Site icon Vistara News

CM Siddaramaiah: ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ‌! 10 ಲೋಕಸಭಾ ಕ್ಷೇತ್ರದಲ್ಲಿ ಡ್ಯಾಮೇಜ್‌ ಮಾಡೀತೇ ಯತೀಂದ್ರ ಹೇಳಿಕೆ?

Yathindra statement CM Siddaramaiah DK Shivakumar

ಬೆಂಗಳೂರು: 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ (Parliamentary Elections 2024) ಕಾಂಗ್ರೆಸ್‌ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿದರೆ ಸಿದ್ದರಾಮಯ್ಯ (CM Siddaramaiah) ಅವರೇ ಪೂರ್ಣಾವಧಿ ಮುಖ್ಯಮಂತ್ರಿಯಾಗಿ (siddaramaiah Full time Chief Minister) ಮುಂದುವರಿಯಲಿದ್ದಾರೆ ಎಂಬ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ (Yatindra siddaramaiah) ಹೇಳಿಕೆ ಕಾಂಗ್ರೆಸ್‌ನಲ್ಲಿ ಅಲ್ಲೋಲ ಕಲ್ಲೋಲ ವಾತಾವರಣವನ್ನು ಸೃಷ್ಟಿಮಾಡಿದೆ. ಇದು ಬಹುಪಾಲು ನಾಯಕರನ್ನು ಕೆರಳಿಸಿದ್ದು, ಎಲ್ಲರೂ ಒಳಗೊಳಗೇ ಕುದಿಯುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೆ, ಈ ಒಂದು ಹೇಳಿಕೆಯು ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ 10ಕ್ಕೂ ಹೆಚ್ಚು ಲೋಕಸಭೆ ಕ್ಷೇತ್ರಗಳಲ್ಲಿ ಡ್ಯಾಮೇಜ್‌ ಮಾಡಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದವರು ಕಾಂಗ್ರೆಸ್ ಪರ ನಿಂತಿದ್ದರು. ಕಾರಣ, ಪ್ರಚಾರದ ವೇಳೆ ಡಿ.ಕೆ. ಶಿವಕುಮಾರ್‌ ಅವರು, ಈ ಬಾರಿ ನನಗೊಂದು ಅವಕಾಶ ಕೊಡಿ, ನಾನು ಸಿಎಂ ಆಗುತ್ತೇನೆ. ಒಕ್ಕಲಿಗರ ಪ್ರತಿನಿಧಿಯೊಬ್ಬ ಸಿಎಂ ಆದ ಹಾಗೆ ಆಗುತ್ತದೆ ಎಂದು ಮನವಿ ಮಾಡಿಕೊಂಡಿದ್ದರು. ಅದೇ ರೀತಿ ಒಕ್ಕಲಿಗರು ಸಹ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ ಕೈ ಹಿಡಿದಿದ್ದರು. ಈ ನಡುವೆ ಏಕಾಏಕಿ ಸಿಎಂ ಪುತ್ರನಿಂದ ಐದು ವರ್ಷ ಸಿದ್ದರಾಮಯ್ಯ ಸಿಎಂ ಎಂಬ ಬಹಿರಂಗ ಹೇಳಿಕೆಯು ಒಕ್ಕಲಿಗರ ಕೋಪಕ್ಕೆ ಗುರಿಯಾಗುತ್ತಿದೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಈ ಹೇಳಿಕೆಯು ಒಕ್ಕಲಿಗ ಪ್ರಾಬಲ್ಯ ಇರುವ ಕ್ಷೇತ್ರಗಳಲ್ಲಿ ಭಾರಿ ಪರಿಣಾಮವನ್ನು ಬೀರಲಿದೆ ಎಂದೇ ವಿಶ್ಲೇಷಣೆ ಮಾಡಲಾಗುತ್ತಿದೆ. 2 ವರ್ಷದ ಬಳಿಕ ಡಿಕೆಶಿ ಸಿಎಂ ಆಗುತ್ತಾರೆ ಎಂದು ಒಕ್ಕಲಿಗ ಸಮುದಾಯದ ನಾಯಕರು ಅಂದುಕೊಂಡಿದ್ದರು. ಆ ನಿಟ್ಟಿನಲ್ಲಿ ಕಾಯುತ್ತಲಿದ್ದರು ಕೂಡ. ಆದರೆ, ಈಗ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಯು ಭಾರಿ ಡ್ಯಾಮೇಜ್‌ ಅನ್ನು ಉಂಟು ಮಾಡಲಿದೆ ಎಂದು ಅಂದಾಜಿಸಲಾಗುತ್ತಿದೆ.

