ಬೆಂಗಳೂರು: ದೀಪಾವಳಿ ಹಬ್ಬ (Deepawali Festival) ಸಂದರ್ಭದಲ್ಲಿ ಮನೆಯಲ್ಲಿ ಆದ ತಪ್ಪಿಗೆ ವಿಷಾದ ವ್ಯಕ್ತಪಡಿಸಿದ್ದೇನೆ. ಆ ದಿನ ಉಪಯೋಗಿಸಿದ 68,526 ರೂಪಾಯಿ ದಂಡ ಹಾಕಿದ್ದಾರೆ. ಆ ಹಣವನ್ನು ನಾನು ಕಟ್ಟಿದ್ದೇನೆ. ಇನ್ನು ಮುಂದೆ ಕರೆಂಟ್ ಕಳ್ಳ ಅನ್ನೋದನ್ನು ನಿಲ್ಲಿಸಿ. ಹಗಲು ದರೋಡೆಕೋರರು ನೀವು. ನಿಮ್ಮಷ್ಟು ದೊಡ್ಡ ಕಳ್ಳ ನಾನಲ್ಲ. ಲೂಲೂ ಮಾಲ್‌ಗೆ (Lulu Mall) ನೀವು ಆರು ತಿಂಗಳು ಕರೆಂಟ್ ಬಿಲ್ (Electricity Bill) ಅನ್ನೇ ಕೊಟ್ಟಿಲ್ಲ. ನನಗೆ ಈಗ ಹೇಳಲು ಬರುತ್ತೀರಾ ಎಂದು ಮಾಜಿ ಸಿಎಂ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ವಿದ್ಯುತ್ ಕಳ್ಳ ಅಂತ ನನಗೆ ಲೇಬಲ್ ಕಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ನಾನೀಗ ದಂಡ ಕಟ್ಟಿದ್ದೇನೆ. ಇನ್ನು ಮುಂದೆ ನನಗೆ ವಿದ್ಯುತ್ ಕಳ್ಳ ಎಂದು ಕರೆಯುವ ಹಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನನಗೆ ಒಟ್ಟು 68,526 ರೂಪಾಯಿ ದಂಡ ಹಾಕಿದ್ದಾರೆ. ಈ ಸಂಬಂಧ ಒಂದು ಬಿಲ್ ಕೊಟ್ಟಿದ್ದಾರೆ. 2.5 ಕಿಲೋ ವ್ಯಾಟ್ ಉಪಯೋಗ ಮಾಡಿಕೊಂಡಿದ್ದೇನೆ. ಒಟ್ಟು 2526 ರೂಪಾಯಿ ಹಾಕಿದ್ದಾರೆ. ಮನೆಗೆ 33 ಕಿಲೋ ವ್ಯಾಟ್ (ಪ್ರತಿದಿನ) ಉಪಯೋಗಿಸುತ್ತಿದ್ದೇನೆ. ಅದಕ್ಕೆ ಎರಡು ಸಾವಿರ ರೂಪಾಯಿಯಂತೆ ದಂಡ ಹಾಕಿದ್ದಾರೆ. ನಾನೇ ದಂಡ ಕಟ್ಟುತ್ತೇನೆಂದು ಹೇಳಿದೆ. ಮಹಜರ್‌ಗೆ ಬಂದವರು ಟಿವಿ ಮೀಡಿಯಾದಲ್ಲಿ ಬಂದ ವರದಿ ಆಧಾರದ ಮೇಲೆ ಮಹಜರ್ ಮಾಡಲು ಬಂದಿದ್ದೇವೆಂದು ಹೇಳಿದ್ದರು. ನನ್ನ ಮನೆಯ ಸೀರಿಯಲ್ ಸೆಟ್‌ಗೆ ಒಂದು ಕಿಲೋ ವ್ಯಾಟ್‌ಗಿಂತಲೂ ಕಡಿಮೆ ಬರುತ್ತದೆ. ಆದರೆ, ಇವರು 2.5 ಕಿಲೋ ವ್ಯಾಟ್‌ಗೆ ಏಳು ದಿನಕ್ಕೆ ಚಾರ್ಜ್ ಮಾಡಿದ್ದಾರೆ. ಒಟ್ಟು 71 ಯುನಿಟ್ ಬಳಕೆಗೆ 3ರಷ್ಟು ದಂಡ ಹಾಕಿದ್ದಾರೆ. ದಂಡದ ಹಣ ಕಟ್ಟಿದ್ದೇನೆ. ಆದರೆ, ಇದನ್ನು ವಿರೋಧ ಮಾಡಿ ಕಟ್ಟಿದ್ದೇನೆ. ಹೆಚ್ಚುವರಿ ಬಿಲ್ ಮುಂದೆ ನನ್ನ ಮನೆಗೆ ಬರುವ ಬಿಲ್‌ಗೆ ಅಡ್ಜೆಸ್ಟ್ ಮಾಡಬೇಕು ಎಂದು ಹೇಳಿದ್ದೇನೆ ಎಂದು ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಲೂಲೂ ಮಾಲ್‌ಗೆ ಏಕೆ ವಿದ್ಯುತ್ ಬಿಲ್ ಹಾಕಲಿಲ್ಲ?
