ನವದೆಹಲಿ: ಅಕ್ರಮ ಹಣ ವರ್ಗಾವಣೆ (Money laundering) ವಿಷಯಕ್ಕೆ ಸಂಬಂಧಪಟ್ಟಂತೆ ಇಡಿ ದಾಖಲು ಮಾಡಿದ್ದ ಪ್ರಕರಣದಲ್ಲಿ (ED Case) ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ (DK Shivakumar) ಸುಪ್ರೀಂ ಕೋರ್ಟ್ (Supreme Court) ಮಂಗಳವಾರ ಬಿಗ್ ರಿಲೀಫ್ ನೀಡಿದೆ.
ಡಿ.ಕೆ. ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯವು (Enforcement Directorate) 120B ಅಡಿ ದಾಖಲು ಮಾಡಿದ್ದ ಪ್ರಕರಣದ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಸರ್ವೋಚ್ಚ ನ್ಯಾಯಾಲಯ ರದ್ದುಗೊಳಿಸಿದೆ.
ಏನಿದು ಪ್ರಕರಣ?
ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ 2019ರಲ್ಲಿ ಜಾರಿ ನಿರ್ದೇಶನಾಲಯ ಡಿ.ಕೆ.ಶಿವಕುಮಾರ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ನವ ದೆಹಲಿಯಲ್ಲಿ ಬಂಧಿಸಿ ತಿಹಾರ್ ಜೈಲಿಗೆ ಕಳಿಸಿತ್ತು. ತನಿಖೆ ಪೂರ್ಣಗೊಳಿಸಿರುವ ಇ.ಡಿ ಜೂನ್ ಕೊನೆಯ ವಾರದಲ್ಲಿ ದೋಷಾರೋಪ ಪಟ್ಟಿಯನ್ನು ದೆಹಲಿಯಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿತ್ತು.
ದೆಹಲಿಯ ಸಫ್ಧರ್‌ಜಂಗ್ ಅಪಾರ್ಟ್‌ಮೆಂಟ್‌ನಲಿ ಸಿಕ್ಕ 6.61 ಕೋಟಿ ರೂ. ಡಿ.ಕೆ.ಶಿವಕುಮಾರ್ ಅವರದ್ದೇ ಎಂದು ವಿಚಾರಣೆ ವೇಳೆ ಆರೋಪಿ ಆಂಜನೇಯ ಬಾಯಿ ಬಿಟ್ಟಿದ್ದರು. ಡಿ.ಕೆ. ಶಿವಕುಮಾರ್ ಅವರ ಅಕ್ರಮ ಹಣದ ವ್ಯವಹಾರವನ್ನು ರಾಜೇಂದ್ರ ಹಾಗೂ ಆಂಜನೇಯ ನೋಡಿಕೊಳ್ಳುತ್ತಿದ್ದರು. ಸುರೇಶ್ ಶರ್ಮಾ ಅವರ ಫ್ಲಾಟ್ ಅನ್ನು ಡಿ.ಕೆ.ಶಿವಕುಮಾರ್ ಹಾಗೂ ಸುನಿಲ್ ಶರ್ಮಾ ಹಾಗೂ ಡಿಕೆಶಿ ಅಕ್ರಮ ಹಣ ಸಂಗ್ರಹಣೆ ಬಳಸುತ್ತಿದ್ದರು. ಡಿಕೆಶಿ ಸೂಚನೆ ಮೇರೆಗೆ 1 ಕೋಟಿ ರೂ., 2 ಕೋಟಿ ರೂ., 1.5 ಕೋಟಿ ರೂ. ಹೀಗೆ ಹಲವು ಬಾರಿ ಸಾಗಾಟ ಮಾಡಲಾಗಿದೆ. ಏನೇ ಸಮಸ್ಯೆ ಬಂದರೂ ನಾನು ನೋಡಿಕೊಳ್ಳುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಆಂಜನೇಯಗೆ ಹೇಳಿದ್ದು, ಇದಕ್ಕಾಗಿ ಬೆಂಗಳೂರಿನಲ್ಲಿ ಜಾಗ ಕೊಡುವ ಭರವಸೆ ನೀಡಿದ್ದಾರೆ ಎಂಬ ಮಹತ್ವದ ಅಂಶಗಳು ಇ.ಡಿ. ಚಾರ್ಜ್‌ಶೀಟ್‌ನಲ್ಲಿವೆ.
ಡಿಕೆಶಿಗೆ ಬಿಗ್ ರಿಲೀಫ್
ಆದಾಯ ಮೂಲಕ್ಕಿಂತ 200 ಕೋಟಿ ಹೆಚ್ಚು ಅಕ್ರಮ ಸಂಪಾದನೆ (Illegal editing) ಮಾಡಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ವಿರುದ್ಧದ ಸಿಬಿಐ ಕೇಸ್ (CBI Case) ಅನ್ನು ಈಚೆಗೆ ರಾಜ್ಯ ಸರ್ಕಾರ ವಾಪಸ್ ಪಡೆದು ಲೋಕಾಯುಕ್ತಕ್ಕೆ ನೀಡುವ ತೀರ್ಮಾನವನ್ನು ತೆಗೆದುಕೊಂಡಿತ್ತು.
