Site icon Vistara News

BY Vijayendra : ಸೋತ ಮನೆಗೆ ಸ್ಫೂರ್ತಿ; ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮುಂದಿದೆ ಪಂಚ ಸವಾಲು

Vijayendra with BSY

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ (BJP State President) ಬಿವೈ ವಿಜಯೇಂದ್ರ (BY Vijayendra) ಅವರನ್ನು ಪಟ್ಟಕ್ಕೇರಿಸಲಾಗಿದೆ. ಬಿಎಸ್‌ ಯಡಿಯೂರಪ್ಪ (BS Yediyurappa) ಅವರ ಮಗನೆಂಬ ಹಿನ್ನೆಲೆ, ನಾಯಕನಾಗಿ ಅವರು ಬೆಳೆಯುತ್ತಿರುವ ರೀತಿ, ರಾಜ್ಯಾದ್ಯಂತ ಪಕ್ಷದೊಳಗೆ ಇರುವ ಗೌರವ, ಪ್ರತಿಪಕ್ಷಗಳಿಗೆ ಅವರ ಬಗ್ಗೆ ಇರುವ ಭಯ ಎಲ್ಲವೂ ಸೇರಿ ಅವರನ್ನು ನೂತನ ಸಾರಥಿಯಾಗಿ ನೇಮಕ ಮಾಡಲಾಗಿದೆ. ಇದು ಬಿಜೆಪಿ ಪಕ್ಷದೊಳಗೆ ರಣೋತ್ಸಾಹವನ್ನು ಸೃಷ್ಟಸಿದೆ. ಅದರೆ, ಈ ಹುದ್ದೆಯನ್ನು ಏರಿ ರಥಿಕನಾಗಿ ಪಕ್ಷವನ್ನು ಮುನ್ನಡೆಸುವಲ್ಲಿ ವಿಜಯೇಂದ್ರ ಅವರಿಗೆ ಸಾಲು ಸಾಲು ಸವಾಲುಗಳು ಕೂಡಾ ಇವೆ ಎನ್ನುವುದು ಅಷ್ಟೇ ಸ್ಪಷ್ಟ.

ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷರಿಲ್ಲದೆ, ವಿರೋಧ ಪಕ್ಷದ ನಾಯಕನಿಲ್ಲದೆ ಹೇಳುವವರು, ಕೇಳುವವರು ಇಲ್ಲದೆ ಒಂದು ಅನಾಥ ಸ್ಥಿತಿಯಲ್ಲಿತ್ತು ಎನ್ನುವುದು ಎಲ್ಲರಿಗೂ ಅರ್ಥವಾಗುವ ಸಂಗತಿ. ಯಾವುದೇ ಹೋರಾಟಕ್ಕಾಗಲೀ, ಯಾವುದೇ ನಿರ್ಧಾರಕ್ಕಾಗಲಿ ಯಾರನ್ನು ಕೇಳುವುದು, ಯಾರು ಮುಂದೆ ಹೆಜ್ಜೆ ಇಡುವುದು ಎಂಬ ದೊಡ್ಡ ಶೂನ್ಯ ಅಲ್ಲಿ ನಿರ್ಮಾಣಗೊಂಡಿತ್ತು. ಕೆಲವೊಮ್ಮೆ ಸ್ವತಃ ಬಿ.ಎಸ್‌. ಯಡಿಯೂರಪ್ಪ ಅವರೇ ಹೋಗಿ ಮುಂದೆ ನಿಂತು ಹೋರಾಟಗಳಿಗೆ ನೇತೃತ್ವ ನೀಡಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ನಾಯಕನಿಲ್ಲದ ಮನೆಯಲ್ಲಿ ನಾಯಕರು ಬೇಕಾಬಿಟ್ಟಿ ಹೇಳಿಕೆಗಳನ್ನು ನೀಡುತ್ತಿದ್ದರು, ಯಾರ ಮೇಲೆ ಯಾರಿಗೂ ನಿಯಂತ್ರಣವೇ ಇರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಕಾಂಗ್ರೆಸ್‌ಗೆ ಕೌಂಟರ್‌ ಕೊಡುವಲ್ಲಿ ನಾಯಕನ ಕೊರತೆ ಬಿಜೆಪಿಗೆ ದೊಡ್ಡದಾಗಿ ಕಾಡಿತ್ತು. ಕಾಂಗ್ರೆಸ್‌ ಆಪರೇಷನ್‌ ಹಸ್ತದ ಮಾತನಾಡಿದಾಗ, ಕೆಲವು ನಾಯಕರು ಕಾಂಗ್ರೆಸ್‌ ಕಡೆಗೆ ಮುಖ ಮಾಡಿದಾಗ ಕರೆಸಿ ಮಾತನಾಡಿಸಬಹುದಾದ ನಾಯಕರೂ ಬಿಜೆಪಿಯಲ್ಲಿ ಇರಲಿಲ್ಲ. ಇದೆಲ್ಲದಕ್ಕೆ ಒಂದು ಸಮಾಧಾನ ಎಂಬಂತೆ ಈಗ ವಿಜಯೇಂದ್ರ ಅವರ ನೇಮಕವಾಗಿದೆ. ಆದರೆ, ಅವರು ಅಧ್ಯಕ್ಷರಾಗಿ ಬಿಟ್ಟ ಮಾತ್ರಕ್ಕೆ ಏಕಾಏಕಿಯಾಗಿ ಎಲ್ಲವೂ ಸರಿಯಾಗಿ ಬಿಡುತ್ತದಾ ಎಂಬ ಗಂಭೀರ ಪ್ರಶ್ನೆಯೊಂದು ಇದ್ದೇ ಇದೆ.