ಹತ್ತು ಕ್ಷೇತ್ರಗಳಲ್ಲಿ ಆಗುತ್ತಾ ಎಫೆಕ್ಟ್?

ಯತೀಂದ್ರ ಒಂದು ಹೇಳಿಕೆ ಲೋಕಸಭಾ ಚುನಾವಣೆಯಲ್ಲಿ ಹತ್ತು ಕ್ಷೇತ್ರಗಳಲ್ಲಿ ಎಫೆಕ್ಟ್ ಆಗಲಿದೆಯೇ ಎಂಬ ಅನುಮಾನ ಕಾಡುತ್ತಿದೆ. ಆ ಹತ್ತು ಕ್ಷೇತ್ರಗಳು ಯಾವುವು ಎಂದು ನೋಡೋಣ.

  1. ಮೈಸೂರು
  2. ಮಂಡ್ಯ
  3. ಹಾಸನ
  4. ತುಮಕೂರು
  5. ಚಿಕ್ಕಬಳ್ಳಾಪುರ
  6. ಕೋಲಾರ
  7. ಬೆಂಗಳೂರು ದಕ್ಷಿಣ
  8. ಬೆಂಗಳೂರು ಉತ್ತರ
  9. ಬೆಂಗಳೂರು ಗ್ರಾಮಾಂತರ
  10. ಚಾಮರಾಜನಗರ

ಲೋಕಸಭೆ ಗೆದ್ದರೆ ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ; ಯತೀಂದ್ರ ಸ್ಫೋಟಕ ಹೇಳಿಕೆ

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಅಣ್ಣೆಚಾಕನಹಳ್ಳಿ ಗ್ರಾಮದಲ್ಲಿ ಮಾತನಾಡಿದ್ದ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ, ಸಂಗೊಳ್ಳಿ ರಾಯಣ್ಣ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯತೀಂದ್ರ ಈ ಸ್ಪೋಟಕ‌ ಹೇಳಿಕೆ ನೀಡಿದ್ದಾರೆ. ʻʻಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತದೆ. ಹೆಚ್ಚು ಸ್ಥಾನ ಗೆದ್ದರೆ ಯಾವುದೇ ಅಡೆತಡೆ ಇಲ್ಲದೆ ಅವರೇ ಐದು ವರ್ಷ ಸಿಎಂ ಆಗಿರುತ್ತಾರೆ ಎಂದು ಯತೀಂದ್ರ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದರು.

ʻʻಚುನಾವಣೆಗೂ ಮೊದಲು ಐದು ಗ್ಯಾರಂಟಿ ಘೋಷಣೆ ಮಾಡಲಾಗಿತ್ತು. ಸರ್ಕಾರಕ್ಕೆ ಒಂದು ವರ್ಷ ತುಂಬುವ ಮೊದಲೇ ಸಿದ್ದರಾಮಯ್ಯ ಅವರು ಐದು ಗ್ಯಾರಂಟಿ ಜಾರಿ ಮಾಡಿದ್ದಾರೆ. ಮತ್ತೊಮ್ಮೆ ನುಡಿದಂತೆ ನಡೆಯುವುದಾಗಿ ಸಾಬೀತು ಮಾಡಿದ್ದಾರೆʼʼ ಎಂದು ತಂದೆಯನ್ನು ಯತೀಂದ್ರ ಸಿದ್ದರಾಮಯ್ಯ ಕೊಂಡಾಡಿದ್ದರು.

