Site icon Vistara News

Gali Janardana Reddy : ಗಣಿ ಧಣಿ ಜನಾರ್ದನ ರೆಡ್ಡಿ ಮತ್ತೆ ಬಿಜೆಪಿ ಮಡಿಲಿಗೆ, ಕಲ್ಯಾಣದಲ್ಲಿ ಲಾಭ ನಿರೀಕ್ಷೆ

Gali Janarhana Reddy

ಬೆಂಗಳೂರು: ಬಿಜೆಪಿ ಮೇಲೆ ಮುನಿಸಿಕೊಂಡು ಕಳೆದ ವಿಧಾನಸಭಾ ಚುನಾವಣೆಯ (Assembly Election 2023) ಸಂದರ್ಭದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ (Kalyana Rajya pragati Party) ಸ್ಥಾಪನೆ ಮಾ‌ಡಿ ಸಡ್ಡು ಹೊಡೆದಿದ್ದ ಗಾಲಿ ಜನಾರ್ದನ ರೆಡ್ಡಿ (Gali Janardana Reddy) ಅವರು ಕಮಲ ಪಾಳಯಕ್ಕೆ ಮರಳಿದ್ದಾರೆ (Janardhana Reddy rejoins Congress). ಫೆಬ್ರವರಿ 27ರಂದು ನಡೆದು ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಹಾಕಿದ್ದ ಅವರು ಲೋಕಸಭಾ ಚುನಾವಣೆಗೆ (Lok Sabha Election 2024) ಮುನ್ನ ಬಿಜೆಪಿಗೆ ಬಲ ತುಂಬಿದ್ದಾರೆ. ಅವರ ಮರು ಸೇರ್ಪಡೆಯಿಂದ ಬಿಜೆಪಿಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಲಾಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಗಾಲಿ ಜನಾರ್ದನ ರೆಡ್ಡಿ ಮತ್ತು ಮಾಜಿ ಸಚಿವ ಟಿ. ಜಾನ್‌ ಅವರ ಪುತ್ರ ಥಾಮಸ್‌ ಜಾನ್‌ ಅವರು ಪಕ್ಷ ಸೇರಿದರು. ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಹಿರಿಯ ನಾಯಕ ಸಿ.ಟಿ. ರವಿ, ಸಂಸದ ಪಿ.ಸಿ. ಮೋಹನ್‌, ಬಳ್ಳಾರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು, ಸಂಸದ ದೇವೇಂದ್ರಪ್ಪ ಅವರು ಭಾಗಿಯಾಗಿದ್ದಾರೆ. ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮಿ ಹಾಗೂ ಅಪಾರ ಬೆಂಬಲಿಗರು ಪಕ್ಷ ಸೇರಿದರು. ಬಿ.ವೈ ವಿಜಯೇಂದ್ರ ಹಾಗೂ ಯಡಿಯೂರಪ್ಪ. ಅವರು ನಾಯಕರು ಮತ್ತು ಹಿಂಬಾಲಕರನ್ನು ಪಕ್ಷದ ಶಾಲು ಹಾಕಿ, ಧ್ವಜ ನೀಡಿ ಪಕ್ಷಕ್ಕೆ ಸ್ವಾಗತ ಮಾಡಿದರು.

ಮೋದಿ ಅವರ ನಾಯಕತ್ವ ಮೆಚ್ಚಿ ಬಂದಿದ್ದಾರೆ ಎಂದ ವಿಜಯೇಂದ್ರ

ಗಾಲಿ ಜನಾರ್ದನ ರೆಡ್ಡಿ ಅವರು ಮರಳಿ ಪಕ್ಷಕ್ಕೆ ಬಂದಿರುವುದು ಬಹಳ ಸಂತೋಷದ ಸಂಗತಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.

