ಬೆಂಗಳೂರು: ಪ್ರತಿ ವರ್ಷ ಆಸ್ತಿ ಮಾರ್ಗಸೂಚಿ ದರ (Property Guideline Rate) ಪರಿಷ್ಕರಣೆ ಮಾಡಬೇಕು ಎಂಬ ನಿಯಮ ಇದೆ. ಅದಕ್ಕಾಗಿ ನಾವು ಅಕ್ಟೋಬರ್ 1ರಿಂದ ಆಸ್ತಿ ನೋಂದಣಿ ಮಾರ್ಗಸೂಚಿ ದರವನ್ನು ಹೆಚ್ಚಳ ಮಾಡುತ್ತಿದ್ದೇವೆ. ಶೇಕಡಾ 30ರಷ್ಟು ಹೆಚ್ಚಳ ಆಗಲಿದೆ. ಎಲ್ಲ ಕಡೆ ಮಾರ್ಗಸೂಚಿ ದರ ಏರಿಕೆ ಆಗಲ್ಲ. ಕೆಲವು ಕಡೆ ಮಾರುಕಟ್ಟೆ ದರಕ್ಕಿಂತ ಮಾರ್ಗಸೂಚಿ ದರ ಹೆಚ್ಚಳ ಇದ್ದರೆ ಅಲ್ಲಿ ಹೆಚ್ಚು ಆಗುವುದಿಲ್ಲ. ಆದರೆ, ಮಾರುಕಟ್ಟೆ ದರಕ್ಕಿಂತ ಬಹಳ ಕಡಿಮೆ ಮಾರ್ಗಸೂಚಿ ದರ ಇದ್ದರೆ ಖಂಡಿತ ಹೆಚ್ಚಳ ಆಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna ByreGowda) ಹೇಳಿದರು.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಂದಾಯ ಸಚಿವ ಕೃಷ್ಣಬೈರೇಗೌಡ, ಹೆದ್ದಾರಿಗಳು, ವಿಮಾನ ನಿಲ್ದಾಣ, ಐಟಿ ಬಿಟಿ ಬಂದಿರುವ ಕಡೆ ಮಾರ್ಗಸೂಚಿ ದರ ಕಡಿಮೆ ಇದೆ. ಇಂತಹ ಕಡೆ ಮಾರ್ಗಸೂಚಿ ದರ ಹೆಚ್ಚಳ ಆಗಲಿದೆ. ಸರಾಸರಿ ಶೇಕಡಾ 30ರಷ್ಟು ಮಾರ್ಗಸೂಚಿ ದರ ಏರಿಕೆ ಆಗಲಿದೆ. ಈ ಬಗ್ಗೆ ಆಕ್ಷೇಪ ಇದ್ದರೆ ಸಲ್ಲಿಸಲು ಅವಕಾಶ ಇದೆ. ಆಕ್ಷೇಪ ಗಮನಿಸಿ ಅಧಿಸೂಚನೆಯನ್ನು ನಂತರ ಪ್ರಕಟ ಮಾಡಲಾಗುವುದು. ಮಾರ್ಗಸೂಚಿ ದರ ಏರಿಕೆಯಾದರೆ ವರ್ಷಕ್ಕೆ 2 ಸಾವಿರ ಕೋಟಿ ರೂಪಾಯಿ ಆದಾಯ ಬರಲಿದೆ ಎಂದು ಹೇಳಿದರು.
ಕಪ್ಪು ಹಣ ಬಳಕೆ ತಡೆಗೆ ಕ್ರಮ
ಮಾರ್ಗಸೂಚಿ ದರ ಏರಿಕೆಯಿಂದ ಒಂದಷ್ಟು ವ್ಯತ್ಯಾಸ ಆಗಬಹುದು. ಆದರೆ, ಅದು ಎರಡು ತಿಂಗಳ ಬಳಿಕ ಸರಿ ಆಗಲಿದೆ. ಆಸ್ತಿ ಮಾರಾಟದ ವೇಳೆ ಕಪ್ಪು ಹಣ ಬಳಕೆ ಆಗುತ್ತಿದೆ. ಅದಕ್ಕೆ ಅವಕಾಶ ಕೊಡಬಾರದಲ್ಲವೇ? ಹೊಸದು ಮಾಡಿದಾಗ ಪರ – ವಿರೋಧ ಇರಲಿದೆ. ಆದರೆ, ಮಾರ್ಗಸೂಚಿ ದರ ಪ್ರತಿವರ್ಷ ಏರಿಕೆ ಮಾಡಬೇಕು ಅಂತ ಕಾಯಿದೆಯಲ್ಲಿಯೇ ಇದೆ. 5 ವರ್ಷದಿಂದ ಮಾರ್ಗಸೂಚಿ ದರ ಏರಿಕೆ ಆಗಿರಲಿಲ್ಲ. ಅದಕ್ಕೆ ನಾವು ಈಗ ಮಾಡುತ್ತಾ ಇದ್ದೇವೆ ಎಂದು ಕೃಷ್ಣ ಬೈರೇಗೌಡ ಸ್ಪಷ್ಟನೆ ನೀಡಿದರು.
ಇದನ್ನೂ ಓದಿ: Drought Situation : ರಾಜ್ಯದ 195 ತಾಲೂಕುಗಳು ಬರಪೀಡಿತ; ಕಂದಾಯ ಸಚಿವ ಕೃಷ್ಣಬೈರೇಗೌಡ ಘೋಷಣೆ, ಕೇಂದ್ರಕ್ಕೆ ವರದಿ
ಸರ್ಕಾರಿ ಜಮೀನು ಹುಡುಕಲು ಆ್ಯಪ್ ಬಳಕೆ
ಸರ್ಕಾರಿ ಜಮೀನು ಹುಡುಕಲು ಆ್ಯಪ್ ಬಳಕೆ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಕೆಲವೇ ದಿನಗಳಲ್ಲಿ ಆ್ಯಪ್ ಬಿಡುಗಡೆ ಆಗಲಿದೆ. ಇದನ್ನು ವಿಲೇಜ್ ಅಕೌಂಟೆಂಟ್‌ಗೆ ಕೊಡುತ್ತೇವೆ. ಅವರು ಸ್ಥಳಕ್ಕೆ ಹೋಗಿ ಆ್ಯಪ್ ಆನ್ ಮಾಡಬೇಕು. ಒಂದು ವೇಳೆ ಆ ಭೂಮಿ ಸರ್ಕಾರಿ ಜಮೀನು ಆಗಿದ್ದರೆ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳುತ್ತಾರೆ. ಪ್ರತಿ ಮೂರು ತಿಂಗಳಿಗೊಮ್ಮೆ ಬೀಟ್ ಸಿಸ್ಟಮ್ ಮಾಡುತ್ತೇವೆ. ಬೆಂಗಳೂರಿನಲ್ಲಿ ಸರ್ಕಾರಿ ಜಮೀನನ್ನು ಕಬ್ಜಾ ಮಾಡಿದ್ದಾರೆ. ಕೋರ್ಟ್‌ಗೆ ಕೆಲವರು ತಪ್ಪು ಮಾಹಿತಿ ನೀಡಿ ತೀರ್ಪು ಪಡೆದಿದ್ದಾರೆ. ಕೆಲವು ಕಡೆ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಕೆಲ ಕಡೆ ಅಧಿಕಾರಿಗಳು ಸಹ ಶಾಮೀಲು ಆಗಿದ್ದಾರೆ ಎಂದು ಕೃಷ್ಣಬೈರೇಗೌಡ ಹೇಳಿದರು.