ಬೆಂಗಳೂರು: ಮೀನುಗಾರರ ಸಮಸ್ಯೆಗಳಿಗೆ (Problems of fishermen) ಸ್ಪಂದಿಸುವ ಹಾಗೂ ಅವರನ್ನು ಆರ್ಥಿಕವಾಗಿ ಬಲಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಕಾರ್ಯಕ್ರಮವೊಂದಕ್ಕೆ ಚಾಲನೆ ನೀಡಲಾಗಿದೆ. ಮಂಗಳವಾರ (ನ. 22) ನಡೆದ ವಿಶ್ವ ಮೀನುಗಾರಿಕೆ ದಿನಾಚರಣೆ (World Fisheries Day) ದಿನದಂದು ಮತ್ಸ್ಯವಾಹಿನಿ ಪರಿಸರ ಸ್ನೇಹಿ ತ್ರಿಚಕ್ರ ವಾಹನಗಳ (Matsyavahini eco friendly three wheeler) ಸೇವೆಗೆ ಚಾಲನೆ ದೊರೆತಿದೆ. ಈ ಮತ್ಸ್ಯವಾಹಿನಿ ತ್ರಿಚಕ್ರ ವಾಹನಗಳ ಮೂಲಕ ತಾಜಾ ಮೀನುಗಳು (Fish Delivery) ಇನ್ನು ಬೆಂಗಳೂರಿನ ಮನೆ ಮನೆ ತಲುಪಲಿದೆ.
ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ಕಾರ್ಯಕ್ರಮವನ್ನು ರೂಪಿಸಿದೆ. ಇದರ ಹಿಂದೆ ನಿರುದ್ಯೋಗಿಗಳಿಗೆ ಉದ್ಯೋಗವನ್ನು ಕೊಡಿಸುವ ಆಶಯವನ್ನು ಹೊಂದಲಾಗಿದೆ. ಜತೆಗೆ ಮೀನುಗಾರ ಕುಟುಂಬದವರಿಗೆ ನಿಶ್ಚಿತ ಆದಾಯ ಸಹ ಇದರಿಂದ ಬರಲಿದೆ. ಅಲ್ಲದೆ, ಈ ಕಾರ್ಯಕ್ರಮದಿಂದ ಮೀನುಗಳಿಗೆ ಬೇಡಿಕೆ ಸಹ ಹೆಚ್ಚಬಹುದು ಎಂದು ಅಂದಾಜಿಸಲಾಗಿದೆ. ಈ ಯೋಜನೆಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಚಾಲನೆ ನೀಡಿದ್ದಾರೆ.
ಪ್ರಾಥಮಿಕ ಹಂತದಲ್ಲಿ 150 ವಾಹನಗಳು
ಈ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದ್ದು, ಸದ್ಯಕ್ಕೆ 150 ವಾಹನ ಸೇವೆಯನ್ನು ಮೀನುಗಾರಿಕಾ ಇಲಾಖೆ ಆರಂಭಿಸಿದೆ. ಮುಂದಿನ ದಿನಗಳಲ್ಲಿ ಬೇಡಿಕೆಯನ್ನು ನೋಡಿಕೊಂಡು ಮತ್ತಷ್ಟು ಹೆಚ್ಚಳಗೊಳಿಸುವ ಚಿಂತನೆಯನ್ನು ನಡೆಸಲಾಗಿದೆ. ಅಲ್ಲದೆ, ಜಿಲ್ಲಾ ಕೇಂದ್ರಗಳಿಗೂ ಈ ಕಾರ್ಯಕ್ರಮವನ್ನು ವಿಸ್ತರಿಸುವ ಉದ್ದೇಶವನ್ನು ರಾಜ್ಯ ಸರ್ಕಾರ ಹೊಂದಿದೆ.
ಬೆಳಗ್ಗೆ ತಾಜಾ ಮೀನು, ಸಂಜೆ ಮೀನು ಖಾದ್ಯ!
ಈ ಕಾರ್ಯಕ್ರಮದ ಅನುಸಾರ ಹಾಲಿ ಬೆಂಗಳೂರು ನಗರದಲ್ಲಿ 150 ಮತ್ಸ್ಯವಾಹಿನಿ ವಾಹನಗಳು ಸಂಚರಿಸಲಿದ್ದು, ಬೆಳಗ್ಗೆ ತಾಜಾ ಮೀನು ಮಾರಾಟವನ್ನು ಮಾಡಲಾಗುತ್ತದೆ. ಅದೇ ಸಂಜೆ ವೇಳೆಗೆ ಮೀನು ಖಾದ್ಯಗಳ ಮಾರಾಟ ಮಾಡುವ ಯೋಜನೆಯನ್ನು ರೂಪಿಸಲಾಗಿದೆ.
ಸರ್ಕಾರದಿಂದ ಏನು ಸಹಕಾರ?