ಗಾಲಿ ಜನಾರ್ದನ ರೆಡ್ಡಿ ಅವರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆ ಮಾಡಿ ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಗಾಲಿ ಜನಾರ್ದನ ರೆಡ್ಡಿ ಅವರು, ತಾವೇ ಕಟ್ಟಿದ ಪಕ್ಷವನ್ನು ವಿಸರ್ಜನೆ ಮಾಡಿ ಬಿಜೆಪಿಯೊಂದಿಗೆ ವಿಲೀನ ಮಾಡಿದ್ದಾರೆ. ಇದರಿಂದ ಬಿಜೆಪಿಗೆ ಶಕ್ತಿ ಬಂದಂತಾಗಿದೆ. ಮೋದಿ ಅವರ ನಾಯಕತ್ವ ಮೆಚ್ಚಿ ಮರು ಸೇರ್ಪಡೆ ಆಗಿದ್ದಾರೆ ಎಂದು ವಿಜಯೇಂದ್ರ ಹೇಳಿದರು.

ಗಾಲಿ ಜನಾರ್ದನ ರೆಡ್ಡಿ ಅವರು ತಮ್ಮ ಕುಟುಂಬದೊಂದಿಗೆ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು.

ʻʻಲೋಕಸಭೆಯಲ್ಲಿ 28 ಕ್ಷೇತ್ರ ಗೆಲ್ಲುವ ಗುರಿ ಇದೆ. ದಿನೇದಿನೆ ಮೋದಿ ಅವರ ಪರ ವಾತಾವರಣ ಹೆಚ್ಚುತ್ತಿದೆ. ಮುಂದಿನ ಲೋಕಸಭಾ ಚುನಾವಣೆ ದೇಶದ ಭವಿಷ್ಯ ರೂಪಿಸಲಿದೆ‌ʼʼ ಎಂದು ಹೇಳಿದ್ದಾರೆ.

ಬೆಳಗ್ಗೆ ಹೋಗಿ ಮಧ್ಯಾಹ್ನ ಮರಳಿ ಬಂದ ಹಾಗೆ ಅನಿಸ್ತಿದೆ ಎಂದ Gali Janardana Reddy

ಬಿಜೆಪಿ ಸೇರ್ಪಡೆ ಸಂದರ್ಭದಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ ಅವರು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಬಿಜೆಪಿ ಜೊತೆ ವಿಲೀನ ಮಾಡುತ್ತಿದ್ದೇನೆ. ನನ್ನ ಕಷ್ಟದ ಕಾಲದಲ್ಲಿ ನನ್ನ ಬೆನ್ನಿಗೆ ನಿಂತ ಎಲ್ಲಾ ಕಾರ್ಯಕರ್ತರಿಗೂ ವಂದನೆ ಸಲ್ಲಿಸ್ತೇನೆ. ನಾವೆಲ್ಲರೂ ಸೇರಿ ಬಿಜೆಪಿಗೆ ಸೇರ್ಪಡೆ ಆಗಿದ್ದೇವೆ ಎಂದು ಹೇಳಿದರು.

ʻʻದೇಶದ ಸರ್ವತೋಮುಖ ಅಭಿವೃದ್ಧಿಗೆ, ವಿಶ್ವಗುರುವಿನಂತೆ ಕೆಲಸ‌ ಮಾಡಿರುವ ಮೋದಿ ಅವರಿಗೆ ವಂದನೆಗಳು. ಅಮಿತ್ ಶಾ ಅವರು ನನ್ನನ್ನು ದೆಹಲಿಗೆ ಆಹ್ವಾನಿಸಿ, ಬಾಹ್ಯ ಬೆಂಬಲ ಬೇಡ. ಬಿಜೆಪಿಗೆ ಬಂದು ಕೆಲಸ ಮಾಡಿ ಅಂತ ಆಹ್ವಾನ ನೀಡಿದರು. ಅವರ ಆಹ್ವಾನ ಸ್ವೀಕರಿಸಿ ಬಂದಿದ್ದೇನೆ. ಇದು ನನ್ನ ಪೂರ್ವ ಜನ್ಮದ ಪುಣ್ಯʼʼ ಎಂದು ಜನಾರ್ದನ ರೆಡ್ಡಿ ಹೇಳಿದರು.

