ಬೆಂಗಳೂರು: ತೆಲಂಗಾಣ ಕಾಂಗ್ರೆಸ್‌ನವರಿಗೆ (Telangana Congress) ಧಮ್ ಇಲ್ಲ. ಬರಗಾಲ ಬಂದಾಗ ಸಿಎಂ ಸಿದ್ದರಾಮಯ್ಯ (CM Siddaramaiah) ಕಣ್ಣೀರು ಸುರಿಸಿದ್ದೇ ಸುರಿಸಿದ್ದು. ಇವಾಗ ಅವರದ್ದು ಬರೀ ಮೊಸಳೆ ಕಣ್ಣೀರು ಎಂಬುದು ಗೊತ್ತಾಗಿದೆ. ಅಧಿವೇಶನದಲ್ಲಿ ಬರದ ಬಗ್ಗೆ ಮಾತನಾಡೋದು ಬಿಟ್ಟು ಇಲ್ಲಿ ರೆಸಾರ್ಟ್‌ಗೆ ತೆಲಂಗಾಣದ ಶಾಸಕರನ್ನು ಕರೆತಂದು ಸಚಿವರು ಸೇವೆ ಮಾಡುತ್ತಾ ಕುಳಿತುಕೊಂಡರೆ ಪರಿಣಾಮ ನೆಟ್ಟಗಿರಲ್ಲ. ಅವರಿಗೆ ಹೋರಾಟ ಪ್ರತಿಭಟನೆಗಳ ಮೂಲಕ ತಕ್ಕ ಪಾಠವನ್ನು ಕಲಿಸುತ್ತೇವೆ ಎಂದು ಆರ್. ಅಶೋಕ್ (R Ashok) ಹೇಳಿದರು. ಅಲ್ಲದೆ, ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ (Election Results 2023) ಬಿಜೆಪಿ ಮುನ್ನಡೆ ಸಾಧಿಸುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಆರ್. ಅಶೋಕ್, ರಾಜ್ಯದಲ್ಲಿ ಅಧಿವೇಶನ ಇದ್ದರೂ ನಮ್ಮ ಸಚಿವರು ತೆಲಂಗಾಣಕ್ಕೆ ಹೋಗಿ ಸೇವೆ ಮಾಡುತ್ತಿದ್ದಾರೆ. ಮುಂದೆ ಇವರಿಗೆ ಜನರು ತಕ್ಕ ಪಾಠವನ್ನು ಕಲಿಸಲಿದ್ದಾರೆ. ಆದರೆ, ಇಲ್ಲಿ ಬರದ ಸ್ಥಿತಿಯನ್ನು ಇಟ್ಟುಕೊಂಡು ಈ ವೇಳೆ ರಾಜ್ಯದ ರೆಸಾರ್ಟ್‌ಗಳಿಗೆ ಅಲ್ಲಿನ ಶಾಸಕರನ್ನು ಕರೆತಂದು ನಮ್ಮ ಸಚಿವರು ಸೇವೆ ಮಾಡಲು ಮುಂದಾದರೆ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆಯನ್ನು ನೀಡಿದರು.
ಗೆಲ್ಲುವ ರಾಜ್ಯಗಳಿಗೆ ಓಡಿ ಹೋಗುವ ಡಿಕೆಶಿ
ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಅವರು ಗೆಲ್ಲುವ ರಾಜ್ಯಗಳಿಗೆಲ್ಲ ಓಡಿ ಹೋಗುತ್ತಾರೆ. ಮಧ್ಯಪ್ರದೇಶ ಗೆದ್ದರೂ ಅಲ್ಲಿಗೆ ಓಡಿ ಹೋಗುತ್ತಿದ್ದರು. ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲ್ಲಿಸಿ ಸಿಎಂ ಆಗಬೇಕು ಎಂಬ ಅವರ ಕನಸಿಗೆ ಇಲ್ಲಿರುವ ಸಿಎಂ ಸಿದ್ದರಾಮಯ್ಯ ಏನು ಮಾಡುತ್ತಾರೆ ಎಂಬುದನ್ನು ನೋಡಬೇಕಲ್ಲವೇ? ಪಾಪ ಶಿವಕುಮಾರ್‌ಗೆ ಸಿದ್ದರಾಮಯ್ಯ ಬಿಟ್ಟು ಕೊಡಬೇಕಲ್ಲ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ವ್ಯಂಗ್ಯವಾಡಿದ್ದಾರೆ.
ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲ ಕಡೆ ಬಿಜೆಪಿ ಗೆಲುವಿನ ಹೊಸ್ತಿಲಿನಲ್ಲಿ ಇದೆ. ಗ್ಯಾರಂಟಿಗಳು ಎಲ್ಲ ಠುಸ್ ಪಟಾಕಿ ಎಂದು ಹೇಳಿದರು.
ಕಳೆದ ಬಾರಿ ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಸೋಲು ಕಂಡಿದ್ದೆವು. ತೆಲಂಗಾಣದಲ್ಲೂ ನಾವು ನಾಲ್ಕು ಸೀಟು ಪಡೆದಿದ್ದೇವೆ. ರಾಜಸ್ಥಾನ ಬಿಜೆಪಿ ಗೆಲ್ಲೋದು ನಿಶ್ಚಿತ. ತೆಲಂಗಾಣದಲ್ಲೂ ಬಿಜೆಪಿ ಹೆಚ್ಚು ಸೀಟುಗಳು ಬರುತ್ತಿದೆ. ಎಲ್ಲ ಕಡೆಯೂ ಬಿಜೆಪಿ ಜಯದ ಹೊಸ್ತಿಲಲ್ಲಿ ಇದೆ. ಇದೆಲ್ಲವೂ ನರೇಂದ್ರ ಮೋದಿಯವರ ವರ್ಚಸ್ಸಿನಿಂದ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಎಲ್ಲ ಕಡೆ ಟೋಪಿ ಹಾಕಿಕೊಂಡು ಹೋಗಿ ಈ ನಮ್ಮ ಕಾಂಗ್ರೆಸ್ ನಾಯಕರು ತೆಲಂಗಾಣದ ರೆಸಾರ್ಟ್‌ನಲ್ಲಿ ಸರ್ವಿಸ್ ಕೊಡೋಕೆ ಹೋಗಿದ್ದಾರೆ. ಇದು ಒಂದು ನಾಚಿಕೆಗೇಡಿನ ಸಂಗತಿ ಎಂದು ಆರ್. ಅಶೋಕ್ ಕಿಡಿಕಾರಿದರು.
ಲೋಕಸಭಾ ಚುನಾವಣೆಯಲ್ಲಿ ಲಾಭ
ತೆಲಂಗಾಣದಲ್ಲಿ ಕೆಸಿಆರ್ ಕುಟುಂಬ ರಾಜಕಾರಣದಿಂದ ಹಿನ್ನಡೆ ಆಗಿದೆ. ಕಳೆದ ಚುನಾವಣೆಯಲ್ಲಿ ಈ ನಾಲ್ಕು ರಾಜ್ಯದಲ್ಲಿ ನಾವು ಸೋತ್ತಿದ್ದೆವು. ಆದರೆ, ಈ ಬಾರಿ ಎರಡು ರಾಜ್ಯದಲ್ಲಿ ಗೆಲುವು ಸಾಧಿಸಿದ್ದೇವೆ. ತೆಲಂಗಾಣದಲ್ಲಿ 11 ಸ್ಥಾನದಲ್ಲಿ ಮುನ್ನಡೆಯಲ್ಲಿದ್ದೇವೆ. ಕಳೆದ ಬಾರಿ ತೆಲಂಗಾಣದಲ್ಲಿ ನಾಲ್ಕು ಸ್ಥಾನ ಇತ್ತು. ಈಗ 11 ಸ್ಥಾನದಲ್ಲಿ ಮುನ್ನಡೆ ಸಾಧಿಸಿದ್ದೇವೆ. ದೊಡ್ಡ ದೊಡ್ಡ ರಾಜ್ಯದಲ್ಲಿ ಬಿಜೆಪಿ ಮುನ್ನಡೆಯನ್ನು ಕಂಡುಕೊಂಡಿದೆ. ಲೋಕಸಭಾ ಚುನಾವಣೆಯಲ್ಲಿ ಪರಿಣಾಮ ಬೀರಬಹುದಾದ ರಾಜ್ಯದಲ್ಲಿ ನಾವು ಮುಂದೆ ಇದ್ದೇವೆ ಎಂದು ಆರ್. ಅಶೋಕ್ ಹೇಳಿದರು.