ಏನಿದು ಪ್ರಕರಣ?
2013ರಿಂದ 2018ರ ಅವಧಿಯಲ್ಲಿ ಆದಾಯಕ್ಕಿಂತಲೂ ಅಧಿಕ ಆಸ್ತಿ ಗಳಿಸಿದ ಆರೋಪ ಡಿ.ಕೆ. ಶಿವಕುಮಾರ್ ಮೇಲೆ ಇತ್ತು. ಈ ಪ್ರಕರಣವನ್ನು ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ನೇತೃತ್ವದ ಸರ್ಕಾರ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿ 2019ರಲ್ಲಿ ಸಿಬಿಐಗೆ ನೀಡಿತ್ತು. ಸಿಬಿಐಗೆ ಪ್ರಕರಣವನ್ನು ವಹಿಸಿದ್ದನ್ನು ಪ್ರಶ್ನೆ ಮಾಡಿದ್ದ ಡಿ.ಕೆ. ಶಿವಕುಮಾರ್ ಕೋರ್ಟ್ ಮೊರೆ ಹೋಗಿದ್ದರು. ಎಫ್ಐಆರ್ ಹಾಕದೇ ಕೇಂದ್ರೀಯ ತನಿಖಾ ತಂಡಕ್ಕೆ ನೀಡಿದ್ದು ಸರಿಯಲ್ಲ ಎಂದು ಕೋರ್ಟ್‌ನಲ್ಲಿ ಡಿಕೆಶಿ ಪ್ರಶ್ನೆ ಮಾಡಿದ್ದರು.
ಅಲ್ಲದೆ ಇದೇ ಪ್ರಕರಣದಲ್ಲಿ ಸುಮಾರು ಐದು ತಿಂಗಳುಗಳ ಕಾಲ ಡಿ.ಕೆ. ಶಿವಕುಮಾರ್ ಜೈಲು ಪಾಲಾಗಿದ್ದರು. ಬಳಿಕ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿತ್ತು. ಕೊನೆಗೆ ಕೋರ್ಟ್‌ನಿಂದ ಷರತ್ತುಬದ್ಧ ಜಾಮೀನು ಪಡೆಯಲಾಗಿತ್ತು. ಈ ನಡುವೆ ಹೈಕೋರ್ಟ್‌ನಲ್ಲಿ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳಿ ಎಂದು ಸುಪ್ರೀಂ ಕೋರ್ಟ್ ಆದೇಶವನ್ನು ಹೊರಡಿಸಿತ್ತು. ಇಲ್ಲಿ ವಿಚಾರಣೆ ನಡೆಸಿದ್ದ ಕರ್ನಾಟಕ ಹೈಕೋರ್ಟ್‌ನ ಏಕ ಸದಸ್ಯ ಪೀಠ ಸಿಬಿಐ ವಿಚಾರಣೆಯನ್ನು ಎತ್ತಿ ಹಿಡಿದಿತ್ತು. ಹೀಗಾಗಿ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನೆ ಮಾಡಿದ ಡಿ.ಕೆ. ಶಿವಕುಮಾರ್ ದ್ವಿಸದಸ್ಯ ಪೀಠಕ್ಕೆ ಅಪೀಲು ಹೋಗಿದ್ದಾರೆ. ಈ ಅರ್ಜಿಯ ವಿಚಾರಣೆ ಇನ್ನೂ ನಡೆಯುತ್ತಿದೆ. ಆದರೆ, ಈ ಪ್ರಕರಣವನ್ನು ಸಂಪುಟದ ಮುಂದಿಟ್ಟು ವಾಪಸ್ ಪಡೆಯಲಾಗಿತ್ತು.
ಇದನ್ನೂ ಓದಿ: JP Nadda: ರಾಜ್ಯಸಭೆ ಸದಸ್ಯ ಸ್ಥಾನಕ್ಕೆ ಜೆ.ಪಿ. ನಡ್ಡಾ ರಾಜೀನಾಮೆ; ಚುನಾವಣೆ ಸ್ಪರ್ಧೆ ಫಿಕ್ಸ್?
ಈಗ ಸುಪ್ರೀಂ ಕೋರ್ಟ್ ಸಹ ಇಡಿ ಹೂಡಿದ್ದ ಇಡೀ ಪ್ರಕರಣವನ್ನೇ ರದ್ದುಗೊಳಿಸಿರುವುದರಿಂದ ಡಿ.ಕೆ. ಶಿವಕುಮಾರ್‌ಗೆ ಬಿಗ್ ರಿಲೀಫ್ ಸಿಕ್ಕಿದೆ.
