ಬೆಂಗಳೂರು: ಭಾರಿ ಚರ್ಚೆಗೆ ಕಾರಣವಾಗಿರುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ (Bangalore North Constituency) ಸಂಸದ ಡಿ.ವಿ. ಸದಾನಂದ ಗೌಡ (DV Sadananda Gowda) ಅವರಿಗೆ ಬಿಜೆಪಿ ಟಿಕೆಟ್ ಮಿಸ್ (DVS may Miss ticket) ಆಗಿರುವುದು ಖಚಿತವಾಗಿದೆ. ಇದನ್ನು ಸ್ವತಃ ಡಿ.ವಿ. ಸದಾನಂದ ಗೌಡ ಅವರೇ ಪರೋಕ್ಷವಾಗಿ (Parliament Election) ಘೋಷಿಸಿಕೊಂಡಿದ್ದಾರೆ.
ಕಳೆದ ಎರಡು ಅವಧಿಯಲ್ಲಿ ಬೆಂಗಳೂರು ಉತ್ತರದ ಸಂಸದರಾಗಿರುವ ಡಿ.ವಿ. ಸದಾನಂದ ಗೌಡ ಅವರು ಕೆಲವು ತಿಂಗಳ ಹಿಂದೆ ಸ್ಪರ್ಧಾ ಕಣದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದರು. ಆದರೆ, ಕೆಲವೇ ವಾರದಲ್ಲಿ ಆ ಹೇಳಿಕೆಯನ್ನು ವಾಪಸ್ ಪಡೆದಿದ್ದರು. ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ತಮಗೇ ಟಿಕೆಟ್ ಬೇಕು ಎಂದು ಹಠ ಹಿಡಿದಿದ್ದರು.
ಈ ನಡುವೆ, ಬಿಜೆಪಿ ಹೈಕಮಾಂಡ್ ಬೆಂಗಳೂರು ಉತ್ತರದಲ್ಲಿ ಅಭ್ಯರ್ಥಿಯನ್ನು ಬದಲಾಯಿಸುವ ತೀರ್ಮಾನಕ್ಕೆ ಬಂದಿತ್ತು. ಅಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಗೋಬ್ಯಾಕ್ ಅಭಿಯಾನ ಎದುರಿಸುತ್ತಿರುವ ಶೋಭಾ ಕರಂದ್ಲಾಜೆ ಇಲ್ಲವೇ ಮಂಡ್ಯ ಕ್ಷೇತ್ರದಲ್ಲಿ ಅತಂತ್ರರಾಗಿರುವ ಪಕ್ಷೇತರ ಸಂಸದೆ ಸುಮಲತಾ ಅಂಬರೀಷ್ ಅವರಲ್ಲಿ ಒಬ್ಬರನ್ನು ಕಣಕ್ಕಿಳಿಸುವ ಚರ್ಚೆ ನಡೆದಿತ್ತು.
ಆದರೆ, ಅಷ್ಟು ಹೊತ್ತಿಗೆ ಸದಾನಂದ ಗೌಡ ಕನಲಿ ಕೆಂಡಾಮಂಡಲರಾಗಿದ್ದರು. ಬೆಂಗಳೂರು ಉತ್ತರದಲ್ಲಿ ನನ್ನ ಹೆಸರನ್ನೇ ಸರ್ವೇ ಮೂಲಕ ಅಂತಿಮಗೊಳಿಸಲಾಗಿತ್ತು. ಯಾವ ಕಾರಣಕ್ಕೆ ನನಗೆ ಟಿಕೆಟ್ ನಿರಾಕರಿಸುತ್ತಾರೆ ಎಂದೆಲ್ಲ ಅವರು ಆಕ್ರೋಶಿತರಾಗಿ ಮಾತನಾಡಿದ್ದರು. ಇದರ ಹಿಂದೆ ಕೆಲವೊಂದು ಶಕ್ತಿಗಳ ಕೈವಾಡದ ಬಗ್ಗೆ ಮಾತನಾಡಿದ್ದರು. ಒಂದು ಹಂತದಲ್ಲಿ ಸದಾನಂದ ಗೌಡ ಅವರು ಬಂಡಾಯವಾಗಿ ಕಣಕ್ಕಿಳಿಯಬಹುದು ಎಂಬ ಸುದ್ದಿ ಹರಡಿತ್ತು. ಕಾಂಗ್ರೆಸ್ ನಾಯಕರು ಡಿ.ವಿ.ಎಸ್ ಅವರನ್ನು ಸಂಪರ್ಕಿಸಿದ್ದರು ಎಂದೂ ಹೇಳಲಾಗುತ್ತಿದೆ.
