Site icon Vistara News

Fire Station: ರಾಜ್ಯದ 17 ಕಡೆ 329 ಕೋಟಿ ರೂ. ವೆಚ್ಚದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣ: ಕೃಷ್ಣ ಬೈರೇಗೌಡ

Krishna ByreGowda

ಬೆಂಗಳೂರು: ಕೇಂದ್ರದಿಂದ 329 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, ಈ ಅನುದಾನದಲ್ಲಿ ರಾಜ್ಯದ 17 ಕಡೆ ನೂತನ ಅಗ್ನಿಶಾಮಕ ಠಾಣೆಗಳ ನಿರ್ಮಾಣ ಮಾಡುವುದು, ರಾಜ್ಯ ತರಬೇತಿ ಕೇಂದ್ರದ (State Training Centre) ಉನ್ನತೀಕರಣ, ಆಧುನಿಕ ಉಪಕರಣಗಳ ಖರೀದಿ, ನಗರ ಪ್ರದೇಶಗಳಲ್ಲಿ ಅಗ್ನಿಶಾಮಕ ದಳ ಬಲಪಡಿಸುವ ನಿರ್ಧಾರಕ್ಕೆ ಬರಲಾಗಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna ByreGowda) ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಯೋಜನೆಗಳಿಗೆ ಕ್ರಿಯಾ ಯೋಜನೆ ಸಲ್ಲಿಸಲಾಯಿತು. ಅಲ್ಲದೆ, ಈ ವೇಳೆ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ಬೆಳೆಯುತ್ತಿರುವ ಮತ್ತು ಅಗತ್ಯವಿರುವ ನಗರಗಳಲ್ಲಿ ನೂತನ ಅಗ್ನಿಶಾಮಕ ಠಾಣೆಗಳನ್ನು (Fire Station) ನಿರ್ಮಿಸಿ, ಜನರನ್ನು ಅಗ್ನಿ ಅವಘಡಗಳಿಂದ ಪಾರು ಮಾಡಿ ಎಂದು ಸೂಚಿಸಿದರು.

ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದ ಮಾನದಂಡದ ಅನ್ವಯ ರಾಜ್ಯದ ಅಗ್ನಿಶಾಮಕ ದಳಕ್ಕೆ 2022-23ರ ಸಾಲಿನಲ್ಲಿ 329 ಕೋಟಿ ರೂ. ಹಣ ಮಂಜೂರಾಗಿದೆ. ಈ ಹಣದ ಬಳಕೆಗೆ ಸಂಬಂಧಿಸಿದಂತೆ ಅಗ್ನಿ ಶಾಮಕದಳ ಪೊಲೀಸ್ ಮಹಾ ನಿರ್ದೇಶಕರಾದ ಕಮಲ್ ಪಂತ್ ಸೋಮವಾರ ವಿಕಾಸಸೌಧದಲ್ಲಿ ಕ್ರಿಯಾ ಯೋಜನೆ ಮಂಡಿಸಿದರು. ಇದಕ್ಕೆ ಸಚಿವ ಕೃಷ್ಣ ಬೈರೇಗೌಡ ಮೆಚ್ಚುಗೆ ಸೂಚಿಸಿದರು.

ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಸೂಚನೆ

ಈ ವೇಳೆ ಅಧಿಕಾರಿಗಳಿಗೆ ಮಹತ್ವದ ಸೂಚನೆ ನೀಡಿದ ಸಚಿವ ಕೃಷ್ಣ ಬೈರೇಗೌಡ, “ರಾಜ್ಯದ ಅಗ್ನಿಶಾಮಕ ದಳಕ್ಕೆ ಕೇಂದ್ರದಿಂದ ಮಂಜೂರಾಗಿರುವ ಹಣವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಈ ಹಣದಲ್ಲಿ ರಾಜ್ಯದ ವಿವಿಧೆಡೆ 17 ನೂತನ ಅಗ್ನಿಶಾಮಕ ಠಾಣೆಗಳ ನಿರ್ಮಾಣಕ್ಕೆ ಮುಂದಾಗಿರುವುದು ಉತ್ತಮ ಬೆಳವಣಿಗೆ. ಆದರೆ, ಈ ಠಾಣೆಗಳ ನಿರ್ಮಾಣ ನಾಮಕಾವಸ್ತೆಯಾಗಿರದೆ ವೇಗವಾಗಿ ಬೆಳೆಯುತ್ತಿರುವ ಮತ್ತು ಅಗತ್ಯವಿರುವ ನಗರಗಳಲ್ಲಿ ನೂತನ ಠಾಣೆಗಳು ನಿರ್ಮಾಣವಾಗಲಿ” ಎಂದು ಕಿವಿಮಾತು ಹೇಳಿದರು.

