ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಜುಲೈ ೨೮ರಂದು ದೊಡ್ಡಬಳ್ಳಾಪುರದಲ್ಲಿ ಬೃಹತ್ ಸಾಧನಾ ಸಮಾವೇಶ ನಡೆಸಲು ಶುಕ್ರವಾರ ನಡೆದ ಬಿಜೆಪಿಯ ಚಿಂತನ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಮೂಲಕ ರಾಜ್ಯದಾದ್ಯಂತ ವಿಧಾನಸಭಾ ಚುನಾವಣೆಯ (Election 2023) ಪ್ರಚಾರವನ್ನು ಆರಂಭಿಸಲು ಪಕ್ಷ ತೀರ್ಮಾನಿಸಿದೆ.
ಈ ಸಮಾವೇಶಕ್ಕೆ ಒಂದು ಲಕ್ಷ ಜನರನ್ನು ಸೇರಿಸಬೇಕು. ಈ ಮೂಲಕ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಲು ಮುಂದಾಗಬೇಕೆಂದು ಸಭೆಯಲ್ಲಿ ಚರ್ಚಿಸಿ, ಅಂತಿಮ ನಿರ್ಧಾರಕ್ಕೆ ಬರಲಾಗಿದೆ. ಇದೇ ರೀತಿಯ ಸಾಧನಾ ಸಮಾವೇಶನವನ್ನು ಕೆಲ ಪ್ರಮುಖ ಜಿಲ್ಲೆಗಳಲ್ಲಿ ನಡೆಸಲೂ ತೀರ್ಮಾನಿಸಲಾಗಿದೆ. ದೇವನಹಳ್ಳಿಯ ಜೆಡಬ್ಲ್ಯು ಮ್ಯಾರಿಯೆಟ್ ಪ್ರೆಸ್ಟೀಜ್ ಗಾಲ್ಫ್‌ಶೈರ್ ರೆಸಾರ್ಟ್‌ನಲ್ಲಿ ಚಿಂತನ ಸಭೆ ನಡೆಯುತ್ತಿದೆ.
ರಾಜ್ಯದಲ್ಲಿ ೨೦೨೩ರಲ್ಲಿ ನಡೆಯಲಿರುವ ಚುನಾವಣೆಯಲ್ಲಿ ೧೫೦ ಸ್ಥಾನ ಗೆಲ್ಲಲು ಕಾರ್ಯತಂತ್ರ ರೂಪಿಸುವ ಕುರಿತು ವಿಸ್ತೃತ ಚರ್ಚೆ ನಡೆದಿದೆ. ಜಿಲ್ಲಾವಾರು ಪಕ್ಷದ ಸಂಘಟನೆ ಕುರಿತು ಚರ್ಚಿಸಲಾಗಿದ್ದು, ಹಳೇ ಮೈಸೂರು ಭಾಗದಲ್ಲಿ ಪಕ್ಷದ ಬಲವನ್ನು ಹೆಚ್ಚಿಸಲು ಅನುಸರಿಸಬೇಕಾಗಿರುವ ಕ್ರಮಗಳ ಕುರಿತು ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ಈ ಭಾಗದ ಸಚಿವರು, ನಾಯಕರು ತಾವೂ ಗೆಲ್ಲುವುದರ ಜತೆಗೆ ಒಂದೊಂದು ಕ್ಷೇತ್ರದಲ್ಲಿ ಗೆಲ್ಲಿಸಲು ಮುಂದಾದರೂ ಸಾಕು, ನಾವು ಗುರಿ ಮುಟ್ಟಬಹುದು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸಭೆಯಲ್ಲಿ ಹೇಳಿದ್ದಾರೆ.
ಅಧಿಕಾರಿಗಳ ಬಂಧನಕ್ಕೆ ಪ್ರಶಂಸೆ
ಪೂರ್ಣ ಬಹುಮತದ ಸರ್ಕಾರ ಇದ್ದರೆ ಆಗ ಕೆಲಸ ಮಾಡುವ ವ್ಯವಸ್ಥೆಯೇ ಬೇರೆ ಇರುತ್ತದೆ. ಬಹುಮತ ಬರದೇ ಇದ್ದರೆ ಕಷ್ಟದ ರೀತಿಯಲ್ಲಿ ಸರ್ಕಾರ ನಡೆಸಬೇಕಾಗುತ್ತದೆ ಎಂದು ಹಳೆಯದನ್ನು ನೆನಪಿಸಿದ ಸಂತೋಷ್, ಐಪಿಎಸ್ ಮತ್ತು ಐಎಎಸ್ ಅಧಿಕಾರಿಗಳ ಬಂಧನ ಪ್ರಕರಣ ಪ್ರಸ್ತಾಪಿಸಿದ ಅವರು, ಎಡಿಜಿಪಿ ಮಟ್ಟದ ಅಧಿಕಾರಿಯನ್ನು ಯಾವ ರಾಜ್ಯದಲ್ಲೂ ಬಂಧಿಸಿಲ್ಲ, ಐಎಎಸ್ ಅಧಿಕಾರಿಯನ್ನೂ ಬೇರೆ ರಾಜ್ಯಗಳಲ್ಲಿ ಬಂಧಿಸಿಲ್ಲ. ಈ ಬಂಧನದ ಮೂಲಕ ಕರ್ನಾಟಕದಲ್ಲಿ ಯಾವುದಕ್ಕೂ ಬೆಂಬಲ ಇಲ್ಲ ಎಂಬುದನ್ನು ಸರ್ಕಾರ ಸಾಬೀತುಪಡಿಸಿದಂತಾಗಿದೆ ಎಂದು ಸರ್ಕಾರದ ನಡೆಯನ್ನು ಪ್ರಶಂಸಿಸಿದ್ದಾರೆ.