ಬಿ.ಎಸ್‌. ಯಡಿಯೂರಪ್ಪ ಅವರು ನನಗೆ ಅತ್ಯಂತ ಸಣ್ಣ ವಯಸ್ಸಿನಲ್ಲಿ ಬಿಜೆಪಿಯಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟರು. ಯಡಿಯೂರಪ್ಪ ಅವರು ಸಿಎಂ‌ ಆಗಿದ್ದಾಗ ಅವರ ಕ್ಯಾಬಿನೆಟ್‌ನಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿತು. ಈಗ ಅವರ ಸುಪುತ್ರ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷ ಆಗಿದ್ದಾರೆ. ಅವರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿರೋದು ನನ್ನ ಪುಣ್ಯ. ವಿಜಯೇಂದ್ರ ನೇತೃತ್ವದಲ್ಲಿ ಎಲ್ಲರೂ ಜೊತೆಗೂಡಿ ಕೆಲಸ ಮಾಡುತ್ತೇವೆ. ಯಾವುದೇ ಫಲಾಪೇಕ್ಷೆ ಇಲ್ಲದೆ, ಕೆಲಸ ಮಾಡುತ್ತೇವೆ ಎಂದು ಹೇಳಿದರು.

ʻʻಎಲ್ಲಾ ಏಳುಬೀಳುಗಳನ್ನು ನೋಡಿದ್ದೇನೆ. ಪಕ್ಷ ಯಾವುದೇ ಜವಾಬ್ದಾರಿ ನೀಡಿದರು. ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಸಾಮಾನ್ಯ ಕಾರ್ಯಕರ್ತನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನಾನು ನನ್ನ ಮನೆಗೆ ವಾಪಸ್ ಬಂದಿರೋ ಖುಷಿ ಇದೆ. ಕೆಲವು ಕಾರಣದಿಂದ ಹೊರಗೆ ಹೋಗಿದ್ದೆ. 13 ವರ್ಷಗಳ ಬಳಿಕ ವಾಪಸ್ ಬಂದಿದ್ದೇನೆ ಅನಿಸುತ್ತಿಲ್ಲ. ಬೆಳಗ್ಗೆ ಹೋಗಿ, ಮಧ್ಯಾಹ್ನ ಬಂದಿದ್ದೇನೆ ಅನಿಸುತ್ತಿದೆʼʼ ಎಂದು ಜನಾರ್ದನ ರೆಡ್ಡಿ ಹೇಳಿದರು.

ಇದನ್ನೂ ಓದಿ : Rekha Patra: ಸಂದೇಶ್‌ಖಾಲಿ ಸಂತ್ರಸ್ತೆಗೆ ಟಿಕೆಟ್‌ ನೀಡಿದ ಬಿಜೆಪಿ; ಯಾರಿವರು ರೇಖಾ ಪಾತ್ರಾ?

