನ್ಯಾಯ ಆಗಿದೆ. ಬಿಜೆಪಿಯಲ್ಲಿ ಲಿಂಗಾಯತ ಸಮುದಾಯಕ್ಕೆ ಎಂಟು ಟಿಕೆಟ್ ಕೊಡಲಾಗಿದೆ. ಒಕ್ಕಲಿಗ ಸಮುದಾಯಕ್ಕೆ ಎರಡೇ ಟಿಕೆಟ್ ಕೊಡಲಾಗಿದೆ. ಒಕ್ಕಲಿಗ ಸಮುದಾಯಕ್ಕೂ ಎಂಟು ಕಡೆ ಟಿಕೆಟ್ ಕೊಡಬೇಕು ಎಂದು ಬೇಡಿಕೆ ಇಟ್ಟರು.

ಬಿಜೆಪಿಯಲ್ಲಿ ಸಿಟಿ ರವಿ, ಪ್ರತಾಪ್ ಸಿಂಹಗೆ ಟಿಕೆಟ್ ಕೊಟ್ಟಿಲ್ಲ ಎಂದು ಹೇಳಿದ ಅವರು, ಸದಾನಂದ ಗೌಡರು ಏನೇ ನಿರ್ಧಾರ ತೆಗೆದುಕೊಂಡರೂ ನಮ್ಮ ಬೆಂಬಲ ಇರುತ್ತದೆ. ಈ ಎಲ್ಲ ವಿಚಾರಗಳನ್ನು ಡಿ.ವಿ. ಸದಾನಂದ ಗೌಡರೇ ಸುದ್ದಿಗೋಷ್ಠಿ ಮಾತಿ ಹೇಳುತ್ತಾರೆ ಎಂದರು. ನಮ್ಮ ಸಮುದಾಯಕ್ಕೆ ಅನ್ಯಾಯ ಆದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಹನುಮಂತಯ್ಯ ಹೇಳಿದರು.

ಇದನ್ನೂ ಓದಿ : Lok Sabha Election 2024 : ಡಿ.ವಿ. ಸದಾನಂದ ಗೌಡ ಬಿಜೆಪಿಗೆ ಗುಡ್‌ಬೈ?: ಕಾಂಗ್ರೆಸ್‌ನಿಂದ ಸ್ಪರ್ಧೆ ಸಾಧ್ಯತೆ

ಕಾಂಗ್ರೆಸ್‌ ಮಟ್ಟದಲ್ಲಿ ಎಐಸಿಸಿ ನಾಯಕರ ಜತೆ ಇಂದು ಚರ್ಚೆ

ಬಿಜೆಪಿ ಟಿಕೆಟ್‌ ವಂಚಿತ ಡಿ.ವಿ. ಸದಾನಂದ ಗೌಡರನ್ನು ಕಾಂಗ್ರೆಸ್‌ಗೆ ಸೆಳೆಯಲು ಚರ್ಚೆ ನಡೆದಿರುವುದು ನಿಜವಾದರೂ ಅದು ದೊಡ್ಡ ನಾಯಕರ ನಡುವೆ ಚರ್ಚೆಗೆ ಬಂದಿಲ್ಲ. ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ ಶಿವಕುಮಾರ್‌ ಅವರು ಡಿ.ವಿ. ಸದಾನಂದ ಗೌಡರಿಗೆ ಆಹ್ವಾನ ನೀಡಿ, ಕೆಲವು ಕ್ಷೇತ್ರಗಳ ಆಫರ್‌ ನೀಡಿದ್ದಾರಾದರೂ ಇದರ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಜತೆ ಚರ್ಚೆ ನಡೆಸಿಲ್ಲ ಎನ್ನಲಾಗಿದೆ. ಇದರ ಜತೆಗೆ ಹೈಕಮಾಂಡ್ ಮಟ್ಟದಲ್ಲಿ ಕೂಡಾ ಸದಾನಂದ ಗೌಡ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಚರ್ಚೆ ನಡೆದಿಲ್ಲ.