ಈ ನಿಟ್ಟಿನಲ್ಲಿ ವಿಜಯೇಂದ್ರ ಅವರು ಎದುರಿಸಬಹುದಾದ ಪಂಚ ಸವಾಲುಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ನಾಯಕತ್ವ ಗುಣ ನೋಡಿಯೇ ವಿಜಯೇಂದ್ರಗೆ ಬಿಜೆಪಿ ಪಟ್ಟ?| BY Vijayendra News | BJP State President Of Karnataka

1. ಲೋಕಸಭಾ ಚುನಾವಣೆಯಲ್ಲಿ ಗೆಲುವು

ಮುಂದಿನ ಲೋಕಸಭಾ ಚುನಾವಣೆಯೇ ವಿಜಯೇಂದ್ರ ಅವರ ಮುಂದಿರುವ ಅತಿ ದೊಡ್ಡ ಸವಾಲು. ಕಳೆದ ಬಾರಿ 25 ಪ್ಲಸ್‌ 1 ಸ್ಥಾನವನ್ನು ಗೆದ್ದು ಬೀಗಿದ್ದ ಬಿಜೆಪಿಗೆ ಈ ಬಾರಿಯೂ ಅದನ್ನು ರಿಪೀಟ್‌ ಮಾಡುವ ಒತ್ತಡವಿದೆ. ಆದರೆ, ಇಷ್ಟೊಂದು ದೊಡ್ಡ ಗೆಲುವಿಗೆ ಪೂರಕವಾದ ವಾತಾವರಣ ರಾಜ್ಯದಲ್ಲಿ ಕಾಣಿಸುತ್ತಿಲ್ಲ. ಜತೆಗೆ ಕಾಂಗ್ರೆಸ್‌ ರಣೋತ್ಸಾಹದಲ್ಲಿದೆ. ನರೇಂದ್ರ ಮೋದಿ ಅವರ ಬ್ರಾಂಡ್‌, ಬಿಎಸ್‌ವೈ ಅವರ ಖದರು ಮತ್ತು ತಮ್ಮ ಸಂಘಟನಾ ಶಕ್ತಿಯನ್ನು ಬಳಸಿಕೊಂಡು ಗರಿಷ್ಠ ಸ್ಥಾನ ಗೆಲ್ಲಲು ಅವರು ದೊಡ್ಡ ಪ್ರಯತ್ನವನ್ನು ಮಾಡಬೇಕಾಗಿದೆ. ಅದರಲ್ಲೂ ಓಡುತ್ತಿರುವ ಸಿದ್ದರಾಮಯ್ಯ, ಡಿಕೆಶಿ ಎಂಬ ಕುದುರೆಗಳಿಗೆ ಬ್ರೇಕ್ ಹಾಕುವುದು.

ಇದನ್ನೂ ಓದಿ: BY Vijayendra : ಒಂದೇ ವಾರದೊಳಗೆ ಶಾಸಕಾಂಗ ಪಕ್ಷ ನಾಯಕನ ಆಯ್ಕೆ; ವಿಜಯೇಂದ್ರ ಘೋಷಣೆ

2. ಆಪರೇಷನ್‌ ಹಸ್ತಕ್ಕೆ ತಡೆ, ನಾಯಕರಲ್ಲಿ ವಿಶ್ವಾಸ

ರಾಜ್ಯ ಬಿಜೆಪಿಯಲ್ಲಿ ನಾಯಕತ್ವದ ಗೊಂದಲದಿಂದಾಗಿ ಈಗಾಗಲೇ ಹಲವು ನಾಯಕರು ಪಕ್ಷ ತೊರೆದಿದ್ದಾರೆ. ಇನ್ನೂ ಹಲವರು ಹಂತಹಂತವಾಗಿ ಪಕ್ಷ ತೊರೆಯಲು ಮುಂದಾಗಿದ್ದಾರೆ. ಇಂಥ ಶಾಸಕರು, ಮಾಜಿ ಶಾಸಕರು ಸಂಸದರು, ನಾಯಕರಲ್ಲಿ ವಿಶ್ವಾಸ ತುಂಬಿ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ದೊಡ್ಡ ಸವಾಲು ವಿಜಯೇಂದ್ರ ಅವರ ಮುಂದಿದೆ.