ಸಭೆಯಲ್ಲಿ ಮಾತನಾಡಿದ ಕೆಲ ಶಾಸಕರು, ಬಹುಮತ ಬಂದು ಸರ್ಕಾರ ಮಾಡಿದರೆ ಹೇಗಿದ್ದರೂ ಲಿಂಗಾಯತರು ಅಥವಾ ಒಕ್ಕಲಿಗರನ್ನೇ ಸಿಎಂ ಮಾಡುತ್ತೀರಿ. ಹಾಗಾಗಿ ಬೇರೆ ಬೇರೆ ಸಮುದಾಯಕ್ಕೆ ಅವಕಾಶ ಕೊಟ್ಟು ಶಾಸಕರನ್ನಾಗಿ ಮಾಡಿ. ಉಳಿದ ಸಮುದಾಯಗಳಿಗೆ ಶಾಸಕ ಸ್ಥಾನದಲ್ಲಿ ಪ್ರಾತಿನಿಧ್ಯ ಸಿಗಲಿ ಎಂದು ಅಭಿಪ್ರಾಯ ಮಂಡಿಸಿದ್ದಾರೆಂದು ತಿಳಿದು ಬಂದಿದೆ. ಮುಖ್ಯವಾಗಿ ಪಂಚಮಸಾಲಿ ಸಮುದಾಯ ಬಿಜೆಪಿಯಿಂದ ದೂರವಾಗುತ್ತಿರುವ ಕುರಿತು ಬಿಸಿ ಬಿಸಿ ಚರ್ಚೆ ನಡೆದಿದೆ.
ಈ ಸಭೆಯಲ್ಲಿ ಬಿ.ಎಲ್. ಸಂತೋಷ್, ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಸರ್ಕಾರಕ್ಕೆ ಮತ್ತು ಪಕ್ಷಕ್ಕೆ ಅನೇಕ ಸಲಹೆಗಳನ್ನು ನೀಡಿದ್ದು, ಸರ್ಕಾರದ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಕೆಲಸವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಇನ್ನಷ್ಟು ಚುರುಕಾಗಿ ಕೆಲಸ ಮಾಡಬೇಕಾದ ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ.
ಪ್ರವಾಸಕೈಗೊಳ್ಳಲು ಸಿಎಂಗೆ ಸೂಚನೆ
ಚುನಾವಣೆ ದೃಷ್ಟಿಯಿಂದ ಸಂಘಟನಾತ್ಮಕವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೇ ಹೆಚ್ಚಿನ ಚರ್ಚೆ ನಡೆದಿದ್ದು, ಆಗಸ್ಟ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯ ಪ್ರವಾಸ ಕೈಗೊಂಡು ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು. ಸರ್ಕಾರದ ಪರವಾಗಿ ಜನಾಭಿಪ್ರಾಯ ಮೂಡಿಸಲು ನಿರಂತರವಾಗಿ ಇನ್ನು ಮುಂದೆ ಪ್ರವಾಸ ಕೈಗೊಳ್ಳುತ್ತಿರಬೇಕು ಎಂದು ಸೂಚಿಸಲಾಗಿದೆ.
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕೂಡ ಈ ಸಭೆಯಲ್ಲಿ ಭಾಗವಹಿಸಿದ್ದು, ಚುನಾವಣೆಗೆ ಯಾವ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕೆಂಬ ಕುರಿತು ಸಲಹೆ-ಸೂಚನೆಗಳನ್ನು ನೀಡಿದ್ದಾರೆ. ಈ ಹಿಂದಿನ ಚುನಾವಣೆಯಲ್ಲಿ ಆಗಿರುವ ತಪ್ಪುಗಳನ್ನು ವಿವರಿಸಿದ ಅವರು, ಪಕ್ಷವನ್ನು ಅಧಿಕಾರಕ್ಕೆ ತರಲು ತಾವು ಪಟ್ಟಿದ್ದ ಶ್ರಮವನ್ನು ಸಭೆಯ ಗಮನಕ್ಕೆ ತಂದಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಬೊಮ್ಮಾಯಿ ಅವರ ಬೆನ್ನುತಟ್ಟಿರುವ ಯಡಿಯೂರಪ್ಪ ಪಕ್ಷದ ಪರವಾಗಿ ಪ್ರಚಾರ ಕೈಗೊಳ್ಳುವುದಾಗಿ ಸಭೆಯಲ್ಲಿ ಪ್ರಕಟಿಸಿದರೆಂದು ತಿಳಿದು ಬಂದಿದೆ.
ಇದನ್ನೂ ಓದಿ| Election 2023 | ಬಿಜೆಪಿ ಜತೆಗೆ ಆರ್‌ಎಸ್‌ಎಸ್ ಸಭೆ: ಸಂಘಟನೆ ಮನವೊಲಿಕೆ ಯತ್ನ?