ಹೀಗಾಗಿ ಮಂಗಳವಾರ ಸಿಎಂ ಮತ್ತು ಡಿಸಿಎಂ ಸೇರಿ ಎಐಸಿಸಿ ನಾಯಕರ ಜೊತೆಗೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ಜಗದೀಶ್‌ ಶೆಟ್ಟರ್‌ ಸೇರ್ಪಡೆ ಮತ್ತು ನಿರ್ಗಮನದ ಬಳಿಕ ಬಿಜೆಪಿಯಿಂದ ಬರುವವರ ಬಗ್ಗೆ ಯಾವ ನಿಲುವು ತೆಗೆದುಕೊಳ್ಳಬೇಕು ಎಂಬ ಗೊಂದಲ ಕಾಂಗ್ರೆಸ್‌ನಲ್ಲಿದೆ. ಅದರಲ್ಲೂ ಸಿಎಂ ಸಿದ್ದರಾಮಯ್ಯ ಇಂಥ ವಲಸೆಗೆ ತಗಾದೆ ಎತ್ತಿದ್ದಾರೆ ಎನ್ನಲಾಗಿದೆ.

ಡಿ.ವಿ. ಸದಾನಂದ ಗೌಡರು ಒಂದು ವೇಳೆ ಬಂದರೂ ಅವರಿಗೆ ಮೈಸೂರು-ಕೊಡಗು ಟಿಕೆಟ್‌ ನೀಡಲಾಗದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎನ್ನಲಾಗಿದೆ. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಇನ್ನೂ ಸಮರ್ಥ ಅಭ್ಯರ್ಥಿ ದೊರಕಿಲ್ಲ. ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲು ನಿಗದಿ ಮಾಡಿರುವ ಪ್ರಿಯಾ ಕೃಷ್ಣ ಇನ್ನೂ ಒಪ್ಪಿಲ್ಲ. ಪ್ರಿಯಾ ಕೃಷ್ಣ ಮನವೊಲಿಕೆಗೆ ಸಚಿವ ಕೃಷ್ಣ ಭೈರೇಗೌಡ ಕಸರತ್ತು ಮಾಡುತ್ತಿದ್ದಾರೆ ಎನ್ನಲಾಗಿದೆ. ಪ್ರಿಯಾಕೃಷ್ಣ ಒಪ್ಪದೇ ಹೋದರೆ ಸದಾನಂದ ಗೌಡ ಅವರಿಗೆ ಟಿಕೆಟ್‌ ನೀಡಲು ಕಾಂಗ್ರೆಸ್‌ ಮುಂದಾಗಬಹುದು.

ಆದರೆ, ಇದೆಲ್ಲವೂ ಚರ್ಚೆಯಾಗಿ ಅಂತಿಮಗೊಳ್ಳಬೇಕಾಗಿರುವುದರಿಂದ ಅಲ್ಲಿವರೆಗೆ ಸಮಯ ತೆಗೆದುಕೊಳ್ಳಲು ಡಿ.ವಿ. ಸದಾನಂದ ಗೌಡರು ಸುದ್ದಿಗೋಷ್ಠಿಯನ್ನು ಒಂದು ದಿನ ಮುಂದೂಡಿದರೇ ಎಂಬ ಪ್ರಶ್ನೆ ಕೇಳಿಬರುತ್ತಿದೆ.

ಇತ್ತ ಬಿಜೆಪಿಯಲ್ಲೂ ಡಿ.ವಿ. ಸದಾನಂದ ಗೌಡರನ್ನು ಉಳಿಸಿಕೊಳ್ಳುವ ಯತ್ನವೊಂದು ನಡೆಯುತ್ತಿದೆ. ಅದು ಡಿ.ವಿ. ಸದಾನಂದ ಗೌಡರನ್ನು ಹೇಗೆ ಮನ ಒಲಿಸುತ್ತದೆ ಕಾದು ನೋಡಬೇಕಾಗಿದೆ.

Exit mobile version