ಬೆಂಗಳೂರು: ಬೆಂಗಳೂರು ಉತ್ತರ ಕ್ಷೇತ್ರದ (Bangalore North Constituency) ಟಿಕೆಟ್ ವಂಚಿತರಾಗಿರುವ ಹಾಲಿ ಸಂಸದ ಡಿ.ವಿ. ಸದಾನಂದ ಗೌಡರು (DV Sadananda Gowda) ಒಂದು ಹಂತದಲ್ಲಿ ತಕ್ಷಣವೇ ಪ್ರಮುಖ ರಾಜಕೀಯ ನಿರ್ಧಾರ ತೆಗೆದುಕೊಳ್ಳುವುದಾಗಿ ಪ್ರಕಟಿಸಿದ್ದರೂ ಇದೀಗ ಅವಸರ ಬೇಡ, ನಿಧಾನಕ್ಕೆ ಹೋಗಿ ಎಂಬ ಸೂತ್ರ ಪಾಲಿಸುತ್ತಿದ್ದಾರೆ. ಹೀಗಾಗಿ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿ ಸ್ಪರ್ಧೆ ಮಾಡುವ ಸಾಧ್ಯತೆ ಕ್ಷೀಣವಾಗಿದೆ. ಅದರಲ್ಲೂ ಅವರು ಈಗ ಸುಳ್ಯದ ದೇವರಗುಂಡದಲ್ಲಿರುವ ತಮ್ಮ ಮನೆಗೆ ಹೋಗಿದ್ದು ಪ್ರಮುಖ ರಾಜಕೀಯ ತೀರ್ಮಾನ ಪ್ರಕಟವಾಗುವ ನಿರೀಕ್ಷೆ ಸದ್ಯಕ್ಕೆ ಇಲ್ಲ (DVS May not Join Congress).
ಬೆಂಗಳೂರು ಉತ್ತರದಲ್ಲಿ ತಮ್ಮ ಬದಲಿಗೆ ಶೋಭಾ ಕರಂದ್ಲಾಜೆ (Shobha Karandlaje) ಅವರಿಗೆ ಟಿಕೆಟ್ ನೀಡಿದ್ದರಿಂದ ಡಿ.ವಿ. ಸದಾನಂದ ಗೌಡರು ಒಂದು ಕ್ಷಣ ಆಘಾತಕ್ಕೆ ಒಳಗಾಗಿದ್ದರು. ಅದರ ನಡುವೆ ಪರಿಸ್ಥಿತಿಯ ಲಾಭ ಪಡೆಯಲು ಕಾಂಗ್ರೆಸ್ ನಾಯಕರು ಅವರನ್ನು ಸಂಪರ್ಕ ಮಾಡಿದ್ದರು. ಈ ಹಂತದಲ್ಲಿ ತನಗೆ ಕಾಂಗ್ರೆಸ್ ಆಫರ್ ಇದೆ ಎಂದು ಘಂಟಾಘೋಷವಾಗಿ ಹೇಳಿಕೊಂಡ ಡಿ.ವಿ ಸದಾನಂದ ಗೌಡರು ಮಾರ್ಚ್ 18 ಮಂಗಳವಾರ ತೀರ್ಮಾನ ಪ್ರಕಟಿಸುವುದಾಗಿ ಹೇಳಿದ್ದರು. ಇದು ಅವರ ಕಾಂಗ್ರೆಸ್ ಸೇರ್ಪಡೆಯ ಘೋಷಣೆಯಾಗಿರಬಹುದು ಎಂಬ ನಿರೀಕ್ಷೆಯೂ ಇತ್ತು.
ಈ ನಡುವೆ ಮಂಗಳವಾರ ಪತ್ರಿಕಾಗೋಷ್ಠಿ ರದ್ದು ಮಾಡಿದ ಡಿ.ವಿ. ಸದಾನಂದ ಗೌಡ ಅವರು, ಒಕ್ಕಲಿಗರ ಸಂಘದ ಸಭೆಯಲ್ಲಿ ಪಾಲ್ಗೊಂಡರು. ಇಲ್ಲಿ ಡಿ.ವಿ. ಸದಾನಂದ ಗೌಡ ಸೇರಿದಂತೆ ಸಿ.ಟಿ. ರವಿ, ಪ್ರತಾಪ್ ಸಿಂಹ ಮೊದಲಾದ ಒಕ್ಕಲಿಗ ನಾಯಕರಿಗೆ ಟಿಕೆಟ್ ಸಿಗದಿರುವ ವಿಚಾರ ಚರ್ಚೆಗೆ ಬಂದು ಡಿ.ವಿ. ಸದಾನಂದ ಗೌಡ ಅವರು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಬೆಂಬಲ ನೀಡುವುದೆಂದು ಒಕ್ಕಲಿಗರ ಸಂಘ ನಿರ್ಧರಿಸಿತು.