ಇದಕ್ಕೆ ಸರ್ಕಾರದಿಂದ ಸಹಾಯಧನ ನೀಡಲಾಗುತ್ತದೆ. ವಾಹನ ಭದ್ರತಾ ಠೇವಣಿ 2 ಲಕ್ಷ ರೂ. ಹಾಗೂ ಮಾಸಿಕ 3000 ರೂ. ಬಾಡಿಗೆಯನ್ನು ರಾಜ್ಯ ಸರ್ಕಾರದಿಂದ ನೀಡಲಾಗುತ್ತದೆ. ಬ್ಯಾಟರಿ ಚಾಲಿತ ತ್ರಿಚಕ್ರ ವಾಹನದಲ್ಲಿ ಮೀನು ಖಾದ್ಯ ಮಾಡುವ ವ್ಯವಸ್ಥೆಯನ್ನು ಕೂಡಾ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಜಿಲ್ಲೆಗಳಿಗೆ 150 ವಾಹನಗಳನ್ನು ಸರ್ಕಾರದಿಂದ ವಿತರಣೆ ಮಾಡುವ ಬಗ್ಗೆ ಚಿಂತನೆ ನಡೆದಿದೆ.
ಸಿಎಂ ಸಿದ್ದರಾಮಯ್ಯ ಹೇಳೋದೇನು?
ಮೀನು ನಮ್ಮ ಆಹಾರ ಸಂಸ್ಕೃತಿಯ ಪ್ರಮುಖ ಭಾಗ. ಅತ್ಯಂತ ಆರೋಗ್ಯಕಾರಿ ಆಹಾರ. ಮೀನಿನ ಸಂತತಿ ಮತ್ತು ಪ್ರಮಾಣವನ್ನು ಹೆಚ್ಚಿಸಲು ನಮ್ಮ ಸರ್ಕಾರ ಎಲ್ಲ ಅಗತ್ಯ ನೆರವನ್ನೂ ನೀಡುತ್ತದೆ. ಮೀನುಗಾರ ಸಮುದಾಯದ ಮಹಿಳೆಯರಿಗೆ ನೀಡಲಾಗುತ್ತಿದ್ದ 50 ಸಾವಿರ ರೂ. ಸಹಾಯ ಧನವನ್ನು 3 ಲಕ್ಷ ರೂಪಾಯಿಗೆ ನಾವು ಏರಿಕೆ ಮಾಡಿದ್ದೇವೆ. ಮುಂದಿನ ವರ್ಷದಿಂದ ಮೀನುಗಾರ ಸಮುದಾಯಕ್ಕೆ ಮನೆ ಕಟ್ಟಿಸಿಕೊಡುವ ಯೋಜನೆಯನ್ನು ಕಾರ್ಯಾರಂಭ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮೀನುಗಾರರಿಗೆ ಕೊಟ್ಟ ಭರವಸೆಯನ್ನು ಈಡೇರಿಸುತ್ತಿದ್ದೇವೆ: ಡಿಕೆಶಿ
ಮೀನನ್ನು ನಾವು ದೇವರ ಸ್ವರೂಪ ಎಂದು ಕರೆಯುತ್ತೇವೆ. ಶ್ರೀಮನ್ ನಾರಾಯಣನಿಗೆ ಮೀನನ್ನು ಹೋಲಿಸುತ್ತೇವೆ. ನಾವು ಚುನಾವಣೆಗೆ ಮುಂಚಿತವಾಗಿ ಮೀನುಗಾರಿಕಾ ಸಮುದಾಯಕ್ಕೆ ಸಾಕಷ್ಟು ಭರವಸೆ ನೀಡಿದ್ದೆವು. ಅವನ್ನು ಈಡೇರಿಸಲು ನಾವು ಬದ್ಧರಾಗಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: Karnataka Weather : ಕರ್ನಾಟಕದಲ್ಲಿ ಮರೆಯಾಗಿ ಹೋಯ್ತಾ ಮಳೆ!
ಸಿಹಿ ನೀರಿನ ಮೀನುಗಾರಿಕೆಗೆ ಒತ್ತು ನೀಡಿ: ಮಂಕಾಳ ವೈದ್ಯ
ಸರ್ಕಾರದ ಸಹಕಾರ ಪಡೆದು ಸಮುದಾಯದವರಿಗೆ ಸಾಕಷ್ಟು ಸೌಲಭ್ಯಗಳನ್ನು ತಲುಪಿಸುತ್ತಿದ್ದಾರೆ. ಕೇವಲ ಸಮುದ್ರದಲ್ಲೇ ಮೀನುಗಾರಿಕೆ ಮಾಡುವುದಕ್ಕಿಂತ ಸಿಹಿ ನೀರಿನ ಮೀನುಗಾರಿಕೆ ಮಾಡಲು ಸಮುದಾಯದವರು ಮುಂದಾಗಬೇಕು. ಸರ್ಕಾರ ಈಗಾಗಲೇ ಏತ ನೀರಾವರಿ ಮೂಲಕ ಸಾಕಷ್ಟು ಕೆರೆಗಳನ್ನು ತುಂಬಿಸಿದ್ದು ಹರಾಜಿನ ಮೂಲಕ ಹಂಚಿಕೆ ಮಾಡಲಾಗುವುದು ಎಂದು ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ತಿಳಿಸಿದ್ದಾರೆ.