ಕೋಲಾರ: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷವನ್ನು ಸಜ್ಜುಗೊಳಿಸಲು ಆರಂಭಿಸಿರುವ ಪ್ರಜಾಧ್ವನಿ ಯಾತ್ರೆಯಲ್ಲಿ (Prajadhwani) ಯಾತ್ರೆಯಲ್ಲಿ ಒಡಕಿನ ಧ್ವನಿಗಳು ಗೋಚರಿಸಲು ಆರಂಭಿಸಿವೆ. ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೋಲಾರ ಜಿಲ್ಲೆಯಿಂದಲೇ ಪ್ರಜಾಧ್ವನಿಗೆ ಚಾಲನೆ ನೀಡಿದರೂ ಮಾಜಿ ಸಚಿವ ಹಾಗೂ ಸಿದ್ದರಾಮಯ್ಯ ಆಪ್ತ ಕೆ.ಆರ್. ರಮೇಶ್ ಕುಮಾರ್ ಗೈರಾಗಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಒಟ್ಟಾಗಿ ನಡೆಸಿದ ಪ್ರಜಾಧ್ವನಿ ಯಾತ್ರೆಯು ಶುಕ್ರವಾರದಿಂದ ಪ್ರತ್ಯೇಕವಾಗಿ ಆರಂಭವಾಗಿವೆ. ಮುಳಬಾಗಿಲಿನ ಕುರುಡುಮಲೆ ಗಣಪತಿ ದೇವಸ್ಥಾನದಲ್ಲಿ ಪೂಜೆ, ಮುಳಬಾಗಿಲಿನಲ್ಲಿ ರ‍್ಯಾಲಿ ಹಾಗೂ ಕೆಜಿಎಫ್‌ನಲ್ಲಿ ರ‍್ಯಾಲಿಯಲ್ಲಿ ರಮೇಶ್ ಕುಮಾರ್ ಅನುಪಸ್ಥಿತಿ ಆಗಿದ್ದರು.
ಮುಳಬಾಗಿಲು ರ‍್ಯಾಲಿಯಲ್ಲಿ ಗೈರಾಗಿದ್ದು ಅಸಮಾಧಾನದ ಹೊಗೆ ಹೊತ್ತಿಸಿದ್ದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ, ತಮ್ಮ ಪುತ್ರಿ ರೂಪಕಲಾ ಶಶಿಧರ್ ಪ್ರತಿನಿಧಿಸುವ ಕೆಜಿಎಫ್ ರ‍್ಯಾಲಿಯಲ್ಲಿ ಭಾಗಿಯಾದರು. ಸಮಾವೇಶವನ್ನುದ್ದೇಶಿಸಿ ಡಿ.ಕೆ. ಶಿವಕುಮಾರ್ ಮಾತನಾಡಿದರು.
60 ದಿನಗಳಲ್ಲಿ ಚುನಾವಣೆ ಬರುತ್ತಿದೆ. ಬಿಜೆಪಿ ಆಡಳಿತ ಹೇಗಿದೆ, ಕಾಂಗ್ರೆಸ್ ಆಡಳಿತ ಹೇಗಿತ್ತು ಎಂದು ನೀವು ಅವಲೋಕಿಸಬೇಕು. ನಾವು ಉತ್ತಮ ಆಡಳಿತ ನೀಡಿದರೂ ಜನ ನಮಗೆ ಆಶೀರ್ವಾದ ಮಾಡಲಿಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಜೆಡಿಎಸ್ ಗೆ ಬೆಂಬಲ ನೀಡಿದರೂ ಅವರು ಅದನ್ನು ಉಳಿಸಿಕೊಳ್ಳಲಿಲ್ಲ.