ಲೂಲೂ ಮಾಲ್‌ಗೆ ಆರು ತಿಂಗಳು ವಿದ್ಯುತ್ ಬಿಲ್ ಹಾಕಿಲ್ಲ. ನನ್ನನ್ನು ಕಳ್ಳ ಅಂದರಲ್ಲವೇ? ಇವರು ಕಟ್ಟಿದ್ದಾರಾ? ಮೇಕೆದಾಟು ಪ್ರತಿಭಟನೆಗೆ ಕರೆಂಟ್ ಅನುಮತಿ ತಗೊಂಡಿದ್ದರಾ? ನನಗಿಂತಲೂ ದೊಡ್ಡ ಕಳ್ಳ ಅಂತ ಹೇಳಲೇ? ಕನಕೋತ್ಸವ ಮಾಡಿದ್ರಲ್ಲ ಅದಕ್ಕೆ ಪರ್ಮಿಷನ್ ತಗೊಂಡಿದ್ದಾರಾ? ನನ್ನ ಬಳಿ ಸಹ ವಿಡಿಯೊ ಇದೆ ಎಂದು ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.
ಇದನ್ನೂ ಓದಿ: Karnataka Weather : ದಕ್ಷಿಣ ಒಳನಾಡಲ್ಲಿ ಮಳೆ; ಉಳಿದೆಡೆ ಒಣ ಹವೆ, ಬೆಂಗಳೂರಲ್ಲಿ ಹೇಗಿದೆ?
ಪೆನ್‌ಡ್ರೈವ್ ಠುಸ್ ಆಗಿಲ್ಲ
ಇಡೀ ದಿನ ವರ್ಗಾವಣೆಗೆ ಸಂಬಂಧಿಸಿದ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ವಿಡಿಯೊ ಮಾಧ್ಯಮಗಳಲ್ಲಿ ಪ್ರಸಾರವಾಯಿತು. ವರ್ಗಾವಣೆ ವಿಚಾರ ಅಲ್ಲ ಅಂತ ಹೇಳಿದ್ದಾರೆ. ತ್ಯಾಗ ಮಾಡಿದ್ದಾರಂತೆ ಅದನ್ನು ಒಪ್ಪೋಣ. ಕ್ಷೇತ್ರದ ಕೆಲಸ ಮಾಡುತ್ತಿದ್ದಾರಂತೆ ಒಪ್ಪಿಕೊಳ್ಳೋಣ. ಆದರೆ, ನಾನು ಹತಾಶೆಯಿಂದ ಮಾತನಾಡುತ್ತಿದ್ದೇನೆಂದು ಟ್ವೀಟ್ ಮಾಡಿದ್ದಾರೆ. ನಾನು ಸದಾ ವರ್ಗಾವಣೆಯಲ್ಲಿ ಇದ್ದೆ ಅಂತ ಹೇಳಿದ್ದೀರಿ. ವರ್ಗಾವಣೆ ದಂಧೆ ನಡೆಯುತ್ತಿರಬೇಕಾದರೆ ಯಾಕೆ ತಡೆಯಲಿಲ್ಲ? ನೀವು ಕೋ ಆರ್ಡಿನೇಷನ್ ಚೇರ್ ಮ್ಯಾನ್ ಆಗಿದ್ದಿರಿ. ಯಾಕೆ ಹೇಳಲಿಲ್ಲ? ಪೆನ್‌ಡ್ರೈವ್ ಠುಸ್ ಆಯಿತು ಅಂತ ಹೇಳುತ್ತೀರಲ್ಲವೇ? ನಿಮ್ಮ ಸಚಿವರು ನನಗೆ ಯಾಕೆ ಮನವಿ ಮಾಡಿದರು? ನಿದ್ದೆಗೆಟ್ಟು ಸಂಪರ್ಕ ಮಾಡಿದ್ದರಲ್ಲ. ಯಾರು ಯಾರು ಫೋನ್ ಮಾಡಿದಿರಿ? ನಿಮ್ಮ ಋಣದಲಿ ಇದ್ದೇವೆ ಅಂತ ಮನವಿ ಮಾಡಿದವರು ಯಾರು? ಠುಸ್ ಆಗಿಲ್ಲ ಎಚ್ಚರಿಕೆಯಿಂದ ಇರಿ ಎಂದು ಎಚ್.ಡಿ. ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.