ಇದೆಲ್ಲದರ ನಡುವೆ ಡಿ.ವಿ. ಸದಾನಂದ ಗೌಡ ಅವರು ಸಾಮಾಜಿಕ ಜಾಲತಾಣವಾದ ಎಕ್ಸ್ ಮತ್ತು ಫೇಸ್‌ಬುಕ್‌ನಲ್ಲಿ ಒಂದು ಪತ್ರ ಬರೆಯುವ ಮೂಲಕ ತನಗೆ ಟಿಕೆಟ್ ಮಿಸ್ ಆಗಿರುವುದನ್ನು ಸೂಚ್ಯವಾಗಿ ಹೇಳಿದ್ದಾರೆ. ಜತೆಗೆ ಯಾವುದೇ ಬಂಡಾಯ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ.
ಇದನ್ನೂ ಓದಿ : DV Sadananda Gowda: ನಿವೃತ್ತಿ ಘೋಷಣೆ ಬೆನ್ನಲ್ಲೇ ವರಿಷ್ಠರ ವಿರುದ್ಧ ಡಿವಿಎಸ್ ಗರಂ; ರೆಬೆಲ್ ಆಗ್ತಾರಾ?
ಡಿ.ವಿ.ಎಸ್ ಅವರು ಬರೆದಿರುವ ಪತ್ರದಲ್ಲಿ ಏನಿದೆ?
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ನನ್ನೆಲ್ಲಾ ಪ್ರೀತಿಯ ಬಂಧುಗಳೇ, ನನಗೆ ಕಳೆದ ಹತ್ತು ವರ್ಷಗಳ ಕಾಲ ಈ ಕ್ಷೇತ್ರದ ಲೋಕಸಭಾ ಸದಸ್ಯನಾಗಿ, ನಿಮ್ಮ ಕೆಲಸ ಮಾಡುವ ಅವಕಾಶವನ್ನು ಮಾಡಿಕೊಟ್ಟು ಆಶೀರ್ವಾದವನ್ನು ಮಾಡಿದ್ದೀರಿ. ನಾನು ನನ್ನ ಶಕ್ತಿಮೀರಿ ನಿಮ್ಮ ಸೇವೆಯನ್ನು ಮಾಡುವ ಪ್ರಯತ್ನವನ್ನು ಮಾಡಿದ್ದೇನೆ. ನಿಮ್ಮ ಆಶೀರ್ವಾದದಿಂದ ಕೇಂದ್ರದಲ್ಲಿ ನಮ್ಮೆಲ್ಲರ ಪ್ರೀತಿಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಜೊತೆಯಲ್ಲಿ 7 ವರ್ಷಗಳ ಕಾಲ ಕ್ಯಾಬಿನೆಟ್ ಮಂತ್ರಿಯಾಗಿ ಕೆಲಸ ಮಾಡುವ ಅವಕಾಶವನ್ನು ಕೂಡ ಕಲ್ಪಿಸಿದ್ದೀರಿ. ನಾನು ನಿಮ್ಮೆಲ್ಲರಿಗೂ ಚಿರಋಣಿ. ನಿಮ್ಮ ಜೊತೆಗೆ ಇನ್ನು ಮುಂದೆಯೂ ಇರುತ್ತೇನೆ. ಎಲ್ಲರಿಗೂ ನನ್ನ ಅಂತರಾಳದ ಹೃದಯ ತುಂಬಿದ ಧನ್ಯವಾದಗಳು .
ಇಂತಿ ನಿಮ್ಮವನೇ ಆದ ಡಿ.ವಿ. ಸದಾನಂದ ಗೌಡ
— Sadananda Gowda ( Modi Ka Parivar ) (@DVSadanandGowda) March 13, 2024
ಈ ಪತ್ರ ಡಿ.ವಿ. ಸದಾನಂದ ಗೌಡ ಅವರು ಹೈಕಮಾಂಡ್ ಸೂಚನೆಗೆ ಶರಣಾಗತರಾಗಿರುವುದನ್ನು ತೋರಿಸುತ್ತಿದೆ. ಇದರ ನಡುವೆ ಬಿಜೆಪಿ ಹಿರಿಯ ನಾಯಕ ಅಮಿತ್ ಶಾ ಅವರು ಡಿ.ವಿ. ಸದಾನಂದ ಗೌಡ ಅವರ ಜತೆ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.