ಬೆಂಗಳೂರು: ಶಕ್ತಿ ಕೇಂದ್ರ ವಿಧಾನಸೌಧದಲ್ಲಿ (Vidhana Soudha) “ಪಾಕಿಸ್ತಾನ್ ಜಿಂದಾಬಾದ್” (Pakistan Zindabad) ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ. ಹೀಗಾಗಿ ಅಲ್ಲಿ ಭಾರಿ ಭದ್ರತೆಯನ್ನು ನಿಯೋಜನೆ ಮಾಡಲು ಮುಂದಾಗಿದೆ. ಈ ಸಂಬಂಧ ಗೃಹ ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಸೆಕ್ಯುರಿಟಿ ಮಾಸ್ಟರ್ ಪ್ಲ್ಯಾನ್‌ಗೆ ಸಂಬಂಧಪಟ್ಟಂತೆ ಶೀಘ್ರ ಒಪ್ಪಿಗೆಯೂ ಸಿಗಲಿದೆ. ಒಟ್ಟಿನಲ್ಲಿ ಸಂಸತ್ ಮಾದರಿಯ ಸೆಕ್ಯುರಿಟಿ ಸಿಸ್ಟಮ್ ಅನ್ನು ಅಳವಡಿಸಲು ಪೊಲೀಸ್ ಇಲಾಖೆ (Police Department) ಮುಂದಾಗಿದೆ. ಹೀಗಾಗಿ ವಿಧಾನಸೌಧ ಪ್ರವೇಶಕ್ಕೆ ಮುನ್ನ ಫೇಸ್ ರೀಡಿಂಗ್ (Face Reading) ಮಾಡಲಾಗುತ್ತದೆ.
ವಿಧಾನಸೌಧಕ್ಕೆ ನೂತನವಾಗಿ ಭದ್ರತೆ ಒದಗಿಸಲು 43 ಕೋಟಿ ರೂಪಾಯಿ ವೆಚ್ಚವಾಗಲಿದೆ. ಗೃಹ ಇಲಾಖೆಯಿಂದ ಈ ಸಂಬಂಧ ಸಲ್ಲಿಕೆಯಾಗಿರುವ ಪ್ರಸ್ತಾಪಕ್ಕೆ ಶೀಘ್ರವೇ ಸಿಎಂ ಸಿದ್ದರಾಮಯ್ಯ ಅನುಮೋದನೆ ನೀಡಲಿದ್ದಾರೆ. ಹೀಗಾಗಿ ದೆಹಲಿಯ ಹೊಸ ಪಾರ್ಲಿಮೆಂಟ್ ಮಾದರಿಯಲ್ಲಿ ವಿಧಾನಸೌಧಕ್ಕೂ ಸೆಕ್ಯುರಿಟಿ ಸಿಗಲಿದೆ.
ಶಾಸಕರು, ಸಚಿವರು, ಪತ್ರಕರ್ತರಿಗೂ ಅನ್ವಯ
ನೂತನ ಮಾದರಿಯ ಭದ್ರತಾ ಕ್ರಮವನ್ನು ಅಳವಡಿಸಲು ಪೊಲೀಸರು ಮುಂದಾಗಿದ್ದಾರೆ. ಈ ಹೊಸ ಸೆಕ್ಯುರಿಟಿ ಪದ್ಧತಿ ಶಾಸಕರು, ಸಚಿವರು, ಅಧಿಕಾರಿಗಳು, ಪತ್ರಕರ್ತರಿಗೂ ಅನ್ವಯವಾಗಲಿದೆ. ಹೀಗಾಗಿ ವಿಧಾನಸೌಧದ ಎಲ್ಲ ಗೇಟ್‌ಗಳಲ್ಲಿ ಫೇಸ್ ರೀಡಿಂಗ್ ಅನ್ನು ಕಡ್ಡಾಯ ಮಾಡಲಾಗಿದೆ.
ಹೊಸ ಸಿಸ್ಟಂನಲ್ಲಿ ಏನೆಲ್ಲ ಇರಲಿದೆ?
ವಿಧಾನಸೌಧದ ಆವರಣದಲ್ಲಿ 256 ಸಿಸಿ ಕ್ಯಾಮೆರಾವನ್ನು ಅಳವಡಿಕೆ ಮಾಡಲಾಗುತ್ತದೆ. ಸದ್ಯ 18 ಸಿಸಿ ಕ್ಯಾಮೆರಾಗಳನ್ನು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಇವುಗಳನ್ನು ಹೆಚ್ಚಳ ಮಾಡಲಾಗುತ್ತದೆ. ಗೇಟ್ ಪ್ರವೇಶಿಸುವ ವಾಹನಗಳಿಗೆ ನೋಂದಾಯಿತ ಪಾಸ್ ಅನ್ನು ಅಳವಡಿಕೆ ಮಾಡಲಾಗುವುದು. ಎಲ್ಲ ಪ್ರವೇಶ ದ್ವಾರದಲ್ಲಿ ಎಲೆಕ್ಟ್ರಿಕ್ ಬ್ಯಾರಿಕೆಡ್ ಅನ್ನು ಅಳವಡಿಕೆ ಮಾಡಲಾಗುವುದು.