ಶೀಘ್ರ ಟೆಂಡರ್‌ ಪ್ರಕ್ರಿಯೆ ಮುಗಿಸಿ

ನಗರದ ಭಾಗಗಳಲ್ಲಿ ಇತ್ತೀಚೆಗೆ ಅಗ್ನಿ ದುರಂತಗಳು ಹೆಚ್ಚುತ್ತಿವೆ. ಪ್ರಾಣಾಪಾಯಗಳ ಸಂಖ್ಯೆಯೂ ಹೆಚ್ಚುತ್ತಿವೆ. ಮುಂದಿನ ಬೇಸಿಗೆಯಲ್ಲಿ ಈ ಪ್ರಮಾಣ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದ್ದು, ಜನಸಾಮಾನ್ಯರಲ್ಲೂ ಆತಂಕ ಮೂಡಿದೆ. ಹೀಗಾಗಿ ಅಗ್ನಿ ದುರಂತಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಹಿಸಬೇಕು. ಈ ನಿಟ್ಟಿನಲ್ಲಿ ಅಗ್ನಿಶಾಮಕದಳವನ್ನು ಉನ್ನತೀಕರಣಗೊಳಿಸಬೇಕು, ಆಧುನಿಕ ಉಪಕರಣಗಳನ್ನು ಖರೀದಿ ಮಾಡಬೇಕು ಮತ್ತು ಅಗತ್ಯವಿರುವ ಠಾಣೆಗಳಿಗೆ ಹೆಚ್ಚುವರಿಯಾಗಿ ನೂತನ ವಾಹನಗಳನ್ನು ಖರೀದಿಸಬೇಕು. ಈ ಕೆಲಸಗಳನ್ನು ಫೆಬ್ರವರಿ ಅಂತ್ಯದೊಳಗೆ ಮುಗಿಸಬೇಕಿದ್ದು, ಆದಷ್ಟು ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆಯನ್ನು ಮುಗಿಸಿ ಎಂದು ಸೂಚಿಸಿದರು.

ಪ್ರಕೃತಿ ವಿಕೋಪದಲ್ಲೂ ಬೇಕಿದೆ ಅಗ್ನಿಶಾಮಕ ದಳದ ನೆರವು!

ಇದೇ ಸಂದರ್ಭದಲ್ಲಿ ಮಳೆ ಪ್ರವಾಹ ಸೇರಿದಂತೆ ಪ್ರಕೃತಿ ವಿಕೋಪದ ಬಗ್ಗೆಯೂ ಗಮನ ಸೆಳೆದ ಸಚಿವ ಕೃಷ್ಣ ಬೈರೇಗೌಡ, ಮಳೆಗಾಲದ ಸಂದರ್ಭದಲ್ಲಿ ರಾಜ್ಯದ ವಿವಿಧೆಡೆ ಮಳೆ ಪ್ರವಾಹದ ಘಟನೆಗಳು ಸಂಭವಿಸುತ್ತವೆ. ಮನೆ ಹಾಗೂ ಕೃಷಿ ಭೂಮಿಗಳಿಗೆ ನೀರು ನುಗ್ಗುವುದು, ಜನವಸತಿ ಪ್ರದೇಶಗಳ ಸಂಪರ್ಕ ರಸ್ತೆ ಕಡಿತವಾಗುವುದರಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಒಳಗಾಗುವ ಸಂದರ್ಭ ಎದುರಾಗುತ್ತವೆ. ಆದರೆ, ಇಂತಹ ಅನಾಹುತಗಳ ಸಂದರ್ಭದಲ್ಲಿ ಸಹಾಯಕ್ಕಾಗಿ ಎನ್‌ಡಿಆರ್‌ಎಫ್ ತುಕಡಿಗೆ ಕಾಯುವ ಮುನ್ನ ಅಗ್ನಿಶಾಮಕ ದಳ ತುರ್ತಾಗಿ ಜನ ರಕ್ಷಣೆಗೆ ಮುಂದಾಗಬೇಕು” ಎಂದು ಅಭಿಪ್ರಾಯಪಟ್ಟರು.