ತನ್ನ ತಪ್ಪಿನಿಂದಲೇ ಬಿಆರ್‌ಎಸ್ ತೆಲಂಗಾಣವನ್ನು ಕಳೆದುಕೊಂಡಿದೆ
ಬಿಆರ್‌ಎಸ್ ತೆಲಂಗಾಣದಲ್ಲಿ ಕುಟುಂಬ ರಾಜಕೀಯ ಮಾಡಿದೆ. ತನ್ನ ತಪ್ಪಿನಿಂದಲೇ ಬಿಆರ್‌ಎಸ್ ತೆಲಂಗಾಣವನ್ನು ಕಳೆದುಕೊಂಡಿದೆ. ಕಳೆದ ಬಾರಿ ಮಧ್ಯಪ್ರದೇಶ, ಛತ್ತಿಸ್‌ಗಡ, ರಾಜಸ್ಥಾನಗಳಲ್ಲಿ ಕಾಂಗ್ರೆಸ್ ಜಯ ಗಳಿಸಿತ್ತು. ಆದರೆ, ಈ ವರ್ಷ ಬಿಜೆಪಿ ಮುಂದಿದೆ. ಕರ್ನಾಟಕದಲ್ಲಿ ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ಹೋಗುವ ವಿಚಾರ. ಈಗಿನ ಫಲಿತಾಂಶ ನೋಡಿದರೆ ಕಾಂಗ್ರೆಸ್‌ನವರೆ ಬಿಜೆಪಿಗೆ ಬರುವ ಸಾಧ್ಯತೆ ಇದೆ. ಕಾಂಗ್ರೆಸ್‌ನಲ್ಲೇ ಭಿನ್ನಮತೀಯ ಚಟುವಟಿಕೆ ಹೆಚ್ಚಾಗಿದೆ. ಬೆಳಗಾವಿ, ದಾವಣಗೆರೆ, ರಾಯಚೂರಿನಲ್ಲಿ ಕಾಂಗ್ರೆಸ್ ಭಿನ್ನಮತ ಶುರುವಾಗಿದೆ. ಕಾಂಗ್ರೆಸ್‌ನವರು ಅವರ ಕಾಲಿನ ಮೇಲೆ ಅವರೇ ಕಲ್ಲು ಹಾಕಿಕೊಳ್ಳುತ್ತಾರೆ ಎಂದು ಆರ್. ಅಶೋಕ್ ಹೇಳಿದರು.
ನಾಳೆ ಅಧಿವೇಶನ ಇದ್ದರೂ ಡಿ.ಕೆ. ಶಿವಕುಮಾರ್ ಹಾಗೂ ಕೆಲವು ಸಚಿವರು ತೆಲಂಗಾಣಕ್ಕೆ ಹೋಗಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಆರ್. ಅಶೋಕ್, ರಾಜ್ಯದಲ್ಲಿ ಬರ ಇದೆ. ಇಲ್ಲಿನ ರೈತರು ಬರಗಾಲದಲ್ಲಿ ಸಂಕಷ್ಟದಲ್ಲಿದ್ದರೂ ತೆಲಂಗಾಣಕ್ಕೆ ಹೋಗಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿ: Election Results 2023: ಚುನಾವಣೆ ಗೆಲುವು; ಬಿಜೆಪಿ ಕಚೇರಿಯಲ್ಲಿ ಮೋದಿ ಸ್ವಾಗತಕ್ಕೆ ಸಿದ್ಧತೆ; ಸಂಭ್ರಮ
ಲೋಕಸಭೆಯಲ್ಲೂ ಗ್ಯಾರಂಟಿ ಅಬ್ಬರ; ಜನ ತೀರ್ಮಾನ ಮಾಡ್ತಾರೆ
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗ್ಯಾರಂಟಿ ಯೋಜನೆಗಳ ಅಬ್ಬರ ಬರಲಿದೆ. ಆದರೆ, ಜನ ತೀರ್ಮಾನ ಮಾಡುತ್ತಾರೆ. ಮೋದಿ ಸರ್ಕಾರ ಬೇಕಾ ಅಥವಾ ಮಮತಾ ಬ್ಯಾನರ್ಜಿ, ರಾಹುಲ್‌ನಂಥವರ ಸರ್ಕಾರ ಬೇಕಾ ಅಂತಾ ಜನ ತೀರ್ಮಾನ ಮಾಡಲಿ ಎಂದು ಆರ್. ಅಶೋಕ್ ಹೇಳಿದರು.