54 ದಿನ ತಿಹಾರ್ ಜೈಲಲ್ಲಿದ್ದ ಡಿಕೆಶಿ
ಡಿಕೆ ಶಿವಕುಮಾರ್ ಅವರ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2019 ರಲ್ಲಿ ಇ.ಡಿ. ಪ್ರಕರಣವನ್ನು ದಾಖಲು ಮಾಡಿಕೊಂಡಿತ್ತು. ಆದಾಯ ತೆರಿಗೆ ಇಲಾಖೆಯ ದೂರಿನ ಮೇರೆಗೆ ಐಟಿ ಕಾಯ್ದೆ ಹಾಗೂ ಐಪಿಸಿ 120B ಅಡಿ ಪ್ರಕರಣ ದಾಖಲಾಗಿದ್ದರಿಂದ ತೀವ್ರತೆಯನ್ನು ಪಡೆದುಕೊಂಡಿತ್ತು. ಈ ಕೇಸ್‌ನಲ್ಲಿ ಐಟಿ ಪ್ರಕರಣವನ್ನು ಇಡಿಗೆ ವರ್ಗಾವಣೆ ಮಾಡಿತ್ತು. ಐಟಿ ದೂರಿನ ಹಿನ್ನೆಲೆಯಲ್ಲಿ ಇಸಿಐಆರ್ (ECIR) ದಾಖಲಿಸಿಕೊಂಡಿದ್ದ ಇಡಿ ಅಧಿಕಾರಿಗಳು ಡಿ.ಕೆ. ಶಿವಕುಮಾರ್‌ಗೆ ನೋಟಿಸ್ ನೀಡಿದ್ದರು. ಇಡಿ ನೋಟಿಸ್ ಪ್ರಶ್ನಿಸಿ ಡಿಕೆಶಿ ಹೈಕೋರ್ಟ್ ಮೊರೆಹೋಗಿದ್ದರು. ಐಟಿ ಪ್ರಕರಣದಲ್ಲಿ ಇಡಿ ಪ್ರವೇಶ ಮಾಡಿರೋದನ್ನು ಪ್ರಶ್ನೆ ಮಾಡಿದ್ದರು. ಅಂದಿನ ನ್ಯಾ. ಅರವಿಂದ ಕುಮಾರ್ ನೇತೃತ್ವದ ಪೀಠ ಇಡಿ ನೋಟಿಸ್ ನೀಡಿದ್ದ ಕ್ರಮವನ್ನು ಎತ್ತಿ ಹಿಡಿದಿತ್ತು.
ಆ ಸಂದರ್ಭದಲ್ಲಿ ಡಿಕೆಶಿಗೆ ಹೈಕೋರ್ಟ್‌ನಲ್ಲಿ ಹಿನ್ನಡೆಯಾಗಿತ್ತು. ಇದೇ ವೇಳೆ ಡಿಕೆಶಿಗೆ ವಿಚಾರಣೆ ಹಾಜರಾಗಲು ಮತ್ತೊಂದು ನೋಟಿಸ್ ಅನ್ನು ಜಾರಿ ಮಾಡಲಾಗಿತ್ತು. ವಿಚಾರಣೆಗೆಂದು ದೆಹಲಿಗೆ ಬಂದಿದ್ದ ಡಿಕೆ ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದರು. ಆಗ ಡಿ.ಕೆ. ಶಿವಕುಮಾರ್ ಒಟ್ಟು 54 ದಿನ ದೆಹಲಿಯ ತಿಹಾರ್ ಜೈಲಿನಲ್ಲಿದ್ದರು. ಬಳಿಕ ದೆಹಲಿಯ ರೋಸ್ ಅವೆನ್ಸೂ ಕೋರ್ಟ್‌ಗೆ ಇಡಿ ಚಾರ್ಜ್‌ಶೀಟ್ ಸಲ್ಲಿಸಿತ್ತು.
ಆದರೆ, ಇದೇ ವೇಳೆ ಇಡಿ ನೋಟಿಸ್ ಕುರಿತು ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದ ಪ್ರಕರಣದ ಸುದೀರ್ಘ ವಿಚಾರಣೆ ನಡೆಯುತ್ತಲಿತ್ತು. ಈಗ ಸುಪ್ರಿಂಕೋರ್ಟ್‌ನ ನ್ಯಾ. ಸೂರ್ಯಕಾಂತ್ ಮತ್ತು ಕೆವಿ ವಿಶ್ವನಾಥನ್ ಅವರ ಪೀಠವು ಆದೇಶವನ್ನು ಹೊರಡಿಸಿದ್ದು, ಇಡಿಯ ಪ್ರಕ್ರಿಯೆ ಕಾನೂನು ಬಾಹಿರ ಎಂದು ಹೇಳಿದೆ. ಈ ಮೂಲಕ ಡಿಕೆಶಿಗೆ ಬಿಗ್ ರಿಲೀಫ್ ಸಿಕ್ಕಂತೆ ಆಗಿದೆ.