ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗಳು ಹತ್ತಿರವಾಗುತ್ತಿರುವಂತೆಯೇ ಚುನಾವಣಾ ಸಮೀಕ್ಷೆಗಳು ಆರಂಭವಾಗಿದ್ದು, ದಿ ಗ್ರೌಂಡ್ ರಿಪೋರ್ಟ್ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಕಾಂಗ್ರೆಸ್‌ಗೆ ಸರಳ ಬಹುಮತ ಸಿಗುತ್ತದೆ ಎಂದು ತಿಳಿಸಲಾಗಿದೆ.
ಟ್ವಿಟ್ಟರ್‌ನಲ್ಲಿ ಈ ಕುರಿತು ಅಂಕಿ ಅಂಶಗಳನ್ನು ಹೊರಹಾಕಿರುವ @janta_poll ಟ್ವಿಟರ್ ವಿಳಾಸದ ಸಂಸ್ಥೆ, ಭಾರತ್ ಜೋಡೋ ಯಾತ್ರೆಯ ಪ್ರಭಾವ ಇದೆ ಎಂದು ತಿಳಿಸಿದೆ.
ಸಮೀಕ್ಷೆಯ ಪ್ರಕಾರ 224 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ 138-142 ಸ್ಥಾನ ಲಭಿಸಿ ಸುಲಭವಾಗಿ ಸರ್ಕಾರ ರಚನೆ ಮಾಡುತ್ತದೆ ಎಂದು ತಿಳಿಸಿದೆ. ಕಳೆದ ಚುನಾವಣೆಯಲ್ಲಿ 104 ಸ್ಥಾನ ಗಳಿಸಿದ್ದ ಬಿಜೆಪಿ ಸುಮಾರು ಶೇ.40ಕ್ಕೂ ಹೆಚ್ಚು ಕುಸಿತ ಕಂಡು 66-70 ಕ್ಷೇತ್ರಗಳಿಗೆ ಸೀಮಿತವಾಗಲಿದೆ. ಅದೇ ರೀತಿ, 123 ಸ್ಥಾನಗಳೊಂದಿಗೆ ಅಧಿಕಾರಕ್ಕೇರುವ ಘೋಷಣೆ ಮಾಡುತ್ತಿರುವ ಜೆಡಿಎಸ್ ಕೇವಲ 14-18 ಸ್ಥಾನಗಳನ್ನಷ್ಟೇ ಗೆಲ್ಲುತ್ತದೆ ಎಂಬ ಅಂಕಿ ಅಂಶ ನೀಡಲಾಗಿದೆ.
ಬಿಜೆಪಿ ಸರ್ಕಾರ ಕುಸಿಯಲು ಪ್ರಮುಖವಾಗಿ ಆಡಳಿತ ವಿರೋಧಿ ಅಲೆಯ ಕಾರಣವನ್ನು ನೀಡಲಾಗಿದೆ. ಜತೆಗೆ, ಇತ್ತೀಚೆಗೆ ಕರ್ನಾಟಕದಲ್ಲಿ 21 ದಿನ ಸಾಗಿದ ಭಾರತ್ ಜೋಡೋ ಯಾತ್ರೆ, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಪ್ರಸಿದ್ಧಿಯ ಕಾರಣಕ್ಕೆ ಬಿಜೆಪಿ ಸೋಲಲಿದೆ. 2023ರಲ್ಲಿ ಬಿಜೆಪಿ ಕಳೆದುಕೊಳ್ಳಲಿರುವ ಏಕೈಕ ರಾಜ್ಯ ಕರ್ನಾಟಕ ಎಂದು ಹೇಳಿದೆ.
ಈ ಸಮೀಕ್ಷೆ ನಡೆದ ಬಗೆ ಹೇಗೆ? ಎಷ್ಟು ಜನರು ಭಾಗವಹಿಸಿದ್ದು? ಮತ್ತಷ್ಟು ಅಂಕಿ ಅಂಶಗಳಿವೆಯೇ ಎಂಬ ಕುರಿತು ಸಂಸ್ಥೆ ಹೇಳಿಲ್ಲ. ಈ ಟ್ವಿಟರ್ ಖಾತೆಯ ಹಳೆಯ ಪೋಸ್ಟ್‌ಗಳನ್ನು ನೋಡಿದರೆ, ಹೆಚ್ಚಾಗಿ ಕಾಂಗ್ರೆಸ್ ಪರವಾದ ಪೋಸ್ಟ್‌ಗಳೇ ಕಾಣುತ್ತವೆ. ಭಾರತ್ ಜೋಡೋ ಯಾತ್ರೆಯ ಸಫಲತೆಯ ವಿಡಿಯೋಗಳು, ಕಾಂಗ್ರೆಸ್ ಪಕ್ಷವನ್ನು ವಿಜೃಂಭಿಸುವ ಹೇಳಿಕೆಗಳೇ ಕಾಣಸಿಗುತ್ತವೆ. ಹಾಗಾಗಿ ಈ ಸಮೀಕ್ಷೆಯ ಅಂಕಿ ಅಂಶಗಳು ಪ್ರಶ್ನಾರ್ಹವಾಗಿವೆ.
ಇದನ್ನೂ ಓದಿ | ಲೋಕಸಭೆ ಚುನಾವಣೆ ಸಮೀಕ್ಷೆ | ನಿತೀಶ್ ದೂರ: ಈಗಲೇ ಎಲೆಕ್ಷನ್ ನಡೆದರೆ ಎನ್ಡಿಎಗೆ ಸಿಗುವ ಸ್ಥಾನ ಎಷ್ಟು?