ಈ ಸಭೆಯಿಂದ ಹೊರಬಂದ ಡಿ.ವಿ. ಸದಾನಂದ ಗೌಡ ಅವರು ಬುಧವಾರ ಮಾಧ್ಯಮಗೋಷ್ಠಿ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿದರು. ಈ ನಡುವೆ ಬುಧವಾರ ಅವರು ತಮ್ಮ ಊರಾದ ಸುಳ್ಯಕ್ಕೆ ತೆರಳಿರುವ ಮಾಹಿತಿ ಬಂದಿದೆ. ಅವರು ಸುಳ್ಯದಲ್ಲಿ ಕುಟುಂಬಸ್ಥರು, ಸಂಬಂಧಿಕರ ಜತೆ ಸಮಾಲೋಚನೆ ಮಾಡುತ್ತಾರೆ ಎಂಬ ಸುದ್ದಿ ಹರಡಿದೆ.
ಡಿ.ವಿ. ಸದಾನಂದ ಗೌಡ ಅವರಿಗೆ ಮುಂದಿನ ರಾಜಕೀಯ ಹೆಜ್ಜೆ ಸ್ಪಷ್ಟತೆ ಇಲ್ಲದಂತೆ ಕಾಣುತ್ತಿದೆ. ಅಥವಾ ಹೈಕಮಾಂಡ್ ಆದೇಶಕ್ಕಾಗಿ ಕಾದು ನೋಡುವ ತಂತ್ರಗಾರಿಕೆ ನಡೆಸುತ್ತಿರುವ ಸಾಧ್ಯತೆಯೂ ಇದೆ.
ಇದನ್ನೂ ಓದಿ R Ashok : ಡಿ.ವಿ ಸದಾನಂದ ಗೌಡ್ರು ಎಲ್ಲೂ ಹೋಗಲ್ಲ ಎಂದ ಆರ್ ಅಶೋಕ್
ಡಿವಿಎಸ್‌ಗೆ ಕಾಯದೆ ಟಿಕೆಟ್ ಘೋಷಣೆಗೆ ಮುಂದಾದ ಕಾಂಗ್ರೆಸ್
ಈ ನಡುವೆ, ಕಾಂಗ್ರೆಸ್ ಡಿ.ವಿ.ಎಸ್ ಅವರಿಗೆ ಕಾಯದೆ ತನ್ನ ಟಿಕೆಟ್ ಅಂತಿಮಗೊಳಿಸಲು ಮುಂದಾಗಿದೆ. ಬೆಂಗಳೂರು ಉತ್ತರದಲ್ಲಿ ಪ್ರೊ. ರಾಜೀವ್ ಗೌಡ ಅವರ ಹೆಸರನ್ನು ಅದು ಅಂತಿಮಗೊಳಿಸಿದೆ. ಡಿ.ವಿ.ಎಸ್ ಅವರಿಗೆ ಆಫರ್ ಮಾಡಿದ್ದಾರೆ ಎನ್ನಲಾದ ಮೈಸೂರು ಮತ್ತು ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೂ ಕಾಂಗ್ರೆಸ್ ಅಭ್ಯರ್ಥಿ ಫೈನಲ್ ಮಾಡಿದೆ. ಘೋಷಣೆಯಷ್ಟೇ ಬಾಕಿ ಇದೆ. ಹೀಗಾಗಿ ಕಾಂಗ್ರೆಸ್ ಕೂಡಾ ಡಿ.ವಿ. ಸದಾನಂದ ಗೌಡ ಅವರನ್ನು ಕಾಯುತ್ತಿಲ್ಲ ಎಂಬ ಸಂದೇಶ ರವಾನೆಯಾಗಿದೆ. ಒಟ್ಟಿನಲ್ಲಿ ಡಿ.ವಿ.ಎಸ್. ಬಂಡಾಯ ಶಮನವಾದಂತಾಗಿದೆ.