“ಪ್ರಕೃತಿ ವಿಕೋಪ ನಿರ್ವಹಣೆ ಸಂದರ್ಭದಲ್ಲಿ ಸಾರ್ವಜನಿಕ ಸಹಭಾಗಿತ್ವವನ್ನೂ ಬಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಆಪ್ತಮಿತ್ರ ಯೋಜನೆ ಜಾರಿಗೆ ತರಲಾಗಿದೆ. ಅಗ್ನಿಶಾಮಕ ದಳ ಈವರೆಗೆ ತನ್ನ ಸಿಬ್ಬಂದಿ ಜತೆಗೆ ಸಾವಿರಾರು ಸಾರ್ವಜನಿಕರಿಗೆ, ವಾಲೆಂಟರಿಗಳಿಗೆ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಹೇಗೆ ಕೆಲಸ ಮಾಡಬೇಕು ಎಂದು ತರಬೇತಿ ನೀಡಿದೆ. ಅಗತ್ಯವಿದ್ದರೆ ಮತ್ತಷ್ಟು ವಾಲೆಂಟರಿಗಳಿಗೆ ತರಬೇತಿ ನೀಡಿ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು” ಎಂದು ಸಭೆಯಲ್ಲಿ ಸೂಚನೆ ನೀಡಲಾಯಿತು.

ಪರಿಣಾಮಕಾರಿ ತಂಡ ರಚಿಸಿ

“ಹೊಸ ಉಪಕರಣ ಖರೀದಿಗೆ ಹಣದ ಅಗತ್ಯ ಇದ್ದರೆ ಅದನ್ನು ಪೂರೈಸಲು ಸರ್ಕಾರ ಬದ್ಧವಾಗಿದೆ. ಆದರೆ, ಜನರ ಹಣ ಪೋಲಾಗದಂತೆ ಪ್ರಾಕೃತಿಕ ವಿಕೋಪಗಳ ನಿರ್ವಹಣೆಗೆ ಅಗ್ನಿಶಾಮಕ ದಳ ಪರಿಣಾಮಕಾರಿ ತಂಡ ರಚಿಸಬೇಕು. ರಾಜ್ಯ ಮೀಸಲು ಪಡೆಯನ್ನೂ ಈ ಕೆಲಸಕ್ಕೆ ಬಳಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಬೇಕು” ಎಂದು ಸಚಿವ ಕೃಷ್ಣಬೈರೇಗೌಡ ಅಧಿಕಾರಿಗಳಿಗೆ ಸಲಹೆ ನೀಡಿದರು.

ಕೇಂದ್ರ ಸರ್ಕಾರದಿಂದ ಮಂಜೂರಾಗಿರುವ 329 ಕೋಟಿ ರೂ. ಹಣದ ಪೈಕಿ ನೂತನ ಅಗ್ನಿಶಾಮಕ ಠಾಣೆಗಳ ನಿರ್ಮಾಣಕ್ಕೆ 98.97 ಕೋಟಿ ರೂ, ರಾಜ್ಯ ತರಬೇತಿ ಕೇಂದ್ರದ ಉನ್ನತೀಕರಣಕ್ಕೆ 16.49 ಕೋಟಿ ರೂ, ಆಧುನಿಕ ಉಪಕರಣಗಳ ಖರೀದಿಗೆ 148.45 ಕೋಟಿ ರೂ, ನಗರ ಪ್ರದೇಶಗಳಲ್ಲಿ ಅಗ್ನಿಶಾಮಕ ದಳ ಬಲಪಡಿಸಲು 16.50 ಕೋಟಿ ರೂ ಬಳಸುವ ಕುರಿತು ಕ್ರಿಯಾ ಯೋಜನೆಯಲ್ಲಿ ಮಾಹಿತಿ ನೀಡಲಾಯಿತು.

ಇದನ್ನೂ ಓದಿ: HD Kumaraswamy: ಬಿಜೆಪಿ ಮಂತ್ರಾಕ್ಷತೆ ಅಕ್ಕಿಯನ್ನು ಡಿಕೆಶಿ ತಮ್ಮ ದೊಡ್ಡ ಆಲದಹಳ್ಳಿಯ ತೋಟದಲ್ಲಿ ಬೆಳೆದಿದ್ದೇ?

ಸಭೆಯಲ್ಲಿ ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ವಿ. ರಶ್ಮಿ ಮಹೇಶ್, ಅಗ್ನಿ ಶಾಮಕದಳ ಪೊಲೀಸ್ ಉಪ ಮಹಾ ನಿರ್ದೇಶಕರಾದ ರವಿ ಡಿ. ಚೆನ್ನಣ್ಣವರ್ ಹಾಗೂ ಅಗ್ನಿಶಾಮಕ ದಳದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version