ಫೇಸ್ ರೀಡಿಂಗ್ ಸಿಸ್ಟಂ
ವಿಧಾನಸೌಧದ ಪ್ರತಿ ಗೇಟ್‌ನಲ್ಲಿಯೂ ಫೇಸ್ ರೀಡಿಂಗ್ ಸಿಸ್ಟಂ ಅನ್ನು ಅಳವಡಿಕೆ ಮಾಡಲಾಗುತ್ತದೆ. ಯಾವುದೇ ವ್ಯಕ್ತಿ ಒಳಗೆ ಬರುವ ಮುನ್ನ ಅಳವಡಿಕೆ ಮಾಡಲಾಗಿರುವ ಕ್ಯಾಮೆರಾವು ಅವರ ಫೇಸ್ ರೀಡ್ ಮಾಡಲಿದೆ. ಆ ವ್ಯಕ್ತಿಯು ಒಳಪ್ರವೇಶಿಸಿದ ಬಳಿಕ ಸಂಪೂರ್ಣ ಚಲನವಲನದ ಮೇಲೆ ನಿಗಾ ಇಡಲಾಗುತ್ತದೆ. ಒಳಪ್ರವೇಶ ಮತ್ತು ನಿರ್ಗಮನದವರೆಗಿನ ಮಾಹಿತಿಯು ಕಂಟ್ರೋಲ್ ರೂಮ್‌ಗೆ ಹೋಗಲಿದೆ. ಇನ್ನು ಬೂಮ್ ಬ್ಯಾರಿಯರ್ ತಳ್ಳಿ ಒಳನುಗ್ಗುವ ವಾಹನಗಳ ಟೈರ್ ಪಂಚರ್‌ಗೆ ಸಹ ತಂತ್ರಜ್ಞಾನವನ್ನು ಅಳವಡಿಕೆ ಮಾಡಲಾಗುತ್ತದೆ.
ಬೇಕು ಅಧಿಕೃತ ಐಡಿ ಕಾರ್ಡ್
ಶಾಸಕರು, ಸಚಿವರು, ಅಧಿಕಾರಿಗಳು, ಸಿಬ್ಬಂದಿಗಳು, ಪತ್ರಕರ್ತರು ಸಹ ತಪಾಸಣಾ ವ್ಯಾಪ್ತಿಗೆ ಬರಲಿದ್ದಾರೆ. ಅಧಿಕೃತ ಸಿಬ್ಬಂದಿಯ ಐಡಿ ಕಾರ್ಡ್ ಸ್ಕ್ಯಾನ್ ಮಾಡಿಸಿಯೇ ವಿಧಾನಸೌಧಕ್ಕೆ ಪ್ರವೇಶ ನೀಡಲಾಗುವುದು. ಪತ್ರಕರ್ತರ ಅಧಿಕೃತ ಐಡಿ ಕಾರ್ಡ್‌ಗಳಿಗೆ ಮಾತ್ರವೇ ಗೇಟ್‌ಗಳಲ್ಲಿ ಮಾನ್ಯತೆ ಸಿಗುತ್ತದೆ.
ಶಾಸಕರ ಜತೆಗೆ ಗುಂಪಾಗಿ ಬರುವ ಸಾರ್ವಜನಿಕರ ಸಂಪೂರ್ಣ ವಿವರವನ್ನು ಪಡೆದು ಪ್ರವೇಶಕ್ಕೆ ಅವಕಾಶ ನೀಡಲಾಗುವುದು. ಅಪಾಯಕಾರಿ ವಸ್ತುಗಳು, ಎಲೆಕ್ಟ್ರಿಕ್ ಹಾರ, ಸಿಡಿಮದ್ದುಗಳಿಗೆ ನಿಷೇಧ ಹೇರಲಾಗಿದೆ. ಸಭೆ ಸಮಾರಂಭಗಳಿಗಾಗಿ ಆಗಮಿಸುವವರ ಮೇಲೆ ಹೆಚ್ಚಿನ ನಿಗಾ ವಹಿಸಲು ಸೂಚನೆ ನೀಡಲಾಗಿದೆ.