Gali Janardana Reddy ಅಜ್ಞಾತವಾಸ ಮುಗಿಸಿ ಮರಳಿದ ಶ್ರೀರಾಮ ಎಂದ ಶ್ರೀರಾಮುಲು

ಜನಾರ್ದನ ರೆಡ್ಡಿ ಅವರ ಪಕ್ಷ ಮರು ಸೇರ್ಪಡೆಯಿಂದ ಅವರ ಗೆಳೆಯ ಹಾಗೂ ಬಳ್ಳಾರಿ‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರು, ಜನಾರ್ದನ ರೆಡ್ಡಿ ಅವರು ರಾಜಕೀಯ ಅಜ್ಞಾತವಾಸ ಮುಗಿಸಿ ಬಿಜೆಪಿಗೆ ವಾಪಸು ಬರ್ತಿದ್ದಾರೆ. ಅವರು ಬಿಜೆಪಿಗೆ ಬರುವುದರಿಂದ ರಾಜಕೀಯವಾಗಿ ನಮಗೆ ಲಾಭ ಆಗುತ್ತದೆ. ಕಲ್ಯಾಣ ಕರ್ನಾಟಕ ಭಾಗದ ಲೋಕಸಭಾ ಕ್ಷೇತ್ರಗಳಲ್ಲಿ ನಮಗೆ ಲಾಭ ಆಗಲಿದೆ. ನಮಗೆ ಈ ಬೆಳವಣಿಗೆ ಹೆಚ್ಚು ಶಕ್ತಿ ತಂದಿದೆ. ರಾಷ್ಟ್ರೀಯ ನಾಯಕರು ರೆಡ್ಡಿ ಬಿಜೆಪಿಗೆ ಬರಲು ಕಾರಣರಾಗಿದ್ದಾರೆ. ಮೋದಿ ಅವರನ್ನು ಮತ್ತೊಮ್ಮೆ ಪಿಎಂ ಮಾಡಲು ಈ ನಿರ್ಧಾರ ಎಂದು ಹೇಳಿದರು ಶ್ರೀರಾಮುಲು.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಈ ಬೆಳವಣಿಗೆ ಆಗಿದ್ದರೆ ಲಾಭ ಆಗುತ್ತಿತ್ತು. ಎಲ್ಲವೂ ರಾಷ್ಟ್ರೀಯ ನಾಯಕರ ಇಚ್ಛೆಯಂತೆ ಆಗುತ್ತಿದೆ ಎಂದು ಶ್ರೀರಾಮುಲು ಹೇಳಿದರು.

Gali Janardana Reddy ಸೇರ್ಪಡೆಯಿಂದ ಬಿಜೆಪಿಗೆ ಏನು ಲಾಭ?

ಗಾಲಿ ಜನಾರ್ದನ ರೆಡ್ಡಿ ಅವರು ಮತ್ತೆ ಬಿಜೆಪಿ ಸೇರುವುದರಿಂದ ಬಳ್ಳಾರಿ, ಕೊಪ್ಪಳ, ರಾಯಚೂರು, ವಿಜಯನಗರ ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕದಲ್ಲಿ ಕಮಲ ಪಕ್ಷಕ್ಕೆ ಮತ್ತಷ್ಟು ಬಲ ಬರಲಿದೆ.

ಅದರಲ್ಲೂ ಮುಖ್ಯವಾಗಿ ರೆಡ್ಡಿ ಸಹೋದರರು ಮತ್ತು ಶ್ರೀರಾಮುಲು ಅವರಿಗೆ ಸಾಕಷ್ಟು ಲಾಭವಾಗಲಿದೆ. ಕಳೆದ ವಿಧಾನಸಭಾ ಚುನಾವಣೆಯಂತೆ ಬಿಜೆಪಿ ಮತಗಳು ವಿಭಜನೆ ಆಗೋದು ತಪ್ಪಲಿದೆ.

ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿಗೆ ಪ್ರಭಾವಿ ನಾಯಕರ ಕೊರತೆಯನ್ನು ರೆಡ್ಡಿ ಸೇರ್ಪಡೆ ನೀಗಲಿದೆ. ಒಂದು ವೇಳೆ ಮುಂದಿನ ದಿನಗಳಲ್ಲಿ ಆಪರೇಷನ್ ಕಮಲ ಅನಿವಾರ್ಯವಾದರೆ ರೆಡ್ಡಿ ತಂತ್ರಗಳು ಬಿಜೆಪಿಗೆ ಅನುಕೂಲವಾಗಲಿದೆ. ಯಾಕೆಂದರೆ, ಇಂಥ ತಂತ್ರಗಳನ್ನು ರೂಪಿಸುವಲ್ಲಿ ರೆಡ್ಡಿ ಅವರು ನಿಪುಣರಾಗಿದ್ದಾರೆ.

Exit mobile version