ನಾನು ಇಲ್ಲಿಗೆ ಜೈಕಾರ, ಚಪ್ಪಾಳೆ ಹಾಕಿಸಿಕೊಳ್ಳಲು ಬಂದಿಲ್ಲ. ಕೆಜಿಎಫ್ ಮಹಾಜನತೆ ಕಳೆದ 50 ವರ್ಷಗಳಲ್ಲಿ ಕಾಂಗ್ರೆಸ್ ಶಾಸಕರನ್ನು ನೀಡಿರಲಿಲ್ಲ. ಆದರೆ ಕಾಂಗ್ರೆಸ್ ಗೆ ಮಹಿಳಾ ಶಾಸಕಿ ಆಯ್ಕೆ ಮಾಡಿ ಶಕ್ತಿ ತುಂಬಿದ್ದಾರೆ. ಅದಕ್ಕೆ ನಿಮಗೆ ಕೋಟಿ ನಮಸ್ಕಾರ ಹೇಳುತ್ತೇನೆ. ನಾವು ಈ ಭಾಗದಲ್ಲಿ ಸಮೀಕ್ಷೆ ಮಾಡಿಸಿದ್ದು, ರೂಪ ಶಶಿಧರ್ ಅವರು ಮಹಿಳೆಯರ ನೋವು ಅರಿತು ಅವರ ಬದುಕಿನಲ್ಲಿ ಬದಲಾವಣೆ ತರಬೇಕು ಎಂದು ಸ್ವಸಹಾಯ ಗುಂಪುಗಳನ್ನು ಆರಂಭಿಸಿ ಸಾಲ ಕೊಡಿಸಿದ್ದಾರೆ. ಇಡೀ ರಾಜ್ಯದಲ್ಲಿ ಎಲ್ಲ ಪಕ್ಷಕ್ಕೂ ಹೋಲಿಸಿದರೆ ಕೆಜಿಎಫ್ ನ ರೂಪಾ ಶಶಿಧರ್ ಮಾದರಿಯಾಗಿ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ : Prajadhwani : ಪರಮೇಶ್ವರ್ ಅಸಮಾಧಾನ ತಣಿಸಲು ಡಿ.ಕೆ. ಶಿವಕುಮಾರ್ ಸರ್ಕಸ್: ಹೋದೆಡೆಯೆಲ್ಲಾ ಜತೆಗೆ ನಾಯಕರು
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಇಲ್ಲಿ ಮೀಸಲಿಟ್ಟಿರುವ 1 ಸಾವಿರ ಎಕರೆ ಜಾಗದಲ್ಲಿ ಕೈಗಾರಿಕೆಗಳಿಗೆ ಆದ್ಯತೆ ನೀಡಿ ಉದ್ಯೋಗ ಸೃಷ್ಟಿಸುತ್ತೇವೆ. ನೀವು ಕಳೆದ ಬಾರಿ ರೂಪ ಶಶಿಧರ್ ಅವರನ್ನು 40 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿದ್ದೀರಿ, ಈ ಬಾರಿ 50 ಸಾವಿರ ಅಂತರದಲ್ಲಿ ಆರಿಸಬೇಕು ಎಂದರು.
ಈ ಭಾಗದ ಅಭಿವೃದ್ಧಿಗೆ ಮುನಿಯಪ್ಪನವರು ಸಾಕಷ್ಟು ಶ್ರಮ ಹಾಕಿದ್ದಾರೆ. ಇಲ್ಲಿನ ಹೆದ್ದಾರಿಗೆ ಕಾರಣಕರ್ತರಾಗಿದ್ದಾರೆ. ಬೋಗಿ ಕೋಚ್ ಘಟಕ ಸ್ಥಾಪನೆಗೆ ಶ್ರಮಿಸಿದ್ದು, ರಾಜ್ಯ ಸರ್ಕಾರ ಹಣ ಪಾವತಿಸಿದೆ. ಆದರೆ ಕೇಂದ್ರ ಸರ್ಕಾರ ಈ ಯೋಜನೆ ಮಾಡಲು ಮುಂದಾಗಿಲ್ಲ ಎಂದರು.