ʻʻಬಡವರಿಗಾಗಿ, ಶೋಷತರಿಗೆ ಕೆಲಸ ಮಾಡುವ ಹಂಬಲ ಕಾಂಗ್ರೆಸ್‌ಗೆ ಇದೆ. ಹಾಗಾಗಿ ಸಿದ್ದರಾಮಯ್ಯ ಅವರಿಗೆ ನಿಮ್ಮ ಬೆಂಬಲ ನೀಡಬೇಕು. ಮುಂದೆ ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಲೋಕಸಭಾ ಚುನಾವಣೆ ಎದುರಿಸಬೇಕಾಗಿದೆ. ಹೆಚ್ಚು ಸ್ಥಾನಗಳನ್ನು ಗೆದ್ದರೆ ವೈಯಕ್ತಿಕವಾಗಿ ಅವರಿಗೆ ಮತ್ತಷ್ಟು ಬೆಂಬಲ ಸಿಗುತ್ತದೆʼʼ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದರು.

ʻʻಗ್ಯಾರಂಟಿ ಯೋಜನೆಗೆ ವರ್ಷಕ್ಕೆ 56 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ. ಈ ಹಿಂದೆ ಸಾಮಾಜಿಕ ಕಾರ್ಯಕ್ರಮಕ್ಕಾಗಿ ರಾಜ್ಯದಲ್ಲಿ ಯಾವ ಸರ್ಕಾರವೂ ಇಷ್ಟು ಹಣ ಖರ್ಚು ಮಾಡಿಲ್ಲ. ಇಷ್ಟೊಂದು ಹಣ ಖರ್ಚು ಮಾಡುತ್ತಿರುವಾಗ ಜನರ ಬೆಂಬಲ ಬೇಕುʼʼ ಎಂದು ಹೇಳಿದ ಯತೀಂದ್ರ ಸಿದ್ದರಾಮಯ್ಯ ಅವರು, ಹೆಚ್ಚು ಸ್ಥಾನ ಗೆದ್ದರೆ ನಮಗೆ ಬಲ ಬರುತ್ತೆ. ಇದನ್ನು ಲೋಕಸಭಾ ಚುನಾವಣೆಯಲ್ಲಿ ತೋರಿಸಬೇಕು ಎಂದು ಯತೀಂದ್ರ ಹೇಳಿದ್ದರು.

ಇದನ್ನೂ ಓದಿ: Karnataka Weather: ಕರ್ನಾಟಕದಲ್ಲಿ ಇನ್ನೊಂದು ವಾರ ಬೆಳಗ್ಗೆ ಬಿಸಿಲು, ರಾತ್ರಿ ಚಳಿ!

ಐದು ವರ್ಷ ಗ್ಯಾರಂಟಿಯನ್ನು ಮುಂದುವರಿಸುತ್ತಾರೆ

ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಪಡೆದರೆ ಸಿದ್ದರಾಮಯ್ಯನವರ ಬಲ ಹೆಚ್ಚಲಿದೆ. ಅವರು ಮುಖ್ಯಮಂತ್ರಿಯಾಗಿ ಯಾವುದೇ ಅಡೆತಡೆ ಇಲ್ಲದೆ ಮುಂದುವರಿಯಲು ಸಾಧ್ಯವಾಗುತ್ತದೆ. ಮುಂದಿನ ಐದು ವರ್ಷ ಗ್ಯಾರಂಟಿ ಯೋಜನೆ ಮುಂದುವರಿಸುತ್ತಾರೆ. ಹಾಗಾಗಿ ನಿಮ್ಮ‌ ಬಂಬಲ ಆಶೀರ್ವಾದ ಅವರ ಮೇಲೆ ಇರಲಿ ಎಂದು ಯತೀಂದ್ರ ಸಿದ್ದರಾಮಯ್ಯ ಕೋರಿದ್ದರು.

Exit mobile version