ಇದನ್ನೂ ಓದಿ: BY Vijayendra : ರಾಜ್ಯ ಬಿಜೆಪಿಗೆ ಇನ್ನು ಬಿ ವೈ ವಿಜಯೇಂದ್ರ ಸಾರಥ್ಯ; ಆಯ್ಕೆಗೆ 10 ಕಾರಣಗಳು

3. ಲಿಂಗಾಯತ ಸಮುದಾಯದಲ್ಲಿ ಭರವಸೆ ಮೂಡಿಸುವುದು

ಮುನಿಸಿಕೊಂಡಿರುವ ಲಿಂಗಾಯತ ಸಮುದಾಯವನ್ನು ಸಮಾಧಾನಪಡಿಸುವುದು ಒಂದು ಕಡೆಯಾದರೆ ಎಲ್ಲ ಸಮುದಾಯಗಳು ಒಪ್ಪುವ ರೀತಿ ತಂತ್ರಗಾರಿಕೆ ಮಾಡಬೇಕು. ಲಿಂಗಾಯಿತ ಮತ್ತು ಹಿಂದುಳಿದ ವರ್ಗಗಳ ಮತಗಳನ್ನು ಮತ್ತೆ ಸೆಳೆಯುವುದು ದೊಡ್ಡ ಸವಾಲಾಗಿದೆ.

4. ಬಿಜೆಪಿ ನಾಯಕರ ಬೀದಿ ಜಗಳಕ್ಕೆ ಸಮಾಧಾನದ ಕಡಿವಾಣ

ರಾಜ್ಯ ಬಿಜೆಪಿಯ ನಾಯಕರು ಪರಸ್ಪರ ನಿಂದನೆಯಲ್ಲಿ ತೊಡಗಿದ್ದಾರೆ. ನೇರಾನೇರ ವಾಗ್ದಾಳಿಗಳು ನಡೆಯುತ್ತಿವೆ. ಇಂಥ ಹೊತ್ತಿನಲ್ಲಿ ಅವರೆಲ್ಲರನ್ನೂ ಸಮಾಧಾನ ಮಾಡಿ ಹೊತ್ತಿಕೊಂಡಿರುವ ಬೆಂಕಿಯನ್ನು ಶಮನ ಮಾಡಬೇಕಾಗಿದೆ. ಈ ಹಂತದಲ್ಲಿ ನೋಟಿಸ್‌, ಉಚ್ಚಾಟನೆಗಿಂತಲೂ ಮಾತು, ಸಮಾಧಾನದ ನಡೆಗಳಲ್ಲೇ ಸಾಗಬೇಕಾದ ಅನಿವಾರ್ಯತೆ ಇದೆ.

5. ಬಿಜೆಪಿ- ಜೆಡಿಎಸ್‌ ಮೈತ್ರಿಯ ಸಫಲತೆ

ರಾಜ್ಯದಲ್ಲಿ ಈಗ ಬಿಜೆಪಿ ಮತ್ತು ಜೆಡಿಎಸ್‌ ನಡುವೆ ಮೈತ್ರಿ ಏರ್ಪಟ್ಟಿದೆ. ಇದಕ್ಕೆ ಬಿಜೆಪಿಯ ಒಳಗಡೆಯೂ ಸಣ್ಣ ಮಟ್ಟದ ಅಸಮಾಧಾನವಿದೆ. ಕಾರ್ಯಕರ್ತರಲ್ಲಂತೂ ಆಕ್ಷೇಪಗಳೇ ಇವೆ. ಇಂಥ ಪರಿಸ್ಥಿತಿಯಲ್ಲಿ ಈ ಮೈತ್ರಿಯ ಲಾಭಗಳನ್ನು ಸರಿಯಾಗಿ ಮನವರಿಕೆ ಮಾಡಿ, ತಳಮಟ್ಟದಿಂದಲೇ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಉತ್ತಮ ಬಾಂಧವ್ಯವನ್ನು ಏರ್ಪಡಿಸಿ ಮೈತ್ರಿಯನ್ನು ಸಫಲಗೊಳಿಸುವ ಹೊಣೆಗಾರಿಕೆ ಈಗ ವಿಜಯೇಂದ್ರ ಅವರ ಹೆಗಲ ಮೇಲೆ ಇದೆ.

Exit mobile version